
ನವದೆಹಲಿ, ಡಿಸೆಂಬರ್ 2: ತಂದೆ ತಾಯಿಯರು ತಮ್ಮ ಕೊನೆಯ ದಿನಗಳಲ್ಲಿ ಮಕ್ಕಳು ನೋಡಿಕೊಳ್ಳುತ್ತಾರೆನ್ನುವ ನಂಬಿಕೆಯಲ್ಲಿ ಆಸ್ತಿಯೆಲ್ಲವನ್ನೂ ಧಾರೆ ಎರೆದುಕೊಟ್ಟಿರುತ್ತಾರೆ. ಆದರೆ, ಆಸ್ತಿ ಪಡೆದ ಬಳಿಕ ಮಕ್ಕಳು ತಮ್ಮ ಅಪ್ಪ ಅಮ್ಮರನ್ನು ಮನೆಯಿಂದ ಹೊರಗಟ್ಟಿದ ಅದೆಷ್ಟೋ ಘಟನೆಗಳು ಕಣ್ಮುಂದೆ ನಡೆದಿವೆ, ನಡೆಯುತ್ತಲೇ ಇವೆ. ಆಸ್ತಿಯಾದರೂ ಇದ್ದಿದ್ದರೆ ಹಿರಿಜೀವಗಳು ಹೇಗೋ ಜೀವನ ಸವೆಸಬಹುದು. ಇಂಥ ಒಬ್ಬ ವೃದ್ಧೆಯು (Senior Citizen) ಕೋರ್ಟ್ ಮೊರೆ ಹೋಗಿ ತಮ್ಮ ಆಸ್ತಿಯನ್ನು ಮರಳಿ ದಕ್ಕಿಸಿಕೊಂಡ ಘಟನೆ ದೆಹಲಿಯಲ್ಲಿ ನಡೆದಿದೆ.
88 ವರ್ಷದ ದಲ್ಜೀತ್ ಕೌರ್ ಎನ್ನುವ ವೃದ್ಧೆಯ ಪರವಾಗಿ ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ. ದಲ್ಜೀತ್ ಕೌರ್ ಅವರು ತಮ್ಮ ಸೊಸೆಗೆ ಗಿಫ್ಟ್ ಡೀಡ್ ಆಗಿ ನೀಡಿದ್ದ ಆಸ್ತಿಯನ್ನು ಬರೆದುಕೊಡಲಾಗಿತ್ತು. ದೆಹಲಿ ಹೈಕೋರ್ಟ್ ಆ ಗಿಫ್ಟ್ ಡೀಡ್ ಅನ್ನು ರದ್ದುಗೊಳಿಸಿ, ದಲ್ಜೀತ್ ಕೌರ್ ಪರವಾಗಿ ನ್ಯಾಯತೀರ್ಪು ನೀಡಿದೆ.
ಇದನ್ನೂ ಓದಿ: ಇ-ಸ್ಟ್ಯಾಂಪ್ ಹೋಯ್ತು, ಡಿಜಿಟಲ್ ಇ-ಸ್ಟ್ಯಾಂಪ್ ಬಂತು: ಅಗ್ರಿಮೆಂಟ್ಗೆ ಇದೇ ಕಡ್ಡಾಯ
ದಲ್ಜೀತ್ ಕೌರ್ ಅವರು 2015ರಲ್ಲಿ ತಮ್ಮ ಸೊಸೆ ವರೀಂದರ್ ಕೌರ್ ಅವರಿಗೆ ಆಸ್ತಿಯನ್ನು ಗಿಫ್ಟ್ ಡೀಡ್ ಆಗಿ ಬರೆದುಕೊಟ್ಟಿದ್ದರು. ಮಗ ಮೃತಪಟ್ಟಿದ್ದರಿಂದ ಸೊಸೆಗೆ ತಮ್ಮ ಆಸ್ತಿ ಕೊಟ್ಟಿದ್ದರು. ಆಸ್ತಿ ಸಿಗುತ್ತಿದ್ದಂತೆಯೇ ಸೊಸೆಯು ಆ ವೃದ್ಧೆಯನ್ನು ನಿಕೃಷ್ಟವಾಗಿ ನಡೆಸಿಕೊಳ್ಳತೊಡಗಿದ್ದಾಳೆ. ಮೂಲಭೂತ ಊಟ, ಔಷಧೋಪಚಾರವನ್ನೂ ನೀಡಲು ವಿಫಲವಾಗಿದ್ದಾಳೆ. ದಲ್ಜೀತ್ ಕೌರ್ ಹಲವು ಬಾರಿ ದೂರು ದಾಖಲಿಸಿದರೂ ಏನೂ ಪ್ರಯೋಜನವಾಗುವುದಿಲ್ಲ. ನಂತರ ಅವರು ಗಿಫ್ಟ್ ಡೀಡ್ ಅನ್ನು ರದ್ದುಗೊಳಿಸುವಂತೆ ಕೋರಿ ಟ್ರಿಬ್ಯುನಲ್ ಮೊರೆ ಹೋಗುತ್ತಾರೆ.
2007ರ ಪೋಷಕರು ಮತ್ತು ಹಿರಿಯ ನಾಗರಿಕರ ಪಾಲನೆ ಮತ್ತು ಕಲ್ಯಾಣ ಕಾಯ್ದೆಯ ಸೆಕ್ಷನ್ 23 ಅಡಿಯಲ್ಲಿ ಪ್ರಕರಣ ದಾಖಲಾಗುತ್ತದೆ. ತಮ್ಮ ಪಾಲನೆ ಮಾಡುವ ನಿರೀಕ್ಷೆಯಲ್ಲಿ ಹಿರಿಯ ನಾಗರಿಕರು ಆಸ್ತಿಯನ್ನು ವರ್ಗಾವಣೆ ಮಾಡಿದ್ದು, ಆ ನಿರೀಕ್ಷೆ ಈಡೇರದಿದ್ದರೆ ಆಸ್ತಿ ವರ್ಗಾವಣೆಯನ್ನು ಹಿಂಪಡೆಯುವ ಅಧಿಕಾರವನ್ನು ಈ ಸೆಕ್ಷನ್ 23 ನೀಡುತ್ತದೆ.
ಇದನ್ನೂ ಓದಿ: ಹಣದ ಹಿಂದೆ ಬೀಳದಿರಿ; ನೀವೀ ಕೆಲಸ ಮಾಡಿದರೆ ಕಾಂಚಾಣ ತಾನಾಗೇ ಬರುತ್ತೆ: ಇಲಾನ್ ಮಸ್ಕ್ ಮಸ್ತ್ ಟಿಪ್ಸ್
‘ಪೋಷಕರು ತಮ್ಮ ಮಗ ಅಥವಾ ಮಗಳಿಗೆ ಆಸ್ತಿಯನ್ನು ನೀಡುವಾಗ ಪ್ರೀತಿ, ಮಮಕಾರ ಇರುತ್ತದೆ. ಹಾಗೆಯೇ, ವಯಸ್ಸಾದ ಮೇಲೆ ತಮ್ಮನ್ನು ಅವರು ನೋಡಿಕೊಳ್ಳಬಹುದು ಎನ್ನುವ ಆಶಯ ಮತ್ತು ನಿರೀಕ್ಷೆ ಇರುತ್ತದೆ ಇರುತ್ತದೆ’ ಎಂದು ದೆಹಲಿ ಹೈಕೋರ್ಟ್ ನ್ಯಾಯಪೀಠ ಅಭಿಪ್ರಾಯಪಟ್ಟಿದ್ದಾರೆ.
ದಲ್ಜೀತ್ ಕೌರ್ ಪ್ರಕರಣದಲ್ಲಿ ಕೆಳ ಹಂತದ ನ್ಯಾಯಾಲಯಗಳೂ ಕೂಡ ವೃದ್ಧೆಯ ಪರವಾಗಿಯೇ ತೀರ್ಪು ನೀಡಿದ್ದವು. ಇದೀಗ ದೆಹಲಿ ಹೈಕೋರ್ಟ್ನ ನ್ಯಾಯಪೀಠವು ಈ ತೀರ್ಪನ್ನು ಎತ್ತಿಹಿಡಿದು ವೃದ್ಧೆಗೆ ನ್ಯಾಯ ಕೊಡಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ