AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದವರಿಂದ ಈಗ ವರಸೆ ಬದಲು: ಜಿಎಸ್​ಟಿ ವಿಚಾರದಲ್ಲಿ ವಿಪಕ್ಷಗಳಿಗೆ ನಿರ್ಮಲಾ ಲೇವಡಿ

Nirmala Sitharaman point by point answers to GST criticizers: ಜಿಎಸ್​ಟಿಯನ್ನು ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದು ಟೀಕಿಸಿದ್ದ ಕೆಲವರು ಈಗ ಅದಕ್ಕೆ ಕ್ರೆಡಿಟ್ ತೆಗೆದುಕೊಳ್ಳುತ್ತಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಜಿಎಸ್​ಟಿಯನ್ನು 20ನೇ ಶತಮಾನದ ಅರವತ್ತರ ದಶಕದಲ್ಲೇ ಜಾರಿ ಮಾಡಬಹುದಿತ್ತು. ರಾಜಕೀಯ ಇಚ್ಛಾಶಕ್ತಿ ಇರಲಿಲ್ಲ ಎಂದಿದ್ದಾರೆ. ಜಿಎಸ್​ಟಿ ಸುಧಾರಣೆಯಿಂದ ರಾಜ್ಯಗಳಂತೆ ಕೇಂದ್ರಕ್ಕೂ ಆದಾಯ ಕಡಿಮೆ ಆಗುತ್ತದೆ ಎಂದಿದ್ದಾರೆ.

ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದವರಿಂದ ಈಗ ವರಸೆ ಬದಲು: ಜಿಎಸ್​ಟಿ ವಿಚಾರದಲ್ಲಿ ವಿಪಕ್ಷಗಳಿಗೆ ನಿರ್ಮಲಾ ಲೇವಡಿ
ನಿರ್ಮಲಾ ಸೀತಾರಾಮನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 05, 2025 | 4:37 PM

Share

ನವದೆಹಲಿ, ಸೆಪ್ಟೆಂಬರ್ 5: ಕೇಂದ್ರ ಸರ್ಕಾರದ ನೂತನ ಜಿಎಸ್​ಟಿ ಸಿಸ್ಟಂ (GST) ಜಾರಿಗೆ ತರಲು ತಾವೇ ಕಾರಣ ಎಂದು ಕೆಲ ಕಾಂಗ್ರೆಸ್ ನಾಯಕರು ನೀಡಿರುವ ಹೇಳಿಕೆಗಳಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ತಿರುಗೇಟು ನೀಡಿದ್ದಾರೆ. ಸರ್ಕಾರ ಸರಕು ಮತ್ತು ಸೇವಾ ತೆರಿಗೆ ಪದ್ಧತಿಯನ್ನು ಮೊದಲು ಜಾರಿಗೆ ತಂದಾಗ ಇದೇ ವಿಪಕ್ಷಗಳು ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದು ಲೇವಡಿ ಮಾಡಿದ್ದವು. ಈಗ ಜಿಎಸ್​ಟಿ ಸುಧಾರಣೆಗಳಿಗೆ ತಾವೇ ಕ್ರೆಡಿಟ್ ಪಡೆಯಲು ಯತ್ನಿಸುತ್ತಿವೆ ಎಂದು ಅವರು ವ್ಯಂಗ್ಯ ಮಾಡಿದ್ದಾರೆ.

ರಾಹುಲ್ ಗಾಂಧಿ ಹಿಂದೆಯೇ ಜಿಎಸ್​ಟಿ ಸುಧಾರಣೆಗಳಿಗೆ ಸಲಹೆಗಳನ್ನು ನೀಡಿದ್ದರು. ಕಳೆದ 9 ವರ್ಷಗಳಿಂದ ಸರ್ಕಾರ ಈ ಸಲಹೆಗಳನ್ನು ಲೆಕ್ಕಕ್ಕೇ ತೆಗೆದುಕೊಳ್ಳಲಿಲ್ಲ. ರಾಹುಲ್ ಗಾಂಧಿ ಈಗ ಮತಕಳ್ಳತನದ ಆಂದೋಲನ ಶುರು ಮಾಡಿದಾಗ ಎಚ್ಚೆತ್ತುಕೊಂಡು ಸರ್ಕಾರವು ಜಿಎಸ್​ಟಿ ಸುಧಾರಣೆ ಕೈಗೊಂಡಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿರುವುದುಂಟು.

ಟೀಕಿಸುವ ಮುನ್ನ ವಿಚಾರ ತಿಳಿದುಕೊಳ್ಳಿ

ಜಿಎಸ್​ಟಿಯನ್ನು ಟೀಕಿಸುವ ಜನರಿಗೆ ನಿರ್ಮಲಾ ಸೀತಾರಾಮನ್, ತಿಳಿದು ಮಾತನಾಡುವಂತೆ ಸಲಹೆ ಕೊಟ್ಟಿದ್ದಾರೆ. ಭಾರತವು ಅರವತ್ತರ ದಶಕದಲ್ಲೇ ಜಿಎಸ್​ಟಿಯನ್ನು ಜಾರಿಗೆ ತರಬಹುದಿತ್ತು. ಆದರೆ, ರಾಜಕೀಯ ಭೇದಗಳು ಈ ಸುಧಾರಣೆ ಆಗಲು ಬಿಡಲಿಲ್ಲ ಎಂದು ಹಣಕಾಸು ಸಚಿವೆ ಇಂಡಿಯಾ ಟುಡೇ ಸಂದರ್ಶನದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಯಾವುದೇ ಒಪ್ಪಂದದಲ್ಲೂ ರೈತರು, ಮೀನುಗಾರರ ಹಿತಾಸಕ್ತಿ ಬಲಿಕೊಡೋದಿಲ್ಲ: ಸಚಿವ ಪೀಯೂಶ್ ಗೋಯಲ್

ರಾಜ್ಯಗಳಿಗೆ ಆದಾಯ ಕಡಿಮೆ ಆಗುತ್ತಾ?

ನೂತನ ಜಿಎಸ್​ಟಿ ಸಿಸ್ಟಂ ಜಾರಿಗೆ ಬಂದರೆ ರಾಜ್ಯ ಸರ್ಕಾರಗಳಿಗೆ ತೆರಿಗೆ ಆದಾಯ ಕಡಿಮೆ ಆಗುತ್ತದೆ ಎನ್ನುವ ಆತಂಕಗಳಿಗೆ ನಿರ್ಮಲಾ ಸೀತಾರಾಮನ್ ಸ್ಪಷ್ಟನೆ ಕೊಟ್ಟಿದ್ದಾರೆ. ಜಿಎಸ್​ಟಿ ತೆರಿಗೆ ಇಳಿಕೆಯಿಂದ ರಾಜ್ಯಗಳು ಮಾತ್ರವಲ್ಲ, ಕೇಂದ್ರವೂ ಬಾಧಿತವಾಗುತ್ತದೆ. ಕೇಂದ್ರವೇನು ರಾಜ್ಯಗಳಿಗೆ ದಾನ ಕೊಡುವುದಿಲ್ಲ. ಜಿಎಸ್​ಟಿ ಜಾರಿಗೆ ತರಬೇಕಾದರೆ ಕೇಂದ್ರ ಮತ್ತು ರಾಜ್ಯಗಳೆಲ್ಲವೂ ಕೆಲ ತೆರಿಗೆಗಳನ್ನು ಬಿಟ್ಟುಕೊಟ್ಟಿವೆ ಎಂದು ಅವರು ವಿವರಿಸಿದ್ದಾರೆ.

ಸರ್ಕಾರಕ್ಕೆ ಆದಾಯಕ್ಕಿಂತ ಜನಸಾಮಾನ್ಯರ ಒಳಿತು ಮುಖ್ಯ

ಕೇಂದ್​ರಕ್ಕಾಗಲೀ, ರಾಜ್ಯಗಳಿಗಾಗಲೀ ಯಾವಾಗಲೂ ಪ್ರಜೆಗಳ ಕ್ಷೇಮವೇ ಮೊದಲ ಆದ್ಯತೆಯಾಗಬೇಕು. ಆದಾಯ ಎಲ್ಲಿಂದ ತರಬೇಕು ಎಂದು ನಂತರ ಯೋಚಿಸಬಬಹುದು ಎಂದು ಹೇಳಿರುವ ನಿರ್ಮಲಾ ಸೀತಾರಾಮನ್, ಕೋವಿಡ್ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಧೋರಣೆಯನ್ನು ಉದಾಹರಣೆಯಾಗಿ ನೀಡಿದ್ದಾರೆ.

ಇದನ್ನೂ ಓದಿ: ದೊಡ್ಡ ವಾಹನಗಳಿಗೆ ಟ್ಯಾಕ್ಸ್ ಶೇ. 40ಕ್ಕೆ ಹೆಚ್ಚಾದರೂ ಬೆಲೆಯಲ್ಲಿ ಇಳಿಕೆ; ಹೇಗಿದೆ ವಾಹನಗಳ ಮೇಲೆ ಹೊಸ ಜಿಎಸ್​ಟಿ ದರ?

‘ಆ ಸಂದರ್ಭದಲ್ಲೂ ಪ್ರಧಾನಿ ಮೋದಿ ಎದೆಗುಂದಲಿಲ್ಲ. ಅಯ್ಯೋ ಏನು ಮಾಡೋದು ಎನ್ನಲಿಲ್ಲ. ಆದಾಯಕ್ಕೆ ಹುಡುಕುವುದು ಈಗ ಬೇಡ. ಜನರಿಗೆ ಉಚಿತವಾಗಿ ಲಸಿಕೆ ನೀಡುವುದು ಗುರಿಯಾಗಬೇಕು ಎಂದು ಮೋದಿ ಹೇಳಿದ್ದರು’ ಎಂದು ನಿರ್ಮಲಾ ಸೀತಾರಾಮನ್ ಸ್ಮರಿಸಿದ್ದಾರೆ.

ಪೆಟ್ರೋಲ್, ಡೀಸಲ್ ಜಿಎಸ್​ಟಿಗೆ ಬರೋದಿಲ್ಲ

ಮದ್ಯದ ರೀತಿ ಪೆಟ್ರೋಲ್ ಮತ್ತು ಡೀಸಲ್ ಕೂಡ ಜಿಎಸ್​ಟಿ ವ್ಯಾಪ್ತಿಗೆ ಬರೋದಿಲ್ಲ. ನಿರ್ಮಲಾ ಸೀತಾರಾಮನ್ ಇದನ್ನು ಸ್ಪಷ್ಟಪಡಿಸಿದ್ದಾರೆ. ಜಿಎಸ್​ಟಿ ಕೌನ್ಸಿಲ್ ಬಳಿ ಪೆಟ್ರೋಲ್ ಮತ್ತು ಡೀಸಲ್ ಅನ್ನು ಜಿಎಸ್​ಟಿ ವ್ಯಾಪ್ತಿಗೆ ತರಬೇಕೆನ್ನುವ ಪ್ರಸ್ತಾಪ ಇಲ್ಲ. ಇದು ರಾಜ್ಯಗಳ ನಿರ್ಧಾರಕ್ಕೆ ಬಿಟ್ಟಿದ್ದು ಎಂದು ಹಣಕಾಸು ಸಚಿವೆ ಸ್ಪಷ್ಟಪಡಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ