ಚೀನಾದಲ್ಲಿ ವಿಶ್ವದ ಅತಿದೊಡ್ಡ ಹೈಸ್ಪೀಡ್ ರೈಲ್ವೆ ನಿಲ್ದಾಣ; ಬೆಟ್ಟವನ್ನೇ ಸವರಿ, ರೋಬೋಟ್, ಎಐ ಬಳಸಿ ಆಯಿತು ನಿರ್ಮಾಣ

World's Largest High-Speed Rail Station Built in 38 Months: ಚೀನಾ ಚಾಂಗ್‌ಕಿಂಗ್‌ನಲ್ಲಿ ವಿಶ್ವದ ಅತಿದೊಡ್ಡ ಹೈ-ಸ್ಪೀಡ್ ರೈಲು ನಿಲ್ದಾಣವನ್ನು 38 ತಿಂಗಳಲ್ಲಿ ನಿರ್ಮಿಸಿದೆ. ಪರ್ವತ ಶ್ರೇಣಿಯ ಮೇಲೆ ಕೃತಕ ಬುದ್ಧಿಮತ್ತೆ (AI) ಮತ್ತು ರೋಬೋಟ್‌ಗಳನ್ನು ಬಳಸಿ ನಿರ್ಮಿಸಿದ ಈ ₹64,000 ಕೋಟಿ ಮೌಲ್ಯದ ನಿಲ್ದಾಣವು ಇಂಜಿನಿಯರಿಂಗ್ ಕ್ಷೇತ್ರದ ಮೈಲಿಗಲ್ಲಾಗಿದೆ. 29 ಪ್ಲಾಟ್‌ಫಾರ್ಮ್‌ಗಳೊಂದಿಗೆ, ಇದು ಚೀನಾದ ಆರ್ಥಿಕ ಬೆಳವಣಣೆಗೆ ಪ್ರಮುಖ ಕೇಂದ್ರವಾಗಲಿದೆ.

ಚೀನಾದಲ್ಲಿ ವಿಶ್ವದ ಅತಿದೊಡ್ಡ ಹೈಸ್ಪೀಡ್ ರೈಲ್ವೆ ನಿಲ್ದಾಣ; ಬೆಟ್ಟವನ್ನೇ ಸವರಿ, ರೋಬೋಟ್, ಎಐ ಬಳಸಿ ಆಯಿತು ನಿರ್ಮಾಣ
ಎಕ್ಸ್ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ ವಿಡಿಯೋದ ಸ್ಕ್ರೀನ್​ಶಾಟ್
Image Credit source: X user @Ivan_8848

Updated on: May 25, 2026 | 6:00 PM

ಬೀಜಿಂಗ್, ಮೇ 25: ಚೀನಾ ದೇಶವು ಮೂಲಸೌಕರ್ಯ ಮತ್ತು ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಜಗತ್ತೇ ಮೂಗಿನ ಮೇಲೆ ಬೆರಳಿಡುವಂತಹ ಮತ್ತೊಂದು ಮೈಲಿಗಲ್ಲನ್ನು ಸಾಧಿಸಿದೆ. ನೈಋತ್ಯ ಚೀನಾದ ಚಾಂಗ್‌ಕಿಂಗ್ (Chongqing) ನಗರದಲ್ಲಿ ವಿಶ್ವದ ಅತ್ಯಂತ ದೊಡ್ಡ ಹೈ-ಸ್ಪೀಡ್ ರೈಲ್ವೆ ನಿಲ್ದಾಣವಾದ ‘ಚಾಂಗ್‌ಕಿಂಗ್ ಈಸ್ಟ್ ರೈಲ್ವೆ ಸ್ಟೇಷನ್’ (Chongqing East Railway Station ನಿರ್ಮಾಣ ಕಾರ್ಯವನ್ನು ಕೇವಲ 38 ತಿಂಗಳುಗಳಲ್ಲಿ ಪೂರ್ಣಗೊಳಿಸಲಾಗಿದೆ. ಭೌಗೋಳಿಕವಾಗಿ ಅತ್ಯಂತ ಕಠಿಣವಾಗಿದ್ದ ಪರ್ವತ ಶ್ರೇಣಿಯ ಮೇಲೆ ರೋಬೋಟ್‌ಗಳ ಸೈನ್ಯ ಮತ್ತು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿ ಈ ಬೃಹತ್ ನಿಲ್ದಾಣವನ್ನು ಕಟ್ಟಿರುವುದು ಜಾಗತಿಕ ಇಂಜಿನಿಯರ್‌ಗಳನ್ನು ಬೆರಗುಗೊಳಿಸಿದೆ.

ಪರ್ವತವನ್ನೇ ಸವರಿ ಸಮತಟ್ಟು ಮಾಡಿದ ಇಂಜಿನಿಯರಿಂಗ್ ಅದ್ಭುತ

ಸಾಮಾನ್ಯವಾಗಿ ಇಂತಹ ಬೃಹತ್ ನಿಲ್ದಾಣಗಳನ್ನು ಬಯಲು ಸೀಮೆ ಅಥವಾ ಸಮತಟ್ಟಾದ ಭೂಮಿಯ ಮೇಲೆ ನಿರ್ಮಿಸಲಾಗುತ್ತದೆ. ಆದರೆ, ಚಾಂಗ್‌ಕಿಂಗ್‌ನ ಕಡಿದಾದ ಬೆಟ್ಟಗಳು ಮತ್ತು ಕಣಿವೆಗಳ ನಡುವೆ ಈ ನಿಲ್ದಾಣವನ್ನು ನಿರ್ಮಿಸಲಾಗಿದೆ. ಇಂಜಿನಿಯರ್‌ಗಳು ಮೊದಲು ಇಡೀ ಪರ್ವತ ಪ್ರದೇಶವನ್ನು 3D ಮ್ಯಾಪಿಂಗ್ ತಂತ್ರಜ್ಞಾನದ ಮೂಲಕ ಪರಿಶೀಲಿಸಿ, ನಿಯಂತ್ರಿತ ಸ್ಫೋಟಗಳ (Controlled blasting) ಮೂಲಕ ಬಂಡೆಗಳನ್ನು ಸವರಿ, ಬೆಟ್ಟವನ್ನು ಸಮತಟ್ಟು ಮಾಡಿ ಈ ಬೃಹತ್ ಯೋಜನೆಗೆ ಅಡಿಪಾಯ ಹಾಕಿದರು.

ಈ ಯೋಜನೆಯು ಇಷ್ಟು ವೇಗವಾಗಿ ಮುಗಿಯಲು ಮಾನವ ಶ್ರಮದ ಜೊತೆಗೆ ಚೀನಾ ಬಳಸಿದ ಅತ್ಯಾಧುನಿಕ ತಂತ್ರಜ್ಞಾನವೂ ಕಾರಣ ಎಂದು ಹೇಳಿಕೊಳ್ಳಲಾಗಿದೆ. ಲೇಸರ್ ಗೈಡೆಡ್ ಕಾಂಕ್ರೀಟ್ ರೋಬೋಟ್​ಗಳು, ಗ್ಲಾಸ್ ರೋಬೊಟ್​​ಗಳು, ವೆಲ್ಡಿಂಗ್ ರೋಬೋಟ್​ಗಳನ್ನು ಬಳಸಿಕೊಳ್ಳಲಾಗಿತ್ತು.

ಇದನ್ನೂ ಓದಿ: ಸಾಯಿಬಾಬಾ ಸನ್ನಿಧಿಯಲ್ಲಿ ರಾಕೆಟ್ ಲಾಂಚರ್, ಡ್ರೋನ್ ಫ್ಯಾಕ್ಟರಿಗಳು; ಶಸ್ತ್ರಾಸ್ತ್ರ ರಫ್ತಿನಲ್ಲಿ ಭಾರತ ನಂ. 1 ಆಗಲಿದೆ ಎಂದ ರಾಜನಾಥ್

5G ಮತ್ತು AI ತಂತ್ರಜ್ಞಾನ ಹೊಂದಿದ ಲೇಸರ್ ಗೈಡೆಡ್ ಕಾಂಕ್ರೀಟ್ ರೋಬೋಟ್‌ಗಳು ಕಾಂಕ್ರೀಟ್ ಮೇಲ್ಮೈಯನ್ನು ಅತ್ಯಂತ ನಿಖರವಾಗಿ ಸಮತಟ್ಟು ಮಾಡಿದವು. ಇವು ಮನುಷ್ಯರಿಗಿಂತ 3 ಪಟ್ಟು ವೇಗವಾಗಿ ಕೆಲಸ ಮಾಡಿ ಶೇ. 40 ರಷ್ಟು ಕಾರ್ಮಿಕ ವೆಚ್ಚವನ್ನು ಉಳಿಸಿವೆ.

ಭಾರೀ ತೂಕದ ಗ್ಲಾಸ್ ರೋಬೋಟ್‌ಗಳು ಸುಮಾರು 800 ಕೆಜಿ ತೂಕದ ಬೃಹತ್ ಗ್ಲಾಸ್ ಪ್ಯಾನಲ್‌ಗಳನ್ನು ಎತ್ತಿ ನಿಖರವಾದ ಜಾಗದಲ್ಲಿ ಜೋಡಿಸುವ ಕೆಲಸವನ್ನು ಮಾಡಿದವು. ಇದರಿಂದ ಅಪಘಾತಗಳ ಭಯ ಶೇ. 90 ರಷ್ಟು ಕಡಿಮೆಯಾಯಿತು.

ವೆಲ್ಡಿಂಗ್ ರೋಬೋಟ್‌ಗಳು ಹಾಗೂ ದಿನದ 24 ಗಂಟೆಯೂ ನಿರ್ಮಾಣದ ಪ್ರಗತಿಯನ್ನು ಕಣ್ಣಿಟ್ಟು ನೋಡುವ ಕಾವಲು ರೋಬೋಟ್‌ಗಳನ್ನು ಇಲ್ಲಿ ಬಳಸಲಾಗಿತ್ತು.

ದೈತ್ಯಾಕಾರದ ವಿಸ್ತೀರ್ಣ ಮತ್ತು ಸಾಮರ್ಥ್ಯ

ಸುಮಾರು $7.8 ಬಿಲಿಯನ್ (ಅಂದಾಜು ₹64,000 ಕೋಟಿಗೂ ಅಧಿಕ) ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ನಿಲ್ದಾಣವು ಬರೋಬ್ಬರಿ 12 ಲಕ್ಷ ಚದರ ಮೀಟರ್‌ಗಿಂತಲೂ ಹೆಚ್ಚು ವಿಸ್ತೀರ್ಣವನ್ನು ಹೊಂದಿದೆ. (ಇದು ಸುಮಾರು 100 ಕ್ಕೂ ಹೆಚ್ಚು ಫುಟ್‌ಬಾಲ್ ಮೈದಾನಗಳಿಗೆ ಸಮಾನ).

ಈ ನಿಲ್ದಾಣದಲ್ಲಿ ಒಟ್ಟು 29 ಪ್ಲಾಟ್‌ಫಾರ್ಮ್‌ಗಳು ಮತ್ತು 15 ರೈಲ್ವೆ ಟ್ರ್ಯಾಕ್​ಗಳಿವೆ. ಅತ್ಯಂತ ಜನದಟ್ಟಣೆ ಇರುವ ಸಮಯದಲ್ಲಿ ಗಂಟೆಗೆ ಸುಮಾರು 16,000 ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ಈ ಬೃಹತ್ ನಿಲ್ದಾಣವು ಒಟ್ಟು 8 ಅಂತಸ್ತುಗಳನ್ನು ಒಳಗೊಂಡಿದೆ.

ಈ ಯೋಜನೆಯ ಉತ್ತುಂಗದ ಸಮಯದಲ್ಲಿ ಸುಮಾರು 40,000 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ನಿಲ್ದಾಣದ ಒಟ್ಟು ನಿರ್ಮಾಣಕ್ಕೆ 20 ಲಕ್ಷ ಕ್ಯೂಬಿಕ್ ಮೀಟರ್ ಕಾಂಕ್ರೀಟ್ ಮತ್ತು 3.66 ಲಕ್ಷ ಟನ್ ಉಕ್ಕನ್ನು ಬಳಸಲಾಗಿದೆ.

ಇದನ್ನೂ ಓದಿ: ವಾಯುಸೇನೆಗೆ ಭರ್ಜರಿ ಬಲ; ಫ್ರಾನ್ಸ್​ನಿಂದ ಇನ್ನೂ 114 ರಫೇಲ್ ಜೆಟ್ ಖರೀದಿಗೆ ಸಜ್ಜು; 90 ವಿಮಾನಗಳು ಭಾರತದಲ್ಲೇ ಜೋಡಣೆ

ಇಲ್ಲಿನ ಮತ್ತೊಂದು ರೋಮಾಂಚನಕಾರಿ ಇಂಜಿನಿಯರಿಂಗ್ ಸಾಹಸವೆಂದರೆ ಅದರ ಮೇಲ್ಛಾವಣಿ (Roof). 16,500 ಟನ್ ತೂಕದ ದೈತ್ಯ ಸ್ಟೀಲ್ ರೂಫ್ ಅನ್ನು ಮೊದಲು ನೆಲದ ಮೇಲೆ ಜೋಡಿಸಿ, ನಂತರ ಹೈಡ್ರಾಲಿಕ್ ತಂತ್ರಜ್ಞಾನದ ಮೂಲಕ 57 ಮೀಟರ್ ಎತ್ತರಕ್ಕೆ ಎತ್ತಿ ಬಿಗಿಯಲಾಗಿದೆ. ಇದು ಭೂಕಂಪ ನಿರೋಧಕ ಸಾಮರ್ಥ್ಯವನ್ನು ಹೊಂದಿದೆ.

ಚೀನಾದ ಆರ್ಥಿಕತೆಗೆ ಹೆಬ್ಬಾಗಿಲು

ಈ ‘ಚಾಂಗ್‌ಕಿಂಗ್ ಈಸ್ಟ್ ರೈಲ್ವೆ ಸ್ಟೇಷನ್’ ಕೇವಲ ರೈಲು ನಿಲ್ದಾಣವಾಗಿರದೆ, ಅದರ ಒಳಗಡೆಯೇ ಹೋಟೆಲ್‌ಗಳು, ಶಾಪಿಂಗ್ ಮಾಲ್‌ಗಳು ಮತ್ತು ಕಚೇರಿಗಳನ್ನು ಒಳಗೊಂಡ ಒಂದು ‘ವರ್ಟಿಕಲ್ ಸಿಟಿ’ (ಲಂಬ ನಗರ) ತರಹ ವಿನ್ಯಾಸಗೊಳಿಸಲಾಗಿದೆ. ಇದು ಚೀನಾದ ಬುಲೆಟ್ ರೈಲು ಜಾಲದ ಪ್ರಮುಖ ಕೇಂದ್ರವಾಗಲಿದ್ದು, ಬೀಜಿಂಗ್, ಶಾಂಘೈ, ಗುವಾಂಗ್‌ಝೌ ಸೇರಿದಂತೆ ದೇಶದ 14 ಪ್ರಮುಖ ನಗರಗಳಿಗೆ ಗಂಟೆಗೆ 350 ಕಿಮೀ ವೇಗದ ರೈಲು ಸಂಪರ್ಕವನ್ನು ಕಲ್ಪಿಸಲಿದೆ.

ಕಠಿಣ ಹವಾಮಾನ ಮತ್ತು 40 ಡಿಗ್ರಿ ಸೆಲ್ಸಿಯಸ್ ತಾಪಮಾನದ ನಡುವೆಯೂ, ಚೀನಾ ಸರ್ಕಾರವು ರೋಬೋಟಿಕ್ಸ್ ಮತ್ತು AI ತಂತ್ರಜ್ಞಾನದ ನೆರವಿನಿಂದ ಕೇವಲ 38 ತಿಂಗಳಲ್ಲಿ ಜಗತ್ತಿನ ಅತಿ ದೊಡ್ಡ ರೈಲು ನಿಲ್ದಾಣವನ್ನು ಬೆಟ್ಟದ ಮೇಲೆ ಕಟ್ಟಿ ಮುಗಿಸಿರುವುದು ಆಧುನಿಕ ಇಂಜಿನಿಯರಿಂಗ್ ಇತಿಹಾಸದಲ್ಲೇ ಒಂದು ಅದ್ಭುತ ದಾಖಲೆಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:56 pm, Mon, 25 May 26

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us