ಚಾಟ್​ಜಿಪಿಟಿ ಬಳಸಿ ವಂಚಕನಿಗೇ ಮಂಕುಬೂದಿ ಎರಚಿದ ವ್ಯಕ್ತಿ; ಹೀಗೊಂದು ಮಾದರಿ ಪ್ರಕರಣ

Reddit user shares his experience of stealing from a thief: ಆನ್​ಲೈನ್​ನಲ್ಲಿ ಆಗಂತುಕರು ವಂಚಿಸಲು ಯತ್ನಿಸುತ್ತಿರುವುದು ಗೊತ್ತಾದಾಗ ಹೆಚ್ಚಿನ ಜನರು ತಪ್ಪಿಸಿಕೊಂಡರೆ ಸಾಕೆಂದು ಸುಮ್ಮನಾಗುತ್ತಾರೆ. ಆದರೆ, ದೆಹಲಿಯ ವ್ಯಕ್ತಿಯೊಬ್ಬರು ವಂಚಕನಿಗೆ ಮಂಕುಬೂದಿ ಯಾಕಿ ದಮ್ಮಯ್ಯ ಎಂದು ಬೇಡಿಕೊಳ್ಳುವಂತೆ ಮಾಡಿದ ಘಟನೆ ಇದೆ. ರೆಡ್ಡಿಟ್​ನಲ್ಲಿ ಈ ಅನುಭವ ಹಂಚಿಕೊಂಡಿರುವ ಆ ವ್ಯಕ್ತಿ, ತಾನು ಚಾಟ್​ಜಿಪಿಟಿ ಬಳಸಿ ಹೇಗೆ ಯಾಮಾರಿಸಿದೆ ಎಂದು ಘಟನೆ ವಿವರಿಸಿದ್ದಾರೆ. ಬಹಳ ಕುತೂಹಲಕಾರಿಯಾಗಿದೆ ಈ ಘಟನೆ.

ಚಾಟ್​ಜಿಪಿಟಿ ಬಳಸಿ ವಂಚಕನಿಗೇ ಮಂಕುಬೂದಿ ಎರಚಿದ ವ್ಯಕ್ತಿ; ಹೀಗೊಂದು ಮಾದರಿ ಪ್ರಕರಣ
ವಂಚಕ

Updated on: Dec 04, 2025 | 1:44 PM

ನವದೆಹಲಿ, ಡಿಸೆಂಬರ್ 4: ಆನ್​ಲೈನ್​ನಲ್ಲಿ ಜನರನ್ನು ಯಾಮಾರಿಸಲು ವಂಚಕರು (online scammers) ನಾನಾ ರೀತಿಯಲ್ಲಿ ಪ್ರಯತ್ನ ಮಾಡುತ್ತಾರೆ. ಎಸ್ಸೆಮ್ಮೆಸ್, ವಾಟ್​ಸಾಪ್ ಮೆಸೇಜ್​ಗಳಲ್ಲಿ ಲಿಂಕ್​ಗಳನ್ನು ಕಳುಹಿಸುವುದು, ಸುಳ್ಳು ಕಥೆಗಳನ್ನು ಸೃಷ್ಟಿಸಿ ಹಣ ಪಡೆಯುವುದು, ಸುಳ್ಳು ಬ್ಯುಸಿನೆಸ್ ಟ್ರಾನ್ಸಾಕ್ಷನ್ ಜಾಲಕ್ಕೆ ಸಿಲುಕಿಸಿ ಹಣ ಹೂಡಿಕೆಗೆ ಪುಸಲಾಯಿಸುವುದು ಇತ್ಯಾದಿ ಹಲವು ಮಾರ್ಗಗಳನ್ನು ವಂಚಕರು ಅನುಸರಿಸುತ್ತಾರೆ. ಈ ವಂಚನೆ ಎಸಗುತ್ತಿರುವುದು ಗೊತ್ತಾದಾಗ, ಹೆಚ್ಚಿನ ಜನರು ಆ ವಂಚಕರಿಂದ ತಪ್ಪಿಸಿಕೊಂಡರೆ ಸಾಕಪ್ಪಾ ಎಂದು ದೂರ ಉಳಿಯಲು ಪ್ರಯತ್ನಿಸುತ್ತಾರೆ. ಆದರೆ, ಇಲ್ಲೊಬ್ಬ ವ್ಯಕ್ತಿಯು ತನಗೆ ವಂಚನೆ ಎಸಗಲು ಬಂದ ವಂಚಕನಿಗೇ ಮಂಕುಬೂದಿ ಹಾಕಿ, ಆತನ ಬೆವರಿಳಿಸಿದ ಘಟನೆ ನಡೆದಿದೆ.

ರೆಡ್ಡಿಟ್ ಯೂಸರ್​ವೊಬ್ಬರು ಈ ಘಟನೆಯನ್ನು ಹಂಚಿಕೊಂಡಿದ್ದಾರೆ. ಚಾಟ್​ಜಿಪಿಟಿ (ChatGPT) ನೆರವಿನಿಂದ ವಂಚಕನ ಗುರುತು ಪತ್ತೆ ಮಾಡಿ ಆತ ಬೇಡಿಕೊಳ್ಳುವಂತೆ ಮಾಡಿದೆ ಎಂದು RailfanHSs ಎನ್ನುವ ಐಡಿ ಹೊಂದಿರುವ ದೆಹಲಿಯ ವ್ಯಕ್ತಿಯೊಬ್ಬರು ರೆಡ್ಡಿಟ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸ್ಕ್ಯಾಮರ್ ಅಟಕಾಯಿಸಿಕೊಂಡಿದ್ದು ಹೀಗೆ…

ತಾನು ಕಾಲೇಜು ಸೀನಿಯರ್ ಹಾಗೂ ಐಎಎಸ್ ಅಧಿಕಾರಿ ಎಂದು ಹೇಳಿಕೊಂಡು ಫೇಸ್​ಬುಕ್​ನಲ್ಲಿ ವಂಚಕನು ಮೆಸೇಜ್ ಹಾಕಿದ್ದಾನೆ. ಸಿಆರ್​ಪಿಎಫ್ ಅಧಿಕಾರಿ ತನ್ನ ಸ್ನೇಹಿತನಾಗಿದ್ದು, ಆತ ಬೇರೆ ಊರಿಗೆ ವರ್ಗಾವಣೆ ಆಗುತ್ತಿದ್ದು ಬಹಳ ಕಡಿಮೆ ದರದಲ್ಲಿ ಗೃಹೋಪಯೋಗಿ ವಸ್ತುಗಳನ್ನು ಮಾರುತ್ತಿದ್ದಾನೆ ಎಂದು ಹೇಳಿದ್ದಾನೆ.

ಇದನ್ನೂ ಓದಿ: ಮೂರು ಬಾರಿ ಸಾಯಲು ಹೋಗಿದ್ದ ಚರಣ್ ರಾಜ್; ತಪ್ಪಿದ್ದು ಹೇಗೆ?

ಆ ವಂಚಕ ಹೆಸರಿಸಿದ ಕಾಲೇಜು ಸೀನಿಯರ್ ವಾಸ್ತವವಾಗಿ ತನಗೆ ಪರಿಚಯವಿರುವ ವ್ಯಕ್ತಿಯೇ ಆಗಿದ್ದು, ಫೋನ್ ನಂಬರ್ ಕೂಡ ಇದೆ. ಆದರೂ ಫೇಸ್​ಬುಕ್​ನಲ್ಲಿ ಮೆಸೇಜ್ ಹಾಕಿದ್ದರಿಂದ ಅನುಮಾನ ಬಂದಿತು. ತಾನು ವಾಟ್ಸಾಪ್​ನಲ್ಲಿ ಖಚಿತಪಡಿಸಿಕೊಂಡ ಬಳಿಕ ವಂಚಕನ ಆಟ ಎಂಬುದು ಗೊತ್ತಾಯಿತು ಎಂದು ವಿವರಿಸಿರುವ ಈ ರೆಡ್ಡಿಟ್ ಬಳಕೆದಾರ, ತಾನು ಸ್ಕ್ಯಾಮರ್​ನನ್ನು ಉಪೇಕ್ಷಿಸುವ ಬದಲು ಆತನೊಂದಿಗೆಯೇ ಆಟವಾಡಲು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ.

ಇದೇ ವೇಳೆ, ಆ ವಂಚಕನು ಬೇರೆ ನಂಬರ್​ನಿಂದ ಸಂಪರ್ಕ ಮಾಡಿ, ಕ್ಯುಆರ್ ಕೋಡ್ ಕಳುಹಿಸಿ, ಕೂಡಲೇ ಹಣ ವರ್ಗಾಯಿಸುವಂತೆ ತಿಳಿಸಿದ್ದಾನೆ. ಈಗ ಈ ರೆಡ್ಡಿಟ್ ಬಳಕೆದಾರ ಚಾಟ್​ಜಿಪಿಟಿ ಬಳಸಿ ಒಂದು ವೆಬ್​ಪೇಜ್ ನಿರ್ಮಿಸುತ್ತಾರೆ. ಆ ಪೇಜ್​ಗೆ ಹೋದರೆ ಜಿಯೋಲೊಕೇಶನ್ ಬಯಲಾಗುತ್ತದೆ, ಫ್ರಂಟ್ ಕ್ಯಾಮರಾ ತಾನಾಗೇ ಕ್ಲಿಕ್ ಮಾಡುತ್ತದೆ. ಅಂಥದ್ದೊಂದು ವೆಬ್​ಪೇಜ್ ಸೃಷ್ಟಿಸಿದ ಇವರು, ಆ ವಂಚಕನಿಗೆ ಅದನ್ನು ಕಳುಹಿಸಿ, ಆ ವೆಬ್​ಪೇಜ್​ಗೆ ಕ್ಯುಆರ್ ಕೋಡ್ ಅಪ್​ಲೋಡ್ ಮಾಡುವಂತೆ ಪುಸಲಾಯಿಸಿದ್ದಾರೆ.

ದೆಹಲಿ ವ್ಯಕ್ತಿ ರೆಡ್ಡಿಟ್​ನಲ್ಲಿ ಹಾಕಿದ ಪೋಸ್ಟ್ ಇದು

Used ChatGPT to locate a scammer and made him beg me
byu/RailfanHS indelhi

ಎಲ್ಲರನ್ನೂ ಯಾಮಾರಿಸುತ್ತಾ ಬಂದಿದ್ದ ಆ ವಂಚಕ, ತನಗೇ ಯಾರಾದರೂ ಯಾಮಾರಿಸಬಹುದು ಎಂದು ಭಾವಿಸಿರಲಿಲ್ಲ. ಈ ದೆಹಲಿ ವ್ಯಕ್ತಿ ಕಳುಹಿಸಿದ ಲಿಂಕ್ ಅನ್ನು ಆ ವಂಚಕ ಕ್ಲಿಕ್ ಮಾಡುತ್ತಿದ್ದಂತೆಯೇ ಆತನ ಜಿಪಿಎಸ್ ಲೊಕೇಶನ್, ಐಪಿ ಅಡ್ರೆಸ್, ಮತ್ತು ಮುಖದ ಚಹರೆ ಎಲ್ಲವೂ ಬಯಲಾಗಿ ಹೋಗುತ್ತದೆ.

ಇದನ್ನೂ ಓದಿ: ಭಾರತದಲ್ಲಿ ಈ 3 ಬ್ಯಾಂಕುಗಳು ಅತೀ ಸುರಕ್ಷಿತವೆಂದು ಆರ್​ಬಿಐ ಘೋಷಣೆ; ಇವುಗಳಿಗೆ ವಿಶೇಷ ಮಾರ್ಗಸೂಚಿ

ಈ ಎಲ್ಲಾ ವಿವರವನ್ನೂ ಈ ದಿಲ್ಲಿ ವ್ಯಕ್ತಿ ವಂಚಕನಿಗೆ ಕಳುಹಿಸುತ್ತಾರೆ. ಅದನ್ನು ಕಂಡೊಡನೆ ವಂಚಕ ಗಾಬರಿ ಬೀಳುತ್ತಾನೆ. ಹಲವು ಬಾರಿ ಕರೆ ಮಾಡಿ, ತನ್ನನ್ನು ಕ್ಷಮಿಸುವಂತೆಯೂ, ಪ್ರಕರಣವನ್ನೂ ದೊಡ್ಡದು ಮಾಡಬೇಡವೆಂದೂ ಪರಿಪರಿಯಾಗಿ ಬೇಡಿಕೊಂಡಿದ್ದಾನೆ. ಮತ್ತೆಂದೂ ಈ ಕೆಲಸ ಮಾಡೋದಿಲ್ಲ ಎಂದೂ ಹೇಳಿದ್ದಾನೆ.

ಈ ಘಟನೆಯನ್ನು ಹಂಚಿಕೊಂಡಿರುವ ಈ ದಿಲ್ಲಿ ವ್ಯಕ್ತಿ, ಆ ವಂಚಕ ತನ್ನ ಕೆಲಸ ನಿಲ್ಲಿಸೋದಿಲ್ಲ ಅಂತ ತನಗೆ ಗೊತ್ತು. ಆದರೆ, ಒಬ್ಬ ಕಳ್ಳನಿಂದಲೇ ಕದ್ದಿದ್ದೇನೆ ಎನ್ನುವ ಸಮಾಧಾನ ನನಗೆ ಸಿಕ್ಕಿದೆ ಎಂದು ಕೊನೆಯಲ್ಲಿ ತಿಳಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ