ಡಿಐಸಿಜಿಸಿ ಕಾಯ್ದೆ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಅಸ್ತು; ಕೋಟ್ಯಂತರ ಬ್ಯಾಂಕ್​ ಠೇವಣಿದಾರರ ಹಣಕ್ಕೆ ಸಿಕ್ತು ಗ್ಯಾರಂಟಿ

| Updated By: Srinivas Mata

Updated on: Aug 10, 2021 | 12:43 PM

ಡಿಐಸಿಜಿಸಿ ಕಾಯ್ದೆ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಅನುಮೋದನೆ ಸಿಕ್ಕಿದ್ದು, ಇನ್ನೇನಿದ್ದರೂ ರಾಜ್ಯಸಭೆಯಲ್ಲಿ ಒಪ್ಪಿಗೆ ದೊರೆಯಬೇಕಿದೆ. ಇದು ಪೂರ್ತಿ ಆದಲ್ಲಿ ಕೋಟ್ಯಂತರ ಬ್ಯಾಂಕ್ ಠೇವಣಿದಾರರಿಗೆ ಅನುಕೂಲ ಆಗಲಿದೆ.

ಡಿಐಸಿಜಿಸಿ ಕಾಯ್ದೆ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಅಸ್ತು; ಕೋಟ್ಯಂತರ ಬ್ಯಾಂಕ್​ ಠೇವಣಿದಾರರ ಹಣಕ್ಕೆ ಸಿಕ್ತು ಗ್ಯಾರಂಟಿ
ನಿರ್ಮಲಾ ಸೀತಾರಾಮನ್ (ಸಂಗ್ರಹ ಚಿತ್ರ)
Follow us on

ಡೆಪಾಸಿಟ್ ಇನ್ಷೂರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ತಿದ್ದುಪಡಿ) ಮಸೂದೆಗೆ ಲೋಕಸಭೆಯಲ್ಲಿ ಆಗಸ್ಟ್​ 9ನೇ ತಾರೀಕು ಅನುಮೋದನೆ ಸಿಕ್ಕಿದೆ. ಮೋದಿ ನೇತೃತ್ವದ ಸರ್ಕಾರ ಯಾವುದೇ ಚರ್ಚೆ ಇಲ್ಲದೆ ಅಥವಾ ಹೆಚ್ಚಿನ ಮಾತುಕತೆ ಇಲ್ಲದೆ ಎರಡೂ ಮನೆಗಳಲ್ಲಿ (ಲೋಕಸಭೆ- ರಾಜ್ಯಸಭೆ) ಅನುಮೋದನೆ ಪಡೆದ ಪ್ರಮುಖ ಆರ್ಥಿಕ ಮಸೂದೆಗಳಲ್ಲಿ ಇದೂ ಒಂದು. ಅಂದಹಾಗೆ ಪೆಗಾಸಸ್ ವಿವಾದಕ್ಕೆ (ಫೋನ್ ಕದ್ದಾಲಿಕೆ) ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅಥವಾ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಬೇಕು ಎಂದು ವಿರೋಧ ಪಕ್ಷಗಳು ಭಾರೀ ಗದ್ದಲ ಎಬ್ಬಿಸುತ್ತಿರುವ ಮಧ್ಯೆ ಮಸೂದೆಗೆ ಅಂಕಿತ ಬಿದ್ದಿದೆ. ಡಿಐಸಿಜಿಸಿ ಮಸೂದೆ, ಸೀಮಿತ ಜವಾಬ್ದಾರಿ ಪಾಲುದಾರಿಕೆ (ತಿದ್ದುಪಡಿ ಮಸೂದೆ) ಲೋಕಸಭೆಯಲ್ಲಿ ಕೆಲವೇ ನಿಮಿಷಗಳಲ್ಲಿ ಅನುಮೋದನೆ ಪಡೆದವು. ಈಗ ರಾಜ್ಯ ಸಭಾದಲ್ಲಿ ಅಂಕಿತ ಬೀಳಬೇಕಿದೆ. ಡಿಐಸಿಜಿಸಿ ತಿದ್ದುಪಡಿ ಮಸೂದೆಯನ್ನು ಜುಲೈ 28ನೇ ತಾರೀಕಿನಂದು ಕೇಂದ್ರ ಸಂಪುಟವು ವಿಲೇವಾರಿ ಮಾಡಿತ್ತು.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿ, ಮಸೂದೆಯ ಪ್ರಕಾರ, ಸಮಸ್ಯೆಯಾದ ಬ್ಯಾಂಕ್​ಗಳ ಠೇವಣಿದಾರರು 90 ದಿನಗಳ ಒಳಗಾಗಿ 5 ಲಕ್ಷ ರೂಪಾಯಿ ಆಸುಪಾಸಿನೊಳಗೆ ಇರುವ ಮೊತ್ತವನ್ನು ವಾಪಸ್ ಪಡೆಯುತ್ತಾರೆ. ರಿಸರ್ವ್ ಬ್ಯಾಂಕ್​ ಆಫ್​ ಇಂಡಿಯಾದಿಂದ ನಿರ್ಬಂಧ ಹೇರಿದರೂ ಈ ಹಣ ಬರುತ್ತದೆ. ಈ ಮಸೂದೆಯ ಮೂಲಕವಾಗಿ ಡೆಪಾಸಿಟ್ ಇನ್ಷೂರೆನ್ಸ್ ಕವರೇಜ್ ಹೆಚ್ಚು ಮಾಡುತ್ತದೆ ಹಾಗೂ ಬ್ಯಾಂಕ್​ ಹಣಕಾಸು ಒತ್ತಡದಲ್ಲಿ ಸಿಲುಕಿಕೊಂಡರೆ ತಮ್ಮ ಹಣವನ್ನು ವಾಪಸ್ ಪಡೆಯುವುದಕ್ಕೆ ಆಗುವ ಸಮಯ ಠೇವಣಿದಾರರಿಗೆ ಕಡಿಮೆ ಆಗುತ್ತದೆ.

1 ಲಕ್ಷ ರೂಪಾಯಿ ಇದ್ದ ಮೊತ್ತ 5 ಲಕ್ಷ ರೂಪಾಯಿಗೆ
ಒಂದು ಸಲ ತಿದ್ದುಪಡಿಯು ಜಾರಿಯಾದಲ್ಲಿ ಈಗಾಗಲೇ ನಿರ್ಬಂಧ ಹೇರಲಾದ ಬ್ಯಾಂಕ್​ಗಳ ಠೇವಣಿದಾರರಿಗೆ ಪರಿಹಾರ ದೊರೆಯುತ್ತದೆ. ತಿದ್ದುಪಡಿಯ ಪ್ರಕಾರ, ಪ್ರತಿ ಠೇವಣಿದಾರರ ಬ್ಯಾಂಕ್​ ಠೇವಣಿಯು 5 ಲಕ್ಷ ರೂಪಾಯಿ ತನಕ ಇನ್ಷೂರ್ಡ್ ಆಗುತ್ತದೆ. ಇದರಲ್ಲಿ ಅಸಲು ಮತ್ತು ಮೊತ್ತ ಎರಡೂ ಒಳಗೊಂಡಿರುತ್ತದೆ. 1 ಲಕ್ಷ ರೂಪಾಯಿ ಇದ್ದ ಮೊತ್ತ 5 ಲಕ್ಷ ರೂಪಾಯಿಗೆ ಇನ್ಷೂರ್ಡ್ ಮೊತ್ತ ಹೆಚ್ಚಾಗುವುದರಿಂದ ಶೇ 98.3ರಷ್ಟು ಎಲ್ಲ ಠೇವಣಿ ಖಾತೆಗಳು ಮತ್ತು ಠೇವಣಿ ಮೌಲ್ಯದ ಶೇ 50.9ರಷ್ಟು ಕವರ್ ಆಗುತ್ತವೆ.

ನಿರ್ಮಲಾ ಸೀತಾರಾಮನ್ ತಿಳಿಸಿದಂತೆ, ಡಿಐಸಿಜಿಸಿ ಕಾಯ್ದೆಗೆ ತಿದ್ದುಪಡಿ ಅಂದರೆ ಭಾರತದ ಠೇವಣಿದಾರರಿಗೆ ಜಾಗತಿಕ ಸರಾಸರಿಗಿಂತ ಹೆಚ್ಚಿನ ಇನ್ಷೂರೆನ್ಸ್ ಕವರ್ ಆಗುತ್ತದೆ. ಇಂಥದ್ದೇ ಇನ್ಷೂರೆನ್ಸ್ ಯೋಜನೆ ಅಡಿಯಲ್ಲಿ ಎಲ್ಲ ಠೇವಣಿ ಖಾತೆಯೂ ಸೇರಿ ಜಾಗತಿಕವಾಗಿ ಕವರ್ ಆಗುವುದು ಶೇ 80ರಷ್ಟು ಮಾತ್ರ. ಶೇ 20- 30ರಷ್ಟು ಠೇವಣಿ ಮೌಲ್ಯ ಕವರ್ ಆಗುತ್ತದೆ. ಕಳೆದ ವರ್ಷ ಕೇಂದ್ರ ಸರ್ಕಾರವು ಠೇವಣಿ ಮೇಲಿನ ಇನ್ಷೂರೆನ್ಸ್ ಕವರ್​ ಅನ್ನು 1 ಲಕ್ಷ ರೂಪಾಯಿ ಇದ್ದದ್ದು 5 ಲಕ್ಷ ರೂಪಾಯಿಗೆ ಅಂದರೆ 5 ಪಟ್ಟು ಹೆಚ್ಚಳ ಮಾಡಿದೆ. ಸಮಸ್ಯೆಗೆ ಸಿಲುಕಿದ ಪಂಜಾಬ್ ಅಂಡ್ ಮಹಾರಾಷ್ಟ್ರ ಕೋ-ಆಪರೇಟಿವ್ (ಪಿಎಂಸಿ) ಬ್ಯಾಂಕ್​ನಂಥವುಗಳಿಗೆ ಬೆಂಬಲ ದೊರಕಿದಂತಾಗುತ್ತದೆ. ಪಿಎಂಸಿ ಬ್ಯಾಂಕ್, ಯೆಸ್ ಬ್ಯಾಂಕ್, ಲಕ್ಷ್ಮೀವಿಲಾಸ್ ಬ್ಯಾಂಕ್ ಕೂಡ ಆರ್ಥಿಕ ಒತ್ತಡಕ್ಕೆ ಸಿಲುಕಿದ್ದವು.

ಠೇವಣಿದಾರರಿಗೆ ತಕ್ಷಣ ನಿರಾಳ
ಡಿಐಸಿಜಿಸಿ ಕಾಯ್ದೆ, 1961ಕ್ಕೆ ತಿದ್ದುಪಡಿ ತರುವ ಮಸೂದೆಗೆ 2021-22ರ ಕೇಂದ್ರ ಬಜೆಟ್​ ವೇಳೆ ಪ್ರಸ್ತಾವ ಮಾಡಲಾಗಿತ್ತು. ಈ ಮಸೂದೆಯು ಕಾನೂನು ಆದ ಮೇಲೆ, ಆರ್ಥಿಕ ಒತ್ತಡಕ್ಕೆ ಸಿಲುಕಿದ ಪಿಎಂಸಿ ಬ್ಯಾಂಕ್ ಮತ್ತು ಇತರ ಸಣ್ಣ ಕೋ-ಆಪರೇಟಿವ್​ ಬ್ಯಾಂಕ್​ನಲ್ಲಿ ಹಣ ಇಟ್ಟಿರುವ ಸಾವಿರಾರು ಠೇವಣಿದಾರರಿಗೆ ತಕ್ಷಣ ನಿರಾಳ ಆಗುತ್ತದೆ. ಈಗಿರುವ ನಿಯಮಾವಳಿಯಂತೆ, ಲೈಸೆನ್ಸ್ ರದ್ದಾದಲ್ಲಿ ಮತ್ತು ಲಿಕ್ಷಿಡೇಷನ್ ಪ್ರಕ್ರಿಯೆ ಆರಂಭವಾದಲ್ಲಿ 5 ಲಕ್ಷ ರೂಪಾಯಿ ಡೆಪಾಸಿಟ್ ಇನ್ಷೂರೆನ್ಸ್ ಚರ್ಚೆಗೆ ಬರುತ್ತದೆ. ಅಂದಹಾಗೆ ಡಿಐಸಿಜಿಸಿ ಎಂಬುದು ರಿಸರ್ವ್​ ಬ್ಯಾಂಕ್ ಆಫ್ ಇಂಡಿಯಾದ ಸಂಪೂರ್ಣ ಒಡೆತನದಲ್ಲಿ ಬರುವ ಸಂಸ್ಥೆ. ಇದು ಬ್ಯಾಂಕ್​ ಡೆಪಾಸಿಟ್​ಗಳ ಮೇಲೆ ಇನ್ಷೂರೆನ್ಸ್ ಕವರ್ ಒದಗಿಸುತ್ತದೆ.

ಇದನ್ನೂ ಓದಿ: Bank deposit insurance: ಬ್ಯಾಂಕ್​ ಠೇವಣಿ ಮೇಲೆ ಗರಿಷ್ಠ ಇನ್ಷೂರೆನ್ಸ್ 5 ಲಕ್ಷ ರೂ.; ಅದಕ್ಕೂ ಹೆಚ್ಚು ಮೊತ್ತಕ್ಕೆ ಕವರೇಜ್ ಹೇಗೆ?

ಇದನ್ನೂ ಓದಿ: Insurance On Deposits: ಬ್ಯಾಂಕ್​ಗಳ ಹಣಕಾಸು ನಿರ್ಬಂಧ, ವಂಚನೆಯಾದಲ್ಲಿ 90 ದಿನದೊಳಗೆ 5 ಲಕ್ಷ ರೂ. ಇನ್ಷೂರೆನ್ಸ್

(DICGC Act Amendment Bill Passed In Lok Sabha Here Is An Explainer About Latest Benefits)

Published On - 12:39 pm, Tue, 10 August 21