ನವದೆಹಲಿ, ಫೆಬ್ರುವರಿ 11: ಭಾರತದಲ್ಲಿ ನಿವ್ವಳ ನೇರ ತೆರಿಗೆ ಸಂಗ್ರಹ (Net Direct Taxes) ಈ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ (ಫೆ. 10) 15.60 ಲಕ್ಷ ರೂ ಆಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ತೆರಿಗೆ ಸಂಗ್ರಹದಲ್ಲಿ ಶೇ. 20.25ರಷ್ಟು ಹೆಚ್ಚಿದೆ. ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ಸಿಬಿಡಿಟಿ ಇಂದು ಭಾನುವಾರ (ಫೆ. 11) ಬಿಡುಗಡೆ ಮಾಡಿದ ವರದಿಯಲ್ಲಿ ಈ ಮಾಹಿತಿ ಇದೆ. 2023ರ ಏಪ್ರಿಲ್ 1ರಿಂದ 2024ರ ಫೆಬ್ರುವರಿ 10ರವರೆಗಿನ ಅಂಕಿ ಅಂಶ ಇದು. ಇನ್ನು, ನಿವ್ವಳ ತೆರಿಗೆ ಸಂಗ್ರಹದಲ್ಲಿ ಮಾತ್ರವಲ್ಲ ಒಟ್ಟು ನೇರ ತೆರಿಗೆ ಅಥವಾ ಗ್ರಾಸ್ ಡೈರೆಕ್ಟ್ ಟ್ಯಾಕ್ಸ್ ಸಂಗ್ರಹ 18.38 ಲಕ್ಷ ಕೋಟಿ ರೂ ಆಗಿದೆ. ಇದರಲ್ಲೂ ಕೂಡ ಶೇ. 17.30ಯಷ್ಟು ಹೆಚ್ಚಳವಾಗಿರುವುದು ಈ ವರದಿಯಿಂದ ತಿಳಿದು ಬಂದಿದೆ.
2023-24ರ ಹಣಕಾಸು ವರ್ಷದಲ್ಲಿ ಮಾಡಲಾಗಿದ್ದ ಪರಿಷ್ಕೃತ ಅಂದಾಜಿನ ಶೇ. 80.23ರಷ್ಟು ನಿವ್ವಳ ನೇರ ತೆರಿಗೆ ಈವರೆಗೆ ಸಂಗ್ರಹವಾಗಿದೆ. ಈ ಹಣಕಾಸು ವರ್ಷ ಮುಗಿಯಲು ಮಾರ್ಚ್ 31ರವರೆಗೆ ಸಮಯ ಇದ್ದು, ನೇರ ತೆರಿಗೆ ಸಂಗ್ರಹವು ನಿರೀಕ್ಷೆಗಿಂತ ಹೆಚ್ಚಿರುವ ಸಾಧ್ಯತೆ ಇದೆ.
‘ನೇರ ತೆರಿಗೆ ಸಂಗ್ರಹ ಸ್ಥಿರವಾಗಿ ಏರುತ್ತಿದೆ. 2023ರ ಫೆಬ್ರುವರಿ 10ರವರೆಗೆ ಒಟ್ಟು ನೇರ ತೆರಿಗೆ ಸಂಗ್ರಹ 18.38 ಲಕ್ಷ ಕೋಟಿ ರೂ ಆಗಿದೆ. ಕಾರ್ಪೊರೇಟ್ ಆದಾಯ ತೆರಿಗೆ (ಸಿಐಟಿ) ಮತ್ತು ವೈಯಕ್ತಿಕ ಆದಾಯ ತೆರಿಗೆ (ಪಿಐಟಿ) ಸಂಗ್ರಹದಲ್ಲೂ ನಿರಂತರ ಹೆಚ್ಚಳ ಕಂಡುಬಂದಿದೆ’ ಎಂದು ಸಿಬಿಡಿಟಿ ವರದಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಇಪಿಎಫ್ಒ ಬಡ್ಡಿದರ ಶೇ. 8.25ಕ್ಕೆ ಏರಿಕೆ; ಎಲ್ಲಾ ಸ್ಮಾಲ್ ಫೈನಾನ್ಸ್ ಸ್ಕೀಮ್ಗಳಿಗಿಂತಲೂ ಪಿಎಫ್ ಠೇವಣಿಗೆ ಹೆಚ್ಚು ಬಡ್ಡಿ
ಕಾರ್ಪೊರೇಟ್ ಇನ್ಕಮ್ ಟ್ಯಾಕ್ಸ್ ಸಂಗ್ರಹದಲ್ಲಿ ಶೇ. 13.57ರಷ್ಟು ಹೆಚ್ಚಳವಾದರೆ, ಪರ್ಸನಲ್ ಇನ್ಕಮ್ ಟ್ಯಾಕ್ಸ್ ಸಂಗ್ರಹ ಶೇ. 26.91ರಷ್ಟು ಏರಿದೆ. ಒಟ್ಟು ನೇರ ತೆರಿಗೆ ಸಂಗ್ರಹದ ಪೈಕಿ ಈ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ 2.77 ಲಕ್ಷ ಕೋಟಿ ರೂನಷ್ಟು ರೀಫಂಡ್ಗಳನ್ನು ಸರ್ಕಾರ ನೀಡಿದೆ.
2022-23ರ ಅವಧಿಯಲ್ಲಿ ಐಟಿ ರಿಟರ್ನ್ಸ್ ಫೈಲ್ ಆದ ಸಂಖ್ಯೆ 7.78ರಷ್ಟು. ಕಳೆದ 10 ವರ್ಷದ ಅವಧಿಯಲ್ಲಿ ಐಟಿಆರ್ ಸಲ್ಲಿಕೆ ಸಂಖ್ಯೆ ಎರಡು ಪಟ್ಟು ಹೆಚ್ಚಾಗಿದೆ. 2013-14ರ ಹಣಕಾಸು ವರ್ಷದಲ್ಲಿ ಕೇವಲ 3.8 ಕೋಟಿ ಮಂದಿ ಮಾತ್ರ ಆದಾಯ ತೆರಿಗೆ ಪಾವತಿಸಿದ್ದರು ಎಂಬುದು ಸೆಂಟ್ರಲ್ ಡೈರೆಕ್ಟ್ ಟ್ಯಾಕ್ಸ್ ಬೋರ್ಡ್ನ ವರದಿಯಲ್ಲಿನ ಅಂಕಿ ಅಂಶಗಳು ಹೇಳುತ್ತವೆ.
ಇದನ್ನೂ ಓದಿ: ಗವರ್ನ್ಮೆಂಟ್ ಬಾಂಡ್ಗಳಲ್ಲಿ ಹಣ ಹೂಡಿಕೆ ಮಾಡುವುದು ಸರಿಯಾದ ಮಾರ್ಗವಾ? ಈ ವಿಷಯ ತಿಳಿದಿರಲಿ
ಇನ್ನು, ಕಳೆದ 10 ವರ್ಷದ ಅವಧಿಯಲ್ಲಿ ನೇರ ತೆರಿಗೆ ಸಂಗ್ರಹದಲ್ಲಿ ಶೇ. 160.52ರಷ್ಟು ಹೆಚ್ಚಾಗಿದೆ. 2013-14ರಲ್ಲಿ ನಿವ್ವಳ ನೇರ ತೆರಿಗೆ ಸಂಗ್ರಹ 6.38 ಲಕ್ಷ ಕೋಟಿ ರೂ ಇತ್ತು. 2022-23ರಲ್ಲಿ ಇದರ ಪ್ರಮಾಣವು 16.63 ಲಕ್ಷ ಕೋಟಿ ರೂಗೆ ಏರಿದೆ ಎಂದು ಹೇಳಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ