Children Savings Account: ಮಕ್ಕಳಿಗಾಗಿ ಇರುವ ವಿವಿಧ ಬ್ಯಾಂಕ್​ನ ಉಳಿತಾಯ ಖಾತೆಗಳು, ಅದರ ಅನುಕೂಲಗಳು

| Updated By: Srinivas Mata

Updated on: Aug 13, 2021 | 11:31 PM

ವಿವಿಧ ಬ್ಯಾಂಕ್​ಗಳಲ್ಲಿ ಇರುವ ಮಕ್ಕಳ ಉಳಿತಾಯ ಖಾತೆಗಳ ಬಗ್ಗೆ ವಿವರ ಇಲ್ಲಿದೆ. ಆ ಖಾತೆಗಳ ಅನುಕೂಲವೂ ಒಳಗೊಂಡಂತೆ ಮುಖ್ಯ ಮಾಹಿತಿಗಳು ಇಲ್ಲಿವೆ.

Children Savings Account: ಮಕ್ಕಳಿಗಾಗಿ ಇರುವ ವಿವಿಧ ಬ್ಯಾಂಕ್​ನ ಉಳಿತಾಯ ಖಾತೆಗಳು, ಅದರ ಅನುಕೂಲಗಳು
ಸಾಂದರ್ಭಿಕ ಚಿತ್ರ
Follow us on

ನೀವು ಯುವ ಪೋಷಕರಾಗಿದ್ದು, ನಿಮ್ಮ ಮಗುವಿಗಾಗಿ ಹೂಡಿಕೆಯ ಯೋಜನೆ ರೂಪಿಸುತ್ತಿದ್ದಲ್ಲಿ ಸೇವಿಂಗ್ಸ್​ ಬ್ಯಾಂಕ್ ಅಕೌಂಟ್​ (ಉಳಿತಾಯ ಬ್ಯಾಂಕ್ ಖಾತೆ) ತೆರೆಯುವುದು ಮೊದಲ ಹಂತ. ಹಣವನ್ನು ಹೇಗೆ ನಿಗಾ ಮಾಡಬೇಕು, ಹೇಗೆ ನಿರ್ವಹಣೆ ಮಾಡಬೇಕು. ಸಮಯದ ಜತೆಜತೆಗೆ ಅದು ಹೇಗೆ ಬೆಳೆಯುತ್ತದೆ ಎಂಬಿತ್ಯಾದಿ ಅಂಶಗಳನ್ನು ಉಳಿತಾಯ ಖಾತೆಯಿಂದ ಮಕ್ಕಳು ಕಲಿಯಬಹುದು. ಮಗುವಿನ ಉಳಿತಾಯ ಖಾತೆಯು ದೊಡ್ಡ ಪಿಗ್ಗಿ ಬ್ಯಾಂಕ್‌ನಂತೆ (ಮಕ್ಕಳು ಮನೆಯಲ್ಲಿ ಇಡುವಂಥ ಹುಂಡಿಯಂಥದ್ದು). ಅಲ್ಲಿ ಹಣವು ಸುರಕ್ಷಿತವಾಗಿರುತ್ತದೆ ಮತ್ತು ಬಡ್ಡಿಯನ್ನು ಗಳಿಸುತ್ತದೆ. ಮೊತ್ತವು ನಿರ್ದಿಷ್ಟ ಮಟ್ಟವನ್ನು ತಲುಪಿದ ನಂತರ ಅದನ್ನು ಇತರ ಹೂಡಿಕೆಗಳಿಗೆ ಬಳಸಬಹುದು. ಅಂದಹಾಗೆ ಮಕ್ಕಳಿಗಾಗಿ ಉಳಿತಾಯ ಖಾತೆ ಸೌಲಭ್ಯವನ್ನು ನೀಡುವ ಹಲವು ಬ್ಯಾಂಕ್​ಗಳಿವೆ. ಇಲ್ಲಿ ಟಾಪ್ 9 ಬ್ಯಾಂಕ್​ಗಳ ವಿವರ ಇಲ್ಲಿದೆ.

ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ)
ಎಸ್‌ಬಿಐ ಎರಡು ಖಾತೆಗಳನ್ನು ಒದಗಿಸುತ್ತದೆ – ಪೆಹ್ಲಾಕದಮ್ ಮತ್ತು ಪೆಹ್ಲಿಉಡಾನ್. ಇವೆರಡನ್ನು ವಿಶೇಷವಾಗಿ ಮಕ್ಕಳಿಗಾಗಿಯೇ ರೂಪಿಸಲಾಗಿದೆ. ಪೆಹ್ಲಾಕದಮ್ ಉಳಿತಾಯ ಖಾತೆಯನ್ನು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ಮಗು ತೆರೆಯಬಹುದು. ಈ ಉಳಿತಾಯ ಖಾತೆಯು ಪೋಷಕರು ಮತ್ತು ಮಗುವಿನ ಜಂಟಿ ಖಾತೆಯಾಗಿದ್ದು, ಅಲ್ಲಿ ಪೋಷಕರು ಸೆಕೆಂಡರಿ ಖಾತೆದಾರರಾಗಿರುತ್ತಾರೆ ಮತ್ತು ಮಗು ಪ್ರಾಥಮಿಕ ಹೋಲ್ಡರ್ ಆಗಿರುತ್ತದೆ. ಸಾಮಾನ್ಯ ಉಳಿತಾಯ ಖಾತೆಯಂತೆ, ಈ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಮಾನದಂಡಗಳಿಲ್ಲ. ಮೊಬೈಲ್ ಬ್ಯಾಂಕಿಂಗ್ ಮತ್ತು ಚೆಕ್ ಪುಸ್ತಕಗಳ ವಿತರಣೆಯಂತಹ ವೈಶಿಷ್ಟ್ಯಗಳು ಎರಡರಲ್ಲೂ ಲಭ್ಯವಿವೆ. ಓವರ್ ಡ್ರಾಫ್ಟ್, ಎಟಿಎಂ ಸೌಲಭ್ಯ ಮತ್ತು ಇತರ ಹೂಡಿಕೆ ಆಯ್ಕೆಗಳನ್ನು ಈ ಖಾತೆಗಳೊಂದಿಗೆ ಸೇರಿಸಲಾಗಿದೆ.

HDFC ಬ್ಯಾಂಕ್
18 ವರ್ಷದೊಳಗಿನ ಯಾವುದೇ ಮಕ್ಕಳಿಗಾಗಿ ಕಿಡ್ಸ್ ಅಡ್ವಾಂಟೇಜ್ ಅಕೌಂಟ್ ತೆರೆಯಬಹುದು. ಆದರೆ ಪಾಲಕರು ಅಥವಾ ಪೋಷಕರು ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆಯನ್ನು ಹೊಂದಿರಬೇಕು. ಈ ಉಳಿತಾಯ ಖಾತೆಯು ರೂ. 5,000 ಕನಿಷ್ಠ ಬ್ಯಾಲೆನ್ಸ್ ಮಾನದಂಡದೊಂದಿಗೆ ಬರುತ್ತದೆ ಮತ್ತು ಅದನ್ನು ನಿರ್ವಹಿಸಬೇಕು. ಪಾಲಕರು ಅಥವಾ ಪೋಷಕರ ಸಾವಿನ ಸಂದರ್ಭದಲ್ಲಿ ಈ ಖಾತೆ ಮೂಲಕವಾಗಿ ಮಗುವಿಗೆ 1 ಲಕ್ಷ ರೂಪಾಯಿಗಳ ಉಚಿತ ಶಿಕ್ಷಣ ವಿಮಾ ರಕ್ಷಣೆ ಇದೆ.

ಮನಿಮ್ಯಾಕ್ಸಿಮೈಸರ್ ಸೌಲಭ್ಯವೂ ಇದೆ. ಇದರಲ್ಲಿ ಮಗುವಿನ ಉಳಿತಾಯ ಖಾತೆಯಲ್ಲಿನ ಬ್ಯಾಲೆನ್ಸ್ ರೂ. 35,000 ಮೀರಿದರೆ ರೂ. 25,000 ಮೀರಿದ ಮೊತ್ತವು ಮಗುವಿನ ಹೆಸರಿನಲ್ಲಿ 1 ವರ್ಷ 1 ದಿನದ ಫಿಕ್ಸೆಡ್​ ಡೆಪಾಸಿಟ್​ ಆಗಿ ತಾನೇ ತಾನಾಗಿ ವರ್ಗಾವಣೆಯಾಗುತ್ತದೆ. 7 ರಿಂದ 18 ವರ್ಷದೊಳಗಿನ ಮಕ್ಕಳಿಗಾಗಿ ಬ್ಯಾಂಕಿನಿಂದ ಎಟಿಎಂ, ಅಂತಾರಾಷ್ಟ್ರೀಯ ಡೆಬಿಟ್ ಕಾರ್ಡ್‌ನಂತಹ ಸೌಲಭ್ಯಗಳನ್ನು ಒದಗಿಸಲಾಗಿದೆ. ಮಗುವು ಎಟಿಎಮ್‌ಗಳಲ್ಲಿ ರೂ. 2,500ವರೆಗೂ ಹಣವನ್ನು ಹಿಂಪಡೆಯಬಹುದು ಮತ್ತು ದಿನಕ್ಕೆ ರೂ. 10,000 ವ್ಯಾಪಾರ- ವಹಿವಾಟಿನ ಸ್ಥಳಗಳಲ್ಲಿ ಖರ್ಚು ಮಾಡಬಹುದು. ಆದರೆ ಇದಕ್ಕೆ ಪೋಷಕರ ಅನುಮತಿಯು ಬ್ಯಾಂಕ್‌ಗೆ ಬೇಕಾಗುತ್ತದೆ.

ಐಸಿಐಸಿಐ ಬ್ಯಾಂಕ್
ಐಸಿಐಸಿಐ ಬ್ಯಾಂಕ್ ಎರಡು ಖಾತೆಗಳನ್ನು ನೀಡುತ್ತದೆ – ಯಂಗ್ ಸ್ಟಾರ್ಸ್ ಅಕೌಂಟ್ ಮತ್ತು ಯಂಗ್ ಸ್ಟಾರ್ಸ್ ಮತ್ತು ಸ್ಮಾರ್ಟ್ ಸ್ಟಾರ್ ಖಾತೆ ವಿಶೇಷವಾಗಿ ಮಕ್ಕಳಿಗಾಗಿ ವಿನ್ಯಾಸಗೊಳಿಸಲಾಗಿದೆ. 18 ವರ್ಷದೊಳಗಿನ ಯಾವುದೇ ಮಗುವಿಗಾಗಿ ಯಂಗ್ ಸ್ಟಾರ್ಸ್ ಖಾತೆ ತೆರೆಯಬಹುದು. ಆದರೆ ಈ ಸೌಲಭ್ಯವನ್ನು ಪಡೆಯಲು ಪಾಲಕರು ಐಸಿಐಸಿಐ ಬ್ಯಾಂಕ್​ನಲ್ಲಿ ಉಳಿತಾಯ ಖಾತೆಯನ್ನು ಹೊಂದಿರಬೇಕು. ಯಂಗ್ ಸ್ಟಾರ್ಸ್ ಮತ್ತು ಸ್ಮಾರ್ಟ್ ಸ್ಟಾರ್ ಖಾತೆಯನ್ನು 10 ವರ್ಷಕ್ಕಿಂತ ಮೇಲ್ಪಟ್ಟ ಮಗುವಿಗಾಗಿ ತೆರೆಯಬಹುದು. ಆದರೆ ಯಂಗ್ ಸ್ಟಾರ್ಸ್ ಸೇವಿಂಗ್ಸ್ ಖಾತೆಯಲ್ಲಿ ಕನಿಷ್ಠ ಮಾಸಿಕ ಸರಾಸರಿ ಬ್ಯಾಲೆನ್ಸ್ (MAB) 3,000 ರೂಪಾಯಿ. ಎಟಿಎಂ ಮತ್ತು ಇಂಟರ್‌ನೆಟ್ ಬ್ಯಾಂಕಿಂಗ್ ಸೌಲಭ್ಯದ ಜತೆಗೆ ಆರ್‌ಡಿ, ಎಫ್‌ಡಿ, ಎಸ್‌ಐಪಿ ಇತ್ಯಾದಿ ವಿವಿಧ ಮೂಲಭೂತ ಹೂಡಿಕೆ ಆಯ್ಕೆಗಳೊಂದಿಗೆ ಇವೆ.

ಕೊಟಕ್ ಮಹೀಂದ್ರಾ ಬ್ಯಾಂಕ್
ಈ ಬ್ಯಾಂಕ್​ನಿಂದ ಕೊಟಕ್ ಜೂನಿಯರ್ ಅಕೌಂಟ್​ಗೆ ವಾರ್ಷಿಕ ಶೇಕಡಾ 4ರ ವರೆಗಿನ ಬಡ್ಡಿಯನ್ನು ನೀಡುತ್ತದೆ. ಕೊಟಕ್ ಜೂನಿಯರ್ ಖಾತೆಯು ಮಗುವಿನ ಭವಿಷ್ಯಕ್ಕಾಗಿ ರೆಕರಿಂಗ್ ಡೆಪಾಸಿಟ್​ ಮತ್ತು ಎಸ್‌ಐಪಿ ರೂಪದಲ್ಲಿ ಸುಲಭ ಹೂಡಿಕೆಗೆ ಆಯ್ಕೆಗಳನ್ನು ಹೊಂದಿದೆ. ರೆಕರಿಂಗ್ ಡೆಪಾಸಿಟ್ ಅಥವಾ SIP ಅನ್ನು ಕನಿಷ್ಠ ಮೂರು ವರ್ಷಗಳ ಅವಧಿಗೆ ಆರಿಸಿಕೊಂಡರೆ ಖಾತೆದಾರರು ತಮ್ಮ ಮಗುವಿನ ಖಾತೆಯಲ್ಲಿ ಕನಿಷ್ಟ ಬ್ಯಾಲೆನ್ಸ್ ಅನ್ನು ನಿರ್ವಹಿಸಬೇಕಾಗಿಲ್ಲ. 10 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಪೋಷಕರ ಕೋರಿಕೆಯ ಮೇರೆಗೆ ಡೆಬಿಟ್ ಕಾರ್ಡ್‌ಗಳನ್ನು ನೀಡಲಾಗುವುದು ಮತ್ತು ಅವರ ದೈನಂದಿನ ವಿಥ್​ಡ್ರಾ ಮಿತಿಯು ರೂ. 5,000 ಮಾತ್ರ.

ಆಕ್ಸಿಸ್ ಬ್ಯಾಂಕ್
ಪೋಷಕರು ಈ ಖಾತೆಯನ್ನು 5,000 ರೂಪಾಯಿಯ ಆರಂಭಿಕ ಬ್ಯಾಲೆನ್ಸ್‌ನೊಂದಿಗೆ ತೆರೆಯಬಹುದು. ಪೋಷಕರು ಮತ್ತು ಪಾಲಕರು ಈ ಖಾತೆಯ ಸಂಪೂರ್ಣ ನಿಯಂತ್ರಣದಲ್ಲಿ ಇರುತ್ತಾರೆ. ಮಾಸಿಕ ಸ್ಟೇಟ್​ಮೆಂಟ್​ಗಳನ್ನು ಬ್ಯಾಂಕ್​ನಿಂದ ನೀಡಲಾಗುತ್ತದೆ. ಪ್ರತಿ ವಹಿವಾಟಿನ ಇಮೇಲ್ ಮತ್ತು ಎಸ್ಸೆಮ್ಮೆಸ್ ಅಲರ್ಟ್​ಗಳ ಉಚಿತ ಸೇವೆ ಲಾಭವನ್ನು ಪಡೆಯಬಹುದು.

ಈ ಖಾತೆಯ ಕೆಲವು ವಿಶೇಷಗಳೆಂದರೆ, ಆರು ತಿಂಗಳಿಗೊಮ್ಮೆ ಕಾರ್ಡ್ ಅನ್ನು ಸ್ವೈಪ್ ಮಾಡಿದರೆ 2,00,000 ರೂಪಾಯಿ ಮೌಲ್ಯದ ವಯಕ್ತಿಕ ಅಪಘಾತ ವಿಮಾ ರಕ್ಷಣೆಯೊಂದಿಗೆ ಬರುತ್ತದೆ. ಪೋಷಕರು ತಮ್ಮ ಮಗುವಿನ ಡೆಬಿಟ್ ಕಾರ್ಡ್ ಅನ್ನು ಮೋಸದ ಅಥವಾ ಕಾನೂನುಬಾಹಿರ ಬಳಕೆಯಿಂದ ರಕ್ಷಿಸಲು ಒಂದು ಕ್ಷಣದ ಸೂಚನೆಯಲ್ಲಿ ಬ್ಯಾಂಕ್ ಶಾಖೆಯಿಂದ ಖರೀದಿ ರಕ್ಷಣೆ ಹೊಣೆಗಾರಿಕೆ ಮತ್ತು ಕಾರ್ಡ್​ ಕಳೆದುಹೋದಲ್ಲಿ ಅದಕ್ಕೂ ಸೇರಿ ಲಯಾಬಿಲಿಟಿ ಸಹ ಪಡೆಯಬಹುದು. ಅಂದಹಾಗೆ ಈ ಪಾಲಿಸಿಗಳ ಮೌಲ್ಯ ಸುಮಾರು 50,000 ರೂಪಾಯಿಯಷ್ಟಿರುತ್ತದೆ.

ಐಡಿಬಿಐ ಬ್ಯಾಂಕ್
ಇದಕ್ಕೆ ಕನಿಷ್ಠ ಖಾತೆಯ ಸರಾಸರಿ ಬ್ಯಾಲೆನ್ಸ್ ಕೇವಲ ರೂ. 500 ಅಗತ್ಯ. ಪ್ರತಿ ತಿಂಗಳು ಅದನ್ನು ನಿರ್ವಹಿಸಲು ಸಾಧ್ಯವಾಗದಿದ್ದರೆ ಯಾವುದೇ ದಂಡ ಶುಲ್ಕವನ್ನು ವಿಧಿಸಲಾಗುವುದಿಲ್ಲ. ಆದರೂ ಬ್ಯಾಂಕ್​ನಿಂದ ಎಟಿಎಂ ನಿಯಮ ಅನುಸಾರ ಡೆಬಿಟ್ ಕಾರ್ಡ್‌ನೊಂದಿಗೆ ದಿನಕ್ಕೆ 2000 ರೂಪಾಯಿ ವಿಥ್​ಡ್ರಾ ಮಿತಿಯನ್ನು ನಿಗದಿಪಡಿಸಿದೆ.

ಐಡಿಬಿಐ ಬ್ಯಾಂಕ್ ಪವರ್ ಕಿಡ್ಸ್ ಖಾತೆಯಿಂದ ಉಚಿತ ಮಾಸಿಕ ಇಮೇಲ್ ಸ್ಟೇಟ್‌ಮೆಂಟ್‌ಗಳು, ಉಚಿತ ಪಾಸ್‌ಬುಕ್ ಮತ್ತು ವಯಕ್ತಿಕ ಚೆಕ್ ಪುಸ್ತಕವನ್ನು ಸಹ ನೀಡಲಾಗುತ್ತದೆ. ನಿಮ್ಮ ಮಗು ಪ್ರೌಢಶಾಲೆ ಅಥವಾ ಕಾಲೇಜಿನಲ್ಲಿ ಭಾರತ ಅಥವಾ ವಿದೇಶದಲ್ಲಿ ಅಧ್ಯಯನ ಮಾಡಲು ನಿರ್ಧರಿಸಿದರೆ ಮಗುವಿಗೆ ಕಡಿಮೆ ಬಡ್ಡಿದರದಲ್ಲಿ ಶಿಕ್ಷಣ ಸಾಲ ಪಡೆಯಬಹುದು.

ಸಿಟಿ ಬ್ಯಾಂಕ್
ಮಗುವು 15 ವರ್ಷಕ್ಕಿಂತ ಮೇಲ್ಪಟ್ಟಿರಬೇಕು ಮತ್ತು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು ಮತ್ತು ಖಾತೆಯು ಕನಿಷ್ಠ 2 ಖಾತೆದಾರರನ್ನು ಹೊಂದಿರಬೇಕು. ಇದರಲ್ಲಿ ಮೊದಲ ಖಾತೆದಾರ ಆಗಿ ಮಗು ಇರುತ್ತದೆ ಮತ್ತು ಎರಡನೆ ಖಾತೆದಾರರು ಪೋಷಕರು ಅಥವಾ ಪಾಲಕರು. ಸಿಟಿ ಬ್ಯಾಂಕ್ ಜೂನಿಯರ್ ಖಾತೆಯನ್ನು ತೆರೆಯಲು ಪೋಷಕರು ಅಥವಾ ಪಾಲಕರು ಸಿಟಿ ಬ್ಯಾಂಕ್‌ನಲ್ಲಿ ಅಸ್ತಿತ್ವದಲ್ಲಿರುವ ಖಾತೆಯನ್ನು ಹೊಂದಿರಬೇಕು. ನಗದು ವಿಥ್​ಡ್ರಾ ಎಲ್ಲ ಸಿಟಿ ಬ್ಯಾಂಕ್ ಎಟಿಎಂಗಳಲ್ಲಿ ಉಚಿತವಾಗಿರುತ್ತದೆ. ವಿಥ್​ಡ್ರಾಗೆ ಮಿತಿಯನ್ನು ನಿಗದಿ ಪಡಿಸುವಂಥ ಒಂದು ಆಯ್ಕೆ ಕೂಡ ಇದೆ. ಇದರಿಂದ ಖರ್ಚುಗಳನ್ನು ನಿಯಂತ್ರಿಸಲು ಸಹಾಯ ಆಗುತ್ತದೆ. ಸಿಟಿ ಬ್ಯಾಂಕ್ ಜೂನಿಯರ್ ಖಾತೆಯೊಂದಿಗೆ ಮಗುವಿಗೆ ಮತ್ತು ಪೋಷಕರು-ಪಾಲಕರಿಗಾಗಿ ಡ್ಯುಯಲ್ ವಿಮೆಯಿಂದ ಲಾಭ ಪಡೆಯಬಹುದು.

ಇಂಡಸ್ಇಂಡ್ ಬ್ಯಾಂಕ್
ಮಗುವಿನ ವಯಸ್ಸು 12 ವರ್ಷಕ್ಕಿಂತ ಮೇಲ್ಪಟ್ಟಿದ್ದರೆ ಆ ಮಗುವಿನ ಹೆಸರಿನಲ್ಲಿ ಅಪ್ರಾಪ್ತರ ಖಾತೆಯನ್ನು ತೆರೆಯಬಹುದು. ಹೀಗಲ್ಲದಿದ್ದರೆ ಖಾತೆಯನ್ನು “ಅಂಡರ್ ಗಾರ್ಡಿಯನ್” ಖಾತೆಯಾಗಿ ತೆರೆಯಬೇಕು. ಆಗ ಪೋಷಕರು ಖಾತೆಯನ್ನು ನಿರ್ವಹಿಸುತ್ತಾರೆ ಮತ್ತು ಮಗುವಿನ ವಯಸ್ಸು 12 ದಾಟಿದ ನಂತರ ಬದಲಾಯಿಸಲಾಗುತ್ತದೆ.

ನಿರ್ವಹಣೆ ಮಾಡಬೇಕಾದ ಸರಾಸರಿ ಮಾಸಿಕ ಬ್ಯಾಲೆನ್ಸ್ 5,000 ರೂಪಾಯಿ. ಅನನ್ಯ ಗೋಲ್ಡ್ ಡೆಬಿಟ್ ಕಾರ್ಡ್ ಎಂಬ ಹೆಸರಿನ ಡೆಬಿಟ್ ಕಾರ್ಡ್ ಅನ್ನು 12 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ ಅವರ ಹೆಸರಿನಲ್ಲಿ ನೀಡಲಾಗುತ್ತದೆ. ಅನಿಯಮಿತ ಉಚಿತ ಎಟಿಎಂ ವಹಿವಾಟುಗಳು ಮತ್ತು ಆನ್‌ಲೈನ್ ವಹಿವಾಟಿನಲ್ಲಿ ವಿಶೇಷ ಕೊಡುಗೆಗಳು ಲಭ್ಯವಿವೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್
ಈ ಬ್ಯಾಂಕ್​ನಲ್ಲಿ ಯಾವುದೇ ವಯಸ್ಸಿನ ಅಪ್ರಾಪ್ತ ವಯಸ್ಕರು ಖಾತೆಯನ್ನು ತೆರೆಯಬಹುದು. ಅಪ್ರಾಪ್ತ ವಯಸ್ಕನು 10 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ ಖಾತೆಯನ್ನು ನಿರ್ವಹಿಸಲು ಪೋಷಕರು/ಪಾಲಕರನ್ನು ಹೊಂದಿರುವುದು ಮುಖ್ಯ. 10 ರಿಂದ 18 ವರ್ಷ ವಯಸ್ಸಿನವರು ತಮ್ಮ ಉಳಿತಾಯ ಬ್ಯಾಂಕ್ ಖಾತೆಯನ್ನು ಸ್ವತಂತ್ರವಾಗಿ ತೆರೆಯಬಹುದು ಮತ್ತು ನಿರ್ವಹಿಸಬಹುದು.

ಈ ಖಾತೆಯನ್ನು ತೆರೆಯಲು ಕನಿಷ್ಟ ಮಾಸಿಕ ಬ್ಯಾಲೆನ್ಸ್ ಅನ್ನು ನಿರ್ವಹಿಸಬೇಕಾಗಿಲ್ಲ. ಎಟಿಎಂ ಸೌಲಭ್ಯವು 50,000 ರೂಪಾಯಿಗಳ ದೈನಂದಿನ ಮಿತಿಯೊಂದಿಗೆ ಲಭ್ಯವಿದೆ. ಪ್ರತಿ ದಿನ 1 ಲಕ್ಷ ರೂಪಾಯಿ ಆನ್‌ಲೈನ್ ವರ್ಗಾವಣೆಗೆ ಅವಕಾಶವಿದೆ.

ವರ್ಷಕ್ಕೆ 50 ಚೆಕ್ ಲೀಫ್‌ಗಳೊಂದಿಗೆ ಉಚಿತ ಚೆಕ್‌ಬುಕ್ ಸೌಲಭ್ಯ ಮತ್ತು ಶಾಲಾ ಶುಲ್ಕ ಸೌಲಭ್ಯಕ್ಕಾಗಿ ಡಿ.ಡಿ. ಉಚಿತ ವಿತರಣೆ ಕೂಡ ಇದೆ.

ಇದನ್ನೂ ಓದಿ: Two Wheeler Loan: ಸ್ಕೂಟರ್, ಬೈಕ್ ಖರೀದಿಗೆ ಪ್ರಮುಖ ಬ್ಯಾಂಕ್​ಗಳಲ್ಲಿನ ಬಡ್ಡಿ ದರ ಹೀಗಿದೆ

(Children Savings Account And Its Benefits Offering By Various Banks)

Published On - 11:26 pm, Fri, 13 August 21