ಈಸ್ ಮೈಟ್ ಟ್ರಿಪ್ ಸಿಇಒ ಸ್ಥಾನಕ್ಕೆ ನಿಶಾಂತ್ ಪಿಟ್ಟಿ ರಾಜೀನಾಮೆ; ಸಹೋದರ ರಿಕಾಂತ್ ಪಿಟ್ಟಿ ನೂತನ ಸಿಇಒ
Easy Trip Planners CEO Nishant Pittie resignation: ಈಸ್ಮೈಟ್ರಿಪ್ನ ಮಾಲೀಕ ಸಂಸ್ಥೆಯಾದ ಈಸಿ ಟ್ರಿಪ್ ಪ್ಲಾನರ್ಸ್ನ ಸಿಇಒ ಸ್ಥಾನಕ್ಕೆ ನಿಶಾಂತ್ ಪಿಟ್ಟೀ ರಾಜೀನಾಮೆ ಕೊಟ್ಟಿದ್ದಾರೆ. ವೈಯಕ್ತಿಕ ಕಾರಣದಿಂದ ರಾಜೀನಾಮೆ ನೀಡುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಶೇ. 14.2ರಷ್ಟಿದ್ದ ತಮ್ಮ ಷೇರುಪಾಲಿನಲ್ಲಿ ಶೇ. 1.4ರಷ್ಟು, ಅಂದರೆ 4.99 ಕೋಟಿ ಷೇರುಗಳನ್ನೂ ಅವರು ಮಾರಿದ್ದಾರೆ. ಅವರ ಸಹೋದರ ಹಾಗೂ ಸಿಎಫ್ಒ ರಿಕಾಂತ್ ಪಿಟ್ಟೀ ಅವರು ನೂತನ ಸಿಇಒ ಆಗಿ ನೇಮಕವಾಗಿದ್ದಾರೆ.
ನವದೆಹಲಿ, ಜನವರಿ 1: ಈಸಿ ಟ್ರಿಪ್ ಪ್ಲಾನರ್ಸ್ ಸಂಸ್ಥೆಯ ಸಹ-ಸಂಸ್ಥಾಪಕ ನಿಶಾಂತ್ ಪಿಟ್ಟಿ ಅವರು ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವೈಯಕ್ತಿಕ ಕಾರಣ ನೀಡಿ ಅವರು ತಮ್ಮ ಸ್ಥಾನ ತ್ಯಜಿಸಿದ್ದಾರೆ. ಇಂದಿನಿಂದಲೇ (ಜ. 1) ಅವರು ಅಧಿಕಾರದಿಂದ ವಿಯುಕ್ತಗೊಂಡಿದ್ದಾರೆ. ಮತ್ತೊಬ್ಬ ಸಹ-ಸಂಸ್ಥಾಪಕ ಹಾಗೂ ಅವರ ಸಹೋದರರಾದ ರಿಕಾಂತ್ ಪಿಟ್ಟಿ ಅವರು ನೂತನ ಸಿಇಒ ಆಗಿ ನೇಮಕವಾಗಿದ್ದಾರೆ.
ನಿಶಾಂತ್ ಪಿಟ್ಟೀ ಅವರು ಇದೇ ವೇಳೆ ಕಂಪನಿಯ ಶೇ. 1.4ರಷ್ಟು ಷೇರುಗಳನ್ನು ಮಾರಿದ್ದಾರೆ. ಒಟ್ಟು ಶೇ. 14ರಷ್ಟು ಷೇರುಪಾಲನ್ನು ನಿಶಾಂತ್ ಹೊಂದಿದ್ದಾರೆ. ಅಷ್ಟನ್ನೂ ಮಾರುವುದಾಗಿ ಮೊನ್ನೆ (ಡಿ. 30) ಅವರು ಹೇಳಿದ್ದರು. ಆದರೆ, ಶೇ. 1.4ರಷ್ಟು, ಅಂದರೆ 4.99 ಕೋಟಿ ಷೇರುಗಳನ್ನು ಮಾತ್ರ ಅವರಿಂದ ಮಾರಲು ಸಾಧ್ಯವಾಗಿದೆ. ಪ್ರತೀ ಷೇರಿಗೆ ಸರಾಸರಿ 15.68 ರೂನಂತೆ ಮಾರಾಟವಾಗಿದ್ದು, ಈ ಬ್ಲಾಕ್ ಡೀಲ್ನಲ್ಲಿ ನಿಶಾಂತ್ ಪಿಟ್ಟೀ 78.32 ಕೋಟಿ ರೂ ಗಳಿಸಿದ್ದಾರೆ.
ಇದನ್ನೂ ಓದಿ: ಮಹಾಕುಂಭಕ್ಕೆ 3,000 ವಿಶೇಷ ಟ್ರೈನುಗಳು; ರೈಲ್ವೇಸ್ನಿಂದ ಹೊಸ ಡಿವಿಶನ್; ಕಣಿವೆ ರಾಜ್ಯಕ್ಕೆ ರೈಲ್ವೆ ಬಲ
ಈ ಮಾರಾಟದ ಬಳಿಕ ಈಸಿ ಟ್ರಿಪ್ ಪ್ಲಾನರ್ಸ್ ಸಂಸ್ಥೆಯಲ್ಲಿ ನಿಶಾಂತ್ ಪಿಟ್ಟೀ ಷೇರುಪಾಲು ಶೇ. 14.21ರಿಂದ ಶೇ. 12.8ಕ್ಕೆ ಇಳಿದಿದೆ. ಡಿಸೆಂಬರ್ 31ರಂದು ನಡೆದ ಬ್ಲಾಕ್ಡೀಲ್ನಲ್ಲಿ ಬಿಕರಿಯಾದ 4.99 ಕೋಟಿ ಷೇರುಗಳಲ್ಲಿ ಅರುಣಾಬೆನ್ ಸಂಜಯ್ ಕುಮಾರ್ ಭಾಟಿಯಾ ಅವರೊಬ್ಬರೇ 2.40 ಕೋಟಿ ಷೇರುಗಳನ್ನು 38.06 ಕೋಟಿ ರೂಗೆ ಖರೀದಿಸಿದ್ದಾರೆ.
ಸತತವಾಗಿ ಷೇರುಗಳನ್ನು ಮಾರುತ್ತಾ ಬಂದಿರುವ ನಿಶಾಂತ್ ಪಿಟ್ಟೀ
ಈಸಿ ಟ್ರಿಪ್ ಪ್ಲಾನರ್ಸ್ ಸಂಸ್ಥೆಯು ಈಸ್ಮೈಟ್ರಿಪ್ನ ಮಾಲೀಕ ಸಂಸ್ಥೆಯಾಗಿದೆ. ನಿಶಾಂತ್ ಪಿಟ್ಟೀ, ರಿಕಾಂತ್ ಪಿಟ್ಟೀ ಮತ್ತು ಪ್ರಶಾಂತ್ ಪಿಟ್ಟೀ ಅವರು ಇದರ ಸಹ-ಸಂಸ್ಥಾಪಕರಾಗಿದ್ದಾರೆ. 2022ರ ಮಾರ್ಚ್ನಲ್ಲಿ ಸಂಸ್ಥಾಪಕರ ಒಟ್ಟು ಷೇರು ಪಾಲು ಶೇ. 74.90ರಷ್ಟಿತ್ತು. ನಿಶಾಂತ್ ಪಿಟ್ಟಿ ಶೇ. 37.26, ರಿಕಾಂತ್ ಶೇ. 37.13 ಮತ್ತು ಪ್ರಶಾಂತ್ ಪಿಟ್ಟೀ ಶೇ. 0.51ರಷ್ಟು ಷೇರುಪಾಲು ಹೊಂದಿದ್ದರು.
ನಿಶಾಂತ್ ಪಿಟ್ಟೀ 2022ರಲ್ಲಿ 5 ಪ್ರತಿಶತದಷ್ಟು ಷೇರುಗಳನ್ನು ಮಾರಿದ್ದರು. 2023ರಲ್ಲಿ 4 ಪ್ರತಿಶತಕ್ಕೂ ಹೆಚ್ಚು ಷೇರುಗಳನ್ನು ಮಾರಿದ್ದರು. 2024ರಲ್ಲಿ ಅವರು ಸುಮಾರು 5 ಪ್ರತಿಶತದಷ್ಟು ಷೇರುಗಳನ್ನು ಬಿಕರಿ ಮಾಡಿದ್ದಾರೆ. ರಿಕಾಂತ್ ಪಿಟ್ಟೀ ಅವರೂ ಕೂಡ ಎರಡು ವರ್ಷದಲ್ಲಿ ಒಂದಷ್ಟು ಷೇರುಗಳನ್ನು ಮಾರಿದ್ದಾರೆ. ಪ್ರಶಾಂತ್ ಪಿಟ್ಟೀ ಅವರು ಮಾತ್ರ ಹತ್ತು ಪ್ರತಿಶತದಷ್ಟು ಷೇರುಗಳನ್ನು ಗಳಿಸಿಕೊಂಡಿದ್ದಾರೆ.
ಇದನ್ನೂ ಓದಿ: ಭಾರತಕ್ಕೆ 2024ರ ಸಿಹಿ; ಆರ್ಥಿಕತೆಯಿಂದ ಹಿಡಿದು ಬಾಹ್ಯಾಕಾಶದವರೆಗೆ ಭಾರತ ಇಟ್ಟ ದೈತ್ಯ ಹೆಜ್ಜೆಗಳಿವು…
ಇವತ್ತು ರಿಕಾಂತ್ ಪಿಟ್ಟೀ ಷೇರುಪಾಲು ಶೇ. 25.88 ಇದೆ. ನಿಶಾಂತ್ ಪಿಟ್ಟೀ ಶೇ. 12.8, ಪ್ರಶಾಂತ್ ಪಿಟ್ಟೀ ಶೇ. 10.29ರಷ್ಟು ಷೇರುಪಾಲು ಹೊಂದಿದ್ದಾರೆ. ಈಸಿ ಟ್ರಿಪ್ ಪ್ಲಾನರ್ಸ್ ಸಂಸ್ಥೆಯಲ್ಲಿ ಒಟ್ಟಾರೆ ಪ್ರೊಮೋಟರ್ಗಳ (ಮಾಲೀಕರು) ಷೇರುಪಾಲು ಶೇ. 50ಕ್ಕಿಂತಲೂ ಕಡಿಮೆಗೆ ಬಂದಿದೆ. ಸಾರ್ವಜನಿಕ ಹೂಡಿಕೆದಾರರ ಷೇರು ಪಾಲು ಶೇ. 44.14ರಷ್ಟಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ