Central Vista: ಪ್ರಧಾನಿ ಕಾರ್ಯಾಲಯ ಸೇರಿ ಪ್ರಮುಖ ಕಚೇರಿಗಳ ನಿರ್ಮಾಣ ಹೊಣೆ ಎಲ್​&ಟಿಗೆ

| Updated By: Ganapathi Sharma

Updated on: Nov 25, 2022 | 3:42 PM

ಪ್ರಧಾನಿ ಕಾರ್ಯಾಲಯ ಸೇರಿ ಪ್ರಮುಖ ಕಚೇರಿಗಳ ಸಂಕೀರ್ಣದ ನಿರ್ಮಾಣ ಗುತ್ತಿಗೆಯನ್ನು ಎಲ್​&ಟಿಗೆ ನೀಡಲಾಗಿದೆ ಎಂದು ಕೇಂದ್ರ ಲೋಕೋಪಯೋಗಿ ಇಲಾಖೆ ಗುರುವಾರ ಟ್ವೀಟ್ ಮೂಲಕ ಮಾಹಿತಿ ನೀಡಿದೆ.

Central Vista: ಪ್ರಧಾನಿ ಕಾರ್ಯಾಲಯ ಸೇರಿ ಪ್ರಮುಖ ಕಚೇರಿಗಳ ನಿರ್ಮಾಣ ಹೊಣೆ ಎಲ್​&ಟಿಗೆ
ಸೆಂಟ್ರಲ್ ವಿಸ್ತಾ
Follow us on

ನವದೆಹಲಿ: ನೂತನ ಸಂಸತ್ ಭವನ ನಿರ್ಮಾಣ ಯೋಜನೆ ಸೆಂಟ್ರಲ್ ವಿಸ್ತಾದಡಿ (Central Vista) ಪ್ರಧಾನಮಂತ್ರಿಗಳ ಕಾರ್ಯಾಲಯ (PMO), ಕ್ಯಾಬಿನೆಟ್ ಸೆಕ್ರೆಟರಿಯೇಟ್​ ಮತ್ತು ಇತರ ಪ್ರಮುಖ ಕಚೇರಿಗಳ ಸಂಕೀರ್ಣದ ನಿರ್ಮಾಣ ಗುತ್ತಿಗೆಯನ್ನು ನಿರ್ಮಾಣ ಮತ್ತು ಎಂಜಿನಿಯರಿಂಗ್ ಕಂಪನಿ ಎಲ್​&ಟಿಗೆ (Larsen & Toubro) ನೀಡಲಾಗಿದೆ. ಸಂಕೀರ್ಣವನ್ನು 1,189 ಕೋಟಿ ರೂ. ಮೊತ್ತದಲ್ಲಿ ನಿರ್ಮಾಣ ಮಾಡಲಾಗುತ್ತದೆ ಎಂದು ಕೇಂದ್ರ ಲೋಕೋಪಯೋಗಿ ತಿಳಿಸಿದೆ.

ನಿರ್ಮಾಣ ಗುತ್ತಿಗೆಯನ್ನು ಎಲ್​&ಟಿಗೆ ನೀಡಿರುವ ಬಗ್ಗೆ ಕೇಂದ್ರ ಲೋಕೋಪಯೋಗಿ ಇಲಾಖೆ ಗುರುವಾರ ಟ್ವೀಟ್ ಮೂಲಕ ಮಾಹಿತಿ ನೀಡಿದೆ. ಪ್ರಧಾನಿ ಕಾರ್ಯಾಲಯ ಸೇರಿ ಪ್ರಮುಖ ಕಚೇರಿಗಳ ಸಂಕೀರ್ಣದ ನಿರ್ಮಾಣ ಗುತ್ತಿಗೆಯನ್ನು ಎಲ್​&ಟಿಗೆ ನೀಡಲಾಗಿದೆ. ಅಂದಾಜು ವೆಚ್ಚಕ್ಕಿಂತ ಶೇಕಡಾ 10.44ರಷ್ಟು ಕಡಿಮೆ ಮೊತ್ತಕ್ಕೆ, ಅಂದರೆ 1,189 ಕೋಟಿ ರೂ.ಗೆ ನವೆಂಬರ್ 15ರಂದು ಗುತ್ತಿಗೆ ನೀಡಲಾಗಿದೆ. ಎರಡು ವರ್ಷಗಳ ಒಳಗಾಗಿ ಕಾಮಗಾರಿ ಮುಕ್ತಾಯಗೊಳಿಸಬೇಕಿದೆ ಎಂದು ಟ್ವೀಟ್​ನಲ್ಲಿ ಉಲ್ಲೇಖಿಸಲಾಗಿದೆ.

ಕಚೇರಿಗಳ ಸಂಕೀರ್ಣದಲ್ಲಿ ರಾಷ್ಟ್ರೀಯ ಭದ್ರತಾ ಮಂಡಳಿ ಕಚೇರಿ ಮತ್ತು ‘ಇಂಡಿಯಾ ಹೌಸ್’ ಇರಲಿದೆ ಎನ್ನಲಾಗಿದೆ. ಹೈದರಾಬಾದ್ ಹೌಸ್ ಮಾದರಿಯಲ್ಲಿ ಉನ್ನತ ಮಟ್ಟದ ಮಾತುಕತೆಗಳಿಗೆ ‘ಇಂಡಿಯಾ ಹೌಸ್’ ಅನ್ನು ಬಳಸಲಾಗುವುದು. ವಿಶೇಷವಾಗಿ ಉನ್ನತ ಮಟ್ಟದ ವಿದೇಶಿ ನಾಯಕರ ಭೇಟಿ ವೇಳೆ ಮಾತುಕತೆಗೆ ಬಳಸಲಾಗುವುದು ಎಂದು ‘ಎಕನಾಮಿಕ್ ಟೈಮ್ಸ್’ ವರದಿ ಮಾಡಿದೆ.

ನೂತನ ಸಂಸತ್ ಭವನದ ನಿರ್ಮಾಣದ ಗುತ್ತಿಗೆಯನ್ನು ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್‌ ಈಗಾಗಲೇ ಪಡೆದುಕೊಂಡಿದೆ. 64,500 ಚದರ ಮೀಟರ್‌ ವಿಸ್ತೀಣರ್ಣದಲ್ಲಿ ಹೊಸ ಸಂಸತ್ ಭವನ ನಿರ್ಮಾಣವಾಗಲಿದ್ದು, 2020ರಲ್ಲಿ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದರು. ದೆಹಲಿಯ ವಿಜಯ್ ಚೌಕ್ ಮತ್ತು ಮಾನ್ಸಿಂಗ್ ರಸ್ತೆ ನಡುವಿನ ವಿಸ್ತರಿತ ರಾಜಪಥ ‘ದಿ ಸೆಂಟ್ರಲ್ ವಿಸ್ಟಾ ಅವೆನ್ಯೂ’ ಅನ್ನು ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್​ನಲ್ಲಿ ಉದ್ಘಾಟಿಸಿದ್ದರು. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಇದಾಗಿದ್ದು, ಆರಂಭದಲ್ಲಿ ಪ್ರತಿಪಕ್ಷಗಳಿಂದ ವಿರೋಧವೂ ವ್ಯಕ್ತವಾಗಿತ್ತು. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ‘ಸೆಂಟ್ರಲ್ ವಿಸ್ತಾ’ಕ್ಕೆ ಅಪಾರ ಪ್ರಮಾಣದಲ್ಲಿ ಹಣ ಖರ್ಚು ಮಾಡುವ ಬಗ್ಗೆ ವಿರೋಧ ಪಕ್ಷಗಳು ತಗಾದೆ ತೆಗೆದಿದ್ದವು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:39 pm, Fri, 25 November 22