1 ಕೋಟಿಗೂ ಹೆಚ್ಚು ಭಾರತೀಯರು ಕೊರೊನಾ ಎರಡನೇ ಅಲೆಗೆ ಉದ್ಯೋಗ ಕಳೆದುಕೊಂಡಿದ್ದಾರೆ. ಕಳೆದ ವರ್ಷ ಕೊರೊನಾ ಆರಂಭವಾದಾಗಿನಿಂದ ಶೇ 97ರಷ್ಟು ಕುಟುಂಬದ ಆದಾಯವು ಇಳಿಕೆ ಆಗಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (CMIE) ಮುಖ್ಯಾಧಿಕಾರಿ ಮಹೇಶ್ ವ್ಯಾಸ್ ಸೋಮವಾರ ಹೇಳಿದ್ದಾರೆ. ಏಪ್ರಿಲ್ನಲ್ಲಿ ಶೇ 8ರಷ್ಟಿದ್ದ ನಿರುದ್ಯೋಗ ದರವು ಮೇ ತಿಂಗಳ ಕೊನೆಗೆ ಶೇ 12ಕ್ಕೆ ಬರಬಹುದು ಎಂಬ ನಿರೀಕ್ಷೆ ಇದೆ ಎಂದು ಮಹೇಶ್ ವ್ಯಾಸ್ ಅವರು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಒಂದು ಕೋಟಿಯಷ್ಟು ಮಂದಿ ಈ ಅವಧಿಯಲ್ಲಿ ಭಾರತೀಯರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ. ಉದ್ಯೋಗ ನಷ್ಟಕ್ಕೆ ಮುಖ್ಯವಾದ ಕಾರಣ “ಕೊರೊನಾ ಎರಡನೇ ಅಲೆ”ಯ ಕೋವಿಡ್- 19 ಸೋಂಕು ಎಂದಿದ್ದಾರೆ ವ್ಯಾಸ್. ಇನ್ನೂ ಮುಂದುವರಿದು, “ಆರ್ಥಿಕತೆ ಮತ್ತೆ ಆರಂಭವಾದ ಮೇಲೆ ಸಮಸ್ಯೆಯು ಭಾಗಶಃ ಬಗೆಹರಿಯುತ್ತದೆ ವಿನಾ ಸಂಪೂರ್ಣವಾಗಿ ಅಲ್ಲ,” ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಯಾರು ಉದ್ಯೋಗವನ್ನು ಕಳೆದುಕೊಂಡಿದ್ದಾರೋ ಅವರಿಗೆ ಮತ್ತೆ ಹುಡುಕಿಕೊಳ್ಳುವುದು ಕಷ್ಟವಾಗಿದೆ. ಅಸಂಘಟಿತ ವಲಯದ ಉದ್ಯೋಗಗಳು ಶೀಘ್ರವಾಗಿ ವಾಪಸ್ ಬರುತ್ತದೆ. ಆದರೆ ಸಂಘಟಿತ ವಲಯದ ಮತ್ತು ಉತ್ತಮ ಗುಣಮಟ್ಟದ ಉದ್ಯೋಗಾವಕಾಶಗಳು ಮತ್ತೆ ದೊರೆಯುವುದಕ್ಕೆ ವರ್ಷದ ತನಕ ಸಮಯ ಬೇಕಾಗಬಹುದು ಎಂದು ಮಹೇಶ್ ವ್ಯಾಸ್ ವಿವರಿಸಿದ್ದಾರೆ. ರಾಷ್ಟ್ರೀಯ ಲಾಕ್ಡೌನ್ನಿಂದ 2020ರ ಮೇ ತಿಂಗಳಲ್ಲಿ ನಿರುದ್ಯೋಗ ದರವು ಶೇ 23.5 ತಲುಪಿತ್ತು. ಹಲವು ವಿಶ್ಲೇಷಕರು ಅಭಿಪ್ರಾಯ ಪಡುವಂತೆ, ಎರಡನೇ ಅಲೆಯು ಗರಿಷ್ಠ ಮಟ್ಟದಲ್ಲಿದೆ. ರಾಜ್ಯಗಳು ಹಂತಹಂತವಾಗಿ ಆರ್ಥಿಕ ಚಟುವಟಿಕೆಗಳನ್ನು ನಿಧಾನಕ್ಕೆ ಸಡಿಲಗೊಳ್ಳಬಹುದು.
ನಿರುದ್ಯೋಗ ದರದ ಬಗ್ಗೆ ಮಾತನಾಡಿರುವ ವ್ಯಾಸ್, ಭಾರತೀಯ ಆರ್ಥಿಕತೆಯಲ್ಲಿ ಶೇ 3ರಿಂದ 4ರಷ್ಟು ನಿರುದ್ಯೋಗ ಅಂದರೆ ಸಾಮಾನ್ಯ. ಪರಿಸ್ಥಿತಿ ಸುಧಾರಿಸುವ ಮೊದಲಿಗೆ ನಿರುದ್ಯೋಗ ದರವು ಕಡಿಮೆ ಆಗಬೇಕು. ಸಿಎಂಐಇಯಿಂದ ಏಪ್ರಿಲ್ನಲ್ಲಿ ದೇಶಾದ್ಯಂತ 1.75 ಲಕ್ಷ ಕುಟುಂಬಗಳ ಸಮೀಕ್ಷೆ ಮಾಡಲಾಗಿದೆ. ಕಳೆದ ಒಂದು ವರ್ಷದಿಂದ ಆದಾಯ ಸೃಷ್ಟಿಗೆ ಆಗಿರುವ ಟ್ರೆಂಡ್ ಚಿಂತೆಗೆ ಕಾರಣ ಆಗುವಂತಿದೆ. ಅಧ್ಯಯನದಲ್ಲಿ ಪಾಲ್ಗೊಂಡವರ ಪೈಕಿ ಶೇ 3ರಷ್ಟು ಮಂದಿ ಮಾತ್ರ ಆದಾಯ ಹೆಚ್ಚಳವಾಗಿದೆ ಎಂದಿದ್ದರೆ, ಶೇ 55ರಷ್ಟು ಮಂದಿ ಆದಾಯ ಇಳಿಕೆ ಆಗಿದ್ದು, ಶೇ 42ರಷ್ಟು ಮಂದಿ ಆದಾಯದಲ್ಲಿ ವರ್ಷದ ಹಿಂದಿನಷ್ಟೇ ಇದೆ, ಯಾವುದೇ ಬದಲಾವಣೆ ಆಗಿಲ್ಲ ಎಂಬುದಾಗಿ ತಿಳಿಸಿದ್ದಾರೆ ಎಂದು ಹೇಳಿದ್ದಾರೆ.
ನಾವು ಹಣದುಬ್ಬರಕ್ಕೆ ಹೊಂದಾಣಿಕೆ ಮಾಡಿ ನೋಡುವುದಾದರೆ ದೇಶದ ಶೇ 97ರಷ್ಟು ಕುಟುಂಬಗಳ ಆದಾಯದಲ್ಲಿ ಇಳಿಕೆ ಆಗಿದೆ ಎಂದು ಎಂಬುದನ್ನು ಗುರುತಿಸಲಾಗಿದೆ ಎಂದು ಮಹೇಶ್ ವ್ಯಾಸ್ ಹೇಳಿದ್ದಾರೆ. ಕಾರ್ಮಿಕ ಭಾಗವಹಿಸುವಿಕೆ ದರ ಅಥಚಾ ಮಾರುಕಟ್ಟೆಯಲ್ಲಿ ಇರುವ ದುಡಿಯುವ ವಯಸ್ಸಿನ ಜನಸಂಖ್ಯೆಯ ಪ್ರಮಾಣ ಶೇ 40ಕ್ಕೆ ಇಳಿದಿದೆ. ಕೊರೊನಾ ಬಿಕ್ಕಟ್ಟಿಗೂ ಮುನ್ನ ಈ ಪ್ರಮಾಣ ಶೇ 42.5 ಇತ್ತು.
ಇದನ್ನೂ ಓದಿ: Unemployment in India | ಕೊರೊನಾ ಭೀಕರತೆಗೆ ಮತ್ತೆ 70 ಲಕ್ಷ ಜನರಿಗೆ ಉದ್ಯೋಗ ನಷ್ಟ; ನಿರುದ್ಯೋಗ ದರ 4 ತಿಂಗಳ ಗರಿಷ್ಠ
(According to CMIE survey, due to corona second wave 1 crore job loss and 97% of house hold income reduced in India)