OpenAI vs Elon Musk: ಮೈಕ್ರೋಸಾಫ್ಟ್ ಜೊತೆ ಓಪನ್​ಎಐ ಅನೈತಿಕ ಸಂಬಂಧ? ಕೋರ್ಟ್​ನಲ್ಲಿ ಇಲಾನ್ ಮಸ್ಕ್ ಮೊಕದ್ದಮೆ

|

Updated on: Mar 01, 2024 | 4:22 PM

Lawsuit in San Fransisco Court: ಚ್ಯಾಟ್​ಜಿಪಿಟಿ ಸೃಷ್ಟಿಸಿದ ಓಪನ್​ಎಐ ಸಂಸ್ಥೆ ವಿರುದ್ಧ ಉದ್ಯಮಿ ಇಲಾನ್ ಮಸ್ಕ್ ಕೋರ್ಟ್ ಮೆಟ್ಟಿಲೇರಿದ್ದಾರೆ. ಜನರ ಒಳಿತಿನ ಬದಲು ಮೈಕ್ರೋಸಾಫ್ಟ್​ಗೆ ಲಾಭ ತರಲು ಓಪನ್​ಎಐ ಕೆಲಸ ಮಾಡುತ್ತಿದೆ ಎನ್ನುವ ಗಂಭೀರ ಆರೋಪವನ್ನು ಮಸ್ಕ್ ಮಾಡಿದ್ದಾರೆ. ಓಪನ್​ಎಐ ಸ್ಥಾಪನೆಯಾಗುವಾಗ ಮಾಡಲಾಗಿದ್ದ ನಿಯಮಗಳನ್ನು ಮೀರಲಾಗಿದೆ. ನ್ಯಾಯಸಮ್ಮತವಲ್ಲದ ವ್ಯವಹಾರಗಳನ್ನು ನಡೆಸುತ್ತಿದೆ ಎಂದು ಸ್ಯಾನ್ ಫ್ರಾನ್ಸಿಸ್ಕೋದ ಕೋರ್ಟ್​ವೊಂದರಲ್ಲಿ ಹಾಕಿದ ಮೊಕದ್ದಮೆಯಲ್ಲಿ ಆರೋಪಿಸಿದ್ದಾರೆ.

OpenAI vs Elon Musk: ಮೈಕ್ರೋಸಾಫ್ಟ್ ಜೊತೆ ಓಪನ್​ಎಐ ಅನೈತಿಕ ಸಂಬಂಧ? ಕೋರ್ಟ್​ನಲ್ಲಿ ಇಲಾನ್ ಮಸ್ಕ್ ಮೊಕದ್ದಮೆ
ಇಲಾನ್ ಮಸ್ಕ್
Follow us on

ಸ್ಯಾನ್ ಫ್ರಾನ್ಸಿಸ್ಕೋ, ಮಾರ್ಚ್ 1: ವಿಶ್ವದ ಅತಿಶ್ರೀಮಂತ ವ್ಯಕ್ತಿ ಮತ್ತು ಉದ್ಯಮಿ ಇಲಾನ್ ಮಸ್ಕ್ ಅವರು ಓಪನ್ ಎಐ ಸಂಸ್ಥೆ (OpenAI) ವಿರುದ್ಧ ಕಾನೂನು ಮೊಕದ್ದಮೆ (lawsuit) ಹಾಕಿದ್ದಾರೆ. ಓಪನ್ ಎಐ ಸ್ಥಾಪನೆಯಾಗುವಾಗ ಹೊಂದಿದ್ದ ಮೂಲ ಆಶಯದಿಂದ ಅದು ಈಗ ದೂರ ಸರಿದಿದೆ. ಸಾರ್ವಜನಿಕ ಒಳಿತಿಗಾಗಿ ಎಐ ಸಿಸ್ಟಮ್​ಗಳನ್ನು ಅಭಿವೃದ್ಧಿಪಡಿಸಬೇಕಿದ್ದ ಸಂಸ್ಥೆ ಈಗ ಮೈಕ್ರೋಸಾಫ್ಟ್​ಗೆ ಲಾಭ ಮಾಡಿಕೊಡುವ ಕಾರ್ಯಕ್ಕೆ ಸೀಮಿತವಾಗಿದೆ ಎಂದು ಇಲಾನ್ ಮಸ್ಕ್ (Elon Musk) ತಮ್ಮ ಮೊಕದ್ದಮೆಯಲ್ಲಿ ಆರೋಪಿಸಿದ್ದಾರೆ. ಕುತೂಹಲ ಎಂದರೆ ಓಪನ್​ಎಐ ಸ್ಥಾಪನೆಯ ಮೂಲ ರೂವಾರಿಗಳಲ್ಲಿ ಮತ್ತು ಆರಂಭಿಕ ಹೂಡಿಕೆದಾರರಲ್ಲಿ ಇಲಾನ್ ಮಸ್ಕ್ ಒಬ್ಬರು. ಅದರ ಬೋರ್ಡ್ ಸದಸ್ಯರೂ ಆಗಿದ್ದರು. 2018ರಲ್ಲೇ ಅವರು ಓಪನ್​ಎಐನ ಬದಲಾದ ಧೋರಣೆ ವಿರುದ್ಧ ಅಸಮಾಧಾನಗೊಂಡು ಸಂಬಂಧ ಕಡಿದುಕೊಂಡಿದ್ದರು.

ಓಪನ್​ಎಐನಲ್ಲಿ ಮೈಕ್ರೋಸಾಫ್ಟ್ ಪ್ರಮುಖ ಹೂಡಿಕೆದಾರ ಸಂಸ್ಥೆಯಾಗಿದೆ. ಇತ್ತೀಚೆಗಷ್ಟೇ ಚ್ಯಾಟ್​ಜಿಪಿಟಿ ಎಂಬ ಎಐ ಚ್ಯಾಟ್​ಬೋಟ್ ಅನ್ನು ಬಿಡುಗಡೆ ಮಾಡಿತ್ತು. ಅದರ ಬೆನ್ನಲ್ಲೇ ಗೂಗಲ್ ಮೊದಲಾದ ಹಲವು ಸಂಸ್ಥೆಗಳೂ ಕೂಡ ತಮ್ಮದೇ ಎಐ ಚ್ಯಾಟ್ ಅಪ್ಲಿಕೇಶನ್​ಗಳನ್ನು ಬಿಡುಗಡೆ ಮಾಡಿವೆ.

ಇದನ್ನೂ ಓದಿ: ಭಾರತದ ಬ್ಲಾಕ್​ಬಸ್ಟರ್ ಜಿಡಿಪಿ ದರದ ಎಫೆಕ್ಟ್; ಈ ವರ್ಷದ ಆರ್ಥಿಕತೆ ಬೆಳವಣಿಗೆಯ ನಿರೀಕ್ಷೆ ಹೆಚ್ಚಿಸಿದ ಬಾರ್​ಕ್ಲೇಸ್

‘ಓಪನ್​ಎಐ ಸಂಸ್ಥೆ ವಿಶ್ವದ ಅತಿದೊಡ್ಡ ತಂತ್ರಜ್ಞಾನ ಸಂಸ್ಥೆಯಾದ ಮೈಕ್ರೋಸಾಫ್ಟ್​ನ ಸಬ್ಸಿಡಿಯರಿಯಾಗಿ ಬದಲಾಗಿದೆ. ಅದರ ಹೊಸ ಮಂಡಳಿಯ ನೆರಳಿನಲ್ಲಿ, ಮನುಕುಲದ ಅನುಕೂಲದ ಬದಲು ಮೈಕ್ರೋಸಾಫ್ಟ್​ಗೆ ಲಾಭ ಹೆಚ್ಚಿಸಲು ಯತ್ನಿಸುತ್ತಿದೆ,’ ಎಂದು ಸ್ಪೇಸ್ ಎಕ್ಸ್, ಟೆಸ್ಲಾ, ಟ್ಟಿಟ್ಟರ್ ಇತ್ಯಾದಿ ಕಂಪನಿಗಳ ಒಡೆಯರಾದ ಇಲಾನ್ ಮಸ್ಕ್ ಕಿಡಿಕಾರಿದ್ದಾರೆ.

ಓಪನ್​ಎಐ ಅದರ ಸಂಸ್ಥಾಪನಾ ಒಪ್ಪಂದದ ನಿಯಮಗಳನ್ನು ಮುರಿದಿದೆ. ನ್ಯಾಯಸಮ್ಮತವಲ್ಲದ ವ್ಯಾವಹಾರಿಕ ನಡವಳಿಕೆಗಳನ್ನು ತೋರಿದೆ ಎಂದೂ ಇಲಾನ್ ಮಸ್ಕ್ ಆರೋಪ ಮಾಡಿದ್ದಾರೆ.

ಅಂದಹಾಗೆ ಇಲಾನ್ ಮಸ್​ ಅವರು ಸ್ಯಾನ್ ಫ್ರಾನ್ಸಿಸ್ಕೋದ ನ್ಯಾಯಾಲಯವೊಂದರಲ್ಲಿ ಈ ಕಾನೂನು ಮೊಕದ್ದಮೆ ದಾಖಲಾಗಿದೆ. ಓಪನ್​ಎಐ ಅಧ್ಯಕ್ಷ ಗ್ರೆಗೋರಿ ಬ್ರಾಕ್​ಮನ್ ಮತ್ತು ಸಿಇಒ ಸ್ಯಾಮ್ ಆಲ್ಟ್​ಮ್ಯಾನ್ ಅವರನ್ನು ಆರೋಪಿತರನ್ನಾಗಿ ಮಾಡಲಾಗಿದೆ. ಹಾಗೆಯೇ, ಓಪನ್​ಎಐನ ತಂತ್ರಜ್ಞಾನದಿಂದ ಮೈಕ್ರೋಸಾಫ್ಟ್ ಆಗಲೀ, ಓಪನ್​ಎಐನ ಉನ್ನತ ಅಧಿಕಾರಿಗಳಾಗಲೀ ಲಾಭ ಮಾಡಿಕೊಳ್ಳದಂತೆ ತಡೆ ನೀಡಬೇಕೆಂದು ಇಲಾನ್ ಮಸ್ಕ್ ಕೋರ್ಟ್​ನಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಪೇಮೆಂಟ್ಸ್ ಬ್ಯಾಂಕ್​ನೊಂದಿಗಿನ ಎಲ್ಲಾ ಒಪ್ಪಂದಗಳನ್ನೂ ಕಡಿದುಕೊಂಡ ಪೇಟಿಎಂ

ಸ್ಯಾಮ್ ಆಲ್ಟ್​ಮ್ಯಾನ್ ಉದ್ಯೋಗ ಉಳಿಸಿದ ಮೈಕ್ರೋಸಾಫ್ಟ್

ಕಳೆದ ವರ್ಷ ನಡೆದ ಅಚ್ಚರಿ ಬೆಳವಣಿಗೆಯಲ್ಲಿ ಓಪನ್​ಎಐ ಸಿಇಒ ಸ್ಥಾನದಿಂದ ಸ್ಯಾಮ್ ಆಲ್ಟ್​​ಮ್ಯಾನ್ ಅವರನ್ನು ಕಿತ್ತುಹಾಕಲಾಗಿತ್ತು. ಆದರೆ, ಕ್ಷಿಪ್ರ ಬೆಳವಣಿಗೆಯಲ್ಲಿ ಸ್ಯಾಮ್ ಆಲ್ಟ್​ಮ್ಯಾನ್ ಅವರು ಸಿಇಒ ಸ್ಥಾನಕ್ಕೆ ಮರಳಿದ್ದಷ್ಟೇ ಅಲ್ಲದೆ, ಮಂಡಳಿ ಸದಸ್ಯರು ಹೊರಹಾಕಲ್ಪಟ್ಟಿದ್ದರು. ಬೇರೆ ಸದಸ್ಯರನ್ನು ಸೇರಿಸಿ ಮಂಡಳಿ ಪುನಾರಚನೆ ಮಾಡಲಾಗಿತ್ತು. ಓಪನ್​ಎಐನ ಪ್ರಮುಖ ಹೂಡಿಕೆದಾರರಾಗಿರುವ ಮೈಕ್ರೋಸಾಫ್ಟ್ ಈ ದಿಢೀರ್ ಬೆಳವಣಿಗೆಯ ಹಿಂದಿನ ಶಕ್ತಿಯಾಗಿತ್ತು ಎನ್ನಲಾಗಿದೆ. ಇಲಾನ್ ಮಸ್ಕ್ ಈ ವಿಚಾರವನ್ನು ತಮ್ಮ ಮೊಕದ್ದಮೆಯಲ್ಲಿ ಪ್ರಸ್ತಾಪಿಸಿ, ಈಗಿನ ಬೋರ್ಡ್ ಸದಸ್ಯರಿಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಗ್ಗೆಯಾಗಲೀ, ಎಐ ಟೆಕ್ನಾಲಜಿ ಬಗ್ಗೆಯಾಗಲೀ ಯಾವ ಅರಿವೂ ಇಲ್ಲ ಎಂದು ದೂರಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ