ಎಲ್ಪಿಜಿ ದರಗಳ ಇಳಿಕೆ; 16 ರೂವರೆಗೆ ತಗ್ಗಿದ 19 ಕಿಲೋ ಸಿಲಿಂಡರ್ ಬೆಲೆ; ಜೆಟ್ ಫುಯಲ್ ಕೂಡ ಇಳಿಕೆ
LPG and Jet Fuel prices down: ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್ಗಳ ಬೆಲೆಗಳು ಇಳಿಕೆ ಆಗಿವೆ. 19 ಕಿಲೋ ಎಲ್ಪಿಜಿ ಬೆಲೆ 14.50-16 ರೂನಷ್ಟು ಇಳಿಕೆ ಆಗಿದೆ. 47.5 ಕಿಲೋ ಎಲ್ಪಿಜಿ ಸಿಲಿಂಡರ್ ಬೆಲೆ 36.50 ರೂನಷ್ಟು ಇಳಿಕೆ ಆಗಿದೆ. ಅಡುಗೆ ಅನಿಲಗಳ ಬೆಲೆಗಳಲ್ಲಿ ಬದಲಾವಣೆ ಆಗಿಲ್ಲ. ವಿಮಾನಗಳಿಗೆ ಇಂಧನವಾಗಿ ಬಳಸುವ ಜೆಟ್ ಫುಯೆಲ್ ಬೆಲೆ 1,401 ರೂನಷ್ಟು ಕಡಿಮೆ ಆಗಿದೆ.
ನವದೆಹಲಿ, ಜನವರಿ 1: ಇಂಡಿಯನ್ ಆಯಿಲ್ ಇತ್ಯಾದಿ ಪ್ರಮುಖ ತೈಲ ಮಾರುಕಟ್ಟೆ ಕಂಪನಿಗಳು ಹೊಸ ವರ್ಷಕ್ಕೆ ಎಲ್ಪಿಜಿ ದರಗಳನ್ನು ಇಳಿಸಿವೆ. ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್ಗಳು ತುಸು ಅಗ್ಗಗೊಂಡಿವೆ. 19 ಕಿಲೋ ಕಮರ್ಷಿಯಲ್ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ 14.5 ರೂನಿಂದ 16 ರೂವರೆಗೆ ಇಳಿಕೆ ಆಗಿದೆ. ಬೆಂಗಳೂರಿನಲ್ಲಿ 14.5 ರೂನಷ್ಟು ಇಳಿಕೆ ಆಗಿದೆ. ಇನ್ನು, 47 ಕಿಲೋ ಕಮರ್ಷಿಯಲ್ ಸಿಲಿಂಡರ್ ಬೆಲೆ 36.50 ರೂನಷ್ಟು ಕಡಿಮೆ ಆಗಿದೆ. ಆದರೆ, ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ಗಳ ಬೆಲೆಯಲ್ಲಿ ಬದಲಾವಣೆ ಆಗಿಲ್ಲ.
ಕಮರ್ಷಿಯಲ್ ಸಿಲಿಂಡರ್ಗಳ ಬೆಲೆ ಆರು ತಿಂಗಳ ಬಳಿಕ ಮೊದಲ ಬಾರಿಗೆ ಕಡಿಮೆ ಆಗಿದೆ. 14.2 ಕಿಲೋ ಮತ್ತು 5 ಕಿಲೋ ಎಲ್ಪಿಜಿ ಸಿಲಿಂಡರ್ಗಳು ಗೃಹಬಳಕೆಗೆ ಸೀಮಿತವಾಗಿವೆ. 19 ಕಿಲೋ ಮತ್ತು 47 ಕಿಲೋ ಸಿಲಿಂಡರ್ಗಳು ವಾಣಿಜ್ಯ ಬಳಕೆಗೆ ಇವೆ.
ಇದನ್ನೂ ಓದಿ: Gold Silver Price on 1st January: ಚಿನ್ನದ ಬೆಲೆ 40 ರೂ ಏರಿಕೆ; ಇಲ್ಲಿದೆ ದರಪಟ್ಟಿ
ಪ್ರಮುಖ ನಗರಗಳಲ್ಲಿ 19 ಕಿಲೋ ಎಲ್ಪಿಜಿ ಬೆಲೆ
- ದೆಹಲಿ: 1,804 ರೂ (14.50 ರೂ ಇಳಿಕೆ)
- ಮುಂಬೈ: 1,756 ರೂ (15 ರೂ ಇಳಿಕೆ)
- ಕೋಲ್ಕತಾ: 1,911 ರೂ (16 ರೂ ಇಳಿಕೆ)
- ಚೆನ್ನೈ: 1,966 ರೂ (14.50 ರೂ ಇಳಿಕೆ)
ಬೆಂಗಳೂರಿನಲ್ಲಿ ಎಲ್ಪಿಜಿ ದರಗಳ ಪಟ್ಟಿ
- 14.2 ಕಿಲೋ ಗೃಹ ಬಳಕೆ ಎಲ್ಪಿಜಿ: 805.50 ರೂ (ಬದಲಾವಣೆ ಇಲ್ಲ)
- 5 ಕಿಲೋ ಗೃಹಬಳಕೆ ಎಲ್ಪಿಜಿ: 300.50 ರೂ (ಬದಲಾವಣೆ ಇಲ್ಲ)
- 19 ಕಿಲೋ ಕಮರ್ಷಿಯಲ್ ಎಲ್ಪಿಜಿ: 1,880.50 ರೂ (14.50 ರೂ ಇಳಿಕೆ)
- 47.5 ಕಿಲೋ ಕಮರ್ಷಿಯಲ್ ಎಲ್ಪಿಜಿ: 4,697.50 ರೂ (36.50 ರೂ ಇಳಿಕೆ)
ಜುಲೈ 1ರ ಬಳಿಕ 19 ಕಿಲೋ ಸಿಲಿಂಡರ್ಗಳ ಬೆಲೆ ಮೊದಲ ಬಾರಿಗೆ ಇಳಿಕೆ ಆಗಿದೆ. ಗೃಹಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆ ಮಾರ್ಚ್ 1ರಂದು ಇಳಿಕೆ ಆಗಿತ್ತು. ಅದಾದ ಬಳಿಕ ಯಾವ ಬದಲಾವಣೆ ಕಂಡಿಲ್ಲ. ತೈಲ ಮಾರುಕಟ್ಟೆ ಕಂಪನಿಗಳು ಪ್ರತೀ ತಿಂಗಳ ಮೊದಲ ದಿನದಂದು ದರ ಪರಿಷ್ಕರಣೆ ಮಾಡುತ್ತವೆ.
ಇದನ್ನೂ ಓದಿ: ಇ -ವ್ಯಾಲಟ್, ಎಟಿಎಂ: ಇಪಿಎಫ್ ಹಣ ಹಿಂಪಡೆಯಲು ಇನ್ನಷ್ಟು ಸುಲಭ ಮಾರ್ಗಗಳು
ವಿಮಾನ ಇಂಧನ ಬೆಲೆಯಲ್ಲೂ ಇಳಿಕೆ
ವಿಮಾನಗಳಿಗೆ ಬಳಸಲಾಗುವ ಎಟಿಎಫ್ ಅಥವಾ ಏವಿಯೇಶನ್ ಟರ್ಬೈನ್ ಫುಯಲ್ ಅಥವಾ ಜೆಟ್ ಫುಯೆಲ್ ಇಂಧನದ ಬೆಲೆ ಶೇ. 1.54ರಷ್ಟು ಕಡಿಮೆ ಆಗಿದೆ. ಪ್ರತೀ ಕಿಲೋ ಲೀಟರ್ಗೆ 1,401.37 ರೂನಷ್ಟು ಬೆಲೆ ಇಳಿಕೆ ಆಗಿದೆ. ದೆಹಲಿಯಲ್ಲಿ ಜೆಟ್ ಫುಯೆಲ್ ಬೆಲೆ ಪ್ರತೀ ಕಿಲೋ ಲೀಟರ್ಗೆ 90,455.47 ರೂ ಆಗಿದೆ. ಈ ಬೆಲೆ ಇಳಿಕೆಯು ಏವಿಯೇಶನ್ ಸಂಸ್ಥೆಗಳಿಗೆ ತುಸು ನಿರಾಳ ತರುವ ಸಾಧ್ಯತೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ