ಬೀಜಿಂಗ್, ಸೆಪ್ಟೆಂಬರ್ 12: ಎಲೆಕ್ಟ್ರಿಕ್ ವಾಹನ ತಂತ್ರಜ್ಞಾನದಲ್ಲಿ ಚೀನಾ ಬಹಳ ಮುಂದಿದೆ. ಟೆಸ್ಲಾ ಕೂಡ ಚೀನೀ ಕಂಪನಿಗಳ ಎದುರು ಪೈಪೋಟಿ ನಡೆಸಲು ಹೆಣಗುವಷ್ಟು ಪರಿಸ್ಥಿತಿ ಇದೆ. ದೇಶೀಯ ಮಾರುಕಟ್ಟೆಯಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿರುವ ಚೀನೀ ಇವಿ ಕಂಪನಿಗಳು ಈಗ ವಿದೇಶಗಳಲ್ಲಿ ವಿಸ್ತರಿಸಲು ಹೊರಟಿವೆ. ಈ ಹಂತದಲ್ಲಿ ಚೀನಾ ಸರ್ಕಾರ ತನ್ನ ದೇಶದ ಇವಿ ಕಂಪನಿಗಳಿಗೆ ಕೆಲ ಷರತ್ತುಗಳನ್ನು ವಿಧಿಸಿರುವುದು ತಿಳಿದುಬಂದಿದೆ. ಭಾರತವೂ ಸೇರಿದಂತೆ ಬೇರೆ ಬೇರೆ ದೇಶಗಳಲ್ಲಿ ಕಾರುಗಳನ್ನು ತಯಾರಿಸಲು ಘಟಕ ಸ್ಥಾಪಿಸುವಾಗ ಟೆಕ್ನಾಲಜಿಯ ರಹಸ್ಯಗಳನ್ನು ಹಂಚಿಕೊಳ್ಳಬಾರದು ಎಂಬುದು ಪ್ರಮುಖವಾಗಿ ವಿಧಿಸಿರುವ ಷರತ್ತಾಗಿದೆ.
ಜುಲೈ ತಿಂಗಳಲ್ಲಿ ಚೀನಾದ ಹತ್ತಕ್ಕೂ ಹೆಚ್ಚು ವಾಹನ ತಯಾರಕರ ಸಭೆಯನ್ನು ಅಲ್ಲಿನ ವಾಣಿಜ್ಯ ಸಚಿವಾಲಯ ಕರೆದಿತ್ತು. ಅಲ್ಲಿ ಮುಂದುವರಿದ ಇವಿ ತಂತ್ರಜ್ಞಾನವನ್ನು ಬೇರೆ ದೇಶಗಳಿಗೆ ರವಾನಿಸದಂತೆ ಹೇಗೆ ಎಚ್ಚರವಹಿಸಬೇಕು ಎಂಬುದನ್ನು ಸರ್ಕಾರ ಸೂಚಿಸಿದೆ.
ಇದನ್ನೂ ಓದಿ: ಬೆಂಗಳೂರಿನ ಹೊಸಕೋಟೆಯಲ್ಲಿ ಬಿಸಿಡಿ ಟೌನ್ಶಿಪ್; ಮಹಿಳಾ ಫಾಕ್ಸ್ಕಾನ್ ಉದ್ಯೋಗಿಗಳಿಗೆ 900 ಅಪಾರ್ಟ್ಮೆಂಟ್ಸ್
ಭಾರತದಲ್ಲಿ ವಾಹನ ತಯಾರಿಕೆ ಘಟಕ ಸ್ಥಾಪಿಸಿದರೂ ಪ್ರಮುಖ ಭಾಗದ ಉತ್ಪಾದನೆ ಚೀನಾದಲ್ಲೇ ಆಗಬೇಕು ಎಂದು ತಿಳಿಸಲಾಗಿದೆ. ಅಲ್ಲದೇ, ಚೀನೀ ಕಂಪನಿಗಳು ವಾಹನ ಬಿಡಿಭಾಗಗಳ ನಾಕ್ ಡೌನ್ ಕಿಟ್ಗಳನ್ನು ರಫ್ತು ಮಾಡಬೇಕು. ಬಳಿಕ ವಿದೇಶದಲ್ಲಿರುವ ತನ್ನ ಘಟಕದಲ್ಲಿ ವಾಹನ ಅಸೆಂಬ್ಲಿಂಗ್ಗೆ ಈ ಕಿಟ್ ಅನ್ನು ಉಪಯೋಗಿಸಬೇಕು. ಇದರಿಂದ ಆಮದು ಸುಂಕ ಹೆಚ್ಚು ಬೀಳದಂತೆ ನೋಡಿಕೊಳ್ಳಬಹುದು ಎಂಬುದು ಚೀನೀ ಕಂಪನಿಗಳಿಗೆ ಕೊಡಲಾಗಿರುವ ಮತ್ತೊಂದು ಪ್ರಮುಖ ಸಲಹೆಯಾಗಿದೆ.
ನಾಕ್ ಡೌನ್ ಕಿಟ್ನಲ್ಲಿ ವಿವಿಧ ಬಿಡಿಭಾಗಗಳಿರುತ್ತವೆ. ಇವುಗಳನ್ನು ತೆರೆದು ಹಾಗೇ ಅಸೆಂಬ್ಲಿಂಗ್ ಮಾಡಬಹುದು. ಆಮದು ತೆರಿಗೆ ಉಳಿಸಲು ಕಂಪನಿಗಳು ಈ ತಂತ್ರ ಉಪಯೋಗಿಸುತ್ತವೆ.
ಇದನ್ನೂ ಓದಿ: Windfall Tax: ವಿಂಡ್ಫಾಲ್ ಟ್ಯಾಕ್ಸ್ ರದ್ದತಿ, ಪೆಟ್ರೋಲ್ ಬೆಲೆ ಇಳಿಕೆ ಸಾಧ್ಯತೆ
ಚೀನಾ ಸರ್ಕಾರದ ಈ ಮಾರ್ಗಸೂಚಿ ಅಥವಾ ನಿಯಮಗಳು ಭಾರತ ಮಾತ್ರವಲ್ಲ, ಟರ್ಕಿ ಇತ್ಯಾದಿ ಎಲ್ಲಾ ದೇಶಗಳಿಗೂ ಅನ್ವಯವಾಗುವಂತೆ ಮಾಡಲಾಗಿದೆ. ಚೀನಾದ ಬಿವೈಡಿ, ಚೆರಿ ಆಟೊಮೊಬೈಲ್ ಮೊದಲಾದ ಆಟೊಮೊಬೈಲ್ ಕಂಪನಿಗಳು ಎಲೆಕ್ಟ್ರಿಕ್ ವಾಹನ ಕ್ಷೇತ್ರದಲ್ಲಿ ಪರಿಣಿತಿ ಹೊಂದಿವೆ. ಸ್ಪೇನ್, ಥಾಯ್ಲೆಂಡ್, ಹಂಗೆರಿ ಮೊದಲಾದ ದೇಶಗಳಲ್ಲಿ ಫ್ಯಾಕ್ಟರಿ ಸ್ಥಾಪಿಸಲು ಯೋಜಿಸುತ್ತಿವೆ. ಭಾರತದಲ್ಲೂ ಬಿವೈಡಿ ಫ್ಯಾಕ್ಟರಿ ಸ್ಥಾಪನೆಗೆ ಆಸಕ್ತಿ ಹೊಂದಿದೆ. ಆದರೆ, ಸರ್ಕಾರದಿಂದ ಇನ್ನೂ ಹಸಿರು ನಿಶಾನೆ ಸಿಕ್ಕಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ