ನವದೆಹಲಿ, ಏಪ್ರಿಲ್ 16: ಕಾರ್ಪೊರೇಟ್ ಕಂಪನಿಗಳು ಆಗಾಗ್ಗೆ ತಂಡದ ರಚನೆಯನ್ನು ಬದಲಿಸುತ್ತಿರುತ್ತದೆ. ಕೆಲವೊಮ್ಮೆ ಲೇ ಆಫ್ ಮಾಡಬಹುದು. ಹೊಸ ಉದ್ಯೋಗಿಗಳನ್ನು ಸೇರಿಸಿಕೊಳ್ಳಬಹುದು. ಅಥವಾ ಇರುವ ಉದ್ಯೋಗಿಗಳ ಸ್ಥಾನ ಪಲ್ಲಟ ಮಾಡಿ ತಂಡ ಪುನಾರಚಿಸಬಹುದು. ಈಗ ಹೆಚ್ಚಿನ ಕಂಪನಿಗಳು ಹೊಸ ನೇಮಕಾತಿ ಕಡಿಮೆ ಮಾಡಿವೆ. ಎಷ್ಟೋ ಕಂಪನಿಗಳು ನೇಮಕಾತಿಯನ್ನೇ ನಿಲ್ಲಿಸಿವೆ. ಇನ್ನೂ ಕೆಲ ಕಂಪನಿಗಳು ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಪರದಾಡುವುದುಂಟು. ಇಂಥ ಸಂದರ್ಭದಲ್ಲಿ ಕಾರ್ಪೊರೇಟ್ ಕಂಪನಿಗಳು ಡ್ರೈ ಪ್ರೊಮೋಶನ್ ಅಥವಾ ಒಣ ಬಡ್ತಿ (dry promotion) ತಂತ್ರ ಅನುಸರಿಸುತ್ತವೆ. ಪರ್ಲ್ ಮೆಯೆರ್ ಎಂಬ ಕಾಂಪೆನ್ಸೇಶನ್ ಕನ್ಸಲ್ಟೆಂಟ್ ಕಂಪನಿ ವರದಿಯೊಂದು ಬಿಡುಗಡೆ ಮಾಡಿದ್ದು ಅದರ ಪ್ರಕಾರ ಕಳೆದ ಐದು ವರ್ಷದಲ್ಲಿ ಡ್ರೈ ಪ್ರೊಮೋಶನ್ ಪ್ರಮಾಣ ಹೆಚ್ಚಾಗಿದೆಯಂತೆ. 2018ರಲ್ಲಿ ಶೇ. 8ರಷ್ಟು ಉದ್ಯೋಗಿಗಳಿಗೆ ಒಣ ಬಡ್ತಿ ಸಿಕ್ಕಿತ್ತು. ಈಗ ಅದು ಶೇ. 13ಕ್ಕೆ ಏರಿದೆ.
ಒಬ್ಬ ಉದ್ಯೋಗಿಗೆ ಈಗಿರುವ ಸಂಬಳವನ್ನು ಹೆಚ್ಚಳ ಮಾಡದೆಯೇ ಕೆಲಸದಲ್ಲಿ ಬಡ್ತಿ ಕೊಡುವುದಕ್ಕೆ ಡ್ರೈ ಪ್ರೊಮೋಶನ್ ಅಥವಾ ಒಣ ಬಡ್ತಿ ಎನ್ನಲಾಗುತ್ತದೆ. ಉದ್ಯೋಗಿಗಳಿಗೆ ಒಂದು ಹೋಗಿ ಮತ್ತೊಂದು ಸಿಕ್ಕಂತಾಗುತ್ತದೆ. ಕೆಲಸದಲ್ಲಿ ಬಡ್ತಿ ಸಿಗುತ್ತದಾದರೂ ಆ ಹುದ್ದೆಗೆ ತಕ್ಕಂತಹ ವೇತನ ಸಿಗುವುದಿಲ್ಲ.
ಇದನ್ನೂ ಓದಿ: ಟ್ವಿಟ್ಟರ್ ಅಥವಾ ಎಕ್ಸ್ನಲ್ಲಿ ನೀವು ಲೈಕ್, ರಿಪ್ಲೈ ಮಾಡಿದರೂ ಬೀಳುತ್ತೆ ಕಾಸು; ಮಸ್ಕ್ ಕೊಟ್ಟಿದ್ದಾರೆ ಬಿಕ್ ಶಾಕ್
ಸಾಮಾನ್ಯವಾಗಿ ಬಡ್ತಿ ಸಿಕ್ಕಾಗ ಕೆಲಸದ ಜವಾಬ್ದಾರಿಯೂ ಹೆಚ್ಚುತ್ತದೆ. ಹೀಗಾಗಿ ಬಡ್ತಿ ಖುಷಿ ತಾತ್ಕಾಲಿಕವಾಗಿ ಮಾತ್ರ ಇರಬಹುದು. ಹೀಗಾಗಿ, ಹೆಚ್ಚೆಚ್ಚು ಉದ್ಯೋಗಿಗಳು ಈ ಒಣಬಡ್ತಿಯನ್ನು ಸ್ವೀಕರಿಸಲು ಹಿಂದೇಟು ಹಾಕುವುದುಂಟು.
ಕಾರ್ಪೊರೇಟ್ ಕಂಪನಿಗಳು ಡ್ರೈ ಪ್ರೊಮೋಶನ್ ಕ್ರಮ ತೆಗೆದುಕೊಳ್ಳಲು ಬೇರೆ ಬೇರೆ ಕಾರಣಗಳಿರಬಹುದು. ಎಲ್ಲರಿಗೂ ಸಂಬಳ ಹೆಚ್ಚಳ ಮಾಡಲು ಬಜೆಟ್ ಇರುವುದಿಲ್ಲ. ಅಂಥ ಸಂದರ್ಭದಲ್ಲಿ ಕೆಲವರಿಗೆ ಸಂಬಳ ಹೆಚ್ಚಳ ಮಾಡಲಾಗುತ್ತದೆ. ಇನ್ನೂ ಕೆಲವರಿಗೆ ಸಂಬಳ ಹೆಚ್ಚಿಸದೇ ಬಡ್ತಿ ನೀಡಲಾಗುತ್ತದೆ.
ಇದನ್ನೂ ಓದಿ: ಸನ್ರೈಸರ್ಸ್ ಹೈದರಾಬಾದ್ನ ಸಿಇಒ ಕಾವ್ಯಾ ಮಾರನ್ ಯಾರು? ಕರುನಾಡಿನ ನಂಟಿರುವ ಈ ಚೆಂದುಳ್ಳಿ ಚೆಲುವೆ ಹಿನ್ನೆಲೆ ಏನು?
ಮರ್ಸರ್ ಎಂಬ ಅಡ್ವೈಸರಿ ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ ಬಹಳಷ್ಟು ಕಂಪನಿಗಳು ಈ ವರ್ಷದ ಸಂಬಳ ಹೆಚ್ಚಳದ ಬಜೆಟ್ನಲ್ಲಿ ಬಡ್ತಿ ಹುದ್ದೆಗಳಿಗೆ ಕಡಿಮೆ ಹಣ ಮೀಸಲಿರಿಸಿವೆಯಂತೆ. ಜಾಗತಿಕವಾಗಿ 900 ಕಾರ್ಪೊರೇಟ್ ಕಂಪನಿಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ