ಭಾರತದಿಂದ ಕಾಫಿ ರಫ್ತು; ಮೊದಲ ಬಾರಿ ಒಂದು ಬಿಲಿಯನ್ ಡಾಲರ್ ಮೈಲಿಗಲ್ಲು
India coffee exports in 2024: ಭಾರತದ ಕಾಫಿ ರಫ್ತು 2024ರಲ್ಲಿ ಭರ್ಜರಿಯಾಗಿ ಆಗಿದೆ. ಏಪ್ರಿಲ್ನಿಂದ ನವೆಂಬರ್ವರೆಗೆ 1.2 ಬಿಲಿಯನ್ ಡಾಲರ್ ಮೌಲ್ಯದಷ್ಟು ಕಾಫಿ ರಫ್ತಾಗಿದೆ. ಬ್ರೆಜಿಲ್, ವಿಯೆಟ್ನಾಂನಂತಹ ಪ್ರಮುಖ ಕಾಫಿ ಬೆಳೆಯುವ ದೇಶಗಳಿಂದ ರಫ್ತು ಕಡಿಮೆ ಆಗಿರುವುದು ಮತ್ತು ಯೂರೋಪ್ನ ಖರೀದಿದಾರರು ಹೆಚ್ಚು ದಾಸ್ತಾನು ಮಾಡುತ್ತಿರುವುದು ಭಾರತದ ಕಾಫಿ ರಫ್ತು ಹೆಚ್ಚಲು ಕಾರಣವಾಗಿದೆ.
ನವದೆಹಲಿ, ಜನವರಿ 1: ಚಹಾ ರಫ್ತಿಗೆ ಹೆಸರುವಾಸಿಯಾದ ಭಾರತ ಈಗ ಕಾಫಿ ರಫ್ತಿನಲ್ಲೂ ಮುಂದಡಿ ಇಡುತ್ತಿದೆ. ಈ ಹಣಕಾಸು ವರ್ಷದಲ್ಲಿ ಭಾರತದ ಕಾಫಿ ರಫ್ತು 1 ಬಿಲಿಯನ್ ಡಾಲರ್ ಗಡಿ ದಾಟಿದೆ. ಒಂದು ವರ್ಷದಲ್ಲಿ ಈ ರಫ್ತು ಮೈಲಿಗಲ್ಲನ್ನು ಭಾರತ ಮುಟ್ಟಿದ್ದು ಇದೇ ಮೊದಲು. 2024ರ ಏಪ್ರಿಲ್ನಿಂದ ನವೆಂಬರ್ವರೆಗೆ ಭಾರತದಿಂದ ರಫ್ತಾದ ಕಾಫಿಯ ಮೌಲ್ಯ 1,146.9 ಮಿಲಿಯನ್ ಡಾಲರ್ ಎಂದು ಸಿಎಂಐಇ (ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕನಾಮಿ) ಹೇಳಿದೆ. ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ. 29ರಷ್ಟು ರಫ್ತು ಹೆಚ್ಚಳ ಆಗಿದೆ.
ಅರೇಬಿಕಾ ಮತ್ತು ರೋಬಸ್ಟಾ ಎಂಬ ಎರಡು ವಿಧದ ಕಾಫಿಗಳಿವೆ. ಇದರಲ್ಲಿ ರೋಬಸ್ಟಾ ಕಾಫಿಯ ಬೆಲೆ ಸಖತ್ ಏರಿದೆ. ಯೂರೋಪ್ನ ಕಾಫಿ ಖರೀದಿದಾರರು ವಿವಿಧ ಕಾರಣಗಳಿಗೆ ಕಾಫಿ ದಾಸ್ತಾನು ಮಾಡುತ್ತಿದ್ದಾರೆ. ರೋಬಸ್ಟಾ ಕಾಫಿಯನ್ನು ಹೆಚ್ಚಾಗಿ ಬೆಳೆಯುವ ಬ್ರೆಜಿಲ್ ಮತ್ತು ವಿಯೆಟ್ನಾಂ ಮೊದಲಾದ ದೇಶಗಳಲ್ಲಿ ಇಳುವರಿ ಕಡಿಮೆ ಆಗಿದೆ. ಈ ಎಲ್ಲಾ ಕಾರಣಗಳಿಂದ ಒಟ್ಟಾರೆ ಕಾಫಿ ಬೆಲೆ ದುಬಾರಿಯಾಗಿದೆ. ವರದಿ ಪ್ರಕಾರ ಈ ವರ್ಷದಲ್ಲೇ ರೋಬಸ್ಟಾ ಕಾಫಿಯಲ್ಲಿ ಶೇ. 63ರಷ್ಟು ಬೆಲೆ ಹೆಚ್ಚಾಗಿದೆ.
ಇದನ್ನೂ ಓದಿ: ಈಸ್ ಮೈಟ್ ಟ್ರಿಪ್ ಸಿಇಒ ಸ್ಥಾನಕ್ಕೆ ನಿಶಾಂತ್ ಪಿಟ್ಟಿ ರಾಜೀನಾಮೆ; ಸಹೋದರ ರಿಕಾಂತ್ ಪಿಟ್ಟಿ ನೂತನ ಸಿಇಒ
ಬ್ರೆಜಿಲ್ ಮತ್ತು ವಿಯೆಟ್ನಾಂನಲ್ಲಿ ಕಾಫಿ ಸರಬರಾಜು ಕಡಿಮೆ ಆಗಿರುವುದು ಭಾರತದ ಕಾಫಿ ಬೆಳೆಗಾರರಿಗೆ ಅನುಕೂಲವಾಗಿದೆ. ಕರ್ನಾಟಕ ಸೇರಿದಂತೆ ಮೂರು ದಕ್ಷಿಣ ರಾಜ್ಯಗಳಲ್ಲಿ ಅತಿಹೆಚ್ಚು ಕಾಫಿ ಬೆಳೆಯಲಾಗುತ್ತದೆ. ಇಲ್ಲಿ ಅರೇಬಿಕಾ ಮತ್ತು ರೋಬಸ್ಟಾ ಈ ಎರಡೂ ತಳಿಯೂ ಬೆಳೆಯುತ್ತವೆ. ಜಾಗತಿಕವಾಗಿ ಕಾಫಿಗೆ ಈ ವರ್ಷ ಇರುವ ಹೆಚ್ಚು ಬೇಡಿಕೆಯು ಭಾರತದ ಕಾಫಿ ರಫ್ತಿಗೆ ಒಳ್ಳೆಯ ಪುಷ್ಟಿ ಕೊಟ್ಟಿದೆ.
ಐರೋಪ್ಯ ಒಕ್ಕೂಟದ ಅರಣ್ಯನಾಶ ತಡೆ ಕಾಯ್ದೆ (EUDR- Deforestation Regulation) ಕಾರಣದಿಂದ ಅಲ್ಲಿನ ದೇಶಗಳ ಕಾಫಿ ಖರೀದಿದಾರರು ಕಾಫಿ ದಾಸ್ತಾನು ಮಾಡಿಕೊಳ್ಳಲು ಪ್ರೇರೇಪಿಸಿದೆ. ಭಾರತದಿಂದ ರಫ್ತಾಗುವ ಕಾಫಿಯ ಹೆಚ್ಚಿನ ಭಾಗವು ಐರೋಪ್ಯ ಒಕ್ಕೂಟದ ದೇಶಗಳಿಗೆ ಹೋಗುತ್ತದೆ. ಇಟಲಿ, ಬೆಲ್ಜಿಯಂ ಮತ್ತು ಜರ್ಮನಿ ದೇಶಗಳು ಭಾರತದಿಂದ ಕಾಫಿ ಆಮದು ಮಾಡಿಕೊಳ್ಳುತ್ತವೆ.
ಇದನ್ನೂ ಓದಿ: ಮಹಾಕುಂಭಕ್ಕೆ 3,000 ವಿಶೇಷ ಟ್ರೈನುಗಳು; ರೈಲ್ವೇಸ್ನಿಂದ ಹೊಸ ಡಿವಿಶನ್; ಕಣಿವೆ ರಾಜ್ಯಕ್ಕೆ ರೈಲ್ವೆ ಬಲ
ಐರೋಪ್ಯ ಕಾನೂನುಗಳು ಭಾರತದ ರಫ್ತಿಗೆ ತಡೆಗೋಡೆ?
ಯೂರೋಪ್ ಯೂನಿಯನ್ನ ಡೀಫಾರೆಸ್ಟೇಶನ್ ರೆಗ್ಯುಲೇಶನ್ ಮತ್ತು ಫಾರೀನ್ ಸಬ್ಸಿಡೀಸ್ ರೆಗ್ಯುಲೇಶನ್ ನಿಯಮಗಳು ಭಾರತದ ರಫ್ತುದಾರರಿಗೆ ತಡೆಗೋಡೆಯಾಗಿ ನಿಲ್ಲುತ್ತಿವೆ. ಅರಣ್ಯನಾಶ ಆಗಿರುವ ಜಮೀನಿನಲ್ಲಿ ಬೆಳೆಯಾಗುವ ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ತೆರಿಗೆ ವಿಧಿಸಲು ಈ ನಿಯಮಗಳು ಅವಕಾಶ ಮಾಡಿಕೊಡುತ್ತವೆ. ಹೀಗಾಗಿ, ಭಾರತದ ಕೃಷಿ ಉತ್ಪನ್ನಗಳ ಸ್ಪರ್ಧಾತ್ಮಕತೆ ಕುಂದಿಬಿಡುವ ಸಾಧ್ಯತೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ