
ಬೆಂಗಳೂರು, ಏಪ್ರಿಲ್ 14: ಕಳೆದ ಕೆಲ ವರ್ಷಗಳಲ್ಲಿ ಭಾರತವನ್ನು ಬೆಚ್ಚಿಬೀಳಿಸಿದ ಹಗರಣಗಳಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣ (PNB scam) ಒಂದು. ವಜ್ರೋದ್ಯಮಿಗಳಾದ ಮೆಹುಲ್ ಚೋಕ್ಸಿ (Mehul Choksi) ಹಾಗೂ ಅವರ ಸೋದರಳಿಯ ನೀರವ್ ಮೋದಿ (Nirav Modi) ಸೇರಿ ಪಿಎನ್ಬಿಗೆ 13,000 ಕೋಟಿ ರೂ ಸಾಲ ಪಡೆದು ವಂಚನೆ ಎಸಗಿದ ಹಗರಣ ಇದು. ಕಾನೂನು ಕುಣಿಕೆ ಬರುವ ಮುನ್ನವೇ ಇಬ್ಬರೂ ದೇಶ ಬಿಟ್ಟು ಪರಾರಿಯಾಗಿ ಹೋಗಿದ್ದರು. ಇದೀಗ (ಏ. 12, ಶನಿವಾರ) ಮೆಹುಲ್ ಚೋಕ್ಸಿ ಬೆಲ್ಜಿಯಂ ದೇಶದಲ್ಲಿ ಬಂಧಿತರಾಗಿದ್ದಾರೆ. ಕ್ಯಾನ್ಸರ್ ಚಿಕಿತ್ಸೆಗೆಂದು ಕೆರಿಬಿಯನ್ ದ್ವೀಪದ ನಾಡಿನಿಂದ ಬೆಲ್ಜಿಯಂಗೆ ಬಂದು ಆಸ್ಪತ್ರೆಯಲ್ಲಿದ್ದಾಗ ಬಂಧಿತರಾಗಿದ್ದಾರೆ. ಅವರನ್ನು ಶೀಘ್ರದಲ್ಲೇ ಭಾರತಕ್ಕೆ ಒಪ್ಪಿಸುವ ಸಾಧ್ಯತೆ ಇದೆ. ಇನ್ನೊಂದೆಡೆ, ನೀರವ್ ಮೋದಿ ಬ್ರಿಟನ್ ದೇಶದಲ್ಲಿ ಬಂಧಿತರಾಗಿ ಕಸ್ಟಡಿಯಲ್ಲಿದ್ದಾರೆ. ಅವರನ್ನೂ ಭಾರತಕ್ಕೆ ತರುವ ಪ್ರಯತ್ನ ಕೆಲ ವರ್ಷಗಳಿಂದ ನಡೆಯುತ್ತಿದೆ. ಅದು ಸಾಧ್ಯವಾಗಿಲ್ಲ. ಕನಿಷ್ಠ ಮೆಹುಲ್ ಚೋಕ್ಸಿಯನ್ನಾದರೂ ಭಾರತಕ್ಕೆ ತರಲಾಗುತ್ತದಾ ನೋಡಬೇಕು.
ಮೆಹುಲ್ ಚೋಕ್ಸಿ, ನೀರವ್ ಮೋದಿ ಅವರು ವಜ್ರೋದ್ಯಮಿಗಳು. ನೀರವ್ ಮೋದಿ ಅವರ ತಾಯಿಯ ಸಹೋದರ ಮೆಹುಲ್ ಚೋಕ್ಸಿ. ಪಂಜಾಬ್ ನ್ಯಾಷನಲ್ ಬ್ಯಾಂಕ್ನ ಮುಂಬೈ ಬ್ರಾಡಿ ಹೌಸ್ ಬ್ರ್ಯಾಂಚ್ನ ಕೆಲ ಉದ್ಯೋಗಿಗಳ ನೆರವಿನಿಂದ ಇವರು ನಕಲಿ ಶೂರಿಟಿಗಳನ್ನು (ಲೆಟರ್ ಆಫ್ ಅಂಡರ್ಟೇಕಿಂಗ್ಸ್) ಪಡೆದುಕೊಂಡಿದ್ದರು. ಒಟ್ಟು 10,000 ಕೋಟಿ ರೂಗೆ ಈ ರೀತಿ ನಕಲಿ ಗ್ಯಾರಂಟಿಗಳನ್ನು ಪಡೆದಿದ್ದರು. ಈ ಎಲ್ಒಯುಗಳನ್ನು ಬಳಸಿ ವಿದೇಶಗಳಲ್ಲಿರುವ ಬೇರೆ ಭಾರತೀಯ ಬ್ಯಾಂಕ್ಗಳಲ್ಲಿ ಸಾಲ ಪಡೆದಿದ್ದಾರೆ.
2011ರಿಂದ 2018ರ ಅವಧಿಯಲ್ಲಿ ಈ ಕರ್ಮಕಾಂಡಗಳು ನಡೆದಿವೆ. ಈ ನಕಲಿ ದಾಖಲೆಗಳನ್ನು ಸಲ್ಲಿಸಿ ಪಡೆದ ಸಾಲವನ್ನು ಮರುಪಾವತಿಸದೇ ಹೋದಾಗ ಆ ಸಾಲದ ಋಣ ಪಂಜಾಬ್ ನ್ಯಾಷನಲ್ ಬ್ಯಾಂಕ್ ಮೇಲೆ ಬಿದ್ದಿದೆ.
ಇದನ್ನೂ ಓದಿ: ಬೆಲ್ಜಿಯಂನಲ್ಲಿ ದೇಶ ಭ್ರಷ್ಟ ವಜ್ರೋದ್ಯಮಿ ಮೆಹುಲ್ ಚೋಕ್ಸಿ ಬಂಧನ
ಮೆಹುಲ್ ಚೋಕ್ಸಿ ಮತ್ತು ನೀರವ್ ಮೋದಿಗೆ ನಕಲಿ ದಾಖಲೆಗಳನ್ನು ನೀಡಲು ಪಿಎನ್ಬಿ ಉದ್ಯೋಗಿಗಳು ವ್ಯವಸ್ಥೆಯ ದುರುಪಯೋಗ ಮಾಡಿದ್ದರು. ಬ್ಯಾಂಕ್ನ ಕೋರ್ ಸಿಸ್ಟಂನಲ್ಲಿ ವಹಿವಾಟುಗಳು ದಾಖಲಾಗದ ರೀತಿಯಲ್ಲಿ ಕೃತ್ಯ ಎಸಗಿದ್ದರು. ಹಲವು ವರ್ಷಗಳಿಂದ ಇದು ನಡೆಯುತ್ತಿದ್ದರೂ ಪಿಎನ್ಬಿ ಮ್ಯಾನೇಜ್ಮೆಂಟ್ಗೆ ಇದರ ಸುಳಿವೇ ಇರಲಿಲ್ಲ.
ಮೂರು ಕಂಪನಿಗಳು ಬ್ಯಾಂಕ್ಗೆ ಹೋಗಿ ಎಲ್ಒಯುಗೆ ಮನವಿ ಮಾಡಿವೆ. ಆದರೆ, ಅದಕ್ಕೆ ಶೇ. 100 ಮಾರ್ಜಿನ್ ಬೇಕು ಎಂದು ಬಿಎನ್ಬಿ ಮ್ಯಾನೇಜ್ಮೆಂಟ್ ಹೇಳಿದೆ. ಈ ಹಿಂದೆ ಯಾವ ಗ್ಯಾರಂಟಿಗಳಿಲ್ಲದೆ ಎಲ್ಒಯು ಪಡೆದಿದ್ದೇವೆ ಎಂದು ಆ ಮೂರು ಕಂಪನಿಗಳು ಹೇಳಿದಾಗ ಪಿಎನ್ಬಿಗೆ ಹಗರಣದ ವಾಸನೆ ಬಡಿದಿದೆ.
ಆಗ ಟ್ರಾನ್ಸಾಕ್ಷನ್ ಹಿಸ್ಟರಿಯನ್ನು ಬಗೆದು ನೋಡಿದಾಗ ವಂಚನೆ ವಿಚಾರ ಬೆಳಕಿಗೆ ಬಂದಿದೆ. 2018ರ ಜನವರಿ 29ರಂದು ನೀರವ್ ಮೋದಿ, ಅಮಿ ಮೋದಿ, ನಿಶಾಲ್ ಮೋದಿ, ಮೆಹುಲ್ ಚೋಕ್ಸಿ ಹಾಗೂ ಇಬ್ಬರು ಬ್ಯಾಂಕ್ ಉದ್ಯೋಗಿಗಳ ವಿರುದ್ಧ ಪಿಎನ್ಬಿ ಸಿಬಿಐ ಬಳಿ ದೂರು ಕೊಟ್ಟಿತು.
ಮೊದಲಿಗೆ ಇದು 280 ಕೋಟಿ ರೂ ಹಗರಣವೆಂದು ಭಾವಿಸಲಾಗಿತ್ತು. ಆಳಕ್ಕೆ ಹೋದಂತೆ ಹಗರಣದ ಮೊತ್ತ 14,000 ಕೋಟಿ ರೂಗೆ ಹೋಗಿತ್ತು.
ಈ ಹಗರಣ ಬೆಳಕಿಗೆ ಬರುತ್ತಲೇ ಈ ಇಬ್ಬರೂ ಕೂಡ ವಿವಿಧ ಕಾಲಘಟ್ಟಗಳಲ್ಲಿ ದೇಶದಿಂದ ತಪ್ಪಿಸಿಕೊಂಡು ಹೋಗಿದ್ದರು. 2019ರ ಮಾರ್ಚ್ ತಿಂಗಳಲ್ಲಿ ನೀರವ್ ಮೋದಿಯನ್ನು ಬ್ರಿಟನ್ನಲ್ಲಿ ಬಂಧಿಸಲಾಯಿತು. ಆದರೆ, ಭಾರತಕ್ಕೆ ಅವರನ್ನು ಇನ್ನೂ ಹಸ್ತಾಂತರಿಸಲಾಗಿಲ್ಲ.
ಇದನ್ನೂ ಓದಿ: 2025ರಲ್ಲಿ ಅಮೆರಿಕದಲ್ಲಿ ದಿವಾಳಿ ಬೀಳುತ್ತಿವೆ ದೊಡ್ಡ ದೊಡ್ಡ ಕಂಪನಿಗಳು: ಎಸ್ ಅಂಡ್ ಪಿ ವರದಿ
ಇನ್ನೊಂದೆಡೆ, ಮೆಹುಲ್ ಚೋಕ್ಸಿ ಅನಾರೋಗ್ಯ ಕಾರಣ ನೀಡಿ ಅಮೆರಿಕಕ್ಕೆ ಹೋಗಿದ್ದರು. ಬಳಿಕ ಕೆರಿಬಿಯನ್ ದ್ವೀಪ ನಾಡಾದ ಆಂಟಿಗುವಾದಲ್ಲಿ ನೆಲಸಿದರು.
ಚೋಕ್ಸಿ ಆಂಟಿಗುವಾದಲ್ಲಿ ನೆಲಸುವುದು ಪೂರ್ವಯೋಜಿತವಾಗಿತ್ತು. ದೇಶ ಬಿಡುವ ಕೆಲ ತಿಂಗಳ ಮೊದಲು ಅವರು ಆಂಟಿಗುವಾದ ಪೌರತ್ವ ಪಡೆದಿದ್ದರು. ಬೇರೆ ಬೇರೆ ದೇಶಗಳ ಮುಖಾಂತರ ಆತ ಅಮೆರಿಕಕ್ಕೆ ಹೋಗಿ ಅಲ್ಲಿಂದ ಆಂಟಿಗುವಾಗೆ ಶಿಫ್ಟ್ ಆಗಿ ಹೋದರು.
ಈಗ ವೈದ್ಯಕೀಯ ಚಿಕಿತ್ಸೆಗೆಂದು ಬೆಲ್ಜಿಯಂಗೆ ಮೆಹುಲ್ ಚೋಕ್ಸಿ ಬಂದಿರುವುದು ಗೊತ್ತಾಗಿ, ಬಂಧಿಸಲಾಗಿದೆ. ಸದ್ಯ ಪೊಲೀಸ್ ಕಸ್ಟಡಿಯಲ್ಲಿರುವ ಅವರನ್ನು ಸದ್ಯದಲ್ಲೇ ಭಾರತಕ್ಕೆ ಹಸ್ತಾಂತರಿಸುವ ಸಾಧ್ಯತೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ