ಸಿಗರೇಟುಗಳಿಗೆ ಶೇ. 40 ಜಿಎಸ್ಟಿ ಜೊತೆಗೆ ಹೆಚ್ಚುವರಿ ಸುಂಕ ಕ್ರಮ ಮುಂದುವರಿಕೆ
GST on cigarettes: ಪಾಪದ ಸರಕುಗಳೆಂದು ವರ್ಗೀಕೃತವಾಗಿರುವ ಸಿಗರೇಟು ಇತ್ಯಾದಿ ತಂಬಾಕು ಉತ್ಪನ್ನಗಳಿಗೆ ಜಿಎಸ್ಟಿ ಜೊತೆಗೆ ಹೆಚ್ಚುವರಿ ಸೆಸ್ಗಳು ಮುಂದುವರಿಯಲಿವೆ. ಸದ್ಯ ಇವುಗಳಿಗೆ ಶೇ. 28 ಜಿಎಸ್ಟಿ ಹಾಗೂ ಶೇ. 50ರವರೆಗೆ ಕಾಂಪೆನ್ಸೇಶನ್ ಸೆಸ್ ಇವೆ. ಸೆಪ್ಟೆಂಬರ್ 22ರಿಂದ ಈ ಉತ್ಪನ್ನಗಳಿಗೆ ಜಿಎಸ್ಟಿ ಶೇ. 40ಕ್ಕೆ ಏರುತ್ತದೆ. ಹೆಚ್ಚುವರಿಯಾಗಿ ಸೆಸ್ಗಳನ್ನೂ ಹಾಕಲಾಗುತ್ತದೆ.

ನವದೆಹಲಿ, ಸೆಪ್ಟೆಂಬರ್ 5: ಸಿಗರೇಟು ಮತ್ತಿತರ ತಂಬಾಕು ವಸ್ತುಗಳನ್ನು ಶೇ. 40ರ ಜಿಎಸ್ಟಿ (GST) ವ್ಯಾಪ್ತಿಗೆ ತರುವುದರಿಂದ ರಾಜ್ಯ ಸರ್ಕಾರಗಳಿಗೆ ಆಗಬಹುದಾದ ಸಂಭವನೀಯ ಆದಾಯ ನಷ್ಟವನ್ನು ಸರಿದೂಗಿಸಲು ಕೇಂದ್ರ ಸರ್ಕಾರ ಮಾರ್ಗೋಪಾಯ ಹುಡುಕಿದೆ. ವರದಿಗಳ ಪ್ರಕಾರ, ಈ ಸರಕುಗಳಿಗೆ ಜಿಎಸ್ಟಿ ಜೊತೆಗೆ ಹೆಚ್ಚುವರಿ ಸುಂಕಗಳನ್ನು ವಿಧಿಸಿ, ಅದನ್ನು ರಾಜ್ಯಗಳಿಗೆ ಹಂಚಲು ಯೋಜಿಸುತ್ತಿದೆ.
ಈ ಮೊದಲೂ ಕೂಡ ಇದೇ ರೀತಿಯ ವ್ಯವಸ್ಥೆ ಇತ್ತು. ತಂಬಾಕು ಮತ್ತಿತರ ಸಿನ್ ಗೂಡ್ ಅಥವಾ ಪಾಪದ ಸರಕುಗಳಿಗೆ ಶೇ. 28 ಜಿಎಸ್ಟಿ ಹಾಗೂ ಹೆಚ್ಚುವರಿ ಕಾಂಪೆನ್ಸೇಶನ್ ಸೆಸ್ ಅನ್ನು ಹಾಕಲಾಗಿತ್ತು. ಅವೆಲ್ಲಾ ಒಟ್ಟು ಸೇರಿ ಸಿಗರೇಟು ಮತ್ತಿತರ ವಸ್ತುಗಳ ಮೇಲೆ ತೆರಿಗೆ ಶೇ. 50ರಿಂದ 90ರ ಮಟ್ಟದವರೆಗೂ ಇತ್ತು. ಈಗ ಶೇ. 40 ಜಿಎಸ್ಟಿ ಸೇರಿ ಒಟ್ಟೂ ತೆರಿಗೆ ಶೇ. 52-88ರ ಶ್ರೇಣಿಯಲ್ಲಿ ಇರುವ ರೀತಿಯಲ್ಲಿ ಹೆಚ್ಚುವರಿ ಸುಂಕಗಳನ್ನು ನಿಗದಿ ಮಾಡಲು ಹೊರಟಿದೆ ಸರ್ಕಾರ.
ಈ ವ್ಯವಸ್ಥೆ ಖಾಯಂ ಆಗಿ ಇರುವುದಿಲ್ಲ. ಸಿಗರೇಟುಗಳನ್ನು ಜಿಎಸ್ಟಿ ವ್ಯಾಪ್ತಿ ತಂದ ಪರಿಣಾಮ ಆದ ನಷ್ಟ ಪ್ರತಿಯಾಗಿ ರಾಜ್ಯಗಳು ತೆಗೆದುಕೊಂಡ ಸಾಲವನ್ನು ಭರ್ತಿಯಾಗುವವರೆಗೂ ಕಾಂಪೆನ್ಸೇಶನ್ ಸೆಸ್ ಇರುತ್ತದೆ. ಹಂತ ಹಂತವಾಗಿ ಈ ಸೆಸ್ ಅನ್ನು ಕಡಿಮೆ ಮಾಡಿ ಕೊನೆಗೆ ತೆಗೆದುಹಾಕಲಾಗುತ್ತದೆ ಎಂದು ಮನಿ ಕಂಟ್ರೋಲ್ ವೆಬ್ಸೈಟ್ನಲ್ಲಿ ವರದಿಯಾಗಿದೆ.
ಇದನ್ನೂ ಓದಿ: ಯಾವುದೇ ಒಪ್ಪಂದದಲ್ಲೂ ರೈತರು, ಮೀನುಗಾರರ ಹಿತಾಸಕ್ತಿ ಬಲಿಕೊಡೋದಿಲ್ಲ: ಸಚಿವ ಪೀಯೂಶ್ ಗೋಯಲ್
ಹೊಸ ಜಿಎಸ್ಟಿ ಸಿಸ್ಟಂನಲ್ಲಿ ನಾಲ್ಕು ಟ್ಯಾಕ್ಸ್ ಸ್ಲ್ಯಾಬ್ ಬದಲು ಎರಡನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಶೇ. 5 ಮತ್ತು ಶೇ. 18 ಟ್ಯಾಕ್ಸ್ ಸ್ಲ್ಯಾಬ್ ಇರಲಿವೆ. ಇದರ ಜೊತೆಗೆ, ಸಿಗರೇಟು ಇತ್ಯಾದಿ ಆರೋಗ್ಯಕ್ಕೆ ಹಾನಿಕಾರಕ ವಸ್ತುಗಳು ಹಾಗೂ ಲಕ್ಷುರಿ ವಸ್ತುಗಳನ್ನು ಸಿನ್ ಗೂಡ್ಸ್ ಎಂದು ವರ್ಗೀಕರಿಸಿ ಅವುಗಳಿಗೆ ಸ್ಪೆಷಲ್ ಟ್ಯಾಕ್ಸ್ ಸ್ಲ್ಯಾಬ್ ಹಾಕಲಾಗಿದೆ. ಅವರಕ್ಕೆ ಶೇ. 40 ಜಿಎಸ್ಟಿ ಇರಲಿದೆ.
ಈ ಮೊದಲೂ ಕೂಡ ಈ ರೀತಿಯ ಸಿನ್ ಗೂಡ್ಗಳಿಗೆ ಶೇ. 28 ಜಿಎಸ್ಟಿ ಇತ್ತು. ಅದರ ಜೊತೆಗೆ ಹೆಚ್ಚುವರಿ ಸೆಸ್ಗಳನ್ನು ಹಾಕಲಾಗುತ್ತಿತ್ತು. 2017ರಲ್ಲಿ ಜಿಎಸ್ಟಿ ಜಾರಿಗೆ ಬರುವ ಮುನ್ನ ರಾಜ್ಯ ಸರ್ಕಾರಗಳು ಸಿಗರೇಟು ಮತ್ತಿತರ ವಸ್ತುಗಳಿಗೆ ಬೇರೆ ಬೇರೆ ರೀತಿಯ ಟ್ಯಾಕ್ಸ್ ಹಾಕುತ್ತಿದ್ದವು. ಜಿಎಸ್ಟಿ ಬಂದ ಬಳಿಕ ಶೇ. 28 ತೆರಿಗೆ ನಿಗದಿ ಮಾಡಲಾಯಿತು.
ಇದರಿಂದ ರಾಜ್ಯ ಸರ್ಕಾರಗಳಿಗೆ ತೆರಿಗೆ ಆದಾಯ ಕಡಿಮೆ ಆಗುತ್ತಿದ್ದುದರಿಂದ, ಅದನ್ನು ಭರಿಸಲು ಕಾಂಪೆನ್ಸೇಶನ್ ಸೆಸ್ ಸೇರಿಸಲಾಯಿತು. ಈ ಸೆಸ್ನಿಂದ ಬಂದ ಹಣವನ್ನು ಶೇಖರಿಸಿ, ರಾಜ್ಯಗಳಿಗೆ ಮರುಹಂಚಿಕೆ ಮಾಡಲಾಗುತ್ತಿತ್ತು. ಈ ರೀತಿಯಾಗಿ ರಾಜ್ಯ ಸರ್ಕಾರಗಳಿಗೆ ಆದಾಯ ನಷ್ಟವನ್ನು ಭರಿಸಲು ಸಾಧ್ಯವಾಗುತ್ತಿದೆ.
ಇದನ್ನೂ ಓದಿ: ಸಿಗರೇಟ್ ಇತ್ಯಾದಿಗೆ ಸಿನ್ ಟ್ಯಾಕ್ಸ್; ಆದ್ರೆ ಮದ್ಯಕ್ಕೆ ಇಲ್ಲ, ಯಾಕೆ?
ಈಗ ಕೇಂದ್ರ ಸರ್ಕಾರ ಸಿಗರೇಟು ಮತ್ತಿತರ ವಸ್ತುಗಳಿಗೆ ಜಿಎಸ್ಟಿಯನ್ನು ಶೇ. 28 ಬದಲು ಶೇ. 40ಕ್ಕೆ ಹೆಚ್ಚಿಸಿದೆ. ಕಾಂಪೆನ್ಸೇಶನ್ ಸೆಸ್ ಅನ್ನು ನಿರ್ಮೂಲನೆ ಮಾಡಲು ಉದ್ದೇಶಿಸಿದೆ. ಹೀಗೆ ಮಾಡಿದರೆ ರಾಜ್ಯ ಸರ್ಕಾರಗಳಿಗೆ ಆದಾಯ ನಷ್ಟವಾಗಬಹುದು. ಹೀಗಾಗಿ, ಒಮ್ಮೆಗೇ ಸೆಸ್ ತೆಗೆದುಹಾಕುವ ಬದಲು ಹಂತ ಹಂತವಾಗಿ ಅದನ್ನು ಕಡಿಮೆ ಮಾಡಲಾಗುತ್ತಿದೆ.
2017ರಲ್ಲಿ ಜಿಎಸ್ಟಿ ಜಾರಿಯಾದಾಗ ಕಾಂಪೆನ್ಸೇನ್ ಸೆಸ್ ಅನ್ನು 5 ವರ್ಷದವರೆಗೆ ಮುಂದುವರಿಸಲೆಂದು ತೀರ್ಮಾನಿಸಲಾಗಿತ್ತು. 2020ರಲ್ಲಿ ಕೋವಿಡ್ ಸಂಕಷ್ಟ ಬಂದಾಗ ರಾಜ್ಯಗಳಿಗೆ ತೆರಿಗೆ ಆದಾಯ ಕುಂಠಿತಗೊಂಡಿತು. ಹೀಗಾಗಿ, ಮತ್ತೂ 5 ವರ್ಷ ಸೆಸ್ ಮುಂದುವರಿಸಲಾಗಿದೆ. ಈ ಹೊಂದಾಣಿಕೆಯು 2026ರ ಮಾರ್ಚ್ಗೆ ಮುಗಿಯುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




