ದಸರಾ ವೇಳೆ GST ಸಂಗ್ರಹದಲ್ಲಿ ಕರ್ನಾಟಕ ಟಾಪ್: ಗ್ಯಾರಂಟಿ ಯೋಜನೆ ಎಫೆಕ್ಟ್ ಎಂದ ಸಿಎಂ ಸಿದ್ದರಾಮಯ್ಯ
ದಸರಾ ಹಬ್ಬದ ಸಂದರ್ಭದಲ್ಲಿ ಕರ್ನಾಟಕದ GST ಸಂಗ್ರಹದಲ್ಲಿ ದಾಖಲೆಯ ಹೆಚ್ಚಳವಾಗಿದೆ. ಸೆಪ್ಟೆಂಬರ್ ಅವಧಿಯಲ್ಲಿ ರಾಜ್ಯದ ತೆರಿಗೆ ಆದಾಯವು ಶೇ.10ರಷ್ಟು ವೃದ್ಧಿ ಕಂಡಿದೆ. ಅಕ್ಟೋಬರ್‌ನಲ್ಲಿ 14,395 ಕೋಟಿ ಸಂಗ್ರಹವಾಗಿದ್ದು, GST ದರ ಕಡಿತ ಮತ್ತು ಹಬ್ಬದ ಖರೀದಿ ಈ ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ.

ಬೆಂಗಳೂರು, ನವೆಂಬರ್ 06: ದಸರಾ ಹಬ್ಬದ ಸಂದರ್ಭ ಸರಕು ಮತ್ತು ಸೇವಾ ತೆರಿಗೆ (GST) ಸಂಗ್ರಹಣೆಯಲ್ಲಿ ಕರ್ನಾಟಕ ದಾಖಲೆ ಮಾಡಿದೆ. ಸೆಪ್ಟೆಂಬರ್ ಅವಧಿಯಲ್ಲಿ ರಾಜ್ಯದ ತೆರಿಗೆ ಆದಾಯದಲ್ಲಿ ಶೇ.10ರಷ್ಟು ಹೆಚ್ಚಳವಾಗಿದ್ದು, ದಸರಾ ಹಬ್ಬದ ಖರೀದಿ ಜೋರಾಗಿ ನಡೆದಿರುವುದನ್ನು ಸಾಭೀತುಪಡಿಸಿದೆ. ಜಿಎಸ್ಟಿ ದರದಲ್ಲಿ ಕಡಿತದ ಬಳಿಕ ಬೆಲೆಗಳಲ್ಲಿ ಭಾರಿ ಇಳಿಕೆ ಹಿನ್ನಲೆ ಜನರು ಉತ್ಹಾದಿಂದ ಖರೀದಿಗೆ ಮುಂದಾದ ಹಿನ್ನಲೆ ತೆರಿಗೆ ಆದಾಯದಲ್ಲಿ ಹೆಚ್ಚಳ ಕಂಡುಬಂದಿದೆ. ಈ ಹೆಚ್ಚಳಕ್ಕೆ ರಾಜ್ಯ ಸರ್ಕಾರದ ಗ್ಯಾರಂಟಿ ಯೊಜನೆಗಳೇ ಕಾರಣ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದು, ಯೋಜನೆಗಳು ರಾಜ್ಯದ ಖಜಾನೆಗೆ ಯಾವುದೇ ಹೆಚ್ಚುವರಿ ಭಾರ ಉಂಟುಮಾಡಿಲ್ಲ. ಬದಲಾಗಿ ಜನರ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸಿದ್ದು, ಬೇಡಿಕೆಯನ್ನ ಉತ್ತೇಜಿಸಿದೆ ಎಂದಿದ್ದಾರೆ.
ಅಕ್ಟೋಬರ್‌ನಲ್ಲಿ 14,395 ಕೋಟಿ ಸಂಗ್ರಹ
ಶನಿವಾರ ಬಿಡುಗಡೆಯಾದ ಅಕ್ಟೋಬರ್ ತಿಂಗಳ ಜಿಎಸ್‌ಟಿ ಸಂಗ್ರಹಣೆ ವರದಿಯ ಪ್ರಕಾರ (ಸೆಪ್ಟೆಂಬರ್ ತಿಂಗಳ ವಹಿವಾಟುಗಳ ಆಧಾರದ ಮೇಲೆ), ರಾಜ್ಯವು 14,395 ಕೋಟಿ ಸಂಗ್ರಹಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 13,080 ಕೋಟಿ ರೂಪಾಯಿಗಳು ಕರ್ನಾಟಕದಲ್ಲಿ ಸಂಗ್ರಹವಾಗಿತ್ತು. ಇದು ಕೇಂದ್ರದ ಜಿಎಸ್ಟಿ, ಐಜಿಎಸ್ಟಿ ಮತ್ತು ಸೆಸ್ ಸೇರಿದಂತೆ ಒಟ್ಟು ಸಂಗ್ರಹಣೆಯಾಗಿದ್ದು, ಇವುಗಳ ಕಡಿತದ ಬಳಿಕ 7,065 ಕೋಟಿ ರೂ. ರಾಜ್ಯದ ಬೊಕ್ಕಸಕ್ಕೆ ಸಿಗಲಿದೆ. ಆ ಮೂಲಕ ಜಿಎಸ್ಟಿ ಸಂಗ್ರಹಣೆಯಲ್ಲಿ ಟಾಪ್ 5 ರಾಜ್ಯಗಳಲ್ಲಿ ಕರ್ನಾಟಕ ಉತ್ತಮ ಸ್ಥಾನ ಪಡೆದಿದೆ.
ಇದನ್ನೂ ಓದಿ: ಇನ್ನು 8 ತಿಂಗಳಲ್ಲಿ ಸೆನ್ಸೆಕ್ಸ್ 1,00,000 ಅಂಕಗಳ ಗಡಿಯಾಚೆ? ಮಾರ್ಗನ್ ಸ್ಟಾನ್ಲೀ ಭವಿಷ್ಯ ಇದು
ಅಕ್ಟೋಬರ್ನಲ್ಲೂ ಉತ್ತಮ ವಹಿವಾಟು
ಶೇ.3ರಷ್ಟು ಹೆಚ್ಚಳದೊಂದಿಗೆ ಮಹಾರಾಷ್ಟ್ರದಲ್ಲಿ 32,025 ಕೋಟಿ ಹಣ ಸಂಗ್ರಹವಾಗಿದ್ದರೆ, ಗುಜರಾತ್ ಶೇ.6ರಷ್ಟು ವೃದ್ಧಿಯೊಂದಿಗೆ 12,113 ಕೋಟಿ ರೂ. ಸಂಗ್ರಹಿಸಿದೆ. ತಮಿಳುನಾಡಿನಲ್ಲಿ ಶೇ.4ರಷ್ಟು ವೃದ್ಧಿಯೊಂದಿಗೆ ₹1,588 ಕೋಟಿ, ಉತ್ತರ ಪ್ರದೇಶದಲ್ಲಿ 9,806 ಕೋಟಿ ಸಂಗ್ರಹಣೆಯೊಂದಿಗೆ ಶೇ.2ರಷ್ಟು ಹೆಚ್ಚಳವಾಗಿದೆ. ತೆಲಂಗಾಣ ಮಾತ್ರ ಕರ್ನಾಟಕದಷ್ಟೇ ಶೇ.10 ವೃದ್ಧಿ ಸಾಧಿಸಿದ್ದು, 5,726 ಕೋಟಿ ಸಂಗ್ರಹಿಸಿದೆ. ಆದರೆ, ಅದರ ಮೂಲ 5,211 ಕೋಟಿ ಆಗಿರುವುದರಿಂದ ಟಾಪ್-5 ರಾಜ್ಯಗಳಲ್ಲಿ ಪರಿಗಣಿಸಲಾಗಿಲ್ಲ. ರಾಷ್ಟ್ರೀಯ ಮಟ್ಟದಲ್ಲಿ ಕೇವಲ ಶೇ.2ರಷ್ಟು ಸಂಗ್ರಹ ಹೆಚ್ಚಳವಾಗಿದ್ದರೂ ಕರ್ನಾಟಕದ ಸಾಧನೆ ಉತ್ತಮವಾಗಿದೆ. ತೆರಿಗೆ ಆದಾಯದಲ್ಲಿ ಮುಂದಿನ ತಿಂಗಳ ವರದಿಯಲ್ಲೂ ಇದೇ ರೀತಿಯ ಹೆಚ್ಚಳವನ್ನ ನಿರೀಕ್ಷಿಸಲಾಗಿದ್ದು, ದೀಪಾವಳಿ ಹಬ್ಬದ ತಿಂಗಳಾದ ಅಕ್ಟೋಬರ್ ವಹಿವಾಟುಗಳನ್ನು ಇದು ಒಳಗೊಂಡಿರಲಿದೆ. ವಾಹನ, ಉಡುಪು ಮತ್ತು ಎಲೆಕ್ಟ್ರಾನಿಕ್ ವಸ್ತುಗಳ ವಲಯಗಳಲ್ಲಿ ಸುಮಾರು ಶೇ.40 ವೃದ್ಧಿ ದಾಖಲಾಗಿರುವುದಾಗಿ ವರದಿಗಳು ಹೇಳಿವೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




