ನವದೆಹಲಿ, ನವೆಂಬರ್ 18: ಈ ಹಣಕಾಸು ವರ್ಷದಲ್ಲಿ (2024-25) 22 ಲಕ್ಷ ಕೋಟಿ ರೂ ಮೊತ್ತದಷ್ಟು ನೇರ ತೆರಿಗೆ ಸಂಗ್ರಹ ಆಗಬೇಕು ಎನ್ನುವ ಸರ್ಕಾರದ ನಿರೀಕ್ಷೆ ನೆರವೇರಬಹುದು ಎಂದು ಸಿಬಿಡಿಟಿ ಅಧ್ಯಕ್ಷ ರವಿ ಅಗರ್ವಾಲ್ ಹೇಳಿದ್ದಾರೆ. ಇಂಡಿಯಾ ಇಂಟರ್ನ್ಯಾಷನಲ್ ಟ್ರೇಡ್ ಫೇರ್ 2024 ಕಾರ್ಯಕ್ರಮದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ರವಿ ಅಗರ್ವಾಲ್, ‘ಬಜೆಟ್ನಲ್ಲಿ ನಿಗದಿ ಮಾಡಲಾಗಿರುವ ಗುರಿಗಿಂತಲೂ ಹೆಚ್ಚೇ ತೆರಿಗೆ ಸಂಗ್ರಹ ಆಗುವ ಟ್ರೆಂಡ್ ಇದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
2024-25ರ ಹಣಕಾಸು ವರ್ಷದಲ್ಲಿ 22.07 ಲಕ್ಷ ಕೋಟಿ ರೂ ಮೊತ್ತದ ನೇರ ತೆರಿಗೆಗಳು ಸಂಗ್ರಹವಾಗಬೇಕು ಎಂದು ಸರ್ಕಾರ ಗುರಿ ಇಟ್ಟಿತ್ತು. ಇದರಲ್ಲಿ 10.20 ಲಕ್ಷ ಕೋಟಿ ರೂ ಕಾರ್ಪೊರೇಟ್ ತೆರಿಗೆ, 11.87 ಲಕ್ಷ ಕೋಟಿ ರೂ ವೈಯಕ್ತಿಕ ಆದಾಯ ತೆರಿಗೆಯ ಗುರಿಯನ್ನೂ ಒಳಗೊಳ್ಳಲಾಗಿದೆ.
ಇದನ್ನೂ ಓದಿ: ದಿನಸಿ ಅಂಗಡಿಗಳಿಗೆ ಮುಳುವಾಗುತ್ತಿವೆಯಾ ಕ್ವಿಕ್ ಕಾಮರ್ಸ್ ಕಂಪನಿಗಳು? ರಾಜಕೀಯ ಅಪಾಯ ಗುರುತಿಸಿದ ಉದ್ಯಮಿ ಉದಯ್ ಕೋಟಕ್
ಸದ್ಯ ಈ ವರ್ಷ ಇಲ್ಲಿಯವರೆಗೂ (ಏಪ್ರಿಲ್ 1ರಿಂದ ನವೆಂಬರ್ 10ರವರೆಗೆ) ಸಂಗ್ರಹವಾಗಿರುವ ನೇರ ತೆರಿಗೆಗಳ ಮೊತ್ತ 12 ಲಕ್ಷ ಕೋಟಿ ರೂ ಗಡಿ ಮುಟ್ಟಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 15ರಷ್ಟು ಹೆಚ್ಚು ಸಂಗ್ರಹ ಈವರೆಗೆ ಆಗಿದೆ. ಹಣಕಾಸು ವರ್ಷ ಮುಕ್ತಾಯಕ್ಕೆ ಇನ್ನೂ ಸುಮಾರು ಐದು ತಿಂಗಳು ಕಾಲಾವಕಾಶ ಇದ್ದು, ಅಷ್ಟರೊಳಗೆ 22 ಲಕ್ಷ ಕೋಟಿ ರೂ ತೆರಿಗೆ ಸಂಗ್ರಹದ ಗುರಿ ತಲುಪುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.
ನವೆಂಬರ್ 10ರವರೆಗೆ ಸಂಗ್ರಹವಾಗಿರುವ ನೇರ ತೆರಿಗೆಗಳ ಮೊತ್ತ 12.11 ಲಕ್ಷ ಕೋಟಿ ರು. ಇದರಲ್ಲಿ ಕಾರ್ಪೊರೇಟ್ ತೆರಿಗೆಯೇ 5.10 ಲಕ್ಷ ಕೋಟಿ ರೂ ಇದೆ. ಪರ್ಸನಲ್ ಇನ್ಕಮ್ ಟ್ಯಾಕ್ಸ್ ಸೇರಿದಂತೆ ಇತರ ಕಾರ್ಪೊರೇಟರ ತೆರಿಗೆ 6.62 ಲಕ್ಷ ಕೋಟಿ ರೂನಷ್ಟಿದೆ. ಈ ಪೈಕಿ ಷೇರುಗಳ ವಹಿವಾಟಿಗೆ ವಿಧಿಸಲಾಗುವ ಸೆಕ್ಯೂರಿಟೀಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್ ಮೊತ್ತವೇ 35,923 ಕೋಟಿ ರೂನಷ್ಟು ಕಲೆಕ್ಟ್ ಆಗಿದೆ.
ಇದನ್ನೂ ಓದಿ: ಉಂಡೂ ಹೋದ ಕೊಂಡೂ ಹೋದ ಅಲ್ಲ ಪಿಎಲ್ಐ ಸ್ಕೀಮ್; 19 ಪಟ್ಟು ಹೆಚ್ಚು ಆದಾಯ ತಂದುಕೊಟ್ಟಿದೆ ಸ್ಮಾರ್ಟ್ಫೋನ್ ಉದ್ಯಮ
ಇದೇ ವೇಳೆ, ಆದಾಯ ತೆರಿಗೆಯ ಸಂಗ್ರಹ ವ್ಯವಸ್ಥೆಯನ್ನು ಸುಧಾರಿಸಲು ಇಲಾಖೆ ಪ್ರಯತ್ನ ಮುಂದುವರಿಸಿದೆ. ವಿದೇಶದಲ್ಲಿರುವ ಆಸ್ತಿ ಮತ್ತು ಅಲ್ಲಿಂದ ಬರುವ ಆದಾಯವನ್ನು ಬಹಿರಂಗಪಡಿಸಬೇಕೆಂದು ಇಲಾಖೆಯು ತೆರಿಗೆ ಪಾವತಿದಾರರಿಗೆ ಅಭಿಯಾನದ ಮೂಲಕ ಮನವಿ ಮಾಡುತ್ತಿದೆ. ವಿದೇಶದ ಆಸ್ತಿ ಇದ್ದರೆ ಪರಿಷ್ಕೃತ ರಿಟರ್ನ್ ಸಲ್ಲಿಸಲು ಡಿಸೆಂಬರ್ 31ರವರೆಗೂ ಕಾಲಾವಕಾಶ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ