ನವದೆಹಲಿ: ಬಾಕಿ ಉಳಿಸಿಕೊಳ್ಳಲಾಗಿರುವ ಜಿಎಸ್ಟಿ (GST) ಪರಿಹಾರದ ಹಣವಾದ 16,982 ಕೋಟಿ ರೂ ಅನ್ನು ಕೇಂದ್ರ ಸರ್ಕಾರವೇ ಭರಿಸುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಶನಿವಾರ ನಡೆದ ಜಿಎಸ್ಟಿ ಕೌನ್ಸಿಲ್ ಸಭೆಯ ಬಳಿಕ ಕೇಂದ್ರ ಹಣಕಾಸು ಸಚಿವೆ ಈ ಸಂಗತಿಯನ್ನು ಮಾಧ್ಯಮಗಳ ಮುಂದೆ ಹೇಳಿದ್ದಾರೆ.
ಇವತ್ತಿನವರೆಗೆ ಜಿಎಸ್ಟಿ ಪರಿಹಾರದ ಬಾಕಿ ಉಳಿದಿರುವ ಹಣವನ್ನು ತೀರಿಸಲಾಗುವುದು. ಅಂದರೆ, ಜಿಎಸ್ಟಿ ಪರಿಹಾರದ ಇಡೀ ಬಾಕಿ ಮೊತ್ತವಾದ 16,982 ಕೋಟಿ ರೂ ಅನ್ನು ತುಂಬಿಸಿಕೊಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ.
ಪರಿಹಾರ ನಿಧಿಯಲ್ಲಿ ಈ ಹಣ ಇಲ್ಲದಿದ್ದರೂ ನಮ್ಮ ಸ್ವಂತ ಸಂಪನ್ಮೂಲಗಳ ಮೂಲಕ ಈ ಹಣವನ್ನು ಬಿಡುಗಡೆ ಮಾಡುತ್ತೇವೆ. ಭವಿಷ್ಯದ ಸೆಸ್ ಸಂಗ್ರಹದ ಮೂಲಕ ಈ ಹಣವನ್ನು ಮರಳಿ ತುಂಬಿಸಿಕೊಳ್ಳಲಾಗುವುದು ಎಂದೂ ಕೇಂದ್ರ ಹಣಕಾಸು ಸಚಿವೆ ತಿಳಿಸಿದ್ದಾರೆ.
ಜಿಎಸ್ಟಿ ಜಾರಿಗೆ ಬಂದದ್ದು 2017ರಲ್ಲಿ. ಜಿಎಸ್ಟಿ ಪರಿಹಾರ ಕಾಯ್ದೆಯು ಕೇಂದ್ರ ಸರ್ಕಾರಕ್ಕೆ ಸೆಸ್ ವಿಧಿಸುವ ಅವಕಾಶ ನೀಡುತ್ತದೆ. ಇದನ್ನು ರಾಜ್ಯಗಳಿಗೆ ವರ್ಗಾಯಿಸುತ್ತದೆ. 2017, ಜುಲೈ 1ರಿಂದ ಜಿಎಸ್ಟಿ ಜಾರಿಯಾದಾಗಿನಿಂದ ರಾಜ್ಯ ಸರ್ಕಾರಗಳಿಗೆ ಆಗಿರುವ ಆದಾಯನಷ್ಟಕ್ಕೆ ಸರ್ಕಾರ ಈಗ ಪರಿಹಾರ ಕೊಡುತ್ತದೆ. ಇದು ಐದು ವರ್ಷಗಳಿಗೊಮ್ಮೆ ನೀಡಲಾಗುತ್ತದೆ. ನಿರ್ಮಲಾ ಸೀತಾರಾಮನ್ ಅವರು ಒಟ್ಟು 16,982 ಕೋಟಿ ರೂಪಾಯಿಯ ಜಿಎಸ್ಟಿ ಪರಿಹಾರ ಮೊತ್ತ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: Adani Effect: ಅದಾನಿ ಷೇರು ಏನಾದರಾಗಲೀ, ಭಾರತದ ಬುಲ್ಸ್ಟ್ರೀಟ್ ಜಗ್ಗೋದು ಕಷ್ಟ
ನವದೆಹಲಿಯಲ್ಲಿ ಇಂದು ನಡೆದ 49ನೇ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಹಣಕಾಸು ಸಚಿವರು ಪಾಲ್ಗೊಂಡಿದ್ದರು.
ದ್ರವ್ಯ ಬೆಲ್ಲ, ಪೆನ್ಸಿಲ್ ಶಾರ್ಪ್ನರ್, ಹಾಗೂ ಕೆಲ ಟ್ರ್ಯಾಕಿಂಗ್ ಡಿವೈಸ್ಗಳ ಮೇಲಿನ ಜಿಎಸ್ಟಿಯನ್ನು ಕಡಿಮೆಗೊಳಿಸಲು ನಿರ್ಧರಿಸಲಾಗಿದೆ. ಸದ್ಯ ಇವುಗಳಿಗೆ ಶೇ. 18ರಷ್ಟು ಜಿಎಸ್ಟಿ ಇದೆ. ಟ್ರ್ಯಾಕಿಂಗ್ ಸಾಧನಗಳು, ಟ್ಯಾಗ್ಗಳಿಗೆ ತೆರಿಗೆ ಇರುವುದಿಲ್ಲ. ಹಾಗೆಯೇ, ಜಿಎಸ್ಟಿ ರಿಟರ್ನ್ಸ್ ಅನ್ನು ವಿಳಂಬವಾಗಿ ಸಲ್ಲಿಕೆ ಮಾಡಿದಾಗ ಹೇರಲಾಗುವ ದಂಡ ಮೊತ್ತವನ್ನು ತಗ್ಗಿಸಲೂ ನಿರ್ಧರಿಸಲಾಗಿದೆ.
Published On - 5:38 pm, Sat, 18 February 23