SpiceJet: ಕಳಾನಿಧಿ ಮಾರನ್ಗೆ 380 ಕೋಟಿ ರೂ ಕೊಡಲು ಸ್ಪೈಸ್ಜೆಟ್ಗೆ ದೆಹಲಿ ಕೋರ್ಟ್ ಆದೇಶ; ಏನಿದು ಪ್ರಕರಣ?
Delhi High Court Order To SpiceJet: 2015ರಲ್ಲಿ ಸನ್ ಗ್ರೂಪ್ನ ಕಳಾನಿಧಿ ಮಾರನ್ ಸ್ಪೈಸ್ಜೆಟ್ನಲ್ಲಿದ್ದ ತಮ್ಮೆಲ್ಲಾ ಪಾಲಿನ ಷೇರುಗಳನ್ನು ಅಜಯ್ ಸಿಂಗ್ಗೆ ವರ್ಗಾಯಿಸಿರುತ್ತಾರೆ. ಇದಕ್ಕೆ ಬದಲಾಗಿ 18 ಕೋಟಿ ಕನ್ವರ್ಟಿಬಲ್ ವಾರಂಟ್ ಅನ್ನು ಕೊಡಲು ಸ್ಪೈಸ್ಜೆಟ್ ವಿಫಲವಾಗಿದೆ ಎಂದು ಆರೋಪಿಸಿ ಮಾರನ್ 2017ರಲ್ಲಿ ಕೋರ್ಟ್ ಮೆಟ್ಟಿಲೇರಿದ್ದರು.
ನವದೆಹಲಿ: ಷೇರು ರವಾನೆ ವಿಚಾರದಲ್ಲಿ ಉಂಟಾದ ವ್ಯಾಜ್ಯಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸ್ಪೈಸ್ಜೆಟ್ ಏರ್ಲೈನ್ ಸಂಸ್ಥೆ (SpiceJet) ತನ್ನ ಮಾಜಿ ಪ್ರೊಮೋಟರ್ ಕಳಾನಿಧಿ ಮಾರನ್ ಅವರಿಗೆ 380 ರೂ ಕಟ್ಟಿಕೊಡಬೇಕಿದೆ. ದೆಹಲಿ ಹೈಕೋರ್ಟ್ ಜೂನ್ 1ರಂದು ಸ್ಪೈಸ್ಜೆಟ್ಗೆ ಈ ಆದೇಶ ನೀಡಿದೆ. ನಾಲ್ಕು ವಾರದಲ್ಲಿ ತನ್ನ ಆಸ್ತಿಗಳ ಅಫಿಡವಿಟ್ ಸಲ್ಲಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಈ ಪ್ರಕರಣದಲ್ಲಿ ಸ್ಪೈಸ್ ಜೆಟ್ ಈಗಾಗಲೇ ಮಾರನ್ಗೆ 579.08 ಕೋಟಿ ರೂ ಕೊಟ್ಟಿದೆ. ಅದರ ಬಡ್ಡಿ ಎಲ್ಲವೂ ಸೇರಿ ಈಗ 380 ರೂ ಆಗಿದ್ದು, ಅದನ್ನೂ ಪಾವತಿಸುವಂತೆ ಸ್ಪೈಸ್ಜೆಟ್ಗೆ ಸೂಚಿಸಲಾಗಿದೆ. ಆದರೆ, ತಾನು 579 ಕೋಟಿ ರೂಗಳ ಅಸಲು ಹಣ ಕಟ್ಟಲಾಗಿರುವುದರಿಂದ ಬಡ್ಡಿಯಿಂದ ವಿನಾಯಿತಿ ಪಡೆಯಲು ಸ್ಪೈಸ್ಜೆಟ್ ಸಂಧಾನಕ್ಕೆ ಮುಂದಾಗಿರುವುದು ತಿಳಿದುಬಂದಿದೆ.
ಅಂದಹಾಗೆ ಈ ಪ್ರಕರಣದ ಮೂಲ 2015ರಲ್ಲಿ ಶುರುವಾಗುತ್ತದೆ. ಸನ್ ಗ್ರೂಪ್ನ ಕಳಾನಿಧಿ ಮಾರನ್ ಹಾಗು ಕೆಎಎಲ್ ಏರ್ವೇಸ್ ಸ್ಪೈಸ್ಜೆಟ್ನಲ್ಲಿ ಹೊಂದಿದ್ದ ತಮ್ಮ ಎಲ್ಲಾ ಶೇ. 58.46ರಷ್ಟು ಪಾಲನ್ನು ಅಜಯ್ ಸಿಂಗ್ ಅವರಿಗೆ ಮಾರುತ್ತಾರೆ. ಒಟ್ಟು 35.04 ಕೋಟಿ ಈಕ್ವಿಟಿ ಶೇರುಗಳು ಅಜಯ್ ಸಿಂಗ್ಗೆ ರವಾನೆಯಾಗುತ್ತದೆ. ಆದರೆ, ಕನ್ವರ್ಟಿಬಲ್ ವಾರಂಟ್ ಮತ್ತು ಪ್ರಿಫರೆನ್ಸ್ ಶೇರ್ಗಳನ್ನು ಸ್ಪೈಸ್ ಜೆಟ್ ತಮಗೆ ನೀಡುತ್ತಿಲ್ಲ ಎಂದು ಆರೋಪಿಸಿ 2017ರಲ್ಲಿ ಮಾರನ್ ಅವರು ಕೋರ್ಟ್ ಮೆಟ್ಟಿಲೇರುತ್ತಾರೆ. 2020ರಲ್ಲಿ ಕೋರ್ಟ್ ತೀರ್ಪು ಕೊಟ್ಟು ಮಾರನ್ಗೆ 579.08 ಕೋಟಿ ಅಸಲು ಹಣಕ್ಕೆ ಬಡ್ಡಿ ಸೇರಿಸಿ ಕೊಡುವಂತೆ ತಿಳಿಸುತ್ತದೆ. ಸ್ಪೈಸ್ಜೆಟ್ ಅಸಲು ಹಣ ಕೊಡುತ್ತದೆ. ಆದರೆ, ಬಡ್ಡಿ ಹಣ ಬಾಕಿ ಉಳಿದಿರುತ್ತದೆ. 2020 ಅಕ್ಟೋಬರ್ನಲ್ಲಿ ಬಡ್ಡಿ ಹಣ 242 ಕೋಟಿ ರೂ ಆಗಿರುತ್ತದೆ. ಈಗ ಅದು 362 ರುಪಾಯಿಯಷ್ಟಾಗಿದೆ.
ಇದನ್ನೂ ಓದಿ: Own business: ಸ್ವಂತ ವ್ಯವಹಾರ ನಡೆಸಲು ಏನೇನು ಮಾಡಬೇಕು? ಈ ಕೆಲ ಅಂಶಗಳು ಗಮನದಲ್ಲಿರಲಿ
ಸ್ಪೈಸ್ಜೆಟ್ ಇತಿಹಾಸ:
ಖ್ಯಾತ ಉದ್ಯಮಿ ಎಸ್.ಕೆ. ಮೋದಿ ಅವರು 1984ರಲ್ಲಿ ಏರ್ ಟ್ಯಾಕ್ಸಿ ಸರ್ವಿಸ್ ಆರಂಭಿಸಿದ್ದರು. 1993ರಲ್ಲಿ ಲಫ್ತಾನ್ಸಾ ಏರ್ಲೈನ್ಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳಲಾಯಿತು. ಎಂಜಿ ಎಕ್ಸ್ಪ್ರೆಸ್ ಎಂದು ಹೆಸರಿಡಲಾಯಿತು. 1996ರಲ್ಲಿ ಇದು ಮುಚ್ಚಿಹೋಯಿತು. 2004ರಲ್ಲಿ ಅಜಯ್ ಸಿಂಗ್ ಅವರು ಈ ಕಂಪನಿಯನ್ನು ಖರೀದಿಸಿದ್ದರು. ಸ್ಪೈಸ್ಜೆಟ್ ಎಂದು ಹೆಸರು ಬದಲಾಯಿತು. 2010ರಲ್ಲಿ ಕಳಾನಿಧಿ ಮಾರನ್ ಶೇ. 37.7ರಷ್ಟು ಪಾಲು ಖರೀದಿ ಮಾಡಿದರು. ನಂತರ ತಮ್ಮ ಷೇರುಪಾಲು ಇನ್ನಷ್ಟು ಹೆಚ್ಚಿಸಿಕೊಂಡರು.