ವಿಮಾನ ಚಾಲಕರ ಲೈಸೆನ್ಸ್​ಗೆ ಸ್ಮಾರ್ಟ್​ಕಾರ್ಡ್ ಅಲ್ಲ, ಡಿಜಿಟಲ್​ನಲ್ಲೇ ಲಭ್ಯ; ಇ-ಲೈಸೆನ್ಸ್ ನೀಡುವ ಎರಡನೇ ದೇಶ ಭಾರತ

Civil Aviation Ministry's digital transformation initiatives: ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ಆಧುನೀಕರಣಕ್ಕೆ ಒತ್ತು ಕೊಡುತ್ತಿದ್ದು ಹಲವು ಉಪಕ್ರಮಗಳನ್ನು ತೆಗೆದುಕೊಂಡಿದೆ. ಅದರ ಭಾಗವಾಗಿ, ವಿಮಾನ ಪೈಲಟ್​ಗಳಿಗೆ ಲೈಸೆನ್ಸ್ ವಿತರಣೆ ವ್ಯವಸ್ಥೆಯಲ್ಲಿ ಸುಧಾರಣೆ ತಂದಿದೆ. ಸ್ಮಾರ್ಟ್ ಕಾರ್ಡ್ ಬದಲು ಪೈಲಟ್​ಗಳಿಗೆ ಇ-ಲೈಸೆನ್ಸ್ ಕೊಡಲಾಗುತ್ತಿದೆ. ಕೇಂದ್ರ ಸಿವಿಲ್ ಏವಿಯೇಶನ್ ಮಿನಿಸ್ಟರ್ ರಾಮಮೋಹನ್ ನಾಯ್ಡು ಕಳೆದ ವಾರ ಈ ಉಪಕ್ರಮ ಘೋಷಿಸಿದ್ದಾರೆ.

ವಿಮಾನ ಚಾಲಕರ ಲೈಸೆನ್ಸ್​ಗೆ ಸ್ಮಾರ್ಟ್​ಕಾರ್ಡ್ ಅಲ್ಲ, ಡಿಜಿಟಲ್​ನಲ್ಲೇ ಲಭ್ಯ; ಇ-ಲೈಸೆನ್ಸ್ ನೀಡುವ ಎರಡನೇ ದೇಶ ಭಾರತ
ವಿಮಾನ ಚಾಲಕಿಯರು

Updated on: Feb 25, 2025 | 11:27 AM

ನವದೆಹಲಿ, ಫೆಬ್ರುವರಿ 25: ಅನಗತ್ಯ ಪ್ರಕ್ರಿಯೆಗಳನ್ನು ತೆಗೆದುಹಾಕಿ ವ್ಯವಸ್ಥೆಯನ್ನು ಸರಳಗೊಳಿಸಲು ಆದ್ಯತೆ ನೀಡುತ್ತಿರುವ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ವಿಮಾನ ಪೈಲಟ್​ಗಳಿಗೆ ಎಲೆಕ್ಟ್ರಾನಿಕ್ ಪರವಾನಿಗೆ ನೀಡುತ್ತಿದೆ. ನಾಗರಿಕ ವಿಮಾನಯಾನ ಆಡಳಿತವನ್ನು ಆಧುನೀಕರಣಗೊಳಿಸುವ ಹೆಜ್ಜೆಯ ಭಾಗವಾಗಿ ಡಿಜಿಟಲ್ ಪೈಲಟ್ ಲೈಸನ್ಸ್​ಗಳನ್ನು ನೀಡಲಾಗುತ್ತಿದೆ. ನಾಗರಿಕ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಕಳೆದ ವಾರ ಪೈಲಟ್​ಗಳಿಗೆ ಎಲೆಕ್ಟ್ರಾನಿಕ್ ಪರ್ಸೋನಲ್ ಲೈಸೆನ್ಸ್ (ಇಪಿಎಲ್) ನೀಡುವ ಈ ಉಪಕ್ರಮ ಜಾರಿಗೆ ತಂದಿದ್ದಾರೆ.

ವಿಮಾನ ಪೈಲಟ್​ಗಳಿಗೆ ಇ-ಲೈಸೆನ್ಸ್ ನೀಡುವ ವ್ಯವಸ್ಥೆಗೆ ಅಂತಾರಾಷ್ಟ್ರೀಯ ಸಿವಿಲ್ ಏವಿಯೇಶನ್ ಸಂಸ್ಥೆ (ಐಸಿಎಒ) ಒಪ್ಪಿಗೆ ನೀಡಿದೆ. ಪೈಲಟ್​ಗಳಿಗೆ ಇ-ಲೈಸೆನ್ಸ್ ನೀಡುತ್ತಿರುವ ಎರಡನೇ ದೇಶ ಭಾರತ. ಚೀನಾದಲ್ಲಿ ಈಗಾಗಲೇ ಇಂಥದ್ದೊಂದು ವ್ಯವಸ್ಥೆ ಚಾಲನೆಯಲ್ಲಿದೆ.

ಇದನ್ನೂ ಓದಿ: ನಷ್ಟದಲ್ಲಿರುವ ಸಂಸ್ಥೆಗಳ ಸಹಯೋಗ; ಟಾಟಾ ಪ್ಲೇ, ಏರ್ಟೆಲ್ ಡಿಟಿಎಚ್ ವಿಲೀನ ಒಪ್ಪಂದ ಅಂತಿಮ ಹಂತದಲ್ಲಿ

ಪೈಲಟ್​ಗಳಿಗೆ ಇ-ಲೈಸೆನ್ಸ್ ನೀಡುವುದರಿಂದ ಏನು ಉಪಯೋಗ?

ಸದ್ಯ ವಿಮಾನದ ಪೈಲಟ್​ಗಳಿಗೆ ಸ್ಮಾರ್ಟ್ ಕಾರ್ಡ್ ರೂಪದಲ್ಲಿ ಲೈಸೆನ್ಸ್ ನೀಡಲಾಗುತ್ತಿದೆ. 2024ರ ವರ್ಷವೊಂದರಲ್ಲೇ 20,000 ಪೈಲಟ್​ಗಳಿಗೆ ಸ್ಮಾರ್ಟ್​ಕಾರ್ಡ್ ಪ್ರಿಂಟ್ ಮಾಡಲಾಗಿತ್ತು. ಈವರೆಗೆ 62,000ಕ್ಕೂ ಹೆಚ್ಚು ಕಾರ್ಡ್​ಗಳನ್ನು ಪ್ರಿಂಟ್ ಮಾಡಲಾಗಿದೆ. ತಿಂಗಳಿಗೆ ಸರಾಸರಿಯಾಗಿ 2,667 ಕಾರ್ಡ್​ಗಳನ್ನು ಮುದ್ರಿಸಬೇಕಾಗುತ್ತಿದೆ.

ಈಗ ಸಾರಿಗೆ ಇಲಾಖೆಯ ಲೈಸೆನ್ಸ್, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಇತ್ಯಾದಿ ಅಗತ್ಯ ದಾಖಲೆಗಳೆಲ್ಲವೂ ಎಲೆಕ್ಟ್ರಾನಿಕ್ ರೂಪದಲ್ಲೂ ಲಭ್ಯವಾಗಿವೆ. ಇ-ದಾಖಲೆಗಳಿದ್ದರೆ ನೀವು ಭೌತಿಕ ದಾಖಲೆಗಳನ್ನು ಕೊಂಡೊಯ್ಯುವ ಅವಶ್ಯಕತೆ ಇರುವುಲ್ಲ. ಕಾರ್ಡ್ ಕಳೆದುಹೋಗುವ ಭೀತಿ ಪಡಬೇಕಿಲ್ಲ. ಎಲೆಕ್ಟ್ರಾನಿಕ್ ರೂಪದಲ್ಲಿದ್ದರೆ ನೀವು ಎಲ್ಲೇ ಆದರೂ ಅದನ್ನು ತೆಗೆಯಬಹುದು. ಕಾರ್ಡ್ ಮುದ್ರಿಸಲು ಪ್ಲಾಸ್ಟಿಕ್, ಪೇಪರ್ ಇತ್ಯಾದಿ ಬಳಸುವುದನ್ನು ತಪ್ಪಿಸಬಹುದು.

ಇದನ್ನೂ ಓದಿ: ಅತಿವೇಗದ ಆರ್ಥಿಕತೆ; ಮುಂಬರುವ ವರ್ಷಗಳಲ್ಲೂ ಭಾರತ ಮುಂಚೂಣಿಯಲ್ಲಿ: ಮಧ್ಯಪ್ರದೇಶದಲ್ಲಿ ಪ್ರಧಾನಿ ಹೇಳಿಕೆ

ಪೈಲಟ್​ಗಳಿಗೆ ಇ-ಲೈಸೆನ್ಸ್ ಇಜಿಸಿಎ ಮೊಬೈಲ್ ಆ್ಯಪ್​ನಲ್ಲಿ ಲಭ್ಯ ಇರುತ್ತದೆ. ಈ ಕ್ರಮವು ಸಿವಿಲ್ ಏವಿಯೇಶನ್ ಕ್ಷೇತ್ರದ ಆಧುನೀಕರಣದ ಒಂದು ಭಾಗ ಮಾತ್ರವೇ ಆಗಿದೆ. ಡ್ರೋನ್​ಗಳಿಗೆ ಡಿಜಿಟಲ್ ಸ್ಕೈ ಪ್ಲಾಟ್​ಫಾರ್ಮ್, ವಿಮಾನಗಳ ಕಾರ್ಯಾಚರಣೆಗೆ ಎಲೆಕ್ಟ್ರಾನಿಕ್ ಫ್ಲೈಟ್ ಫೋಲ್ಡರ್ ಇತ್ಯಾದಿ ಉಪಕ್ರಮಗಳನ್ನು ಇಲಾಖೆ ತೆಗೆದುಕೊಂಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ