AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs AUS: ಆಸ್ಟ್ರೇಲಿಯಾ ಆಲೌಟ್: ಟೀಮ್ ಇಂಡಿಯಾಗೆ 4 ರನ್​ಗಳ ಮುನ್ನಡೆ

Australia vs India, 5th Test: ಸಿಡ್ನಿಯಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 5ನೇ ಪಂದ್ಯದಲ್ಲಿ ಭಾರತೀಯ ವೇಗಿಗಳು ಭರ್ಜರಿ ಬೌಲಿಂಗ್ ಪ್ರದರ್ಶಿಸಿದ್ದಾರೆ. 2ನೇ ದಿನದಾಟದಲ್ಲಿ ಅದ್ಭುತ ದಾಳಿ ಸಂಘಟಿಸಿರುವ ಟೀಮ್ ಇಂಡಿಯಾ ಬೌಲರ್​​ಗಳು ಆಸ್ಟ್ರೇಲಿಯಾ ತಂಡವನ್ನು ಅಲ್ಪ ಮೊತ್ತಕ್ಕೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

IND vs AUS: ಆಸ್ಟ್ರೇಲಿಯಾ ಆಲೌಟ್: ಟೀಮ್ ಇಂಡಿಯಾಗೆ 4 ರನ್​ಗಳ ಮುನ್ನಡೆ
Ind Vs Aus
ಝಾಹಿರ್ ಯೂಸುಫ್
|

Updated on: Jan 04, 2025 | 9:31 AM

Share

ಸಿಡ್ನಿ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ 5ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾ ಬೌಲರ್​​ಗಳು ಪರಾಕ್ರಮ ಮೆರೆದಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡ 185 ರನ್​ಗಳಿಗೆ ಆಲೌಟ್ ಆದರೆ, ಅತ್ತ ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್​ನಲ್ಲಿ 181 ರನ್​ ಬಾರಿಸಿ ಸರ್ವಪತನ ಕಂಡಿದೆ. ಈ ಮೂಲಕ ಭಾರತ ತಂಡವು ಮೊದಲ ಇನಿಂಗ್ಸ್​ನಲ್ಲಿ 4 ರನ್​ಗಳ ಮುನ್ನಡೆ ಪಡೆದುಕೊಂಡಿದೆ.

ಶುಕ್ರವಾರ ಶುರುವಾದ ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಜಸ್​ಪ್ರೀತ್ ಬುಮ್ರಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ.

ಭಾರತ ತಂಡದ ಅಗ್ರ ಕ್ರಮಾಂಕದ ಬ್ಯಾಟರ್​ಗಳಾದ ಯಶಸ್ವಿ ಜೈಸ್ವಾಲ್ (10), ಕೆಎಲ್ ರಾಹುಲ್ (4), ಶುಭ್​ಮನ್ ಗಿಲ್ (20) ಹಾಗೂ ವಿರಾಟ್ ಕೊಹ್ಲಿ (17) 72 ರನ್​ ಆಗುವಷ್ಟರಲ್ಲಿ ವಿಕೆಟ್ ಒಪ್ಪಿಸಿದ್ದರು.

ಈ ಹಂತದಲ್ಲಿ ಕಣಕ್ಕಿಳಿದ ರಿಷಭ್ ಪಂತ್ 40 ರನ್ ಬಾರಿಸಿದರೆ, ರವೀಂದ್ರ ಜಡೇಜಾ 26 ರನ್​ಗಳ ಕೊಡುಗೆ ನೀಡಿದರು. ಆದರೆ ಆ ಬಳಿಕ ಬಂದ ನಿತೀಶ್ ರೆಡ್ಡಿ (0) ಶೂನ್ಯಕ್ಕೆ ಔಟಾದರೆ, ವಾಷಿಂಗ್ಟನ್ ಸುಂದರ್ 14 ರನ್​ಗಳಿಸಲಷ್ಟೇ ಶಕ್ತರಾದರು. ಇದಾಗ್ಯೂ ಕೆಳ ಕ್ರಮಾಂಕದಲ್ಲಿ ಜಸ್​ಪ್ರೀತ್ ಬುಮ್ರಾ 22 ರನ್ ಬಾರಿಸಿ ತಂಡದ ಮೊತ್ತವನ್ನು 185 ಕ್ಕೆ ತಂದು ನಿಲ್ಲಿಸಿದರು.

ಆಸ್ಟ್ರೇಲಿಯಾ ಪ್ರಥಮ ಇನಿಂಗ್ಸ್

ಟೀಮ್ ಇಂಡಿಯಾ ಆಲೌಟ್ ಆದ ಬೆನ್ನಲ್ಲೇ ಪ್ರಥಮ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ಜಸ್​ಪ್ರೀತ್ ಬುಮ್ರಾ ಆರಂಭಿಕ ಆಘಾತ ನೀಡಿದ್ದರು. ಮೊದಲ ದಿನದಾಟದಲ್ಲೇ ಉಸ್ಮಾನ್ ಖ್ವಾಜಾ (2) ರನ್ನು ಔಟ್ ಮಾಡಿದ ಬುಮ್ರಾ ದ್ವಿತೀಯ ದಿನದಾಟದ ಆರಂಭದಲ್ಲೇ ಮಾರ್ನಸ್ ಲಾಬುಶೇನ್ (2) ವಿಕೆಟ್ ಪಡೆದರು.

ಈ ಹಂತದಲ್ಲಿ ಬುಮ್ರಾಗೆ ಉತ್ತಮ ಸಾಥ್ ನೀಡಿದ ಮೊಹಮ್ಮದ್ ಸಿರಾಜ್, ಸ್ಯಾಮ್ ಕೊನ್​ಸ್ಟಾಸ್ (23) ಹಾಗೂ ಟ್ರಾವಿಸ್ ಹೆಡ್ (4) ವಿಕೆಟ್ ಕಬಳಿಸಿದರು. ಇದರ ನಡುವೆ ಪ್ರಸಿದ್ಧ್ ಕೃಷ್ಣ, ಸ್ಟೀವ್ ಸ್ಮಿತ್ (33) ವಿಕೆಟ್ ಪಡೆದರು.

ಈ ವೇಳೆ ಬ್ಯಾಟಿಂಗ್​ಗೆ ಇಳಿದ ಬ್ಯೂ ವೆಬ್​ಸ್ಟರ್ ಜವಾಬ್ದಾರಿಯುತ ಬ್ಯಾಟಿಂಗ್​​ನೊಂದಿಗೆ ಅರ್ಧಶತಕ ಪೂರೈಸಿದರು. ಆದರೆ ಮತ್ತೊಂದೆಡೆ ಅಲೆಕ್ಸ್ ಕ್ಯಾರಿ (21) ಯನ್ನು ಬೌಲ್ಡ್ ಮಾಡಿದ ಪ್ರಸಿದ್ಧ್ ಕೃಷ್ಣ ಭಾರತಕ್ಕೆ ಮತ್ತೊಂದು ಯಶಸ್ಸು ತಂದುಕೊಟ್ಟರು.

ಇನ್ನು ಪ್ಯಾಟ್ ಕಮಿನ್ಸ್ (10) ಹಾಗೂ ಮಿಚೆಲ್ ಸ್ಟಾರ್ಕ್ (1) ವಿಕೆಟ್ ಕಬಳಿಸುವ ಮೂಲಕ ನಿತೀಶ್ ಕುಮಾರ್ ರೆಡ್ಡಿ ಆಸ್ಟ್ರೇಲಿಯಾಗೆ ಬ್ಯಾಕ್ ಟು ಬ್ಯಾಕ್ ಆಘಾತ ನೀಡಿದ್ದರು. ಇದಾಗ್ಯೂ ಒಂದೆಡೆ ಕ್ರೀಸ್ ಕಚ್ಚಿ ನಿಂತಿದ್ದ ಬ್ಯೂ ವೆಬ್​ಸ್ಟರ್ (57) ರನ್ನು ಔಟ್ ಮಾಡುವಲ್ಲಿ ಕೊನೆಗೂ ಪ್ರಸಿದ್ಧ್ ಕೃಷ್ಣ ಯಶಸ್ವಿಯಾದರು.

ಅಂತಿಮವಾಗಿ ಸ್ಕಾಟ್ ಬೋಲ್ಯಾಂಡ್ (9) ರನ್ನು ಮೊಹಮ್ಮದ್ ಸಿರಾಜ್ ಕ್ಲೀನ್ ಬೌಲ್ಡ್ ಮಾಡಿದರು. ಇದರೊಂದಿಗೆ ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್​ನಲ್ಲಿ 181 ರನ್​ಗಳಿಗೆ ಆಲೌಟ್ ಆಗಿದೆ.

ಟೀಮ್ ಇಂಡಿಯಾ ಪರ ಕನ್ನಡಿಗ ಪ್ರಸಿದ್ಧ್ ಕೃಷ್ಣ ಹಾಗೂ ಮೊಹಮ್ಮದ್ ಸಿರಾಜ್ ತಲಾ 3 ವಿಕೆಟ್ ಪಡೆದರೆ, ನಿತೀಶ್ ಕುಮಾರ್ ರೆಡ್ಡಿ ಹಾಗೂ ಜಸ್​ಪ್ರೀತ್ ಬುಮ್ರಾ ತಲಾ 2 ವಿಕೆಟ್ ಕಬಳಿಸಿ ಮಿಂಚಿದ್ದಾರೆ.

ಆಸ್ಟ್ರೇಲಿಯಾ ಪ್ಲೇಯಿಂಗ್ 11: ಸ್ಯಾಮ್ ಕೊನ್​ಸ್ಟಾಸ್ , ಉಸ್ಮಾನ್ ಖ್ವಾಜಾ , ಮಾರ್ನಸ್ ಲಾಬುಶೇನ್, ಸ್ಟೀವ್ ಸ್ಮಿತ್ , ಟ್ರಾವಿಸ್ ಹೆಡ್ , ಬ್ಯೂ ವೆಬ್​ಸ್ಟರ್ , ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್) , ಪ್ಯಾಟ್ ಕಮ್ಮಿನ್ಸ್ (ನಾಯಕ) , ಮಿಚೆಲ್ ಸ್ಟಾರ್ಕ್ , ನಾಥನ್ ಲಿಯಾನ್ , ಸ್ಕಾಟ್ ಬೋಲ್ಯಾಂಡ್.

ಇದನ್ನೂ ಓದಿ: IND vs AUS: ಮೈದಾನ ತೊರೆದ ಜಸ್​ಪ್ರೀತ್ ಬುಮ್ರಾ: ವಿರಾಟ್ ಕೊಹ್ಲಿ ಕ್ಯಾಪ್ಟನ್

ಭಾರತ ಪ್ಲೇಯಿಂಗ್ 11: ಯಶಸ್ವಿ ಜೈಸ್ವಾಲ್ , ಕೆಎಲ್ ರಾಹುಲ್ , ಶುಭ್​ಮನ್ ಗಿಲ್ , ವಿರಾಟ್ ಕೊಹ್ಲಿ , ರಿಷಬ್ ಪಂತ್ (ವಿಕೆಟ್ ಕೀಪರ್) , ರವೀಂದ್ರ ಜಡೇಜಾ , ನಿತೀಶ್ ಕುಮಾರ್ ರೆಡ್ಡಿ , ವಾಷಿಂಗ್ಟನ್ ಸುಂದರ್ , ಜಸ್​ಪ್ರೀತ್ ಬುಮ್ರಾ (ನಾಯಕ) , ಪ್ರಸಿದ್ಧ್ ಕೃಷ್ಣ , ಮೊಹಮ್ಮದ್ ಸಿರಾಜ್.