AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿಎಸ್​ಟಿ ಸಂಗ್ರಹ 1.77 ಲಕ್ಷ ಕೋಟಿ ರೂ; ಕಳೆದ ವರ್ಷಕ್ಕಿಂತ ಶೇ. 7.3ರಷ್ಟು ಹೆಚ್ಚು ತೆರಿಗೆ

GST collections in 2024 December: 2024ರ ಡಿಸೆಂಬರ್​ನಲ್ಲಿ ಜಿಎಸ್​ಟಿ ತೆರಿಗೆ ಸಂಗ್ರಹ 1,76,857 ಕೋಟಿ ರೂ ಇದೆ. 22,490 ಕೋಟಿ ರೂ ಮೊತ್ತದ ರೀಫಂಡ್​ಗಳನ್ನು ಕಳೆದರೆ ನಿವ್ವಳ ಜಿಎಸ್​ಟಿ ಸಂಗ್ರಹ 1.54 ಲಕ್ಷ ಕೋಟಿ ರೂ ಇದೆ. ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಜಿಎಸ್​​ಟಿ ಸಂಗ್ರಹ 1.8 ಲಕ್ಷ ಕೋಟಿ ರೂ ಗಿಂತಲೂ ಅಧಿಕ ಇತ್ತು.

ಜಿಎಸ್​ಟಿ ಸಂಗ್ರಹ 1.77 ಲಕ್ಷ ಕೋಟಿ ರೂ; ಕಳೆದ ವರ್ಷಕ್ಕಿಂತ ಶೇ. 7.3ರಷ್ಟು ಹೆಚ್ಚು ತೆರಿಗೆ
ಜಿಎಸ್​ಟಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 01, 2025 | 6:35 PM

Share

ನವದೆಹಲಿ, ಜನವರಿ 1: ಡಿಸೆಂಬರ್ ತಿಂಗಳಲ್ಲಿ ಜಿಎಸ್​ಟಿ ಸಂಗ್ರಹ 1,76,857 ಕೋಟಿ ರೂ ಆಗಿದೆ. ಜನವರಿ 1ರಂದು ಅಧಿಕೃತವಾಗಿ ಬಿಡುಗಡೆಯಾದ ದತ್ತಾಂಶದ ಪ್ರಕಾರ 2023ರ ಡಿಸೆಂಬರ್ ತಿಂಗಳಿಗೆ ಹೋಲಿಸಿದರೆ ತೆರಿಗೆ ಸಂಗ್ರಹದಲ್ಲಿ ಶೇ. 7.3ರಷ್ಟು ಹೆಚ್ಚಾಗಿದೆ. 1,76,857 ಕೋಟಿ ರೂ ಒಟ್ಟು ಜಿಎಸ್​ಟಿ ಸಂಗ್ರಹದಲ್ಲಿ ಕೇಂದ್ರದ ಪಾಲಿನ ಜಿಎಸ್​ಟಿ 32,836 ಕೋಟಿ ರೂ ಇದೆ. ರಾಜ್ಯ ಜಿಎಸ್​ಟಿ 40,499 ಕೋಟಿ ರೂ ಇದೆ. ಐಜಿಎಸ್​ಟಿ 47,783 ಕೋಟಿ ರೂ, ಹಾಗೂ ಸೆಸ್ 11,471 ಕೋಟಿ ರೂ ಆಗಿದೆ.

ಡಿಸೆಂಬರ್​ನಲ್ಲಿ ರೀಫಂಡ್​ಗಳಾಗಿರುವ ಪ್ರಮಾಣ ಹೆಚ್ಚಿದೆ. ವರದಿ ಪ್ರಕಾರ 22,490 ಕೋಟಿ ರೂ ಮೊತ್ತದ ರೀಫಂಡ್​ಗಳಾಗಿವೆ. ಕಳೆದ ವರ್ಷದಕ್ಕಿಂತ ಶೇ. 31ರಷ್ಟು ಹೆಚ್ಚು ರೀಫಂಡ್​ಗಳಾಗಿವೆ. ಇದನ್ನು ಕಳೆದು ಉಳಿದ ನಿವ್ವಳ ಜಿಎಸ್​ಟಿ 1.54 ಲಕ್ಷ ಕೋಟಿ ರೂ ಇದೆ. 2023ರ ಡಿಸೆಂಬರ್​ನಲ್ಲಿ ಆದುದಕ್ಕಿಂತ ಶೇ. 3.3ರಷ್ಟು ಹೆಚ್ಚು ನಿವ್ವಳ ಜಿಎಸ್​ಟಿ ಸಿಕ್ಕಿದೆ.

2024ರ ಡಿಸೆಂಬರ್ ತಿಂಗಳಲ್ಲಿ ಆಂತರಿಕ ವಹಿವಾಟುಗಳ ಮೂಲಕ ಸಂಗ್ರಹವಾದ ಜಿಎಸ್​ಟಿ 1.32 ಲಕ್ಷ ಕೋಟಿ ರೂ. ಹಿಂದಿನ ವರ್ಷದಕ್ಕಿಂತ ಇದರಲ್ಲಿ ಶೇ. 8.4ರಷ್ಟು ಹೆಚ್ಚಳ ಆಗಿದೆ. ಇನ್ನು, ಆಮದುಗಳಿಂದ ಬಂದಿರುವ ತೆರಿಗೆ 44,268 ಕೋಟಿ ರೂ ಇದೆ.

ಇದನ್ನೂ ಓದಿ: ಸ್ಪೇಸ್ ಡಾಕಿಂಗ್ ಆಯ್ತು; 2025ರ ಮೊದಲಾರ್ಧದಲ್ಲಿ ಭಾರತದಿಂದ ಬಾಹ್ಯಾಕಾಶ ಯೋಜನೆಗಳ ಸರಮಾಲೆ

ಡಿಸೆಂಬರ್​ನ ಹಿಂದಿನ ತಿಂಗಳಲ್ಲಿ, ಅಂದರೆ ನವೆಂಬರ್​ನಲ್ಲಿ 1.82 ಲಕ್ಷ ಕೋಟಿ ರೂ ಜಿಎಸ್​ಟಿ ಬಂದಿತ್ತು. ಡಿಸೆಂಬರ್​ನಲ್ಲಿ ಜಿಎಸ್​ಟಿ ಸಂಗ್ರಹ ಕಡಿಮೆ ಆಗಿರುವುದು ಅನಿರೀಕ್ಷಿತವಲ್ಲ. ಕಳೆದ ಕ್ವಾರ್ಟರ್​ನಲ್ಲಿ ಜಿಡಿಪಿ ದರ ಕಡಿಮೆ ಆಗಿರುವುದು ಆರ್ಥಿಕ ಚಟುವಟಿಕೆ ಮಂದಗೊಂಡಿರುವ ಸಂಕೇತವಾಗಿದೆ. ಅದಕ್ಕೆ ಅನುಗುಣವಾಗಿ ಜಿಎಸ್​ಟಿ ಸಂಗ್ರಹವೂ ಕಡಿಮೆ ಇದೆ.

ಈ ಕ್ವಾರ್ಟರ್​ನಲ್ಲಿ ಜಿಡಿಪಿ ಹೆಚ್ಚು ಬೆಳವಣಿಗೆ ಹೊಂದುವ ಸಾಧ್ಯತೆ ಇರುವುದರಿಂದ ಮಾಸಿಕ ಜಿಎಸ್​ಟಿ ಸಂಗ್ರಹದಲ್ಲೂ ಹೆಚ್ಚಳವಾಗುವ ನಿರೀಕ್ಷೆ ಇದೆ ಎಂದು ತಜ್ಞರು ಹೇಳುತ್ತಾರೆ.

2024ರಲ್ಲಿ ಕೊನೆಯ ನಾಲ್ಕು ತಿಂಗಳ ಜಿಎಸ್​ಟಿ ಸಂಗ್ರಹದ ವಿವರ

  1. ಸೆಪ್ಟೆಂಬರ್: 1,73,240 ಕೋಟಿ ರೂ
  2. ಅಕ್ಟೋಬರ್: 1,87,346 ಕೋಟಿ ರೂ
  3. ನವೆಂಬರ್: 1,82,269 ಕೋಟಿ ರೂ
  4. ಡಿಸೆಂಬರ್: 1,76,857 ಕೋಟಿ ರೂ

ಇದನ್ನೂ ಓದಿ: ಭಾರತದಿಂದ ಕಾಫಿ ರಫ್ತು; ಮೊದಲ ಬಾರಿ ಒಂದು ಬಿಲಿಯನ್ ಡಾಲರ್ ಮೈಲಿಗಲ್ಲು

ಈ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ (ಏಪ್ರಿಲ್​ನಿಂದ ಡಿಸೆಂಬರ್) 16,33,569 ಕೋಟಿ ರೂ ಜಿಎಸ್​ಟಿ ಸಿಕ್ಕಿದೆ. ಕಳೆದ ವರ್ಷದಕ್ಕಿಂತ ಶೇ. 9.10ರಷ್ಟು ಹೆಚ್ಚು ತೆರಿಗೆ ಬಂದಿದೆ. ಆದರೆ, 2024-25ರ ಹಣಕಾಸು ವರ್ಷಕ್ಕೆ ನಿಗದಿ ಮಾಡಿರುವ ಗುರಿಗಿಂತ ಜಿಎಸ್​ಟಿ ಸಂಗ್ರಹ ಶೇ. 19ರಷ್ಟು ಕಡಿಮೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More