ಬೆಂಗಳೂರು: ಗೃಹಬಳಕೆ ಮತ್ತು ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಬುಧವಾರದಿಂದ (ಜುಲೈ 6) ಹೆಚ್ಚಿಸಲಾಗಿದೆ. ಗೃಹಬಳಕೆ ಸಿಲಿಂಡರ್ ದರ ₹ 50 ಹೆಚ್ಚಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಿಲಿಂಡರ್ ಬೆಲೆಯು ಈವರೆಗೆ ₹ 1,003 ಇತ್ತು. ಇನ್ನು ಮುಂದೆ ₹ 1,053 ಆಗಲಿದೆ. ಬೆಂಗಳೂರಿನಲ್ಲಿ ಈವರೆಗೆ ₹ 1,005.50 ಇತ್ತು. ಇನ್ನು ಮುಂದೆ ಇದು ₹ 1,055.50 ಆಗಲಿದೆ. ಕಳೆದ ಏಪ್ರಿಲ್ ತಿಂಗಳಲ್ಲಿ ಸಿಲಿಂಡರ್ ಬೆಲೆಯನ್ನು ₹ 53.5ರಷ್ಟು ಹೆಚ್ಚಿಸಿತ್ತು.
ಭಾರತದ ವಿವಿಧ ಪ್ರಮುಖ ನಗರಗಳಲ್ಲಿ 14.2 ಕೆಜಿ ತೂಕದ, ಸಬ್ಸಿಡಿ ರಹಿತ, ಗೃಹಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆಯು ಹೀಗಿದೆ. ದೆಹಲಿ; ₹ 1,053, ಮುಂಬೈ; ₹ 1,052, ಕೊಲ್ಕತ್ತಾ; ₹ 1,079, ಚೆನ್ನೈ; ₹ 1068.50.
5 ಕೆಜಿ ತೂಕದ ಗೃಹಬಳಕೆ ಸಿಲಿಂಡರ್ ದರವನ್ನೂ ಪೆಟ್ರೋಲಿಯಂ ಕಂಪನಿಗಳು (Oil Marketing Companies – OMCs) ಹೆಚ್ಚಿಸಿವೆ. ಪ್ರತಿ 5 ಕೆಜಿ ತೂಕದ ಸಿಲಿಂಡರ್ ಬೆಲೆಯು ₹ 18 ಹೆಚ್ಚಾಗಿದೆ. 19 ಕೆಜಿ ತೂಕದ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯು ₹ 8.50 ಹೆಚ್ಚಾಗಿದೆ. ಈ ಹಿಂದೆ ಮೇ 19ರಂದು ವಾಣಿಜ್ಯ ಬಳಕೆ ಸಿಲಿಂಡರ್ಗಳ ಬೆಲೆ ₹ 3ರಷ್ಟು ಹೆಚ್ಚಾಗಿತ್ತು. ಅದಕ್ಕೂ ಮೊದಲು ಮೇ 7ರಂದು ₹ 50 ಹೆಚ್ಚಾಗಿತ್ತು.
ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯು ಜುಲೈ 1ರಂದು ₹ 198 ಇಳಿಕೆ ಕಂಡಿತ್ತು. ಈ ಇಳಿಕೆಯ ನಂತರ ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯು ₹ 2021 ಆಗಿತ್ತು. ಪ್ರಸ್ತುತ ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯು ₹ 2029.50 ಇದೆ.
Published On - 9:15 am, Wed, 6 July 22