Pakistan: ಏಷ್ಯಾದಲ್ಲೇ ಅತಿಹೀನ ಹಣದುಬ್ಬರ; ಐಎಂಎಫ್ನಿಂದ ಸಾಲ ಮನವಿ ತಿರಸ್ಕಾರ; ಪಾಕಿಸ್ತಾನಕ್ಕೆ ಬಿಡದ ಗ್ರಹಚಾರ
IMF Rejects Pakistan's Request On Loan: ಐಎಂಎಫ್ ಸಾಲ ವಿಚಾರದಲ್ಲಿ ಪಾಕಿಸ್ತಾನಕ್ಕೆ ಕೈಗೆ ಬಂದ ತುತ್ತು ಬಾಯಿಗೆ ಬರದೇ ಹೋಗುವಂಥ ಸ್ಥಿತಿ ಆಗಿದೆ. ಐಎಂಎಫ್ನಿಂದ 1.1 ಬಿಲಿಯನ್ ಡಾಲರ್ ಸಾಲವನ್ನು ಪಾಕಿಸ್ತಾನ ನಿರೀಕ್ಷಿಸುತ್ತಿದೆ. ಇದು ಸಿಕ್ಕರೆ ಪಾಕಿಸ್ತಾನದ ಆರ್ಥಿಕತೆಗೆ ಒಂದಷ್ಟು ಚೇತರಿಕೆ ಸಿಗಬಹುದು.
ಇಸ್ಲಾಮಾಬಾದ್: ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಪಾಕಿಸ್ತಾನಕ್ಕೆ ಸಂಕಷ್ಟಗಳು ನಿಲ್ಲುತ್ತಿಲ್ಲ. ಅಲ್ಲಿ ಹಣದುಬ್ಬರ ಮೇ ತಿಂಗಳಲ್ಲಿ ಶೇ. 38 ಮುಟ್ಟಿದೆ. ಪೆಟ್ರೋಲ್ ಬೆಲೆ ಇಳಿಕೆ ಮಾಡಿದರೂ, ಬಡ್ಡಿ ದರ ಶೇ. 20ಕ್ಕಿಂತ ಹೆಚ್ಚು ಮಾಡಿದರೂ ಹಣದುಬ್ಬರ (Inflation) ಮಾತ್ರ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಇದರ ಜೊತೆಗೆ ಸಾಲದ ಹೊರೆ ಪಾಕಿಸ್ತಾನಕ್ಕೆ ವಿಪರೀತ ಹಿಂಸೆ ಕೊಡುತ್ತಿದೆ. ಗಾಯದ ಮೇಲೆ ಬರೆ ಎಳೆದಂತೆ ಐಎಂಎಫ್ ಪಾಕಿಸ್ತಾನಕ್ಕೆ ಸಾಲ ಸ್ಯಾಂಕ್ಷನ್ ಮಾಡಿದರೂ ಹಣ ಬಿಡುಗಡೆ ಮಾಡದೇ ಸತಾಯಿಸುತ್ತಿದೆ. ಐಎಂಎಫ್ ಸಾಲ ವಿಚಾರದಲ್ಲಿ ಪಾಕಿಸ್ತಾನಕ್ಕೆ ಕೈಗೆ ಬಂದ ತುತ್ತು ಬಾಯಿಗೆ ಬರದೇ ಹೋಗುವಂಥ ಸ್ಥಿತಿ ಆಗಿದೆ. ಐಎಂಎಫ್ನಿಂದ 1.1 ಬಿಲಿಯನ್ ಡಾಲರ್ ಸಾಲವನ್ನು ಪಾಕಿಸ್ತಾನ ನಿರೀಕ್ಷಿಸುತ್ತಿದೆ. ಇದು ಸಿಕ್ಕರೆ ಪಾಕಿಸ್ತಾನದ ಆರ್ಥಿಕತೆಗೆ ಒಂದಷ್ಟು ಚೇತರಿಕೆ ಸಿಗಬಹುದು. ಅದರ ದುರದೃಷ್ಟಕ್ಕೆ ಸಾಲಕ್ಕಾಗಿ ಐಎಂಎಫ್ ವಿಧಿಸಿರುವ ಷರುತ್ತುಗಳೇ ಪಾಕಿಸ್ತಾನಕ್ಕೆ ಪೀಕಲಾಟ ತಂದಿರುವುದು. ಷರತ್ತುಗಳನ್ನು ಕಡಿಮೆ ಮಾಡಬೇಕೆಂದು ಪಾಕಿಸ್ತಾನ ಮಾಡಿಕೊಂಡ ಮನವಿಯನ್ನು ಐಎಂಎಫ್ ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಿದೆ. ಇದರೊಂದಿಗೆ ಪಾಕಿಸ್ತಾನಕ್ಕೆ ಬೇರೆ ದಾರಿ ಸದ್ಯಕ್ಕಂತೂ ಇಲ್ಲ.
ಪಾಕಿಸ್ತಾನಕ್ಕೆ ಐಎಂಎಫ್ ವಿಧಿಸಿರುವ ಷರತ್ತುಗಳೇನು?
ಅಂತಾರಾಷ್ಟ್ರೀಯ ಹಣಕಾಸು ನಿಧಿ ಅಥವಾ ಐಎಂಎಫ್ ಯಾವುದೇ ದೇಶಕ್ಕೆ ಸಾಲ ನೀಡಬಹುದು. ಆದರೆ, ಒಂದಷ್ಟು ಷರುತ್ತುಗಳನ್ನು ನಿಗದಿ ಮಾಡುತ್ತದೆ. ಆರ್ಥಿಕ ನೀತಿಯಲ್ಲಿ ಶಿಸ್ತು ತೋರಬೇಕು, ಸಬ್ಸಿಡಿಯಂಥ ಕ್ರಮಗಳನ್ನು ನಿಲ್ಲಿಸಬೇಕು, ತೆರಿಗೆ ಹೆಚ್ಚಿಸಬೇಕು, ಕೆಲ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಬೇಕು ಇವೇ ಮುಂತಾದ ಷರತ್ತುಗಳನ್ನು ಐಎಂಎಫ್ ಹಾಕುತ್ತದೆ. ಇದು ಪಾಕಿಸ್ತಾನವಾದರೂ ಸರಿ ಯಾವುದೇ ದೇಶವಾದರೂ ಸರಿ ಹೆಚ್ಚೂಕಡಿಮೆ ಎಲ್ಲಾ ದೇಶಗಳಿಗೂ ಈ ಷರುತ್ತುಗಳು ಅನ್ವಯ ಆಗುತ್ತದೆ.
ಇದನ್ನೂ ಓದಿ: Afghanistan: ಅಫ್ಘಾನಿಸ್ತಾನ ಶಾಲೆಯ 80 ಬಾಲಕಿಯರಿಗೆ ವಿಷ ಪ್ರಾಶನ, ಆಸ್ಪತ್ರೆಗೆ ದಾಖಲು
ಐಎಂಎಫ್ ಈ ಷರುತ್ತುಗಳನ್ನು ಹಾಕಲು ಸಕಾರಣಗಳಿವೆ. ತಾನು ಸಾಲ ಕೊಡುವ ದೇಶವು ಸಕಾಲದಲ್ಲಿ ಮರುಪಾವತಿ ಮಾಡಬೇಕೆಂದರೆ ಅದರ ಹಣಕಾಸು ಸ್ಥಿತಿ ಉತ್ತಮವಾಗಿರಬೇಕು. ಸಬ್ಸಿಡಿ ಇತ್ಯಾದಿ ಕ್ರಮಗಳಿಂದ ಆರ್ಥಿಕತೆ ಹಾಳಾಗುತ್ತದೆ. ತೆರಿಗೆ ಇತ್ಯಾದಿಗಳಿಂದ ಸರ್ಕಾರ ಆದಾಯ ಮೂಲ ಹೆಚ್ಚಿಸಿಕೊಳ್ಳದಿದ್ದರೆ ಹಣಕಾಸು ಪರಿಸ್ಥಿತಿ ಸುಧಾರಣೆ ಆಗದು. ಹೀಗಾಗಿ, ತನ್ನ ಸಾಲ ಸಾರ್ಥಕವಾಗಬೇಕಾದರೆ ಆ ಹಣ ಸರಿಯಾಗಿ ವಿನಿಯೋಗವಾಗಬೇಕು ಎಂದು ಐಎಂಎಫ್ ಬಯಸುತ್ತದೆ.
ಸಾಲಕ್ಕೆ ಐಎಂಎಫ್ ಎಷ್ಟು ಬಡ್ಡಿ ವಿಧಿಸುತ್ತದೆ?
ಐಎಂಎಫ್ ಸಂಸ್ಥೆ ತಾನು ನೀಡುವ ಸಾಲಕ್ಕೆ ಶೇ. 4ರವರೆಗೂ ಬಡ್ಡಿ ವಿಧಿಸುತ್ತೆ. ಪಾಕಿಸ್ತಾನಕ್ಕೆ ನೀಡಲಿರುವ ಸಾಲಕ್ಕೆ ಶೇ. 3.2ರಷ್ಟು ಬಡ್ಡಿ ಎಂದು ಹೇಳಲಾಗುತ್ತಿದೆ. ಕೆಲವೊಮ್ಮೆ ಬಡ ದೇಶಗಳಿಗೆ ಐಎಂಎಫ್ ಬಡ್ಡಿರಹಿತ ಸಾಲ ಕೊಟ್ಟಿರುವುದುಂಟು. 2014ರಲ್ಲಿ ಇದೇ ಪಾಕಿಸ್ತಾನಕ್ಕೆ ಶೇ. 2ರ ಬಡ್ಡಿ ದರದಲ್ಲಿ ಐಎಂಎಫ್ ಸಾಲ ಕೊಟ್ಟಿತ್ತು. ಈಗ ಬಡ್ಡಿ ಹೆಚ್ಚಿಸಲಾಗಿದೆ. ಇತರ ಹಣಕಾಸು ಸಂಸ್ಥೆಗಳಿಗಿಂತ ಐಎಂಎಫ್ನ ಬಡ್ಡಿ ದರ ಕಡಿಮೆ ಇರುವುದರಿಂದ ಅದರ ಸಾಲ ಪಡೆಯಲು ಬಹಳ ದೇಶಗಳು ಕಾಯುತ್ತವೆ.
ಇದನ್ನೂ ಓದಿ: Byju’s: ಬೈಜೂಸ್ಗೆ ನಿಲ್ಲದ ಸಂಕಷ್ಟ, ಸಾಲಗಾರರ ಕಾಟ; ಬಡ್ಡಿಕಟ್ಟಲೂ ಕಷ್ಟ; ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಪರದಾಟ
ಅಧಿಕ ಹಣದುಬ್ಬರದಿಂದ ತತ್ತರಿಸುತ್ತಿರುವ ಪಾಕಿಸ್ತಾನ
ಪಾಕಿಸ್ತಾನದಲ್ಲಿ ಹಣದುಬ್ಬರ ಶೇ. 38ರ ಮಟ್ಟಕ್ಕೆ ಏರಿದೆ. ಇದು ಮೇ ತಿಂಗಳ ಬೆಲೆ ಏರಿಕೆ ಮಟ್ಟ. ಅಂದರೆ, 2022ರ ಮೇ ತಿಂಗಳಿಗೆ ಹೋಲಿಸಿದರೆ ಈ ವರ್ಷದಲ್ಲಿ ಅಗತ್ಯವಸ್ತುಗಳ ಸರಾಸರಿ ಬೆಲೆ ಶೇ. 38ರಷ್ಟು ಹೆಚ್ಚಿದೆ. ಇದು ಶ್ರೀಲಂಕಾದ ಹಣದುಬ್ಬರಕ್ಕಿಂತಲೂ ಹೆಚ್ಚಿನ ಮಟ್ಟ. ಏಷ್ಯಾದಲ್ಲೇ ಅತಿಹೆಚ್ಚು ಹಣದುಬ್ಬರ ಪಾಕಿಸ್ತಾನದಲ್ಲಿದೆ.
ಇಂಥ ಸಂಕಷ್ಟ ಸ್ಥಿತಿಯಲ್ಲಿ ಪಾಕಿಸ್ತಾನಕ್ಕೆ ಚೀನಾದಿಂದ ಒಂದಷ್ಟು ಸಾಲ ಸಿಗುತ್ತಿದೆಯಾದರೂ ಅದಕ್ಕೆ ಐಎಂಎಫ್ ಸಾಲ ಬಹಳ ಅಗತ್ಯ ಇದೆ. ಈ ಕಾರಣಕ್ಕೆ ಐಎಂಎಫ್ ವಿಧಿಸುವ ಷರುತ್ತುಗಳಿಗೆ ಪಾಕಿಸ್ತಾನ ತಾಳೆಯಾಗಬೇಕಿರುವುದು ಅನಿವಾರ್ಯ ಎಂದು ಹೇಳಲಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ