AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಂಡೂ ಹೋದ ಕೊಂಡೂ ಹೋದ ಅಲ್ಲ ಪಿಎಲ್​ಐ ಸ್ಕೀಮ್; 19 ಪಟ್ಟು ಹೆಚ್ಚು ಆದಾಯ ತಂದುಕೊಟ್ಟಿದೆ ಸ್ಮಾರ್ಟ್​ಫೋನ್ ಉದ್ಯಮ

PLI scheme success: ಉತ್ಪಾದನಾ ಜೋಡಿತ ಪ್ರೋತ್ಸಾಹಕ ಯೋಜನೆಯಾದ ಪಿಎಲ್​ಐ ಸ್ಕೀಮ್ ಸಾಕಷ್ಟು ಯಶಸ್ವಿ ಆಗುತ್ತಿರುವ ದಟ್ಟ ಸೂಚನೆ ಇದೆ. ಸ್ಮಾರ್ಟ್​ಫೋನ್ ಪಿಎಲ್​ಐ ಸ್ಕೀಮ್​ನಲ್ಲಿ ಸರ್ಕಾರ ಮಾಡಿರುವ ವೆಚ್ಚಕ್ಕೆ ಪ್ರತಿಯಾಗಿ 19 ಪಟ್ಟು ಹೆಚ್ಚು ಲಾಭ ತಂದಿರುವುದು ಗೊತ್ತಾಗಿದೆ. ನಾಲ್ಕು ವರ್ಷದ ಅವಧಿಯಲ್ಲಿ ಸರ್ಕಾರ 5,800 ಕೋಟಿ ರೂ ವ್ಯಯಿಸಿದೆ. ಸುಂಕ, ಜಿಎಸ್​ಟಿ ಇತ್ಯಾದಿಯಿಂದ ಸರ್ಕಾರಕ್ಕೆ 1.10 ಲಕ್ಷ ಕೋಟಿ ರೂ ಲಾಭ ಬಂದಿದೆ.

ಉಂಡೂ ಹೋದ ಕೊಂಡೂ ಹೋದ ಅಲ್ಲ ಪಿಎಲ್​ಐ ಸ್ಕೀಮ್; 19 ಪಟ್ಟು ಹೆಚ್ಚು ಆದಾಯ ತಂದುಕೊಟ್ಟಿದೆ ಸ್ಮಾರ್ಟ್​ಫೋನ್ ಉದ್ಯಮ
ಸ್ಮಾರ್ಟ್​ಫೋನ್ ಪಿಎಲ್​ಐ ಸ್ಕೀಮ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 18, 2024 | 4:55 PM

Share

ನವದೆಹಲಿ, ನವೆಂಬರ್ 18: ದೇಶದಲ್ಲಿ ಉತ್ಪಾದನಾ ವಲಯಕ್ಕೆ ಪುಷ್ಟಿ ಕೊಡಲೆಂದು ಸರ್ಕಾರ ರೂಪಿಸಿರುವ ಪಿಎಲ್​ಐ ಸ್ಕೀಮ್​ಗಳ ಬಗ್ಗೆ ಸಾಕಷ್ಟು ಟೀಕೆಗಳು ಕೇಳುತ್ತವೆ. ಕಂಪನಿಗಳು ಸರ್ಕಾರದಿಂದ ಸಬ್ಸಿಡಿ ಪಡೆದು ಲಾಭ ಮಾಡಿಕೊಳ್ಳುತ್ತವೆ. ಸಬ್ಸಿಡಿ ಬರುವವರೆಗೂ ಭಾರತದಲ್ಲಿ ಇರುತ್ತವೆ ಎಂದು ಕೆಲವು ಆರ್ಥಿಕ ತಜ್ಞರು ಲೇವಡಿ ಮಾಡಿರುವುದುಂಟು. ಆದರೆ, ದತ್ತಾಂಶಗಳು ಬೇರೆಯೇ ವಾಸ್ತವ ಸ್ಥಿತಿಯನ್ನು ಬಿಚ್ಚಿಟ್ಟಿವೆ. ಪಿಎಲ್​ಐ ಸ್ಕೀಮ್​ಗಳು ಭಾರತದ ಮ್ಯಾನುಫ್ಯಾಕ್ಚರಿಂಗ್ ವಲಯಕ್ಕೆ ಪುಷ್ಟಿ ನೀಡಿರುವುದಷ್ಟೇ ಅಲ್ಲ, ಸರ್ಕಾರ ಹಾಕಿದ ಬಂಡವಾಳಕ್ಕೆ ಸಾಕಷ್ಟು ಲಾಭವನ್ನೂ ತಂದುಕೊಟ್ಟಿವೆ ಎನ್ನಲಾಗಿದೆ. ಅದರಲ್ಲೂ ಸ್ಮಾರ್ಟ್​ಫೋನ್ ಪಿಎಲ್​ಐ ಸ್ಕೀಮ್ 19 ಪಟ್ಟು ಹೆಚ್ಚು ಲಾಭ ತಂದಿದೆ.

ಕೇಂದ್ರ ಹಣಕಾಸು ಸಚಿವಾಲಯ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಕಳೆದ ವಾರ ಸಲ್ಲಿರುವ ವರದಿಯಲ್ಲಿನ ಮಾಹಿತಿ ಪ್ರಕಾರ ಕಳೆದ ನಾಲ್ಕು ಹಣಕಾಸು ವರ್ಷದಲ್ಲಿ ಸ್ಮಾರ್ಟ್​ಫೋನ್ ಪಿಎಲ್​ಐ ಸ್ಕೀಮ್ ಅಡಿಯಲ್ಲಿ ಎಷ್ಟು ಪ್ರೋತ್ಸಾಹಕ ನಿಧಿ ಬಿಡುಗಡೆ ಮಾಡಲಾಗಿದೆಯೋ ಅದಕ್ಕೆ 19 ಪಟ್ಟು ಹೆಚ್ಚು ಮೌಲ್ಯವನ್ನು ಆ ಉದ್ಯಮ ತಂದುಕೊಟ್ಟಿದೆಯಂತೆ.

ಇದನ್ನೂ ಓದಿ: ಜಿ20 ಗುಂಪಲ್ಲಿ ಭಾರತವೇ ಸೂಪರ್​ಸ್ಟಾರ್; 2024ರ ಜಿಡಿಪಿ ಬೆಳವಣಿಗೆಯಲ್ಲಿ ಭಾರತ ನಂ. 1

ಈ ನಾಲ್ಕು ವರ್ಷದಲ್ಲಿ ಸ್ಮಾರ್ಟ್​ಫೋನ್ ಪಿಎಲ್​ಐ ಸ್ಕೀಮ್ ಅಡಿಯಲ್ಲಿ ಸರ್ಕಾರ 5,800 ಕೋಟಿ ರೂ ಇನ್ಸೆಂಟಿವ್ಸ್ ವಿತರಿಸಿದೆ. ಈ ಅವಧಿಯಲ್ಲಿ ಸ್ಮಾರ್ಟ್​ಫೋನ್ ಉದ್ಯಮವು 12.55 ಲಕ್ಷ ಕೋಟಿ ರೂ ಮೌಲ್ಯದ ಉತ್ಪನ್ನಗಳನ್ನು ತಯಾರಿಸಿದೆ. ಇದರಿಂದ ಸರ್ಕಾರದ ಖಜಾನೆಗೆ ಬರೋಬ್ಬರಿ 1.10 ಲಕ್ಷ ಕೋಟಿ ರೂ ಆದಾಯ ಸಿಕ್ಕಿದೆ ಎಂದು ಇಂಡಿಯಾ ಸೆಲೂಲಾರ್ ಅಂಡ್ ಎಲೆಕ್ಟ್ರಾನಿಕ್ಸ್ ಅಸೋಸಿಯೇಶನ್ ಸಂಸ್ಥೆ ಹೇಳಿದೆ. ಅಂದರೆ, ಸರ್ಕಾರವು ತಾನು ಮಾಡಿದ ವೆಚ್ಚದಿಂದ 19 ಪಟ್ಟು ಹೆಚ್ಚು ಆದಾಯ ಪಡೆದಿರುವುದು ಇದರಿಂದ ತಿಳಿದುಬರುತ್ತದೆ.

ಸ್ಮಾರ್ಟ್​ಫೋನ್ ಪಿಎಲ್​ಐ ಸ್ಕೀಮ್ ಅಡಿಯಲ್ಲಿ 10 ಕಂಪನಿಗಳನ್ನು ಇನ್ಸೆಂಟಿವ್​ಗೆ ಆಯ್ಕೆ ಮಾಡಲಾಗಿತ್ತು. ಐದು ಜಾಗತಿಕ ಕಂಪನಿಗಳಾದರೆ, ಇನ್ನೈದು ಸ್ಥಳೀಯ ಕಂಫನಿಗಳು. ವರ್ಷಕ್ಕೆ ಸಮಾರು 41,000 ಕೋಟಿ ರೂ ಅನುದಾನವನ್ನು ಘೋಷಿಸಲಾಯಿತು. ನಿಗದಿತ ಉತ್ಪಾದನಾ ಗುರಿ ಮುಟ್ಟಿದ ಕಂಪನಿಗಳಿಗೆ ಪ್ರೋತ್ಸಾಹಕ ಧನ ನೀಡಲಾಗಿದೆ.

ಇದನ್ನೂ ಓದಿ: ಹೂಡಿಕೆದಾರರಿಗೆ ಅಮೆರಿಕ ಬಿಟ್ಟರೆ ಭಾರತವೇ ಮೊದಲ ಆದ್ಯತೆ: ಸಿಟಿ ಗ್ರೂಪ್ ವೈಸ್ ಛೇರ್ಮನ್ ವಿಶ್ವಾಸ್ ರಾಘವನ್

ಫಾಕ್ಸ್​ಕಾನ್, ಪೆಗಾಟ್ರಾನ್, ಟಾಟಾ ಎಲೆಕ್ಟ್ರಾನಿಕ್ಸ್, ಸ್ಯಾಮ್ಸುಂಗ್ ಮೊದಲಾದ ಕೆಲ ಕಂಪನಿಗಳು ಹೆಚ್ಚಿನ ಪ್ರೋತ್ಸಾಹಕ ಹಣ ಪಡೆದಿವೆ. ಭಾರತೀಯ ಕಂಪನಿಗಳ ಪೈಕಿ ಡಿಕ್ಸಾನ್ ಟೆಕ್ನಾಲಜೀಸ್ ಮಾತ್ರವೇ ಗುರಿ ಮುಟ್ಟಿ ಇನ್ಸೆಂಟಿವ್ ಪಡೆಯುವಲ್ಲಿ ಯಶಸ್ವಿಯಾಗಿರುವುದು.

2020-21ರಿಂದ 2023-24ರ ಅವಧಿಯಲ್ಲಿ ಭಾರತದ ಸ್ಮಾರ್ಟ್​ಫೋನ್ ಉದ್ಯಮವು 12.55 ಲಕ್ಷ ಕೋಟಿ ರೂ ಮೌಲ್ಯದ ಉತ್ಪನ್ನಗಳನ್ನು ತಯಾರಿಸಿವೆ. ಮೊಬೈಲ್​ನ ಬಿಡಿಭಾಗಗಳ ಮೇಲಿನ ಸುಂಕದಿಂದ ಸರ್ಕಾರಕ್ಕೆ 48,000 ಕೋಟಿ ರೂ ಆದಾಯ ಸಿಕ್ಕಿದೆ. ಜಿಎಸ್​ಟಿ ಮೂಲಕ 62,000 ಕೋಟಿ ರೂ ಹಣವನ್ನು ಸರ್ಕಾರದ ಖಜಾನೆಗೆ ಸಲ್ಲಿಕೆ ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ