AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Team Building: ಎಲ್ಲ ಸಿಬ್ಬಂದಿಯನ್ನು ಖರ್ಚಿಲ್ಲದೆ ಎರಡು ವಾರಗಳ ಕಾಲ ಬಾಲಿ ಪ್ರವಾಸಕ್ಕೆ ಒಯ್ದ ಈ ಕಂಪೆನಿ ಬಗ್ಗೆಯೇ ಎಲ್ಲೆಲ್ಲೂ ಸುದ್ದಿ

ಆಸ್ಟ್ರೇಲಿಯಾದ ಜಾಹೀರಾತು ಏಜೆನ್ಸಿಯೊಂದು ತನ್ನ ತಂಡದ ಎಲ್ಲ ಉದ್ಯೋಗಿಗಳನ್ನು ಎರಡು ವಾರಗಳ ಕಾಲ ಉಚಿತವಾಗಿ ಬಾಲಿ ಪ್ರವಾಸಕ್ಕೆ ಕರೆದೊಯ್ದಿದೆ.

Team Building: ಎಲ್ಲ ಸಿಬ್ಬಂದಿಯನ್ನು ಖರ್ಚಿಲ್ಲದೆ ಎರಡು ವಾರಗಳ ಕಾಲ ಬಾಲಿ ಪ್ರವಾಸಕ್ಕೆ ಒಯ್ದ ಈ ಕಂಪೆನಿ ಬಗ್ಗೆಯೇ ಎಲ್ಲೆಲ್ಲೂ ಸುದ್ದಿ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jul 06, 2022 | 2:52 PM

Share

ವಿಶ್ವದಾದ್ಯಂತ ಇರುವ ಅನೇಕ ಕಾರ್ಪೊರೇಟ್​ ಕಂಪೆನಿಗಳ ಉದ್ಯೋಗಿಗಳು ಈಗ ಆಸ್ಟ್ರೇಲಿಯಾದ ಒಂದು ಕಂಪೆನಿ ಮತ್ತು ಅದರ ಉದ್ಯೋಗಿಗಳನ್ನು (Employees) ಹೊಟ್ಟೆಕಿಚ್ಚಿನಿಂದ ನೋಡುವಂತಾಗಿದೆ. ಅದಕ್ಕೆ ಕಾರಣವಾದರೂ ಏನು ಗೊತ್ತಾ? ಆಸ್ಟ್ರೇಲಿಯಾದ ಈ ಕಂಪೆನಿಯ ಹೆಸರು ಸೂಪ್ ಏಜೆನ್ಸಿ. ತನ್ನ ಸಂಪೂರ್ಣ ತಂಡವನ್ನು ಎರಡು ವಾರಗಳ ಕಾಲ ಬಾಲಿ ದ್ವೀಪದ ಪ್ರವಾಸಕ್ಕೆ ಕರೆದೊಯ್ದಿದೆ. ಆ ಪ್ರವಾಸದ ಎಲ್ಲ ಖರ್ಚನ್ನು ಕಂಪೆನಿಯೇ ಭರಿಸಿದೆ. ಸಿಡ್ನಿ ಮೂಲದ ಈ ಜಾಹೀರಾತು ಏಜೆನ್ಸಿ ತನ್ನ ಎಲ್ಲ ಸಿಬ್ಬಂದಿಯನ್ನು ಬಾಲಿ ದ್ವೀಪದ ಉಬುದ್​ನಲ್ಲಿನ ವಿಲಾಸಿ ವಿಲ್ಲಾಗಳಿಗೆ ಕಳೆದ ಮೇ ತಿಂಗಳಲ್ಲಿ ಕರೆದೊಯ್ದಿದೆ. ಆ ವಿಡಿಯೋವನ್ನು ಕಂಪೆನಿಯ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಉದ್ಯೋಗಿಗಳು ಹೈಕಿಂಗ್, ಸ್ನೋರ್​ಕೆಲ್ಲಿಂಗ್ ಮತ್ತು ಕ್ವಾಡ್​ ಬೈಕಿಂಗ್​ನಂಥ ಚಟುವಟಿಕೆಯಲ್ಲಿ ಪಾಲ್ಗೊಂಡಿರುವುದು ಕಂಡುಬರುತ್ತದೆ.

ಬಾಲಿಗೆ ತೆರಳಿದ್ದು ತಂಡವಾಗಿ ಮೊದಲ ವರ್ಕಿಂಗ್ ಹಾಲಿಡೇ ಎಂದು ವಿಡಿಯೋ ಒಟ್ಟುಗೂಡಿಸಿ ವಿವರಣೆ ನೀಡಲಾಗಿದೆ. ಈ ಬಗ್ಗೆ ಮ್ಯಾನೇಜಿಂಗ್ ಡೈರೆಕ್ಟರ್ ಕಾತ್ಯಾ ವಕುಲೆಂಕೋ ಡೇಲಿ ಮೇಲ್ ಜತೆಗೆ ಮಾತನಾಡಿ, ಬಾಲಿಗೆ ತೆರಳಿದ ಆ 14 ದಿನಗಳ ಪ್ರವಾಸ ತಂಡ ಕಟ್ಟುವ ಅತ್ಯುತ್ತಮ ಅನುಭವ ನೀಡಿತು ಎಂದಿದ್ದಾರೆ. “ಎಲ್ಲ ಸ್ಥಳಗಳಲ್ಲಿ ತಂಡವಾಗಿ ಒಟ್ಟಾಗಿ ಕೆಲಸ ಮಾಡುವುದು ಈಗ ಬಹಳ ಮುಖ್ಯ ಎಂದು ನಾನಂದುಕೊಳ್ಳುತ್ತೇನೆ, ಅದು ಕೆಲಸದ ಅವಧಿಯ ಒಳಗೆ ಹಾಗೂ ಆಚೆಗೆ ಎರಡಕ್ಕೂ ಅನ್ವಯಿಸುತ್ತದೆ,” ಎಂದಿದ್ದಾರೆ. ಕೊವಿಡ್-19 ನಮಗೆ ಕೆಲಸ ನಿರ್ವಹಿಸುವ ಹೊಸ ಮಾರ್ಗ ಕಲಿಸಿದೆ ಮತ್ತು ಮುಖ್ಯವಾಗಿ, ನಾವು ಎಲ್ಲಿಂದಲಾದರೂ ಕೆಲಸ ಮಾಡಬಹುದು. ಆದ್ದರಿಂದ ನಾವು ಅದನ್ನು ನಿಜವಾಗಲೂ ಮುಂದಿನ ಹಂತಕ್ಕೆ ಒಯ್ಯಲು ನಿರ್ಧರಿಸಿದೆವು,” ಎಂದು ಅವರು ಹೇಳಿದ್ದಾರೆ.

ಇದೊಂದು ಕೆಲಸದಲ್ಲಿನ ಪ್ರವಾಸವಾಗಿದ್ದರೂ ವಿವಿಧ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ಉದ್ಯೋಗಿಗಳಿಗೆ ಮೊದಲ ಬಾರಿ ಒಟ್ಟಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಇದರಿಂದ ಉತ್ಪಾದಕತೆ ಗರಿಷ್ಠ ಪ್ರಮಾಣದಲ್ಲಿ ಇರಲಿದೆ ಎಂದು ಕಂಪೆನಿಯ ಡಿಜಿಟಲ್ ಮಾರ್ಕೆಟಿಂಗ್ ಅಧಿಕಾರಿ ಕುಮಿ ಹೊ ಹೇಳಿದ್ದಾರೆ.

ಅಂದ ಹಾಗೆ ಮುಂದಿನ ಬಾರಿಗೂ ಇಂಥದ್ದೇ ಪ್ರವಾಸವನ್ನು ಯುರೋಪ್​ನಲ್ಲಿ ಮಾಡಲು ಸೂಪ್ ಏಜೆನ್ಸಿ ಕಂಪೆನಿಯು ಆಲೋಚಿಸುತ್ತಿದೆ.

ಇದನ್ನೂ ಓದಿ: Diwali Gift: ಈ ಕಂಪೆನಿಯಿಂದ ಉದ್ಯೋಗಿಗಳಿಗೆ ದೀಪಾವಳಿ ಉಡುಗೊರೆಯಾಗಿ ಎಲೆಕ್ಟ್ರಿಕ್ ಸ್ಕೂಟರ್