Rohit sharma: ಏನು ಮಾಡಬೇಕೆಂದು ನನಗೆ ಗೊತ್ತಿದೆ… ನಿವೃತ್ತಿಯಾಗುತ್ತಿಲ್ಲ ಎಂದ ರೋಹಿತ್ ಶರ್ಮಾ
Rohit sharma: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ನಿವೃತ್ತಿ ನೀಡಲಿದ್ದಾರೆ ಎಂಬ ಸುದ್ದಿಗಳು ಕೇಳಿ ಬಂದಿದ್ದವು. ಆದರೀಗ ನಾನು ಟೆಸ್ಟ್ ಕ್ರಿಕೆಟ್ನಲ್ಲಿ ಮುಂದುವರೆಯಲಿದ್ದೇನೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. ಚಿಟ್ ಚಾಟ್ವೊಂದರಲ್ಲಿ ಮಾತನಾಡಿದ ರೋಹಿತ್ ಶತ್ಮಾ ಟೆಸ್ಟ್ಗೆ ನಿವೃತ್ತಿ ಘೋಷಿಸುವ ಇರಾದೆಯಲ್ಲಿ ಎಂದಿದ್ದಾರೆ.
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಟೆಸ್ಟ್ ಕೆರಿಯರ್ ಖತಂ ಎಂಬ ಸುದ್ದಿಗಳ ನಡುವೆ ಹಿಟ್ಮ್ಯಾನ್ ನೀಡಿರುವ ಹೇಳಿಕೆ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಅದು ಸಹ ನಾನು ನಿವೃತ್ತಿಯಾಗುತ್ತಿಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡುವ ಮೂಲಕ ಎಂಬುದು ವಿಶೇಷ. ಸಿಡ್ನಿ ಟೆಸ್ಟ್ ಪಂದ್ಯದಿಂದ ಹೊರಗುಳಿದಿರುವ ರೋಹಿತ್ ಶರ್ಮಾ 2ನೇ ದಿನದಾಟದ ಭೋಜನಾ ವಿರಾಮದ ವೇಳೆಗೆ ಸ್ಟಾರ್ ಸ್ಪೋರ್ಟ್ಸ್ ಚಾನೆಲ್ ಜೊತೆ ಚಿಟ್ ಚಾಟ್ ನಡೆಸಿದ್ದರು. ಈ ವೇಳೆ ಮಾತನಾಡಿದ ರೋಹಿತ್ ಶರ್ಮಾ, ಸಿಡ್ನಿ ಟೆಸ್ಟ್ ಪಂದ್ಯದಿಂದ ಹೊರಗುಳಿಯುವ ನಿರ್ಧಾರವನ್ನು ನಾನೇ ಖುದ್ದು ತೆಗೆದುಕೊಂಡಿದ್ದು. ಏಕೆಂದರೆ ನನ್ನ ಬ್ಯಾಟ್ ಈಗ ಸದ್ದು ಮಾಡುತ್ತಿಲ್ಲ ಎಂಬುದು ನನಗೆ ಚೆನ್ನಾಗಿ ಗೊತ್ತಿದೆ.
ನಾನು 2 ಮಕ್ಕಳ ತಂದೆ, ಹಾಗಾಗಿ ನಾನು ಸಹ ಸಂವೇದನಾಶೀಲ, ಪ್ರಬುದ್ಧ, ಯಾವಾಗ ಏನು ಮಾಡಬೇಕೆಂದು ನನಗೆ ತಿಳಿದಿದೆ. ಔಟ್ ಆಫ್ ಫಾರ್ಮ್ನಲ್ಲಿರುವ ನಾನು ಇಂತಹ ಮಹತ್ವದ ಪಂದ್ಯವನ್ನು ಆಡಬಾರದು. ಆಡಲು ಅವಕಾಶ ಸಿಗಬಾರದು. ಹೀಗಾಗಿ ಸಿಡ್ನಿ ಟೆಸ್ಟ್ ಪಂದ್ಯದಿಂದ ಹೊರಗುಳಿಯಲು ನಿರ್ಧರಿಸಿದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ನನ್ನ ನಿವೃತ್ತಿಯನ್ನು ಎದುರು ನೋಡಬೇಡಿ
ನಾನು ಸಿಡ್ನಿ ಟೆಸ್ಟ್ ಪಂದ್ಯದಿಂದ ಮಾತ್ರ ಹೊರಗುಳಿದಿದ್ದೇನೆ. ನನ್ನ ಟೆಸ್ಟ್ ಕೆರಿಯರ್ ಅನ್ನು ಅಂತ್ಯಗೊಳಿಸಿಲ್ಲ. ಈಗ ರನ್‌ಗಳು ಬರುತ್ತಿಲ್ಲ ನಿಜ. ಆದರೆ 5 ತಿಂಗಳು ಕಳೆದರೂ ಬರುವುದಿಲ್ಲ ಎಂಬುದನ್ನು ನಾನು ನಂಬಲ್ಲ. ನಾನಂತು ಕಠಿಣ ಅಭ್ಯಾಸ ಮಾಡುತ್ತೇನೆ. ಈ ಮೂಲಕ ಫಾರ್ಮ್ಗೆ ಮರಳಲಿದ್ದೇನೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಹೀಗಾಗಿ ಪ್ರಸ್ತುತ ನಿರ್ಧಾರವು ನನ್ನ ನಿವೃತ್ತಿಯ ನಿರ್ಧಾರವಲ್ಲ. ಹೊರಗೆ ಲ್ಯಾಪ್‌ಟಾಪ್, ಪೆನ್ನು – ಪೇಪರ್ ಹಿಡಿದು ಕುಳಿತವರು ನಿವೃತ್ತಿ ಯಾವಾಗ ಬರುತ್ತದೆ. ನಾನು ಯಾವ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ನಿರ್ಧರಿಸುವುದಿಲ್ಲ. ಹೀಗಾಗಿ ನನ್ನ ಸಿಡ್ನಿ ಟೆಸ್ಟ್ ಪಂದ್ಯದ ಬಳಿಕ ನನ್ನ ನಿವೃತ್ತಿಯನ್ನು ಎದುರು ನೋಡಬೇಡಿ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಕಳಪೆ ಫಾರ್ಮ್ನಲ್ಲಿ ರೋಹಿತ್ ಶರ್ಮಾ
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ ಅತ್ಯಂತ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಸರಣಿಯ 3 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಅವರು 3, 6, 10, 2 ಮತ್ತು 9 ರನ್‌ಗಳ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ.
ಅಂದರೆ ಟೀಮ್ ಇಂಡಿಯಾ ನಾಯಕ ಕಳೆದ 5 ಇನ್ನಿಂಗ್ಸ್‌ಗಳಲ್ಲಿ 6.20 ಸರಾಸರಿಯಲ್ಲಿ ಕೇವಲ 31 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಇದಕ್ಕೂ ಮುನ್ನ ಬಾಂಗ್ಲಾದೇಶ್ ಮತ್ತು ನ್ಯೂಝಿಲೆಂಡ್ ವಿರುದ್ಧ ಆಡಿದ ಸರಣಿಗಳಲ್ಲಿಯೂ ರೋಹಿತ್ ಶರ್ಮಾ ಸಂಪೂರ್ಣ ವಿಫಲರಾಗಿದ್ದರು. ಕಳೆದ 8 ಟೆಸ್ಟ್ ಪಂದ್ಯಗಳಲ್ಲಿ ಅವರು ಕೇವಲ ಒಂದು ಅರ್ಧಶತಕವನ್ನು ಮಾತ್ರ ಬಾರಿಸಿದ್ದಾರೆ.
ಇದನ್ನೂ ಓದಿ: ಆವೇಶ, ಆಕ್ರೋಶ… ಸ್ಯಾಮ್ ಕೊನ್ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಈ ಕಳಪೆ ಫಾರ್ಮ್ ಕಾರಣದಿಂದಾಗಿ ರೋಹಿತ್ ಶರ್ಮಾ ಅವರನ್ನು ಸಿಡ್ನಿ ಟೆಸ್ಟ್ ಪಂದ್ಯದಿಂದ ಕೈ ಬಿಡಲಾಗಿದೆ. ಅಲ್ಲದೆ ಈ ಸರಣಿಯೊಂದಿಗೆ ಹಿಟ್ಮ್ಯಾನ್ ಟೆಸ್ಟ್ ಕೆರಿಯರ್ ಕೂಡ ಕೊನೆಗೊಳ್ಳಲಿದೆ ಎಂದು ವರದಿಯಾಗಿತ್ತು. ಆದರೀಗ ಸದ್ಯಕ್ಕೆ ನಾನು ನಿವೃತ್ತಿ ನೀಡುತ್ತಿಲ್ಲ ಎಂಬ ಹೇಳಿಕೆಯೊಂದಿಗೆ 37 ವರ್ಷದ ರೋಹಿತ್ ಶರ್ಮಾ ಅಚ್ಚರಿ ಮೂಡಿಸಿದ್ದಾರೆ.