Crude Oil Price: ಜಾಗತಿಕ ಆರ್ಥಿಕ ಹಿಂಜರಿತದ ಆತಂಕದಲ್ಲಿ ಬ್ಯಾರೆಲ್​ಗೆ 10 ಯುಎಸ್​ ಡಾಲರ್ ಇಳಿಕೆ ಕಂಡ ತೈಲ

ಕಚ್ಚಾ ತೈಲ ಬೆಲೆಯು ಬ್ಯಾರೆಲ್​ಗೆ 10 ಯುಎಸ್​ಡಿ ಇಳಿಕೆ ಆಗಿದೆ. ಇದರ ಹಿಂದಿನ ಕಾರಣಗಳೇನು ಎಂಬುದನ್ನು ವಿಶ್ಲೇಷಣಾತ್ಮಕವಾಗಿ ನಿಮ್ಮೆದುರು ಇಡಲಾಗಿದೆ.

Crude Oil Price: ಜಾಗತಿಕ ಆರ್ಥಿಕ ಹಿಂಜರಿತದ ಆತಂಕದಲ್ಲಿ ಬ್ಯಾರೆಲ್​ಗೆ 10 ಯುಎಸ್​ ಡಾಲರ್ ಇಳಿಕೆ ಕಂಡ ತೈಲ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Jul 06, 2022 | 11:59 AM

ತೈಲ (Oil) ಬೆಲೆ ಬ್ಯಾರೆಲ್​ಗೆ 10 ಯುಎಸ್​ಡಿ ಮಂಗಳವಾರ ಇಳಿಕೆ ಆಗಿದೆ. ಜಾಗತಿಕ ಆರ್ಥಿಕ ಮುಗ್ಗಟ್ಟು ಎದುರಾಗಬಹುದು ಹಾಗೂ ಅದರಿಂದ ಬೇಡಿಕೆ ಕಡಿಮೆ ಆಗಬಹುದು ಎಂಬ ಆತಂಕದಲ್ಲಿ ಈ ಬೆಳವಣಿಗೆ ಆಗಿದೆ. ಇದರ ಜತೆಗೆ ನಾರ್ವೇಯನ್ ಆಯಿಲ್ ಅಂಡ್ ಗ್ಯಾಸ್ ನೌಕರರು ಮುಷ್ಕರ ನಡೆಸುತ್ತಿರುವುದರಿಂದ ರಫ್ತನ್ನು ಕಡಿಮೆ ಮಾಡುತ್ತದೆ ಮತ್ತು ಪೂರೈಕೆ ಕೊರತೆಯ ಕಡೆಗೆ ಪರಿಣಾಮ ಬೀರುತ್ತದೆ. ಜಾಗತಿಕ ಬೆಂಚ್​ಮಾರ್ಕ್ ಬ್ರೆಂಟ್ ಕಚ್ಚಾ ತೈಲ 10.65 ಯುಎಸ್​ಡಿ ಅಥವಾ ಶೇ 9.4ರಷ್ಟು ಕುಸಿದು, ಬ್ಯಾರೆಲ್​ಗೆ 102.95 ತಲುಪಿತ್ತು. ಇದು EDT ಮಧ್ಯಾಹ್ನ 12.30ರ ಸಮಯದ ಬೆಲೆ ಆಗಿತ್ತು. ಯುಎಸ್​ ವೆಸ್ಟ್ ಟೆಕ್ಸಾಸ್ ಇಂಟರ್​ಮೀಡಿಯೆಟ್ (WTI) ಕಚ್ಚಾ ತೈಲ 9.36 ಯುಎಸ್​ಡಿ ಅಥವಾ ಶೇ 8.06ರಷ್ಟು ಕುಸಿದು, ಶುಕ್ರವಾರದ ಕೊನೆಗೆ ಬ್ಯಾರೆಲ್​ಗೆ 99.07 ಡಾಲರ್ ಮುಟ್ಟಿತ್ತು. ಸೋಮವಾರದಂದು (ಜುಲೈ 4) ಅಮೆರಿಕದಲ್ಲಿ ರಜಾ ದಿನ ಇತ್ತಾದ್ದರಿಂದ WTI ಸೆಟ್ಲ್​ಮೆಂಟ್ ಇರಲಿಲ್ಲ.

“ಮಾರುಕಟ್ಟೆಯು ಬಿಗುವಾಗುತ್ತಿದೆ, ಆದರೆ ನಾವು ಇನ್ನೂ ಕಾರಣಗಳನ್ನು ಬಿಡಿಸುತ್ತಿದ್ದೇವೆ ಮತ್ತು ಪ್ರತಿ ಅಪಾಯದ ಆಸ್ತಿಯಿಂದ ದೂರ ಇರುವುದಕ್ಕೆ ಹಿಂಜರಿತದ ಭಯವನ್ನು ನೀವು ವಿವರಿಸುವ ಏಕೈಕ ಮಾರ್ಗವಾಗಿದೆ,” ಎಂದು ನ್ಯೂಯಾರ್ಕ್‌ನ ಮಿಜುಹೊದಲ್ಲಿನ ಎನರ್ಜಿ ಫ್ಯೂಚರ್ಸ್ ನಿರ್ದೇಶಕ ರಾಬರ್ಟ್ ಯಾಗರ್ ಹೇಳಿದ್ದಾರೆ. ಜತೆಗೆ, “ನೀವು ಒತ್ತಡವನ್ನು ಅನುಭವಿಸುತ್ತಿದ್ದೀರಿ,” ಎಂದಿದ್ದಾರೆ. ಈಕ್ವಿಟಿ ಜತೆಗೆ ತೈಲ ಫ್ಯೂಚರ್ಸ್ ಮುಳುಗಿದೆ. ಇದು ಯಾವಾಗಲೂ ಕಚ್ಚಾ ತೈಲದ ಸೂಚಕದಂತೆ ಹೂಡಿಕೆದಾರರಿಗೆ ಕಾಣಿಸುತ್ತದೆ. ವಿಶ್ವದಾದ್ಯಂತ ಕೇಂದ್ರ ಬ್ಯಾಂಕ್​ಗಳು ಹಣದುಬ್ಬರವನ್ನು ಮಿತಿಯಲ್ಲಿ ಇಡುವುದಕ್ಕೆ ಶ್ರಮಿಸುತ್ತಿರುವಾಗ ಆರ್ಥಿಕ ಹಿಂಜರಿತದ ಶಂಕಯಲ್ಲೇ ಹೂಡಿಕೆದಾರರಿದ್ದಾರೆ.

ಒಂದು ವೇಳೆ ಆರ್ಥಿಕ ಕುಸಿತವಾದಲ್ಲಿ ಇಂಧನ ಬೇಡಿಕೆ ಮೇಲೆ ಭಾರೀ ಪ್ರಭಾವ ಬೀರುತ್ತದೆ. ದೊಡ್ಡ ಮಟ್ಟದ ಇಳಿಕೆಯ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎನ್ನುತ್ತಾರೆ ವಿಶ್ಲೇಷಕರು. ಇನ್ನು ಸುರಕ್ಷತೆ ಎಂಬ ದೃಷ್ಟಿಯಿಂದ ಯುಎಸ್​ ಟ್ರೆಷರಿಗಳಿಗೆ ಹೆಚ್ಚಿರುವ ಬೇಡಿಕೆಯು ಡಾಲರ್ ಮೌಲ್ಯ ಶೇ 1.5ರಷ್ಟು ಮೇಲೇರಲು ಇಂಬು ನೀಡಿದೆ. ಈ ಕಾರಣಕ್ಕೆ ಗ್ರೀನ್​ಬ್ಯಾಕ್​ನಲ್ಲಿ ಡಾಲರ್ ಪಾರಮ್ಯ ಹೆಚ್ಚಾಗಿ, ಇತರ ಕರೆನ್ಸಿಯಲ್ಲಿ ತೈಲ ಖರೀದಿ ಮಾಡುವವರ ಪಾಲಿಗೆ ದುಬಾರಿ ಆಗಿದೆ. ಯುರೋ ವಲಯದಾದ್ಯಂತ ಉದ್ಯಮ ಪ್ರಗತಿ ಕಳೆದ ನಿಧಾನ ಆಗಿದ್ದರ ಹಿನ್ನೆಲೆಯಲ್ಲಿ ಯುರೋ ಕರೆನ್ಸಿ ಎರಡು ದಶಕದ ಕನಿಷ್ಠ ಮಟ್ಟವನ್ನು ಮುಟ್ಟಿದೆ. ಈ ತ್ರೈಮಾಸಿಕದಲ್ಲಿ ಯುರೋ ವಲಯ ಕುಸಿತ ಕಾಣಬಹುದು ಎಂಬುದನ್ನು ಸೂಚಿಸುತ್ತಿದೆ.

ಜೂನ್​ ತಿಂಗಳಲ್ಲಿ ದಕ್ಷಿಣ ಕೊರಿಯಾದಲ್ಲಿ ಹಣದುಬ್ಬರ ದರವು 24 ವರ್ಷಗಳ ಗರಿಷ್ಠ ಮಟ್ಟದಲ್ಲಿದೆ. ಆರ್ಥಿಕ ಬೆಳವಣಿಗೆ ನಿಧಾನಗತಿ ಮತ್ತು ತೈಲ ಬೇಡಿಕೆ ಮತ್ತಷ್ಟು ಆತಂಕ ಉಂಟುಮಾಡಿದೆ. ಇನ್ನು ಆಗಸ್ಟ್ ತಿಂಗಳ ಕಚ್ಚಾ ತೈಲ ಬೆಲೆಯನ್ನು ಏಷ್ಯನ್ ಖರೀದಿದಾರರಿಗೆ ಸೌದಿ ಅರೇಬಿಯಾ ದಾಖಲೆ ಮಟ್ಟಕ್ಕೆ ಹೆಚ್ಚಿಸಿದೆ. ಬಿಗಿಯಾದ ಪೂರೈಕೆ ಹಾಗೂ ಬೇಡಿಕೆ ಚಿಗಿತುಕೊಂಡಿರುವುದರ ಪರಿಣಾಮ ಇದಾಗಿದೆ. ಈ ಮಧ್ಯೆ ರಷ್ಯಾದ ಮಾಜಿ ಅಧ್ಯಕ್ಷ ಡಿಮಿಟ್ರಿ ಮೆಡ್ವಡೆವ್ ಮಾತನಾಡಿ, ರಷ್ಯನ್ ತೈಲದ ವಿಚಾರವಾಗಿ ಜಪಾನ್ ತೆಗೆದುಕೊಂಡಿರುವ ನಿರ್ಧಾರದ ಕಾರಣಕ್ಕೆ ತೈಲ ಬ್ಯಾರೆಲ್ ಬೆಲೆ 300ರಿಂದ 400 ಯುಎಸ್​ಡಿ ಆಗಬಹುದು ಎಂದಿದ್ದಾರೆ. ರಷ್ಯಾದಿಂದ ಆಮದು ಮಾಡಿಕೊಳ್ಳುವ ತೈಲಕ್ಕೆ ಅದರ ಈಗಿನ ಬೆಲೆಯ ಅರ್ಧದಷ್ಟು ಮಾತ್ರ ನೀಡಬೇಕು ಎಂಬ ಜಪಾನ್ ನಿರ್ಧಾರದದಿಂದ ತೈಲ ಪೂರೈಕೆ ಕಡಿಮೆ ಆಗಲಿದೆ ಎಂಬುದು ಮೆಡ್ವಡೆವ್ ಅಭಿಪ್ರಾಯ ಆಗಿದೆ.

ಕಳೆದ ವಾರ ಜಿ7 ನಾಯಕರು ರಷ್ಯಾದ ಫಾಸಿಲ್ ಫ್ಯುಯೆಲ್ ಆಮದಿನ ತಾತ್ಕಾಲಿಕ ಬೆಲೆ ಮೇಲೆ ಮಿತಿ ಹೇರುವ ಬಗ್ಗೆ ಒಪ್ಪಿಗೆ ಸೂಚಿಸಿದ್ದಾರೆ. ಉಕ್ರೇನ್​ನಲ್ಲಿ ರಷ್ಯಾ ನಡೆಸುತ್ತಿರುವ ದಾಳಿಗೆ ಹಣಕಾಸು ದೊರೆಯುವುದಕ್ಕೆ ಮಿತಿ ಹಾಕಬೇಕು ಎಂದು ನಿರ್ಧರಿಸಿದ್ದಾರೆ.

ಇದನ್ನೂ ಓದಿ: ಎಟಿಎಫ್, ಡೀಸೆಲ್, ಪೆಟ್ರೋಲ್ ರಫ್ತಿನ ಮೇಲೆ ಸರ್ಕಾರದ ತೆರಿಗೆ ಹೆಚ್ಚಳ; ದೇಶೀಯ ಕಚ್ಚಾ ತೈಲಕ್ಕೆ ಭಾರೀ ತೆರಿಗೆ