ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಚಂದಾದಾರರಿಗೆ ಕೆಲವು ಷರತ್ತುಗಳ ಅಡಿಯಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ (EPF) ಖಾತೆಯಿಂದ ಮರುಪಾವತಿಸುವ ಅಗತ್ಯ ಇಲ್ಲದ (ನಾನ್ ರೀಫಂಡಬಲ್) ಮುಂಗಡವನ್ನು ಹಿಂಪಡೆಯಲು ಅನುಮತಿಸುತ್ತದೆ. ಇಪಿಎಫ್ ನಿಯಮಗಳ ಪ್ರಕಾರ, ಇಪಿಎಫ್‌ಒ ಸದಸ್ಯರು ಬಾಕಿ ಇರುವ ಇಪಿಎಫ್ ಬ್ಯಾಲೆನ್ಸ್‌ನ ಶೇಕಡಾ 75ರಷ್ಟು ಅಥವಾ ಮೂರು ತಿಂಗಳ ಮೂಲ ವೇತನ ಮತ್ತು ತುಟ್ಟಿ ಭತ್ಯೆ (DA) ಇವೆರಡರ ಪೈಕಿ ಯಾವುದು ಕಡಿಮೆಯೋ ಅದನ್ನು ಹಿಂಪಡೆಯಬಹುದು. ಇಲ್ಲಿ, ಇಪಿಎಫ್ ಬಾಕಿ ಉಳಿದಿರುವುದು ಅಂದರೆ ಉದ್ಯೋಗಿಗಳ ಪಾಲು, ಉದ್ಯೋಗದಾತರ ಪಾಲು ಮತ್ತು ಇಪಿಎಫ್ ಬಡ್ಡಿ. ಇಪಿಎಫ್‌ಒ ವೆಬ್‌ಸೈಟ್‌ನಲ್ಲಿ ಹಾಕಿರುವ FAQ’s (ಪದೇ ಪದೇ ಕೇಳಲಾಗುವ ಪ್ರಶ್ನೆಗಳಲ್ಲಿ) ಪ್ರಕಾರ, ಆನ್‌ಲೈನ್ ಕ್ಲೇಮ್ ಫಾರ್ಮ್‌ಗಳನ್ನು ಸರಿಯಾಗಿ ಭರ್ತಿ ಮಾಡಿದ್ದರೆ ಮತ್ತು ಕ್ಲೇಮ್ದಾರರು ಅರ್ಹತೆ ಸ್ಥಿತಿಯನ್ನು ಪೂರೈಸಿದರೆ ಭವಿಷ್ಯ ನಿಧಿ ನಿಯಂತ್ರಕರು ಮರುಪಾವತಿಸುವ ಅಗತ್ಯ ಇಲ್ಲದ ಇಪಿಎಫ್ ಮುಂಗಡವನ್ನು ಮೂರು ಕೆಲಸದ ದಿನಗಳಲ್ಲಿ ಪಡೆಯಬಹುದು ಎಂದು ಹೇಳಲಾಗಿದೆ.
ಇಪಿಎಫ್ ನಾನ್ ರೀಫಂಡಬಲ್ ಕ್ಲೇಮ್: ಅರ್ಹತೆಯ ಷರತ್ತುಗಳು
ಇಪಿಎಫ್‌ಒ ಇತ್ತೀಚೆಗೆ ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಿಂದ ಟ್ವೀಟ್ ಮಾಡಿದೆ ಮತ್ತು ಇಪಿಎಫ್ ಖಾತೆದಾರರು ಮರುಪಾವತಿ ಅಗತ್ಯ ಇಲ್ಲದ ಇಪಿಎಫ್ ಮುಂಗಡವನ್ನು ಪಡೆಯಲು ಅರ್ಹರಾಗುವುದಕ್ಕೆ ಕೆಲವು ಷರತ್ತುಗಳನ್ನು ಪೂರೈಸಬೇಕು ಎಂದು ಮಾಹಿತಿ ನೀಡಿದೆ. ಆ ಷರತ್ತುಗಳೆಂದರೆ — ಗೃಹ ಸಾಲ/ ನಿವೇಶನ/ಮನೆ/ಫ್ಲಾಟ್ ಖರೀದಿ ಅಥವಾ ನಿರ್ಮಾಣ/ಸೇರ್ಪಡೆಗಾಗಿ, ಅಸ್ತಿತ್ವದಲ್ಲಿರುವ ಮನೆಯಲ್ಲಿ ಬದಲಾವಣೆ/ಗೃಹ ಸಾಲ ಮರುಪಾವತಿ, ಅವರ ಕುಟುಂಬದ ಸದಸ್ಯರ- ಇಪಿಎಫ್‌ಒ ಸದಸ್ಯನ ಅನಾರೋಗ್ಯ, ಸ್ವಯಂ, ಮಗ, ಮಗಳು, ಸಹೋದರ ಅಥವಾ ಸಹೋದರಿಯ ವಿವಾಹ, ಮಕ್ಕಳ ಮೆಟ್ರಿಕ್ಯುಲೇಷನ್ ನಂತರದ ಶಿಕ್ಷಣ, ಪ್ರಕೃತಿ ವಿಕೋಪ, ಒಂದು ತಿಂಗಳಿಗಿಂತ ಕಡಿಮೆಯಿಲ್ಲದ ನಿರುದ್ಯೋಗ, ವರಿಷ್ಠ ಪಿಂಚಣಿ ಬಿಮಾ ಯೋಜನೆಯಲ್ಲಿ ಹೂಡಿಕೆ ಇತ್ಯಾದಿ.
ಮರುಪಾವತಿಸಲಾಗದ ಇಪಿಎಫ್ ಮುಂಗಡವನ್ನು ಆನ್‌ಲೈನ್‌ನಲ್ಲಿ ಕ್ಲೇಮ್ ಮಾಡುವುದು ಹೇಗೆ?
ಇಪಿಎಫ್‌ಒ ಟ್ವೀಟ್ ಪ್ರಕಾರ, “#EPF #ಸದಸ್ಯರು ವಿವಿಧ ಪ್ರಯೋಜನಗಳನ್ನು ಪಡೆಯಲು ಏಕೀಕೃತ ಸದಸ್ಯ ಪೋರ್ಟಲ್ ಅಥವಾ #UMANG ಅಪ್ಲಿಕೇಷನ್ ಮೂಲಕ ಮರುಪಾವತಿಸಲಾಗದ ಇಪಿಎಫ್ ಮುಂಗಡಕ್ಕಾಗಿ ಅರ್ಜಿ ಸಲ್ಲಿಸಬಹುದು.”
ಮರುಪಾವತಿಸುವ ಅಗತ್ಯ ಇಲ್ಲದ ಇಪಿಎಫ್ ಮುಂಗಡ ಹಿಂಪಡೆಯುವಿಕೆಯನ್ನು ಕ್ಲೇಮ್ ಮಾಡಲು ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ:
1] ಏಕೀಕೃತ ಇಪಿಎಫ್‌ಒ ಪೋರ್ಟಲ್‌ನಲ್ಲಿ ಲಾಗಿನ್ ಮಾಡಿ – unifiedportal-mem.epfindia.gov.in/memberinterface;
2] ಆನ್‌ಲೈನ್ ಸೇವಾ ಕ್ಲೇಮ್‌ಗೆ ತೆರಳಿ (ಫಾರ್ಮ್ 31, 19, 10C & 10D);
3] ನಿಮ್ಮ ಹೆಸರನ್ನು ನಮೂದಿಸಿರುವ ಬ್ಯಾಂಕ್ ಚೆಕ್ ಲೀಫ್ ಅನ್ನು ಅಪ್‌ಲೋಡ್ ಮಾಡಿ;
4] ‘submit’ ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ಫಾರ್ಮ್ ಅನ್ನು ಸಲ್ಲಿಸಿ.
ಇಪಿಎಫ್‌ಒ ಸದಸ್ಯರು ಉಮಾಂಗ್ ಆ್ಯಪ್ ಡೌನ್‌ಲೋಡ್ ಮಾಡುವ ಮೂಲಕ ಆಂಡ್ರಾಯ್ಡ್ ಫೋನ್ ಅಥವಾ ಸ್ಮಾರ್ಟ್‌ಫೋನ್ ಬಳಸಿ ಈ ಇಪಿಎಫ್ ರೀಫಂಡ್ ಕ್ಲೇಮ್ ಮಾಡಬಹುದು. ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಪಡೆದ UAN ಮತ್ತು OTP ಬಳಸಿಕೊಂಡು ಉಮಾಂಗ್ ಅಪ್ಲಿಕೇಷನ್‌ನಲ್ಲಿ ಲಾಗ್ ಇನ್ ಮಾಡುವ ಮೂಲಕ ಮೇಲೆ ತಿಳಿಸಿದ ಅದೇ ಪ್ರಕ್ರಿಯೆಯನ್ನು ಪುನರಾವರ್ತಿಸಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: PF Interest: ನಾಲ್ಕು ದಶಕಗಳ ಕನಿಷ್ಠ ಮಟ್ಟಕ್ಕೆ ಕುಸಿದ ಪಿಎಫ್ ಬಡ್ಡಿ ದರ ಶೇ 8.1ಕ್ಕೆ