ಡ್ರೈವರ್ ಇರುವ ಕಾರಿಗಿಂತಲೂ ಇದು 20 ಪಟ್ಟು ಸೇಫ್? ಸೈಬರ್​ಕ್ಯಾಬ್ ಅನಾವರಣಗೊಳಿಸಿದ ಇಲಾನ್ ಮಸ್ಕ್; ಬೆಲೆ 30,000 ಮಾತ್ರ

|

Updated on: Oct 11, 2024 | 5:58 PM

Elon Musk unveils driverless Cybercab: ವಿಶ್ವದ ನಂಬರ್ ಒನ್ ಎಲೆಕ್ಟ್ರಿಕ್ ಕಾರ್ ಕಂಪನಿ ಟೆಸ್ಲಾ ಇದೀಗ ಬಹುನಿರೀಕ್ಷಿತ ಸೈಬರ್​ಕ್ಯಾಬ್ ಅನ್ನು ಅನಾವರಣಗೊಳಿಸಿದೆ. ಅಮೆರಿಕದ ಲಾಸ್ ಏಂಜಲಿಸ್​ನಲ್ಲಿ ಇಲಾನ್ ಮಸ್ಕ್ ಈ ಕ್ಯಾಬ್​ನಲ್ಲಿ ಕೂತು ಪ್ರಯಾಣಿಸುವ ಮೂಲಕ ಉದ್ಘಾಟನೆಯಾಗಿದೆ. ಸದ್ಯ 50 ಸೈಬರ್​ಕ್ಯಾಬ್​​ಗಳನ್ನು ತಯಾರಿಸಲಾಗಿದ್ದು, 2026ರಿಂದ ಪೂರ್ಣಪ್ರಮಾಣದಲ್ಲಿ ಪ್ರೊಡಕ್ಷನ್ ಶುರುವಾಗಲಿದೆ.

ಡ್ರೈವರ್ ಇರುವ ಕಾರಿಗಿಂತಲೂ ಇದು 20 ಪಟ್ಟು ಸೇಫ್? ಸೈಬರ್​ಕ್ಯಾಬ್ ಅನಾವರಣಗೊಳಿಸಿದ ಇಲಾನ್ ಮಸ್ಕ್; ಬೆಲೆ 30,000 ಮಾತ್ರ
ಸೈಬರ್​ಕ್ಯಾಬ್
Follow us on

ಲಾಸ್ ಏಂಜಲಿಸ್, ಅಕ್ಟೋಬರ್ 11: ಅಮೆರಿಕದ ಉದ್ಯಮಿ ಇಲಾನ್ ಮಸ್ಕ್ ಅವರ ಟೆಸ್ಲಾ ಕಂಪನಿ ತಯಾರಿಸಿರುವ ರೋಬೋಟ್ಯಾಕ್ಸಿಯನ್ನು ಕೊನೆಗೂ ಅನಾವರಣಗೊಳಿಸಿದೆ. ಅಮೆರಿಕದ ಲಾಸ್ ಏಂಜಲಿಸ್​ನಲ್ಲಿರುವ ವಾರ್ನರ್ ಬ್ರೋಸ್ ಸ್ಟುಡಿಯೋ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೈಬರ್ ಕ್ಯಾಬ್ ಅನ್ನು ಸಾರ್ವತ್ರಿಕವಾಗಿ ಪ್ರದರ್ಶಿಸಲಾಯಿತು. ಇಲಾನ್ ಮಸ್ಕ್ ಅವರು ಈ ಕ್ಯಾಬ್​ನಲ್ಲಿ ಪ್ರಯಾಣ ಕೂಡ ಮಾಡಿ, ರೋಬೋ ಟ್ಯಾಕ್ಸಿಯ ನಿಜ ಸಾಮರ್ಥ್ಯವನ್ನು ತೋರ್ಪಡಿಸಿದ್ದಾರೆ.

ಇಲಾನ್ ಮಸ್ಕ್ ನೀಡಿದ ಮಾಹಿತಿ ಪ್ರಕಾರ 2026ರಿಂದ ಸೈಬರ್​ಕ್ಯಾಬ್ ಕಾರುಗಳ ತಯಾರಿಕೆ ಆರಂಭವಾಗಲಿದೆ. ಅದರ ಬೆಲೆ 30,000 ಡಾಲರ್​ನೊಳಗೆ ಇರಲಿದೆಯಂತೆ. ರುಪಾಯಿಗೆ ಪರಿವರ್ತಿಸಿದರೆ 25 ಲಕ್ಷ ರೂ ಆಗುತ್ತದೆ. ಆದರೆ, ಆಮದು ಸುಂಕ ಇರುವುದರಿಂದ ಇದನ್ನು ಆಮದು ಮಾಡಿಕೊಳ್ಳುವುದಾದರೆ ಭಾರತದಲ್ಲಿ ಇದರ ಬೆಲೆ ಕನಿಷ್ಠ 50 ಲಕ್ಷ ರೂ ಆಗುತ್ತದೆ.

ಇದನ್ನೂ ಓದಿ: ರತನ್ ಟಾಟಾ ನಿಧನಕ್ಕೆ ಸಂತಾಪ ಸೂಚಿಸಲು ಹೋಗಿ ಪೇಟಿಎಂ ಸಿಇಒ ಯಡವಟ್ಟು; ಡಿಲೀಟ್ ಆದ ಪೋಸ್ಟ್​ನಲ್ಲಿ ಶರ್ಮಾ ಬರೆದದ್ದೇನು?

ಡ್ರೈವಿಂಗ್ ಮಾಡಬೇಕಿಲ್ಲ… ಆದರೆ, ಇದು ಸೇಫಾ?

ಸೈಬರ್ ಕ್ಯಾಬ್ ಅಥವಾ ರೋಬೋಟ್ಯಾಕ್ಸಿ ಸ್ವಯಂಚಾಲನೆಯ ವಾಹನವಾಗಿದೆ. ಸದ್ಯ ಈ ಸೈಬರ್​ಕ್ಯಾಬ್​ನಲ್ಲಿ ಇಬ್ಬರು ಮಾತ್ರ ಕೂರಲು ಸ್ಥಳಾವಕಾಶ ಇದೆ. ಡ್ರೈವರ್ ಬೇಕಾಗಿಲ್ಲ. ಸ್ಟೀರಿಂಗ್ ಆಗಲೀ, ಪೆಡಲ್ ಆಗಲೀ ಇದಕ್ಕೆ ಇರುವುದಿಲ್ಲ. ಎಲ್ಲವೂ ಸ್ವಯಂಚಾಲಿತವೇ ಆಗಿರುತ್ತದೆ. ಮಸ್ಕ್ ಪ್ರಕಾರ ಸಿಟಿ ಬಸ್ಸುಗಳನ್ನು ಚಲಾಯಿಸಲು ಆಗುವ ವೆಚ್ಚ ಒಂದು ಮೈಲಿಗೆ ಒಂದು ಡಾಲರ್. ಆದರೆ, ಸೈಬರ್​ಕ್ಯಾಬ್​ನ ಆಪರೇಟಿಂಗ್ ವೆಚ್ಚ ಒಂದು ಮೈಲಿಗೆ 20 ಸೆಂಟ್ ಮಾತ್ರವೇ. ಅಂದರೆ, ಬಸ್ಸುಗಳಿಗೆ ಹೋಲಿಸಿದರೆ ಇದರ ಪ್ರಯಾಣ ವೆಚ್ಚ ಶೇ. 20 ಮಾತ್ರವೇ.

ಸ್ವಯಂಚಾಲಿತ ವಾಹನಗಳು ಸುರಕ್ಷಿತವಾ? ಅಪಘಾತವಾಗುವುದಿಲ್ಲವಾ?

ಮನುಷ್ಯರಿಂದ ಚಲಾಯಿತವಾಗುವ ವಾಹನಕ್ಕಿಂತ ಈ ಸ್ವಯಂಚಾಲಿತ ವಾಹನಗಳು 10ರಿಂದ 20 ಪಟ್ಟು ಹೆಚ್ಚು ಸುರಕ್ಷಿತ ಎಂದು ವಾದಿಸಿದ್ದಾರೆ ಇಲಾನ್ ಮಸ್ಕ್. ಅಲ್ಲದೇ ಇದರ ಬೆಲೆ ಮತ್ತು ಕಾರ್ಯಾಚರಣೆ ವೆಚ್ಚವೂ ಕಡಿಮೆಯೇ. ಒಂದು ದಿನದಲ್ಲಿ ದೀರ್ಘಾವಧಿ ಕಾಲ ಕಾರಿನಲ್ಲಿ ಪ್ರಯಾಣಿಸುವ ಅನಿವಾರ್ಯತೆ ಇದ್ದವರು ಆರಾಮವಾಗಿ ಕಾರಿನೊಳಗೆ ತಮಗೆ ಬೇಕಾದ ಕೆಲಸ ಮಾಡಿಕೊಳ್ಳಬಹುದು ಎಂದೆನ್ನುತ್ತಾರೆ ಮಸ್ಕ್.

ಇದನ್ನೂ ಓದಿ: ನಾವೂ ಕೂಡ ಭಾರತಕ್ಕೆ ಅತಿಯಾಗಿ ತೆರಿಗೆ ಹಾಕಬೇಕಾಗುತ್ತೆ: ಡೊನಾಲ್ಡ್ ಟ್ರಂಪ್ ಎಚ್ಚರಿಕೆ

ಟೆಸ್ಲಾ ಕಂಪನಿಯ ಈ ಸೈಬರ್​ಕ್ಯಾಬ್ ಎಲೆಕ್ಟ್ರಿಕ್ ವಾಹನವೂ ಹೌದು. ಇದೇ ವಾಹನಗಳನ್ನು ಉಪಯೋಗಿಸಿಕೊಂಡು ಇಲಾನ್ ಮಸ್ಕ್ ಅವರು ಊಬರ್ ರೀತಿಯಲ್ಲಿ ತಮ್ಮದೇ ಸ್ವಂತ ರೇಡ್ ಹೇಲಿಂಗ್ ಬಿಸಿನೆಸ್ ಆರಂಭಿಸಲು ಯೋಜಿಸಿದ್ದಾರೆ. ಈ ಸೈಬರ್​ಕ್ಯಾಬ್​ಗಳನ್ನು ಖರೀದಿಸಿದವರು ತಮ್ಮ ವಾಹನವನ್ನು ಈ ಆ್ಯಪ್ ಸೇವೆಗೆ ನೀಡಿ ಹಣ ಸಂಪಾದಿಸಬಹುದು. ಮನೆಯಲ್ಲೇ ಕೂತು ಆದಾಯ ಮಾಡಬಹುದಾದ ಬಿಸಿನೆಸ್ ಇದು. ಆದರೆ ಈ ರೇಡ್ ಹೇಲಿಂಗ್ ಆ್ಯಪ್ ಯಾವಾಗ ಆರಂಭವಾಗುತ್ತದೆ ಎಂಬುದು ಗೊತ್ತಿಲ್ಲ. ಸದ್ಯಕ್ಕೆ ಟೆಸ್ಲಾ ಕಂಪನಿ 50 ಸೈಬರ್​ಕ್ಯಾಬ್ ವಾಹನಗಳನ್ನು ತಯಾರಿಸಿ ಇಟ್ಟಿದೆ. ಪೂರ್ಣಪ್ರಮಾಣದ ಮ್ಯಾನುಫ್ಯಾಕ್ಚರಿಂಗ್ ಕಾರ್ಯ 2026ರಲ್ಲಿ ಅರಂಭವಾಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ