ಬೆಂಗಳೂರು: ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Elections 2023) ಕಾಂಗ್ರೆಸ್ ಜಯಭೇರಿ ಭಾರಿಸಿ ನಿಚ್ಚಳ ಬಹುಮತದೊಂದಿಗೆ ಸರಕಾರ ರಚಿಸುತ್ತಿದೆ. ಈ ಚುನಾವಣೆಯಲ್ಲಿ ಗಮನ ಸೆಳೆದ ವಿಚಾರಗಳಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ (Congress Poll Promises) ಕೊಡಲಾದ ಭರವಸೆ. ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷ 5 ಗ್ಯಾರಂಟಿಗಳ ಸಹಿತ ಹಲವು ಆಶ್ವಾಸನೆಗಳನ್ನು ಕೊಟ್ಟಿದೆ. ಅದರಲ್ಲಿ ಪ್ರಮುಖವಾದುದು ಗೃಹ ಜ್ಯೋತಿ, ಗೃಹ ಲಕ್ಷ್ಮೀ, ಅನ್ನ ಭಾಗ್ಯ, ಯುವ ನಿಧಿ, ಶಕ್ತಿ ಎಂಬ ಐದು ಗ್ಯಾರಂಟಿಗಳು.
ಈ ಐದು ಪ್ರಮುಖ ಗ್ಯಾರಂಟಿ ಜೊತೆಗೆ, ರೈತರಿಂದ ದನಗಳ ಸೆಗಣಿಯನ್ನು ಕಿಲೋಗೆ 3 ರೂನಂತೆ ಖರೀದಿ, ಸಮುದ್ರದಲ್ಲಿ ಮೀನುಗಾರಿಕೆ ಬೋಟ್ಗೆ ವರ್ಷಕ್ಕೆ 500 ಲೀಟರ್ ತೆರಿಗೆ ರಹಿತ ಡೀಸೆಲ್, ಅಂಗನವಾಡಿ ಕಾರ್ಯಕರ್ತರ ವೇತನ ಹೆಚ್ಚಳ, ಗುತ್ತಿಗೆ ನೌಕರರ ಕೆಲಸ ಖಾಯಂ, ಸರ್ಕಾರಿ ಹುದ್ದೆಗಳ ಭರ್ತಿ ಹೀಗೆ ಹಲವಾರು ಆಶ್ವಾಸನೆಗಳನ್ನು ಕೊಡಲಾಗಿದೆ.
ಎಕನಾಮಿಕ್ ಟೈಮ್ಸ್ ವರದಿಯಲ್ಲಿ ಮಾಡಲಾಗಿರುವ ಒಂದು ಅಂದಾಜು ಪ್ರಕಾರ ಕಾಂಗ್ರೆಸ್ ಪಕ್ಷ ಪ್ರಣಾಳಿಕೆ ವೇಳೆ ಕೊಟ್ಟ ಗ್ಯಾರಂಟಿಗಳನ್ನು ಸರ್ಕಾರ ಜಾರಿಗೆ ತರಬೇಕಾದರೆ ವರ್ಷಕ್ಕೆ 62,000 ರೂ ಖರ್ಚಾಗುತ್ತದಂತೆ. ಈಗಾಗಲೇ ರಾಜ್ಯದಲ್ಲಿ ವಿತ್ತೀಯ ಕೊರತೆ ಕಾಡುತ್ತಿದೆ. 2023-24ರ ವರ್ಷದಲ್ಲಿ ವಿತ್ತೀಯ ಕೊರತೆ 60,581 ಕೋಟಿಯಷ್ಟಿರಬಹುದು ಎಂದು ಅಂದಾಜಿಸಲಾಗಿದೆ. ಇದರ ಜೊತೆಗೆ ಈಗ ಗ್ಯಾರಂಟಿಗಳ ಅನುಷ್ಠಾನದಿಂದ ವರ್ಷಕ್ಕೆ 62,000 ರೂನಷ್ಟು ಹೆಚ್ಚುವರಿ ಕೊರತೆ ಸೃಷ್ಟಿಯಾಗಬಹುದು. ಹೀಗಿದ್ದಾಗ ರಾಜ್ಯದ ಹಣಕಾಸು ಪರಿಸ್ಥಿತಿ ಹೇಗಿದ್ದೀತು?
ಇದನ್ನೂ ಓದಿ: Warren Buffett: ಹಣ ಬೇಕು ಎಂದಾಗ ಏನು ಮಾಡಬೇಕು? ಶ್ರೀಮಂತ ವಾರನ್ ಬಫೆಟ್ ಅಷ್ಟ ಸೂತ್ರಗಳಿವು…
ಆಗಲೇ ಹೇಳಿದಂತೆ ರಾಜ್ಯಕ್ಕೆ ಗ್ಯಾರಂಟಿ ಜಾರಿಯಿಂದ 1.2 ಲಕ್ಷ ಕೋಟಿ ರೂನಷ್ಟು ವಿತ್ತೀಯ ಕೊರತೆ ಎದುರಾಗಬಹುದು. ಆದರೆ, ಕರ್ನಾಟಕದಲ್ಲಿ ಜಿಎಸ್ಟಿ ತೆರಿಗೆ ಸಂಗ್ರಹ ಉತ್ತಮವಾಗಿದೆ. ಇಡೀ ದೇಶದಲ್ಲಿ ಅತಿಹೆಚ್ಚು ಜಿಎಸ್ಟಿ ಸಂಗ್ರಹವಾದ ರಾಜ್ಯಗಳಲ್ಲಿ ಕರ್ನಾಟಕದ್ದು ಎರಡನೇ ಸ್ಥಾನ. ಇದು ಬಜೆಟ್ ವೇಳೆ ಮಾಡಿದ್ದ ಅಂದಾಜಿಗಿಂತ ಶೇ. 15ರಷ್ಟು ಹೆಚ್ಚೇ ತೆರಿಗೆ ಸಂಗ್ರಹವಾಗಿದೆ.
ಹೀಗಾಗಿ, ಗ್ಯಾರಂಟಿಗಳನ್ನು ಹಾಗೂ ಹೀಗೂ ಜಾರಿ ಮಾಡಲು ಸಾಧ್ಯ. ಆದರೆ, 10 ಲಕ್ಷ ಉದ್ಯೋಗ ಒದಗಿಸುವುದು, ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ 2.5 ಲಕ್ಷ ಉದ್ಯೋಗಗಳನ್ನು ಭರ್ತಿ ಮಾಡುವುದು, ಗುತ್ತಿಗೆ ನೌಕರರನ್ನು ಖಾಯಂಗೊಳಿಸುವುದು ಇವೇ ಭರವಸೆಗಳನ್ನು ಜಾರಿಗೆ ತಂದರೆ ಸರ್ಕಾರ ಸಂಬಳಕ್ಕಾಗಿ ಹೆಚ್ಚು ಹಣ ವಿನಿಯೋಗಿಸಬೇಕಾಗುತ್ತದೆ. ಆ ಪರಿಸ್ಥಿತಿಯನ್ನು ಸರ್ಕಾರ ಹೇಗೆ ನಿರ್ವಹಿಸುತ್ತದೆ ಎಂಬುದು ಪ್ರಶ್ನೆ.