ನವದೆಹಲಿ, ಏಪ್ರಿಲ್ 16: ಕೋವಿಡ್ ಸಂಕಷ್ಟದಿಂದ ಇನ್ನೂ ಪೂರ್ಣವಾಗಿ ಚೇತರಿಸಿಕೊಳ್ಳದ ಮತ್ತು ರಿಯಲ್ ಎಸ್ಟೇಟ್ ಬಿಕ್ಕಟ್ಟು ಅನುಭವಿಸುತ್ತಿರುವ ಚೀನಾದ ಆರ್ಥಿಕತೆ (China economy) ನಿರೀಕ್ಷೆಮೀರಿದ ಬೆಳವಣಿಗೆ ತೋರಿದೆ. ಜನವರಿಯಿಂದ ಮಾರ್ಚ್ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಚೀನಾದ ಜಿಡಿಪಿ ಶೇ. 5.3ರಷ್ಟು ಏರಿದೆ. ಹಿಂದಿನ ಕ್ವಾರ್ಟರ್ನಲ್ಲಿ (ಅಕ್ಟೋಬರ್ನಿಂದ ಡಿಸೆಂಬರ್) ಚೀನಾದ ಆರ್ಥಿಕತೆ ಬೆಳವಣಿಗೆ ಕೇವಲ 1.6 ಪ್ರತಿಶತ ಮಾತ್ರ ಇತ್ತು. ವಿವಿಧ ಆರ್ಥಿಕ ತಜ್ಞರು ಚೀನಾದ ಆರ್ಥಿಕತೆ ಶೇ. 4.8ರಷ್ಟು ಹೆಚ್ಚಬಹುದು ಎಂದು ನಿರೀಕ್ಷಿಸಿದ್ದರು. ಅದನ್ನೂ ಮೀರಿಸಿ ಜಿಡಿಪಿ ಬೆಳೆದು ಅಚ್ಚರಿ ಹುಟ್ಟಿಸಿದೆ.
ಮಾರ್ಚ್ ತಿಂಗಳಲ್ಲಿ ಚೀನಾದ ಆಮದು ಮತ್ತು ರಫ್ತು ಎರಡೂ ಕೂಡ ಇಳಿಕೆ ಆಗಿದ್ದವು. ಹಣದುಬ್ಬರವೂ ಕೂಡ ಮಂದಗೊಂಡಿತ್ತು. ಕಳೆದ ಕೆಲ ವರ್ಷಗಳಿಂದ ಚೀನಾದ ರಿಯಲ್ ಎಸ್ಟೇಟ್ ಉದ್ಯಮ ನೆಲಕಚ್ಚಿದೆ. ರಿಯಲ್ ಎಸ್ಟೇಟ್ ಕಂಪನಿಗಳು ಒಂದೊಂದಾಗಿ ದಿವಾಳಿಯಾಗುವ ಸೂಚನೆ ಇದೆ. ಇದರ ನಡುವೆಯೂ ಆರ್ಥಿಕತೆ ನಿರೀಕ್ಷೆಮೀರಿ ಬೆಳವಣಿಗೆ ತೋರಿದೆ.
ಚೀನಾದ ಆರ್ಥಿಕ ವರ್ಷ ಜನವರಿಯಿಂದ ಡಿಸೆಂಬರ್ವರೆಗೆ ಇರುತ್ತದೆ. ಇವತ್ತು ಬಿಡುಗಡೆ ಆದ ಡಾಟಾ ಮೊದಲ ಕ್ವಾರ್ಟರ್ನದ್ದಾಗಿದೆ. ಚೀನಾಗೆ ಒಂದು ರೀತಿಯಲ್ಲಿ ಹೊಸ ವರ್ಷಕ್ಕೆ ಶುಭಾರಂಭ ಸಿಕ್ಕಂತಾಗಿದೆ. ಈ ಮೊದಲ ಕ್ವಾರ್ಟರ್ನಲ್ಲಿ ಚೀನಾದ ಮ್ಯಾನುಫ್ಯಾಕ್ಚರಿಂಗ್ ಉದ್ಯಮ ಉತ್ತಮ ಸಾಧನೆ ತೋರಿದೆ. ಇದಕ್ಕೆ ಇಂಬು ಕೊಡುವಂತೆ ಸರ್ಕಾರದಿಂದ ಹೂಡಿಕೆಗಳಿಗೆ ಉತ್ತೇಜನ ನೀಡುವಂತಹ ಕ್ರಮಗಳಾಗಿವೆ. ಚಾಂದ್ರಮಾನ ಹೊಸ ವರ್ಷದ ಹಬ್ಬದ ರಜೆಗಳು ಹಾಗೂ ಮನೆಗಳಿಂದ ವೆಚ್ಚ ಹೆಚ್ಚಾಗಿರುವುದು ಆರ್ಥಿಕತೆಗೆ ಪುಷ್ಟಿ ಕೊಟ್ಟಿದೆ.
ಇದನ್ನೂ ಓದಿ: ಟ್ವಿಟ್ಟರ್ ಅಥವಾ ಎಕ್ಸ್ನಲ್ಲಿ ನೀವು ಲೈಕ್, ರಿಪ್ಲೈ ಮಾಡಿದರೂ ಬೀಳುತ್ತೆ ಕಾಸು; ಮಸ್ಕ್ ಕೊಟ್ಟಿದ್ದಾರೆ ಬಿಕ್ ಶಾಕ್
ಅಮೆರಿಕ ಬಿಟ್ಟರೆ ಚೀನಾವೇ ಅತಿಹೆಚ್ಚು ಆರ್ಥಿಕತೆ ಹೊಂದಿರುವ ದೇಶವಾಗಿದೆ. ಭಾರತ ಐದನೆ ಸ್ಥಾನದಲ್ಲಿದೆ. ವಿಶ್ವದ ಪ್ರಮುಖ ಆರ್ಥಿಕತೆಯ ದೇಶಗಳ ಪೈಕಿ ಭಾರತದ ಜಿಡಿಪಿ ಬೆಳವಣಿಗೆ ಅತಿ ವೇಗವಾಗಿದೆ. 2023-24ರ ಹಣಕಾಸು ವರ್ಷದ ಮೊದಲ ಮೂರು ಕ್ವಾರ್ಟರ್ನಲ್ಲಿ ಭಾರತದ ಸರಾಸರಿ ಜಿಡಿಪಿ ವೃದ್ಧಿ ಶೇ. 8ಕ್ಕಿಂತಲೂ ಹೆಚ್ಚಿದೆ. ಬೇರೆ ಯಾವ ದೇಶಗಳೂ ಕೂಡ ಈ ಪರಿ ವೇಗದ ಬೆಳವಣಿಗೆ ತೋರಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ