ಚೀನಾದ ಎವರ್​ಗ್ರಾಂಡೆ ದಯನೀಯ ಸ್ಥಿತಿ; ಛೇರ್ಮನ್ ಬಂಧನದ ಬೆನ್ನಲ್ಲೇ ಷೇರು ಸ್ಥಗಿತ; ಭಾರತದಿಂದ ಕಲಿಯಲಿ ಎಂದ ಉದಯ್ ಕೋಟಕ್

|

Updated on: Sep 28, 2023 | 11:26 AM

China Evergrande group Controversy and Uday Kotak Comment: ದಿವಾಳಿಯಾಗಿರುವ ಎವರ್​ಗ್ರಾಂಡೆ ಸಂಸ್ಥೆ ಅಮೆರಿಕ, ಚೀನಾ ಮತ್ತಿತರೆಡೆ ಇರುವ ತನ್ನ ಆಸ್ತಿಗಳನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದೆ. ಇದೇ ಹೊತ್ತಿನಲ್ಲಿ ಚೀನಾದ ಅಧಿಕಾರಿಗಳು ಎವರ್​ಗ್ರಾಂಡೆಯ ಉನ್ನತ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುತ್ತಿದ್ದಾರೆ. ಕೆಲ ದಿನಗಳ ಹಿಂದೆ ಆ ಸಂಸ್ಥೆಯ ಮಾಜಿ ಮತ್ತು ಹಾಲಿ ಅಧಿಕಾರಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಈಗ ಅದರ ಸಂಸ್ಥಾಪಕ ಮತ್ತು ಛೇರ್ಮನ್ ಆಗಿರುವ ಹುಯ್ ಕಾ ಯಾನ್ ಅವರನ್ನು ಬಂಧಿಸಿರುವ ಸುದ್ದಿ ಇದೆ.

ಚೀನಾದ ಎವರ್​ಗ್ರಾಂಡೆ ದಯನೀಯ ಸ್ಥಿತಿ; ಛೇರ್ಮನ್ ಬಂಧನದ ಬೆನ್ನಲ್ಲೇ ಷೇರು ಸ್ಥಗಿತ; ಭಾರತದಿಂದ ಕಲಿಯಲಿ ಎಂದ ಉದಯ್ ಕೋಟಕ್
ಎವರ್​ಗ್ರಾಂಡೆ
Follow us on

ನವದೆಹಲಿ, ಸೆಪ್ಟೆಂಬರ್ 28: ಒಂದು ಕಾಲದಲ್ಲಿ ವಿಶ್ವದ ಅತಿಮೌಲ್ಯಯುತ ರಿಯಲ್ ಎಸ್ಟೇಟ್ ಕಂಪನಿ ಎನಿಸಿದ್ದ ಚೀನಾ ಎವರ್​ಗ್ರಾಂಡೆ ಗ್ರೂಪ್ (China Evergrande Group) ಸಂಸ್ಥೆ ಇಂದು ಸಾಲದ ಶೂಲಕ್ಕೆ ಸಿಲುಕಿ ಶೋಚನೀಯ ಸ್ಥಿತಿಗೆ ಇಳಿದಿದೆ. ಅದರ ಸಂಸ್ಥಾಪಕ ಛೇರ್ಮನ್ ಹುಯ್ ಕಾ ಯಾನ್ (Hui Ka Yan) ಅವರನ್ನು ಚೀನಾ ಅಧಿಕಾರಿಗಳು ಬಂಧಿಸಿರುವ ಅಥವಾ ವಶಕ್ಕೆ ತೆಗೆದುಕೊಂಡಿರುವ ಸುದ್ದಿ ಬರುತ್ತಿರುವ ಹೊತ್ತಿನಲ್ಲೇ ಹಾಂಕಾಂಗ್ ಷೇರುವಿನಿಮಯ ಮಾರುಕಟ್ಟೆಯಲ್ಲಿ ಎವರ್​ಗ್ರಾಂಡೆ ಗ್ರೂಪ್​ನ ಷೇರುಗಳ ವಹಿವಾಟು ಸ್ಥಗಿತಗೊಂಡಿದೆ. ಅಷ್ಟೇ ಅಲ್ಲ, ಎವರ್​ಗ್ರಾಂಡ್ ಸಂಸ್ಥೆ ತನ್ನ ಎಲೆಕ್ಟ್ರಿಕ್ ವಾಹನದ ಸರ್ವಿಸ್ ಕೇಂದ್ರಗಳನ್ನೂ ಮುಚ್ಚಿದೆ.

ಹಾಂಕಾಂಗ್ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ ತನ್ನ ಷೇರುಗಳನ್ನು ಯಾಕೆ ಸ್ಥಗಿತಗೊಳಿಸಲಾಗಿದೆ ಎಂದು ಚೀನಾ ಎವರ್​ಗ್ರಾಂಡೆ ಗ್ರೂಪ್ ವಿವರಣೆ ನೀಡಿಲ್ಲ.

ದಿವಾಳಿಯಾಗಿರುವ ಎವರ್​ಗ್ರಾಂಡೆ ಸಂಸ್ಥೆ ಅಮೆರಿಕ, ಚೀನಾ ಮತ್ತಿತರೆಡೆ ಇರುವ ತನ್ನ ಆಸ್ತಿಗಳನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದೆ. ಇದೇ ಹೊತ್ತಿನಲ್ಲಿ ಚೀನಾದ ಅಧಿಕಾರಿಗಳು ಎವರ್​ಗ್ರಾಂಡೆಯ ಉನ್ನತ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುತ್ತಿದ್ದಾರೆ. ಕೆಲ ದಿನಗಳ ಹಿಂದೆ ಆ ಸಂಸ್ಥೆಯ ಮಾಜಿ ಮತ್ತು ಹಾಲಿ ಅಧಿಕಾರಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಈಗ ಅದರ ಸಂಸ್ಥಾಪಕ ಮತ್ತು ಛೇರ್ಮನ್ ಆಗಿರುವ ಹುಯ್ ಕಾ ಯಾನ್ ಅವರನ್ನು ಬಂಧಿಸಿರುವ ಸುದ್ದಿ ಇದೆ.

ಇದನ್ನೂ ಓದಿ: ಅಂಬಾನಿ ಮಕ್ಕಳಿಗೆ ಸಂಬಳ ಬೇಡ; ಮಂಡಳಿ ಸಭೆಯಲ್ಲಿ ಪಾಲ್ಗೊಂಡರೆ ಸಂಭಾವನೆ: ಆರ್​ಐಎಲ್ ನಿರ್ಣಯ

ಏನಿದು ಎವರ್​ಗ್ರಾಂಡೆ ಬಿಕ್ಕಟ್ಟು?

ಚೀನಾದಲ್ಲಿ ಇನ್​ಫ್ರಾಸ್ಟ್ರಕ್ಚರ್ ಯೋಜನೆಗಳಲ್ಲಿ ಸಾಕಷ್ಟು ಹೂಡಿಕೆ ಮಾಡಲಾಗಿದೆ. ರಿಯಲ್ ಎಸ್ಟೇಟ್ ಕಂಪನಿಗಳು ಸಾವಿರಾರು ಕೋಟಿ ರೂ ಬಂಡವಾಳ ಹಾಕಿ ಗೃಹ ಯೋಜನೆಗಳನ್ನು ಕೈಗೊಂಡಿವೆ. ಆದರೆ, ನಿರೀಕ್ಷಿತ ರೀತಿಯಲ್ಲಿ ಮನೆಗಳು ಮಾರಾಟವಾಗಿಲ್ಲ. ಹೀಗಾಗಿ, ಚೀನಾದ ಹಲವು ರಿಯಲ್ ಎಸ್ಟೇಟ್ ಕಂಪನಿಗಳು ಸಾಲಕ್ಕೆ ಸಿಲುಕಿವೆ. ಅವುಗಳಲ್ಲಿ ಪ್ರಮುಖವಾದುದು ಎವರ್​ಗ್ರಾಂಡೆ ಗ್ರೂಪ್. ಇದು ಬರೋಬ್ಬರಿ 300 ಬಿಲಿಯನ್ ಡಾಲರ್ ಸಾಲ ಹೊಂದಿದೆ. ಅಂದರೆ ಬರೋಬ್ಬರಿ 25 ಲಕ್ಷಕೋಟಿ ರುಪಾಯಿಯಷ್ಟು ಸಾಲದ ಶೂಲಕ್ಕೆ ಎವರ್​ಗ್ರಾಂಡೆ ಸಿಲುಕಿದೆ.

ಎವರ್​ಗ್ರಾಂಡೆ 2021ರಲ್ಲಿ ತನ್ನ ಸಾಲದ ಕಂತುಗಳನ್ನು ಕಟ್ಟಲು ವಿಫಲವಾದಾಗ ಚೀನಾದ ರಿಯಲ್ ಎಸ್ಟೇಟ್ ಕ್ಷೇತ್ರದ ಹುಳುಕು ಬಹಿರಂಗವಾಗಿತ್ತು. ಎವರ್​ಗ್ರಾಂಡೆ ಪ್ರಕರಣವು ಚೀನಾದ ರಿಯಲ್ ಎಸ್ಟೇಟ್ ಪತನದ ಒಂದು ಭಾಗ ಎಂಬುದು ಸಾಬೀತಾಗುತ್ತಿದೆ.

ಎವರ್​ಗ್ರಾಂಡೆ ಸಂಸ್ಥೆ ಅಮೆರಿಕದಲ್ಲಿ ಸಾಕಷ್ಟು ಆಸ್ತಿಗಳನ್ನು ಹೊಂದಿದೆ. ಅಲ್ಲಿ ತನ್ನ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದನ್ನು ತಪ್ಪಿಸಲು ದಿವಾಳಿತಡೆ ಅರ್ಜಿಯನ್ನು ಅಮೆರಿಕದ ಪ್ರಾಧಿಕಾರದ ಮುಂದೆ ಹಾಕಿ ಕೂತಿದೆ. ಚೀನಾದಲ್ಲಿ ಎವರ್​ಗ್ರಾಂಡೆಯ ರಿಯಲ್ ಎಸ್ಟೇಟ್ ಪ್ರಾಜೆಕ್ಟ್​ಗಳಲ್ಲಿ ಮನೆಗಳನ್ನು ಕೊಳ್ಳಲು ಹಣ ಕೊಟ್ಟಿರುವವರೆಲ್ಲರೂ ಬಹುತೇಕ ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ಜನರು. ಇವರೆಲ್ಲರಿಗೂ ಚೀನಾ ಸರ್ಕಾರ ಹೇಗೆ ನ್ಯಾಯ ಒದಗಿಸುತ್ತದೆ, ಮತ್ತು ಅಲ್ಲಿನ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಹೇಗೆ ಮರುಜೀವ ನೀಡುತ್ತದೆ ಎಂಬುದು ಸದ್ಯಕ್ಕೆ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಬಿಸಿ ದೋಸೆಯಂತೆ ಮಾರಾಟವಾದ ಬಿರ್ಲಾ ಎಸ್ಟೇಟ್ ಮನೆಗಳು; ಕೇವಲ 36 ಗಂಟೆಯಲ್ಲಿ ಬುಕ್ ಆದವು 500 ಕೋಟಿ ರೂ ಮೌಲ್ಯದ ವಸತಿಗಳು

ಭಾರತದಿಂದ ಚೀನಾ ಕಲಿಯುವುದಿದೆ ಎಂದ ಉದಯ್ ಕೋಟಕ್

ಇದೇ ವೇಳೆ, ಭಾರತದ ಉದ್ಯಮಿ ಉದಯ್ ಕೋಟಕ್ ಅವರು ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಭಾರತ ಮತ್ತು ಅಮೆರಿಕದಲ್ಲಿನ ಕೆಲ ಪ್ರಕರಣಗಳನ್ನು ಉದಾಹರಿಸಿದ ಅವರು, ಚೀನಾ ಈ ಪ್ರಕರಣಗಳಿಂದ ಕಲಿಯುವುದಿದೆ ಎಂದು ಸಲಹೆ ನೀಡಿದ್ದಾರೆ.

‘ಎವರ್​ಗ್ರಾಂಡೆ ಚೀನಾ ಕೊನೆಗೂ ಕುಸಿತಕಂಡಿದೆ. ಅದರ ಸಮಸ್ಯೆ ಶುರುವಾಗಿರುವ ಸುದ್ದಿ ಬಂದು ಎರಡು ವರ್ಷದ ಬಳಿಕ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ. ಲೆಹ್ಮಾನ್ ಪ್ರಕರಣ ಮತ್ತು ಐಎಲ್ ಅಂಡ್ ಎಫ್​ಎಸ್ ಪ್ರಕರಣ ವಿಚಾರದಲ್ಲಿ ಅಮೆರಿಕ ಮತ್ತು ಭಾರತವನ್ನು ನೋಡಿ ಚೀನಾ ಕಲಿಯಬೇಕಿತ್ತು’ ಎಂದು ಉದಯ್ ಕೋಟಕ್ ತಮ್ಮ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.

ಕುತೂಹಲ ಎಂದರೆ 2021ರಲ್ಲೇ ಉದಯ್ ಕೋಟಕ್ ಅವರು ಎವರ್​ಗ್ರಾಂಡೆ ಪತನದ ಬಗ್ಗೆ ಎಚ್ಚರಿಸಿದ್ದರು. ಐಎಲ್ ಅಂಡ್ ಎಫ್​ಎಸ್ ಪ್ರಕರಣದಲ್ಲಿ ಭಾರತ ಕೈಗೊಂಡ ಕ್ಷಿಪ್ರ ಕ್ರಮವನ್ನು ಚೀನಾ ಗಮನಿಸಬೇಕು ಎಂದು ಸಲಹೆ ನೀಡಿದ್ದರು.

ಇದನ್ನೂ ಓದಿ: ಹೊಸ ಮನೆ ಖರೀದಿಸುವ ಮುನ್ನ ಈ ಏಳು ಅಂಶಗಳನ್ನು ಪರಿಗಣಿಸಿ; ಇದು ಜೀವಮಾನದ ಸಾಧನೆ ಎಂಬುದು ನೆನಪಿರಲಿ

‘ಎವರ್​ಗ್ರಾಂಡೆ ಚೀನಾಗೆ ಒಂದು ರೀತಿ ಲೆಹ್ಮನ್​ನಂತಿದೆ. ಐಎಲ್ ಅಂಡ್ ಎಫ್​ಎಸ್ (IF & FS) ನೆನಪಿಗೆ ಬರುತ್ತದೆ. ಭಾರತ ಸರ್ಕಾರ ಬಹಳ ಕ್ಷಿಪ್ರವಾಗಿ ಕ್ರಮ ಕೈಗೊಂಡು, ಹಣಕಾಸು ಮಾರುಕಟ್ಟೆಯನ್ನು ನಿರಾಳಗೊಳಿಸಿತು. ಸರ್ಕಾರದಿಂದ ನೇಮಕವಾದ ಮಂಡಳಿಯು ಐಎಲ್ ಅಂಡ್ ಎಫ್​ಎಸ್​ನಲ್ಲಿ ಶೇ. 61ರಷ್ಟು ರಿಕವರಿ ಸಾಧ್ಯತೆಯನ್ನು ಅಂದಾಜಿಸಿದೆ. ಚೀನಾದಲ್ಲಿ ಎವರ್​ಗ್ರಾಂಡೆ ಬಾಂಡ್​ಗಳು ಒಂದು ಡಾಲರ್​ಗೆ 25 ಸೆಂಟ್​ಗಳಂತೆ ಟ್ರೇಡಿಂಗ್ ಆಗುತ್ತಿವೆ,’ ಎಂದು ಉದಯ್ ಕೋಟಕ್ 2021ರಲ್ಲಿ ಮಾಡಿದ ಟ್ವೀಟ್​ನಲ್ಲಿ ತಿಳಿಸಿದ್ದರು.

ಐಎಲ್ ಅಂಡ್ ಎಫ್​ಎಸ್ ಎಂಬುದು ಇನ್​ಫ್ರಾಸ್ಟ್ರಕ್ಚರ್ ಲೀಸಿಂಗ್ ಅಂಡ್ ಫೈನಾನ್ಷಿಯಲ್ ಸರ್ವಿಸಸ್. ಇದು ಸರ್ಕಾರಿ ಸ್ವಾಮ್ಯದ ಪ್ರಾಪರ್ಟಿ ಡೆವಲಪರ್ ಸಂಸ್ಥೆಯಾಗಿದೆ. ಇದು ದಿವಾಳಿ ಅಂಚಿಗೆ ಬಂದಾಗ ಸರ್ಕಾರ ಕ್ಷಿಪ್ರವಾಗಿ ಮಧ್ಯಪ್ರವೇಶಿಸಿ, ಸಾಲದ ಮರುರಚನೆಯ ವ್ಯವಸ್ಥೆ ಮಾಡಿ ಸಂಸ್ಥೆಗೆ ಮರುಜೀವ ಕೊಟ್ಟಿತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ