Closing Bell: ಭರ್ಜರಿ ಏರಿಕೆ ದಾಖಲಿಸಿದ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್, ನಿಫ್ಟಿ; ಒಎನ್ಜಿಸಿ ಷೇರು ಶೇ 5ರಷ್ಟು ಇಳಿಕೆ
ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಜುಲೈ 6ನೇ ತಾರೀಕಿನ ಬುಧವಾರದಂದು ಭರ್ಜರಿ ಏರಿಕೆಯನ್ನು ಕಂಡಿವೆ. ಪ್ರಮುಖವಾಗಿ ಗಳಿಕೆ ಮತ್ತು ಇಳಿಕೆ ಕಂಡ ಷೇರುಗಳ ವಿವರ ಇಲ್ಲಿದೆ.
ಭಾರತದ ಷೇರು ಮಾರುಕಟ್ಟೆ (Stock Market) ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಜುಲೈ 6ನೇ ತಾರೀಕಿನ ಬುಧವಾರದಂದು ಏರಿಕೆಯನ್ನು ದಾಖಲಿಸಿವೆ. ಇಂದಿನ ವ್ಯವಹಾರದಲ್ಲಿ ನಿಫ್ಟಿ 50 ಸೂಚ್ಯಂಕವು 178.90 ಪಾಯಿಂಟ್ಸ್ ಅಥವಾ ಶೇ 1.13ರಷ್ಟು ಏರಿಕೆ ದಾಖಲಿಸಿ, 15,989.80 ಪಾಯಿಂಟ್ಸ್ನಲ್ಲಿ ದಿನಾಂತ್ಯ ಕಂಡಿತು. ಇನ್ನು ಬಿಎಸ್ಇ ಸೆನ್ಸೆಕ್ಸ್ 616.62 ಪಾಯಿಂಟ್ಸ್ ಅಥವಾ ಶೇ 1.16ರಷ್ಟು ಹೆಚ್ಚಳ ಕಂಡು, 53,750.97 ಪಾಯಿಂಟ್ಸ್ನಲ್ಲಿ ವಹಿವಾಟು ಚುಕ್ತಾ ಮಾಡಿತು. ಈ ಹಿಂದಿನ ದಿನವಾದ ಜುಲೈ 5ನೇ ತಾರೀಕಿನ ಮಂಗಳವಾರದಂದು ಮಾರುಕಟ್ಟೆಯಲ್ಲಿ ಭಾರೀ ಏರಿಳಿತಕ್ಕೆ ಸಾಕ್ಷಿ ಆಗಿತ್ತು. ಇಂದಿನ ವಹಿವಾಟಿನಲ್ಲಿ ನಿಫ್ಟಿ 16 ಸಾವಿರ ಪಾಯಿಂಟ್ಸ್ಗಿಂತ ಮೇಲೆ ಕಾಣಿಸಿಕೊಂಡಿತಾದರೂ ಆ ಮಟ್ಟದಲ್ಲೇ ಉಳಿದುಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ. ಜಾಗತಿಕ ಮಟ್ಟದಲ್ಲಿ ಷೇರು ಮಾರುಕಟ್ಟೆಗಳ ವಹಿವಾಟು ಮಿಶ್ರ ಫಲಿತಾಂಶದಿಂದ ಕೂಡಿದೆ.
ಇನ್ನು ಇದರ ಜತೆಗೆ ಜಾಗತಿಕ ಮಟ್ಟದಲ್ಲಿ ತೈಲ ಬೆಲೆಗಳು ಕುಸಿತವಾಗಿದೆ. ಈ ಹಿಂದಿನ ಸೆಷನ್ನಲ್ಲಿ ಅಂತಾರಾಷ್ಟ್ರೀಯ ಬೆಂಚ್ಮಾರ್ಕ್ ಬ್ರೆಂಟ್ ಕಚ್ಚಾ ಫ್ಯೂಚರ್ಸ್ ಒಂದೇ ದಿನದಲ್ಲಿ ಬ್ಯಾರೆಲ್ಗೆ 9 ಯುಎಸ್ಡಿ ನೆಲ ಕಚ್ಚಿ, 102.77 ಡಾಲರ್ ಮುಟ್ಟಿತು. ಅದಕ್ಕೆ ಮುಂಚಿನ ಸೆಷನ್ನಲ್ಲಿ ಬ್ಯಾರಲ್ಗೆ 111.63 ಯುಎಸ್ಡಿ ಇತ್ತು. ಈ ರೀತಿ ದೊಡ್ಡ ಮೊತ್ತದ ಕುಸಿತವು, ಭಾರತದಂಥ ಹೆಚ್ಚಿನ ತೈಲ ಆಮದು ಮಾಡಿಕೊಳ್ಳುವ ದೇಶಗಳಿಗೆ ಸಂತೋಷದ ಸಂಗತಿ. ಮುಂದಿನ ದಿನಗಳಲ್ಲಿ ತೈಲ ಬೆಲೆ ಬ್ಯಾರೆಲ್ಗೆ 100 ಡಾಲರ್ಗಿಂತ ಕೆಳಗೆ ಇಳಿದಲ್ಲಿ ಹಣದುಬ್ಬರದ ಆತಂಕ ಕಡಿಮೆ ಆಗಿ, ಈಕ್ವಿಟಿ ಮಾರುಕಟ್ಟೆಯಲ್ಲಿ ಏರಿಕೆ ಪಯಣ ಕಾಣಿಸಿಕೊಳ್ಳಲಿದೆ ಎಂದು ವಿಶ್ಲೇಷಕರು ಹೇಳುತ್ತಾರೆ.
ಲೋಹ ಒಂದನ್ನು ಹೊರತುಪಡಿಸಿ, ಉಳಿದ ವಲಯಗಳು ಬುಧವಾರದ ಏರಿಕೆಯಲ್ಲೇ ಪಾಲ್ಗೊಂಡವು. ಇನ್ನೇನು ಜೂನ್ ತ್ರೈಮಾಸಿಕದ ಹಣಕಾಸಿನ ಫಲಿತಾಂಶವು ಟಿಸಿಎಸ್ ಹಾಗೂ ಅವೆನ್ಯೂ ಸೂಪರ್ಮಾರ್ಟ್ಸ್ನೊಂದಿಗೆ ಶೂರುವಾಗಲಿದ್ದು, ಈ ಬಾರಿ ಮಿಶ್ರ ಗಳಿಕೆಯನ್ನು ನಿರೀಕ್ಷೆ ಮಾಡಬಹುದು ಎನ್ನುತ್ತಾರೆ ವಿಶ್ಲೇಷಕರು.
ನಿಫ್ಟಿ ವಾಹನ, ಎಫ್ಎಂಸಿಜಿ ಅತಿ ದೊಡ್ಡ ಗಳಿಕೆ ವಲಯಗಳಾಗಿ ಹೊರಹೊಮ್ಮಿದವು. ತಲಾ ಶೇ 2ರಷ್ಟು ಹೆಚ್ಚಳ ಕಂಡವು. ನಿಫ್ಟಿ ಬ್ಯಾಂಕ್, ಹಣಕಾಸು ಸೇವೆಗಳು, ಐಟಿ ಮತ್ತು ರಿಯಾಲ್ಟಿ ಸೂಚ್ಯಂಕಗಳು ಶೇ 1ರಷ್ಟು ಮೇಲೇರಿದರೆ, ಫಾರ್ಮಾ ವಲಯ ಶೇ 0.5ರಷ್ಟು ಏರಿದವು. ಭಾರತದ ವೊಲಟಾಲಿಟಿ ಇಂಡೆಕ್ಸ್ ಇಂಡಿಯಾ (VIX) ಇಳಿಕೆ ಕಂಡಿದೆ. ಒಂದು ವೇಳೆ ಈ ಇಳಿಕೆ 20ಕ್ಕಿಂತ ಕೆಳಗೆ ಇಳಿದರೆ “ಬುಲ್ಸ್”ಗೆ ಇನ್ನಷ್ಟು ಮೇಲೆ ಒಯ್ಯಲು ಸ್ಥಿರ ಪರಿಸರ ಸೃಷ್ಟಿ ಆಗಲಿದೆ.
ನಿಫ್ಟಿಯಲ್ಲಿ ಏರಿಕೆ ಕಂಡ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ
ಬ್ರಿಟಾನಿಯಾ ಶೇ 4.76
ಬಜಾಜ್ ಫೈನಾನ್ಸ್ ಶೇ 4.52
ಬಜಾಜ್ ಫಿನ್ಸರ್ವ್ ಶೇ 4.38
ಹಿಂದೂಸ್ತಾನ್ ಯುನಲಿವರ್ ಶೇ4.03
ಐಷರ್ ಮೋಟಾರ್ಸ್ ಶೇ 3.65
ನಿಫ್ಟಿಯಲ್ಲಿ ಇಳಿಕೆ ಕಂಡ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ
ಒಎನ್ಜಿಸಿ ಶೇ – 5.06
ಪವರ್ ಗ್ರಿಡ್ ಕಾರ್ಪೊರೇಷನ್ ಶೇ – 1.73
ಎನ್ಟಿಪಿಸಿ ಶೇ – 1.35
ಎಚ್ಡಿಎಫ್ಸಿ ಲೈಫ್ ಶೇ -1.31
ಹಿಂಡಾಲ್ಕೊ ಶೇ -1.25
ಇದನ್ನೂ ಓದಿ: Stock Market Investment Tips: ಷೇರು ಮಾರುಕಟ್ಟೆ ಹೂಡಿಕೆಯ ಆರಂಭ ಹಂತದಲ್ಲಿ ಇರುವವರಿಗೆ 5 ಟಿಪ್ಸ್
Published On - 4:24 pm, Wed, 6 July 22