ಬೆಂಗಳೂರು, ಅಕ್ಟೋಬರ್ 18: ಒಂದು ಕಾಲದಲ್ಲಿ ಭಾರತದ ಸ್ಟಾರ್ಟಪ್ ಲೋಕಕ್ಕೆ ಮಿನುಗುತಾರೆಯಂತಾಗಿದ್ದ ಬೈಜುಸ್ ಸಂಸ್ಥೆ ಇವತ್ತು ಅಸ್ತಿತ್ವ ಉಳಿಸಿಕೊಳ್ಳಲು ಹೆಣಗುತ್ತಿದೆ. ಸಾಲು ಸಾಲು ವಿವಾದ, ಸಂಕಷ್ಟಗಳಿಗೆ ಸಿಲುಕಿ ಒದ್ದಾಡುತ್ತಿದೆ. ಕೋರ್ಟ್ ಕಟಕಟೆಯಲ್ಲಿ ವಿಚಾರಣೆಗಳು ನಡೆಯುತ್ತಿವೆ. ಹೂಡಿಕೆದಾರರು ತಮ್ಮ ಹಣ ಮರಳಿ ಪಡೆಯಲು ಹರಸಾಹಸ ನಡೆಸುತ್ತಿದ್ದಾರೆ. ಇದೇ ವೇಳೆ ಬೈಜುಸ್ ಸಂಸ್ಥಾಪಕ ಬೈಜು ರವೀಂದ್ರನ್ ತಾವು ಯಾವುದೇ ವಂಚನೆ ಎಸಗಿಲ್ಲ ಎಂದು ಹೇಳಿದ್ದಾರೆ.
ನಿನ್ನೆ ದುಬೈನ ತಮ್ಮ ನಿವಾಸದಿಂದ ಪತ್ರಕರ್ತರ ಜೊತೆ ಆನ್ಲೈನ್ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದ ಬೈಜು, ‘ಬೈಜೂಸ್ನಿಂದ ಯಾವ ವಂಚನೆ ನಡೆದಿಲ್ಲ. ಒಂದು ವೇಳೆ ವಂಚನೆ ಆಗಿದ್ದಿದ್ದರೆ ಸಂಸ್ಥಾಪಕರು ಹಣ ಲಪಟಾಯಿಸುತ್ತಿದ್ದರು. ನಾವು ನಮ್ಮ ಹಣವನ್ನು ಕಂಪನಿಗೆ ವಾಪಸ್ ಹಾಕಿದ್ದೇವೆ. 2022ರಿಂದ ಬೈಜುಸ್ ಸಂಸ್ಥೆಗೆ ಹಣ ತುಂಬುತ್ತಾ ಬರುತ್ತಿರುವುದು ತಾವು (ಮಾಲೀಕರು) ಮಾತ್ರವೇ’ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ರತನ್ ಟಾಟಾ ವೈಯಕ್ತಿಕ ಆಸ್ತಿ ಯಾರಿಗೆ? ಅವರ ಕೊನೆಯಾಸೆ ಈಡೇರಿಸುವ ಜವಾಬ್ದಾರಿ ನಾಲ್ವರಿಗೆ ವಹಿಸಿದ್ದ ಟಾಟಾ
ಬೈಜು ರವೀಂದ್ರನ್, ತಮ್ಮ ಸಂಸ್ಥಾಪಿತ ಕಂಪನಿ ಸಂಕಷ್ಟದ ಪರಿಸ್ಥಿತಿಯಲ್ಲಿರುವುದನ್ನು ಒಪ್ಪಿಕೊಂಡಿದ್ದಾರೆ. ‘ಇವತ್ತು ಬೈಜುಸ್ ಮೌಲ್ಯ ಸೊನ್ನೆ ಇದೆ. ಹೂಡಿಕೆದಾರರ ವಿಶ್ವಾಸ ಕಳೆದುಕೊಂಡಿದ್ದೇವೆ,’ ಎಂದಿದ್ದಾರೆ.
ಬೈಜುಸ್ ಸಂಸ್ಥೆ ಕೋವಿಡ್ ಸಂದರ್ಭದಲ್ಲಿ ದಿಢೀರ್ ಆಗಿ ಪ್ರಜ್ವಲಿಸಿತು. ಆ ಸಂದರ್ಭದಲ್ಲಿ ಅದರ ವ್ಯಾಲ್ಯುಯೇಶನ್ 22 ಬಿಲಿಯನ್ ಡಾಲರ್ ಮಟ್ಟಕ್ಕೆ ಹೋಗಿತ್ತು. ಅಂದರೆ, 1.8 ಲಕ್ಷ ಕೋಟಿ ರೂ ಮೌಲ್ಯದ ಕಂಪನಿ ಎನಿಸಿತ್ತು. ಆದರೆ, ಒಂದೊಂದೇ ವಿವಾದಗಳು ಮೆತ್ತಿಕೊಂಡು ಬೈಜುಸ್ ಸಂಕಷ್ಟಕ್ಕೆ ಸಿಲುಕಿತು. ಇವತ್ತು ಆ ಕಂಪನಿ ಮೌಲ್ಯ ಸೊನ್ನೆಗೆ ಬಂದಿದೆ.
ಇದನ್ನೂ ಓದಿ: ಪಿಂಚಣಿ ಸಂಬಂಧಿತ ಸಮಸ್ಯೆಗಳಿಗೆ 21 ದಿನದೊಳಗೆ ಪರಿಹಾರ: ವಿವಿಧ ಇಲಾಖೆಗಳಿಗೆ ಚುರುಕು ಮುಟ್ಟಿಸಿದ ಸರ್ಕಾರ
ಬೈಜುಸ್ ಒಮ್ಮೆಲೇ ಗಣನೀಯವಾಗಿ ಬೆಳವಣಿಗೆ ಹೊಂದ ಬಳಿಕ ಸಂಸ್ಥಾಪಕರು ತಮ್ಮ ಕಂಪನಿ ಬಗ್ಗೆ ತೀರಾ ಹೆಚ್ಚಿನ ನಿರೀಕ್ಷೆ ಹೊಂದ ತೊಡಗಿದ್ದರು. ಒಟ್ಟೊಟ್ಟಿಗೆ ಹಲವಾರು ಮಾರುಕಟ್ಟೆಗಳಿಗೆ ಪ್ರವೇಶ ಮಾಡಲಾಯಿತು. ಇದು ತಪ್ಪು ಅಂದಾಜಾಗಿತ್ತು. ಬೈಜು ರವೀಂದ್ರನ್ ತಮ್ಮ ಈ ತಪ್ಪನ್ನು ಒಪ್ಪಿಕೊಂಡಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ