ಬೀದಿ ನಾಯಿಗಳೇ ಉದ್ಯಮಕ್ಕೆ ಮುನ್ನುಡಿ, ರಿಫ್ಲೆಕ್ಟರ್ ಬೆಲ್ಟ್ ತಯಾರಿಸುವ ಉದ್ಯಮ ಆರಂಭಿಸಿ 56 ಲಕ್ಷ ಸಂಪಾದಿಸುತ್ತಿರುವ ಮಹಿಳೆ
ವಾಹನಗಳ ಚಕ್ರದಡಿಗೆ ಬಿದ್ದು ಪ್ರಾಣ ಕಳೆದುಕೊಳ್ಳುತ್ತಿರುವ ಶ್ವಾನಗಳ ಸುದ್ದಿಗಳನ್ನು ಕೇಳುತ್ತಿರುತ್ತೇವೆ. ಈ ಶ್ವಾನಗಳ ರಕ್ಷಣೆಗಾಗಿ ರಿಫ್ಲೆಕ್ಟರ್ ಬೆಲ್ಟ್ ಎನ್ನುವ ಪರಿಕಲ್ಪನೆಯೊಂದಿಗೆ ಪಾಸಿಟಿವಿಟಿ ಸಂಸ್ಥೆಯನ್ನು ಹುಟ್ಟುಹಾಕಿದವರು ಇಂದೋರ್‌ನ ರಿಮ್ಜಿಮ್ ಜೋಶಿ ಶೆಂಡೆ. ರಿಫ್ಲೆಕ್ಟರ್ ಬೆಲ್ಟ್ ತಯಾರಿಸುವ ಉದ್ಯಮದ ಮೂಲಕ ಇದೀಗ ಅದೆಷ್ಟೋ ಮಹಿಳೆಯರಿಗೆ ಉದ್ಯೋಗ ನೀಡಿದ್ದಾರೆ. ಪ್ರಸ್ತುತ ವಾರ್ಷಿಕವಾಗಿ 56 ಲಕ್ಷ ರೂ ಸಂಪಾದಿಸುವ ಮೂಲಕ ಯಶಸ್ವಿ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ.
ರಸ್ತೆ, ಬೀದಿ ಬದಿ ಸೇರಿದಂತೆ ಇನ್ನಿತ್ತರ ಪ್ರದೇಶಗಳಲ್ಲಿ ನೂರಾರು ಬೀದಿನಾಯಿಗಳು ಓಡಾಡುತ್ತಿರುತ್ತದೆ. ರಾತ್ರಿಯ ವೇಳೆಯಲ್ಲಿ ಈ ಬೀದಿ ನಾಯಿಗಳು ವಾಹನ ಅಪಘಾತದಲ್ಲಿ ಸಾವನ್ನಪ್ಪುವಂತಹ ಸುದ್ದಿಗಳನ್ನು ನೀವು ಕೇಳಿರಬಹುದು. ಇದನ್ನು ತಡೆಯುವ ಉದ್ದೇಶದಿಂದ ಮಿನುಗುವ ರಿಫ್ಲೆಕ್ಟರ್ ಬೆಲ್ಟ್ ತಯಾರಿಸುವ ಉದ್ಯಮವೊಂದನ್ನು ರಿಮ್ಜಿಮ್ ಜೋಶಿ ಶೆಂಡೆ ಆರಂಭಿಸಿದ್ದರು. ಆದರೆ ಇಂದು ಪಾಸಿಟಿವಿ ಹೆಸರಿನ ಈ ಕಂಪೆನಿ ಮೂಲಕ ಯಶಸ್ವಿ ಉದ್ಯಮಿಯಾಗಿ ಹೊರಹೊಮ್ಮಿದ್ದು 56 ಲಕ್ಷ ರೂಪಾಯಿ ಸಂಪಾದಿಸುತ್ತಿದ್ದಾರೆ. ಶ್ವಾನಗಳ ಜೀವ ಉಳಿಸುವುದರೊಂದಿಗೆ ಅದೆಷ್ಟೋ ಮಹಿಳೆಯರಿಗೆ ಉದ್ಯೋಗವನ್ನು ನೀಡಿದ್ದಾರೆ.
ಇಂದೋರ್‌ನ ರಿಮ್ಜಿಮ್ ಜೋಶಿ ಶೆಂಡೆ, ಮಾಜಿ ಶಿಕ್ಷಣತಜ್ಞೆ ಮತ್ತು ಸ್ಥಳೀಯ ಅನಿಮಲ್ ವೆಲ್ಫೇರ್ ಕಮ್ಯುನಿಟಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುತ್ತಾರೆ. ಪ್ರಾರಂಭದಿಂದಲೂ ಶ್ವಾನಗಳ ಮೇಲೆ ಅತೀವ ಕಾಳಜಿ ಹೊಂದಿದ್ದರು. ಆದರೆ 2015 ರಲ್ಲಿ ನಡೆದ ಆ ಘಟನೆಯು ಇಂದು ಯಶಸ್ವಿ ಉದ್ಯಮಿಯಾಗಿ ಹೊರ ಹೊಮ್ಮಲು ಕಾರಣವಾಯಿತು. 2015 ರಲ್ಲಿ ವ್ಯಕ್ತಿಯೊಬ್ಬನ ನಿರ್ಲಕ್ಷ್ಯತನದಿಂದ ಶ್ವಾನವೊಂದು ವಾಹನ ಅಪಘಾತದಲ್ಲಿ ಗಾಯಗೊಂಡಿತು. ಆ ತಕ್ಷಣವೇ ವಾಹನ ಸವಾರನು ತಾನು ಮಾಡಿದ್ದು ತಪ್ಪು ಎಂದು ಅರಿತು ರಕ್ಷಣೆಗೆ ಮುಂದಾದರು ಎಂದು ರಿಮ್ಜಿಮ್, ದಿ ಬೆಟರ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಈ ಘಟನೆಯಿಂದ ಪ್ರೇರಣೆ ಪಡೆದ ರಿಮ್ಜಿಮ್ ಅವರು, ಶ್ವಾನಗಳ ಜೀವ ಉಳಿಸಲು ರಿಫ್ಲೆಕ್ಟರ್ ಬೆಲ್ಟ್ ತಯಾರಿಸುವ ಉದ್ಯಮಕ್ಕೆ ಕೈ ಹಾಕಿದರು, ತಮ್ಮ ಉದ್ಯಮಕ್ಕೆ ಪಾಸಿಟಿವಿಟಿ ಎಂದು ಹೆಸರಿಟ್ಟರು. ಈ ರಿಫ್ಲೆಕ್ಟರ್ ಬೆಲ್ಟನ್ನು ಶ್ವಾನಗಳ ಕುತ್ತಿಗೆಗೆ ಹಾಕಿದರೆ ಇದು ರಾತ್ರಿಯ ವೇಳೆ ಪ್ರತಿಫಲಿಸುತ್ತದೆ. ರಾತ್ರಿಯ ವೇಳೆ ಶ್ವಾನಗಳು ರಸ್ತೆಯಲ್ಲಿ ಮಲಗಿದ್ದರೆ ಆ ಬಗ್ಗೆ ವಾಹನ ಚಾಲಕರಿಗೆ ತಿಳಿಯುತ್ತದೆ ಎನ್ನುವ ಉದ್ದೇಶವು ಇವರಾದ್ದಾಗಿತ್ತು. ರಿಮ್ಜಿಮ್ ಅವರಿಗೆ ಈ ಬೆಲ್ಟ್ ತಯಾರಿಸಲು ಕಚ್ಚಾವಸ್ತುಗಳನ್ನು ಎಲ್ಲಿ ಪಡೆಯಬೇಕು ಹಾಗೂ ಹೇಗೆ ತಯಾರಿಸುವುದು ಎನ್ನುವ ಗೊಂದಲವಿತ್ತು. ಆ ಸಮಯದಲ್ಲಿ ರಿಮ್ಜಿಮ್ ಮನೆಯ ಕೆಲಸದಾಕೆ ರೀನಾ ಧನಕ್ ಈ ಬಗ್ಗೆ ಸಲಹೆ ನೀಡಿದರು.
ಪ್ರಾರಂಭದ ದಿನಗಳ ಬಗ್ಗೆ ನೆನಪಿಸಿಕೊಂಡ ಯಶಸ್ವಿ ಉದ್ಯಮಿ ರಿಮ್ಜಿಮ್, ‘ ನಾನು ಹಾಗೂ ರೀನಾ ಧನಕ್ ಪ್ರಾರಂಭದ ದಿನಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ಆಕೆಯ ಸಹಾಯದಿಂದಲೇ ಮೊದಲ ಬೆಲ್ಟ್ ತಯಾರಿಸಿದೆವು. ಈಗಾಗಲೇ ಈ ಸಂಸ್ಥೆಯಲ್ಲಿ ಹನ್ನೆರಡು ಜನ ಮಹಿಳಾ ಕೆಲಸಗಾರರು ಇದ್ದಾರೆ. ತಿಂಗಳಿಗೆ ಎಷ್ಟು ಬೆಲ್ಟ್ ತಯಾರಿಸುತ್ತಾರೆ ಎಂಬುದರ ಮೇಲೆ ಆದಾಯ ನಿರ್ಧಾರವಾಗುತ್ತದೆ. ಈ ಮಹಿಳೆಯರು ತಿಂಗಳಿಗೆ 15,000 ರಿಂದ 18,000 ರೂಪಾಯಿಗಳನ್ನು ಗಳಿಸುತ್ತಾರೆ. ಹಬ್ಬದ ಋತುವಿನಲ್ಲಿ ಬೇಡಿಕೆ ಹೆಚ್ಚಿರುತ್ತದೆ, ಹೀಗಾಗಿ ತಿಂಗಳ ಆದಾಯವು ಹೆಚ್ಚಾಗುತ್ತದೆ’ ಎಂದು ದಿ ಬೆಟರ್ ಇಂಡಿಯಾಗೆ ತಿಳಿಸಿದ್ದಾರೆ.
2019 ರ ವೇಳೆಗೆ ಈ ಸಂಸ್ಥೆಯಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ತರಬೇತಿ ಮತ್ತು ಯಂತ್ರಗಳನ್ನು ನೀಡುವಷ್ಟು ದೊಡ್ಡದಾಗಿ ಬೆಳೆಯಿತು. ಹೀಗಾಗಿ ಮಹಿಳೆಯರು ಮನೆಯಿಂದಲೇ ಕೆಲಸ ಮಾಡಲು ಸಾಧ್ಯವಾಯಿತು. ಪಾಸಿಟಿವಿಟಿ ಒಂದು ಸ್ವಾವಲಂಬಿ ಉದ್ಯಮವಾಗಿ ಬೆಳೆಯಲು ಮೂರು ವರ್ಷಗಳನ್ನು ತೆಗೆದುಕೊಂಡಿತಾದರೂ, ರಿಫ್ಲೆಕ್ಟರ್ ಬೆಲ್ಟ್ ಮಾತ್ರವಲ್ಲದೇ, ಕ್ಯೂಆರ್ ಕೋಡ್ ಆಧಾರಿತ ರಿಫ್ಲೆಕ್ಟರ್ ಬೆಲ್ಟನ್ನು ತಯಾರಿಸಲಾಗುತ್ತಿದೆ.
ಇದನ್ನೂ ಓದಿ: ನಿಮ್ಮ ಸಂಗಾತಿ ನಿಮಗೆ ಮೋಸ ಮಾಡುತ್ತಿದ್ದಾರೆಯೇ? ಹಾಗಾದ್ರೆ ಹೀಗೆ ತಿಳಿದುಕೊಳ್ಳಿ
ಇದರಲ್ಲಿ ಶ್ವಾನದ ಹೆಸರು, ವಯಸ್ಸು, ವ್ಯಾಕ್ಸಿನೇಷನ್ ಇತಿಹಾಸ, ವೈದ್ಯಕೀಯ ಇತಿಹಾಸ ಮತ್ತು ಸ್ಥಳ ಸೇರಿದಂತೆ ಅಗತ್ಯ ಮಾಹಿತಿಯಿರುತ್ತದೆ. ಪ್ರಸ್ತುತ 12 ಮಹಿಳೆಯರು ಕೆಲಸ ಮಾಡುತ್ತಿದ್ದು, ಈ ಸಂಸ್ಥೆಯನ್ನು ವಿಸ್ತರಿಸಲು ಯೋಜಿಸಲಾಗಿದೆ. 2023 ರಲ್ಲಿ 56 ಲಕ್ಷ ಆದಾಯವನ್ನು ಗಳಿಸಿದ್ದು 2024 ರಲ್ಲಿ 77 ಲಕ್ಷ ರೂಪಾಯಿ ಆದಾಯವನ್ನು ನಿರೀಕ್ಷೆ ಮಾಡಲಾಗಿತ್ತಂತೆ. ರಿಮ್ಜಿಮ್ ಅವರ ಪತಿ ತುಷಾರ್ ಶೆಂಡೆ ಪಾಸಿಟಿವಿಟಿ ಪ್ರಯಾಣದ ನಿರ್ಣಾಯಕ ಭಾಗವಾಗಿದ್ದು, ಎಲ್ಲವನ್ನು ನಿಭಾಯಿಸಿಕೊಂಡು ಹೋಗುವಲ್ಲಿ ಪತ್ನಿಗೆ ಸಹಕಾರ ನೀಡುತ್ತಿದ್ದಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ