Flipkart: ಇನ್ನು ಮನೆ ಉಪಕರಣಗಳ ದುರಸ್ತಿ, ನಿರ್ವಹಣೆಯನ್ನೂ ಮಾಡಲಿದೆ ಫ್ಲಿಪ್​ಕಾರ್ಟ್

Flipkart's Repairs Business; ತಿಂಗಳ ಹಿಂದೆ ಪ್ರಾಯೋಗಿಕವಾಗಿ ಹೋಮ್ ಪ್ರಾಡಕ್ಟ್ ಸೇವೆಯನ್ನು ‘ಜೀವ್ಸ್’ ಮೂಲಕ ಆರಂಭಿಸಿತ್ತು. ಇದೀಗ 19,000 ಪಿನ್​ಕೋಡ್​ ವ್ಯಾಪ್ತಿಯಲ್ಲಿ ಗ್ರಾಹಕರಿಗೆ ಸೇವೆ ಲಭ್ಯವಾಗಲಿದೆ. ಗ್ರಾಹಕರ ಮನೆ ಬಾಗಿಲಿಗೆ ಉತ್ಪನ್ನ, ಸೇವೆ, ದುರಸ್ತಿ ಮತ್ತು ನಿರ್ವಹಣೆ ಸೇವೆ ದೊರೆಯಲಿದೆ ಎಂದು ಫ್ಲಿಪ್​ಕಾರ್ಟ್ ತಿಳಿಸಿದೆ.

Flipkart: ಇನ್ನು ಮನೆ ಉಪಕರಣಗಳ ದುರಸ್ತಿ, ನಿರ್ವಹಣೆಯನ್ನೂ ಮಾಡಲಿದೆ ಫ್ಲಿಪ್​ಕಾರ್ಟ್
ಫ್ಲಿಪ್​ಕಾರ್ಟ್
Edited By:

Updated on: Dec 23, 2022 | 6:51 PM

ನವದೆಹಲಿ: ಮನೆಯಲ್ಲಿ ಯಾವುದಾದರೂ ಎಲೆಕ್ಟ್ರಿಕ್ ಉಪಕರಣ (Elelctrical Equipment) ಕೆಟ್ಟು ಹೋಗಿದೆಯಾ? ಯಾವುದಾದರೂ ಉಪಕರಣವನ್ನು ಇನ್​ಸ್ಟಾಲ್ ಮಾಡಬೇಕಾಗಿದೆಯೇ? ಇನ್ನು ಮುಂದೆ ಇದಕ್ಕೂ ಫ್ಲಿಪ್​​ಕಾರ್ಟ್​​ನಲ್ಲಿ (Flipkart) ​ಪರಿಹಾರ ದೊರೆಯಲಿದೆ. ಗೃಹ ಸೇವೆ, ಮನೆ ಉಪಕರಣಗಳ ದುರಸ್ತಿ ಮತ್ತು ನಿರ್ವಹಣೆ ಸೇವೆಯನ್ನು ಆರಂಭಿಸುತ್ತಿರುವುದಾಗಿ ಪ್ರಸಿದ್ಧ ಇ-ಕಾಮರ್ಸ್ (E-commerce) ತಾಣ ಫ್ಲಿಪ್​​ಕಾರ್ಟ್ ಶುಕ್ರವಾರ ತಿಳಿಸಿದೆ. ಈ ಮೂಲಕ ಈವರೆಗೆ ಆನ್​ಲೈನ್ ಮಾರಾಟ ಮಾಡುತ್ತಿದ್ದ ಕಂಪನಿ ಸೇವೆ ಹಾಗೂ ದುರಸ್ತಿ ಕ್ಷೇತ್ರಕ್ಕೂ ಕಾಲಿಟ್ಟಿದೆ. ಫ್ಲಿಪ್​ಕಾರ್ಟ್​ನ ಅಂಗಸಂಸ್ಥೆಯಾದ ‘ಜೀವ್ಸ್ (Jeeves)’ ಮೂಲಕ ಗ್ರಾಹಕರಿಗೆ ಸೇವೆ ಲಭ್ಯವಾಗಲಿದೆ.

ಕಂಪನಿಯು ತಿಂಗಳ ಹಿಂದೆ ಪ್ರಾಯೋಗಿಕವಾಗಿ ಹೋಮ್ ಪ್ರಾಡಕ್ಟ್ ಸೇವೆಯನ್ನು ‘ಜೀವ್ಸ್’ ಮೂಲಕ ಆರಂಭಿಸಿತ್ತು. ಇದೀಗ 19,000 ಪಿನ್​ಕೋಡ್​ ವ್ಯಾಪ್ತಿಯಲ್ಲಿ ಗ್ರಾಹಕರಿಗೆ ಸೇವೆ ಲಭ್ಯವಾಗಲಿದೆ. ಗ್ರಾಹಕರ ಮನೆ ಬಾಗಿಲಿಗೆ ಉತ್ಪನ್ನ, ಸೇವೆ, ದುರಸ್ತಿ ಮತ್ತು ನಿರ್ವಹಣೆ ಸೇವೆ ದೊರೆಯಲಿದೆ ಎಂದು ಫ್ಲಿಪ್​ಕಾರ್ಟ್ ತಿಳಿಸಿದೆ. ಇದರೊಂದಿಗೆ ಯುನಿಕಾರ್ನ್ ಅರ್ಬನ್ ಕಂಪನಿ, ಮಿಸ್ಟರ್ ರೈಟ್, ಆನ್​ಸೈಟ್ ಗೋ ಇತ್ಯಾದಿಗಳೊಂದಿಗೆ ಫ್ಲಿಪ್​ಕಾರ್ಟ್ ಪೈಪೋಟಿಗೆ ಇಳಿದಿದೆ.

ಇದನ್ನೂ ಓದಿ: PhonePe: ಸಂಪೂರ್ಣವಾಗಿ ಪ್ರತ್ಯೇಕಗೊಂಡ ಫ್ಲಿಪ್​ಕಾರ್ಟ್, ಫೋನ್ ಪೇ

ಜೀವ್ಸ್ ಮೂಲಕ ದಕ್ಷ, ಗ್ರಾಹಕ ಕೇಂದ್ರಿತ ಸೇವೆ ನೀಡಲಾಗುವುದು. ಉಪಕರಣದ ಮಾರಾಟದ ನಂತರ ಅದಕ್ಕೆ ಸಂಬಂಧಿಸಿದ ಸೇವೆಗಳು ಗ್ರಾಹಕರಿಗೆ ಅಗತ್ಯ ಇರುವುದನ್ನು ನಾವು ಮನಗಂಡಿದ್ದೇವೆ. ಇದಕ್ಕಾಗಿ ಹೋಮ್ ಪ್ರಾಡಕ್ಟ್ ಸೇವೆ ಆರಂಭಿಸಿದ್ದೇವೆ. ಗ್ರಾಹಕರು ಇನ್ನು ಮಾರಾಟದ ನಂತರ ಅನುಕೂಲಕರ, ವಿಶ್ವಾಸಾರ್ಹ ಮತ್ತು ಕೈಗೆಟಕುವ ಬೆಲೆಯಲ್ಲಿ, ಕಡಿಮೆ ವೆಚ್ಚದಲ್ಲಿ ಉತ್ತಮ ಸೇವೆ ಪಡೆಯಲಿದ್ದಾರೆ ಎಂದು ಫ್ಲಿಪ್​ಕಾರ್ಟ್ ಗ್ರೂಪ್​ನ ಜೀವ್ಸ್​ ಸಿಇಒ ನಿಪುಣ್ ಶರ್ಮಾ ತಿಳಿಸಿದ್ದಾರೆ.

ಜೀವ್ಸ್​ ಸುಮಾರು 300 ವಾಕ್​ ಇನ್ ಸರ್ವೀಸ್​ ಕೇಂದ್ರಗಳನ್ನು ಹೊಂದಿದೆ. 1,000ಕ್ಕೂ ಹೆಚ್ಚು ಸೇವಾ ಪಾಲುದಾರರನ್ನು ಹೊಂದಿದೆ. 400 ನಗರಗಳಲ್ಲಿ ನುರಿತ ಮತ್ತು ತರಬೇತಿ ಪಡೆದ 9,000 ಎಂಜಿನಿಯರ್​ಗಳನ್ನು ಒಳಗೊಂಡಿದೆ.

ವಾಲ್​ಮಾರ್ಟ್ ಒಡೆತನದ ಫ್ಲಿಪ್​​​ಕಾರ್ಟ್ ಸದ್ಯ ದೇಶದ ಇ-ಕಾಮರ್ಸ್ ಮಾರುಕಟ್ಟೆಯಲ್ಲಿ ಪ್ರಬಲ ಹಿಡಿತ ಹೊಂದಿದೆ. ಎಲೆಕ್ಟ್ರಾನಿಕ್ ಉಪಕರಣಗಳಿಂದ ತೊಡಗಿ ಅನೇಕ ವಿಧದ ಗೃಹ ಬಳಕೆಯ ಉತ್ಪನ್ನಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುತ್ತಿದೆ. ಇದೀಗ ಗೃಹ ಸೇವೆ ಮತ್ತು ದುರಸ್ತಿ ಸೇವೆ ಆರಂಭಿಸುವ ಮೂಲಕ ತನ್ನ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲು ಮುಂದಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:49 pm, Fri, 23 December 22