
ನವದೆಹಲಿ, ಜೂನ್ 10: ಇದು ಕಾಕತಾಳೀಯವೋ, ಅಥವಾ ಉದ್ದೇಶಪೂರ್ವಕವಾಗಿ ಬಳಕೆಯಾಗುತ್ತಿರುವ ಅಸ್ತ್ರವೋ, ಬಹಳಷ್ಟು ದೇಶಗಳು ಚೀನಾದ ಸಾಲಗಳ ಕುಣಿಕೆಗೆ ಸಿಲುಕಿ ಒದ್ದಾಡುತ್ತಿವೆ. ಹೆಚ್ಚು ಉಪಯೋಗವಾದ ಯೋಜನೆಗಳಿಗೆ ಸಾಲ (Unproductive loans) ಪಡೆದು ಈ ದೇಶಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ತತ್ಪರಿಣಾಮವಾಗಿ, ಈ ದೇಶಗಳು ತಮ್ಮ ಜುಟ್ಟು ಜನಿವಾರವನ್ನು ಚೀನಾಗೆ ಇಡಬೇಕಾದಂತಹ, ಮತ್ತು ಆ ಡ್ರ್ಯಾಗನ್ (ಚೀನಾ) ಹೇಳಿದಂತೆ ಕೇಳಬೇಕಾದ ಪರಿಸ್ಥಿತಿಯಲ್ಲಿವೆ.
ಚೀನಾ ಉದ್ದೇಶಪೂರ್ವಕವಾಗಿ ವಿವಿಧ ದೇಶಗಳಿಗೆ ಅನುತ್ಪಾದಕ ಸಾಲ ಕೊಟ್ಟು ಶೂಲಕ್ಕೆ ಸಿಲುಕಿಸುತ್ತದೆ ಎನ್ನುವ ಆರೋಪ ಬಹಳ ಕೇಳಿಬರುತ್ತದೆ. ಪಾಕಿಸ್ತಾನದಲ್ಲಿ ಸಿಪೆಕ್ ಕಾರಿಡಾರ್ ನಿರ್ಮಾಣಕ್ಕಾಗಿ ಚೀನಾ ಯಥೇಚ್ಛವಾಗಿ ಸಾಲ ನೀಡಿದೆ. ಇದರಿಂದ ಪಾಕಿಸ್ತಾನಕ್ಕಿಂತ ಚೀನಾದ ಆರ್ಥಿಕತೆಗೆ ಉಪಯೋಗವಾಗುತ್ತದೆ. ಈ ಸಾಲವು ಪಾಕಿಸ್ತಾನಕ್ಕೆ ಬೇಕಾಗಿಲ್ಲದ ಹೊರೆಯೇ ಆಗಿದೆ.
ಇದನ್ನೂ ಓದಿ: ಡಿಶ್, ಕೇಬಲ್ ಟಿವಿ ಉದ್ಯಮದ ಸಂಕಷ್ಟ: ಕೆಲಸ ಕಳೆದುಕೊಂಡ 5.77 ಲಕ್ಷ ಮಂದಿ
ಬಲೂಚಿಸ್ತಾನದ ಬಂದರನ್ನು ಚೀನಾವೇ ನಿರ್ಮಿಸುತ್ತಿದೆ. ಇಲ್ಲಿಂದ ಪಶ್ಚಿಮ ಏಷ್ಯಾ, ಆಫ್ರಿಕಾಗೆ ಸರಕುಗಳನ್ನು ಸಾಗಿಸಲು ಚೀನಾಗೆ ಒಳ್ಳೆಯ ಶಾರ್ಟ್ಕಟ್ ಸಿಕ್ಕಂತಾಗುತ್ತದೆ. ಪಾಕಿಸ್ತಾನ ತನಗೇನೋ ಸಿಗುತ್ತೆ ಎಂದು ಭಾವಿಸಿ ಚೀನಾ ಹಾಕಿದ ತಾಳಕ್ಕೆ ಕುಣಿಯುತ್ತಿದೆ ಎಂದು ಪಾಕಿಸ್ತಾನದೊಳಗಿನ ತಜ್ಞರೇ ಎಚ್ಚರಿಸುತ್ತಲೇ ಬಂದಿದ್ದಾರೆ. ಪಾಕಿಸ್ತಾನದ ಒಟ್ಟಾರೆ ಸಾಲದಲ್ಲಿ ಚೀನಾದ ಪಾಲು ಶೇ. 23ಕ್ಕಿಂತಲೂ ಹೆಚ್ಚಿದೆಯಂತೆ.
ಪಾಕಿಸ್ತಾನದಂತೆ ಶ್ರೀಲಂಕಾದ್ದೂ ಉದಾಹರಣೆ ಇದೆ. ಅಲ್ಲಿಯ ಹಲವು ಅಪ್ರಯೋಜಕ ಯೋಜನೆಗಳಿಗೆ ಚೀನಾ ಸಾಲ ಕೊಟ್ಟಿದೆ. ಅದರಲ್ಲಿ ಹಂಬನ್ತೋಟ ಬಂದು ಒಂದು ಉದಾಹರಣೆ. ಬಂದರು ನಿರ್ಮಾಣದ ಸಾಲ ತೀರಿಸಲಾಗದೆ ಆ ಬಂದರನ್ನೇ ಚೀನಾಗೆ ಬಿಟ್ಟುಕೊಟ್ಟಿದೆ ಲಂಕಾ. ಇದರಿಂದ ಭಾರತದ ಕೆಳಮಗ್ಗುಲಿನಲ್ಲಿ ತನ್ನ ನೆಲೆ ನಿರ್ಮಿಸಲು ಚೀನಾಗೆ ಒಳ್ಳೆಯ ಜಾಗ ಸಿಕ್ಕಂತಾಗಿದೆ.
ಇದನ್ನೂ ಓದಿ: ಟ್ರೆಂಡ್ಸ್ ಎಐ ಗ್ಲೋಬಲ್ 30 ಟೆಕ್ ಕಂಪನಿಗಳ ಪಟ್ಟಿ: ರಿಲಾಯನ್ಸ್ ಏಕಮಾತ್ರ ಭಾರತೀಯ ಸಂಸ್ಥೆ
ಝಾಂಬಿಯಾ, ಇಥಿಯೋಪಿಯಾ ಇತ್ಯಾದಿ ಇನ್ನೂ ಹಲವು ದೇಶಗಳು ಚೀನಾದ ಸಾಲದ ಜಾಲಕ್ಕೆ ಸಿಲುಕಿವೆ. ಆ ದೇಶಗಳಲ್ಲಿರುವ ಸಂಪನ್ಮೂಲಗಳ ಮೇಲೆ ತನ್ನ ಹಿಡಿತ ಸಾಧಿಸಲು ಚೀನಾ ಈ ವಾಮ ಮಾರ್ಗ ಬಳಸುತ್ತದೆ ಎಂಬ ಆರೋಪಗಳಂತೂ ಕೇಳಿಬರುತ್ತವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ