ನವದೆಹಲಿ: ಕಾಲಕಾಲಕ್ಕೆ ತಕ್ಕಂತೆ ತಂತ್ರಜ್ಞಾನ ಅಪ್ಡೇಟ್ ಆದಂತೆಲ್ಲಾ ಸೈಬರ್ ವಂಚಕರೂ (Cyber Fraudsters) ಅಪ್ಡೇಟ್ ಆಗುತ್ತಲೇ ಇರುತ್ತಾರೆ. ಹೊಸ ಹೊಸ ರೀತಿಯ ಸೈಬರ್ ಕ್ರೈಮ್ಗಳು ಬೆಳಕಿಗೆ ಬರುತ್ತಲೇ ಇವೆ. ಪೊಲೀಸ್, ಐಟಿ, ಬ್ಯಾಂಕ್ ಸಿಬ್ಬಂದಿ ಸೋಗಿನಲ್ಲಿ ಕರೆ ಮಾಡುವ ದುರುಳರು ಹೇಳಿದಂತೆ ಕೆಲ ಜನರು ಕೇಳಿ ಸುಲಭವಾಗಿ ಮೋಸ ಹೋಗುವುದಿದೆ. ಇಂಥದ್ದೊಂದು ಪ್ರಕರಣ ದೆಹಲಿಯಲ್ಲಿ ವರದಿಯಾಗಿದ್ದು, ವೃದ್ಧ ಮಹಿಳೆಯೊಬ್ಬರು 1 ಲಕ್ಷ ರೂ ಕಳೆದುಕೊಂಡಿದ್ದಾರೆ.
ಬ್ಯಾಂಕ್ನ ಕೆವೈಸಿ ಅಪ್ಡೇಟ್ ಆಗಬೇಕಿದೆ. ಈ ಲಿಂಕ್ ಕ್ಲಿಕ್ ಮಾಡದಿದ್ದರೆ ಅಕೌಂಟ್ ಬ್ಲಾಕ್ ಆಗಬಹುದು ಎಂದು ಹೆದರಿಸುವ ಮೆಸೇಜ್ವೊಂದು ಮಹಿಳೆಗೆ ಬರುತ್ತದೆ. ಕಾಕತಾಳೀಯವೋ ಅಥವಾ ದುರುಳರ ಅರಿವಿತ್ತೋ, ಈ ಮಹಿಳೆ ಇತ್ತೀಚೆಗೆ ಕೆಲ ಚೆಕ್ ನೀಡಿದ್ದರು. ಈ ಕಾರಣಕ್ಕೆ ಬ್ಯಾಂಕ್ನಿಂದಲೇ ಈ ಮೆಸೇಜ್ ಬಂದಿರಬಹುದು ಎಂದು ಭಾವಿಸಿ ಆ ಲಿಂಕ್ ಅನ್ನು ಕ್ಲಿಕ್ ಮಾಡುತ್ತಾರೆ.
ಇದನ್ನೂ ಓದಿ: Arjun Deshpande: 110 ರೂ ಬೆಲೆಯ ಔಷಧ ಕೇವಲ 5ಕ್ಕೆ; 21 ವರ್ಷದ ಯುವಕನ ಕಂಪನಿ ಇಷ್ಟು ಅಗ್ಗದಲ್ಲಿ ಮಾರಲು ಹೇಗೆ ಸಾಧ್ಯ?
ಇದಾದ ಸ್ವಲ್ಪ ಮೊತ್ತಲ್ಲೇ ವ್ಯಕ್ತಿಯೊಬ್ಬ ಕರೆ ಮಾಡಿ ತಾನು ಬ್ಯಾಂಕ್ ಪ್ರತಿನಿಧಿಯಾಗಿದ್ದು ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ಸಹಾಯ ಮಾಡುವುದಾಗಿ ಹೇಳುತ್ತಾನೆ. ಬಳಿಕ ಮಹಿಳೆಯ ಫೋನ್ನಲ್ಲಿದ್ದ ಎನಿಡೆಸ್ಕ್ ಅಪ್ಲಿಕೇಶನ್ ಮೂಲಕ ಮೊಬೈಲ್ ಅನ್ನು ರಿಮೋಟ್ ಆಗಿ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾರೆ.
ಬಹಳ ನಯವಾಗಿ ಮಾತನಾಡುತ್ತಾ ಆ ವ್ಯಕ್ತಿಯು ಮಹಿಳೆಯ ವಿಶ್ವಾಸ ಸಂಪಾದಿಸಿದ್ದ. ಆ ಮಹಿಳೆಯ ಮೊಬೈಲ್ಗೆ ಬಂದಿದ್ದ ಒಟಿಪಿಯನ್ನೂ ಕದ್ದಿದ್ದ. ಹೆಚ್ಚು ಸಮಯ ಈ ಕೃತ್ಯ ನಡೆಯುತ್ತಿದ್ದರಿಂದ ಮತ್ತು ಆ ವ್ಯಕ್ತಿ ಮೇಲೆ ನಂಬಿಕೆ ಇರಿಸಿದ್ದರಿಂದ ಮಹಿಳೆಯು ಮೊಬೈಲ್ ಅನ್ನು ಗಮನಿಸದೇ ಹಾಗೇ ಮಲಗುತ್ತಾರೆ. ಈ ಹೊತ್ತಿನಲ್ಲಿ ವಂಚಕನು ತನ್ನ ಕಾರ್ಯ ಸಾಧಿಸಿಕೊಳ್ಳುತ್ತಾನೆ. ಬೆಳಗ್ಗೆ ಎದ್ದ ಬಳಿಕ ನೋಡಿದಾಗ ತನ್ನ ಬ್ಯಾಂಕ್ ಖಾತೆಯಿಂದ 1 ಲಕ್ಷ ರೂ ಹಣ ಕಡಿತವಾಗಿರುವುದನ್ನು ಆಕೆ ಗಮನಿಸುತ್ತಾರೆ. ಸದ್ಯ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Pakistan: ಏಷ್ಯಾದಲ್ಲೇ ಅತಿಹೀನ ಹಣದುಬ್ಬರ; ಐಎಂಎಫ್ನಿಂದ ಸಾಲ ಮನವಿ ತಿರಸ್ಕಾರ; ಪಾಕಿಸ್ತಾನಕ್ಕೆ ಬಿಡದ ಗ್ರಹಚಾರ
ಬ್ಯಾಂಕ್ ಸಿಬ್ಬಂದಿ ಸಾಮಾನ್ಯವಾಗಿ ಗ್ರಾಹಕರಿಗೆ ಕರೆ ಮಾಡಿ ಲಾಗಿನ್ ವಿವರ ಕೇಳುವುದಿಲ್ಲ. ಹಾಗೆ ಕೇಳುತ್ತಿದ್ದಾರೆಂದರೆ ಅವರು ವಂಚಕರೇ ಆಗಿರುತ್ತಾರೆ. ಯಾರೇ ಕರೆ ಮಾಡಿ ಲಾಗಿನ್ ಐಡಿ, ಪಾಸ್ವರ್ಡ್, ಪಿನ್ ನಂಬರ್, ಒಟಿಪಿ ಇತ್ಯಾದಿ ಮಾಹಿತಿ ಕೇಳಿದರೆ ಖಂಡಿತವಾಗಿ ಕೊಡಬೇಡಿ. ಅಷ್ಟೇ ಅಲ್ಲ ಪೊಲೀಸರಿಗೆ ದೂರು ಕೊಡುವುದಾಗಿ ಹೆದರಿಸಿ.
ಇನ್ನು, ಕೆವೈಸಿ ಅಪ್ಡೇಟ್ ಮಾಡಲು ನೆರವಾಗುತ್ತೇನೆ ಎಂದು ಯಾರಾದರೂ ಹೇಳಿದರೆ ನಿರ್ಲಕ್ಷಿಸಿ. ನಿಮ್ಮ ಖಾತೆಯಿಂದ ನಿಮಗೆ ಅರಿವಿಲ್ಲದೇ ಹಣ ಕಡಿತ ಆಗಿರುವ ಮೆಸೇಜ್ ಬಂದಿದ್ದರೆ ಕೂಡಲೇ ಅದನ್ನು ಸಂಬಂಧಿತ ಬ್ಯಾಂಕ್ನ ಗಮನಕ್ಕೆ ತನ್ನಿ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ