Adani Effect: ಅದಾನಿ ಷೇರು ಏನಾದರಾಗಲೀ, ಭಾರತದ ಬುಲ್ಸ್ಟ್ರೀಟ್ ಜಗ್ಗೋದು ಕಷ್ಟ
Indian Equity Market Remains Strong: ಅದಾನಿ ಗ್ರೂಪ್ನ ವಿವಿಧ ಕಂಪನಿಗಳ ಷೇರುಗಳು ಪ್ರಪಾತಕ್ಕೆ ಬಿದ್ದು ಹೂಡಿಕೆದಾರರು ಲಕ್ಷಾಂತರ ಕೋಟಿ ರೂ ನಷ್ಟ ಮಾಡಿಕೊಂಡಿದ್ದರೂ ಷೇರುಪೇಟೆ ಮತ್ತೆ ಲವಲವಿಕೆಗೆ ಮರಳುತ್ತಿದೆ. ಭಾರತೀಯ ಷೇರುಪೇಟೆಗಳಿಗೆ ಬಂಡವಾಳ ಹರಿದುಬರುವುದು ಹೆಚ್ಚಾಗುತ್ತಿದೆ.
ಮುಂಬೈ: ಗೌತಮ್ ಅದಾನಿ ಮಾಲಿಕತ್ವದ ಅದಾನಿ ಗ್ರೂಪ್ ವಿರುದ್ಧ ಹಿಂಡನ್ಬರ್ಗ್ ರಿಸರ್ಚ್ನ ವರದಿ (Hindenburg Research Report on Adani Group) ಬಂದ ಬೆನ್ನಲ್ಲೇ ಭಾರತದ ಅರ್ಥವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಕೆಲವರು ವ್ಯಕ್ತಪಡಿಸಿದ್ದ ಆತಂಕ ದೂರವಾಗುವಂತಹ ಬೆಳವಣಿಗೆಗಳಾಗುತ್ತಿವೆ. ಅದಾನಿ ಗ್ರೂಪ್ನ ವಿವಿಧ ಕಂಪನಿಗಳ ಷೇರುಗಳು ಪ್ರಪಾತಕ್ಕೆ ಬಿದ್ದು ಹೂಡಿಕೆದಾರರು ಲಕ್ಷಾಂತರ ಕೋಟಿ ರೂ ನಷ್ಟ ಮಾಡಿಕೊಂಡಿದ್ದರೂ ಷೇರುಪೇಟೆ ಮತ್ತೆ ಲವಲವಿಕೆಗೆ ಮರಳುತ್ತಿದೆ. ಭಾರತೀಯ ಷೇರುಪೇಟೆಗಳಿಗೆ ಬಂಡವಾಳ (Investment Into Equity Market) ಹರಿದುಬರುವುದು ಹೆಚ್ಚಾಗುತ್ತಿದೆ. ಅದಾನಿ ಪ್ರಕರಣದ ಬಳಿಕ ಕಳೆಗುಂದಿದ್ದ ಷೇರುಮಾರುಕಟ್ಟೆಗಳು ಈಗ ಮತ್ತೆ ಉಬ್ಬತೊಡಗಿವೆ. ವಿದೇಶೀ ಹೂಡಿಕೆದಾರರು ಮತ್ತೆ ಭಾರತದತ್ತ ಓಡಿ ಬರುತ್ತಿದ್ದಾರೆ.
ಅದಾನಿ ಪ್ರಕರಣದಿಂದ ಭಾರತದ ಷೇರುಮಾರುಕಟ್ಟೆಗೆ ಪರಿಣಾಮ ಆಗುವುದಿಲ್ಲ. ಎರಡೂ ಬೇರೆ ಬೇರೆ ಸಂಗತಿಗಳು ಎಂಬುದು ಷೇರುಪೇಟೆ ಉದ್ಯಮಿಯೊಬ್ಬರ ಅನಿಸಿಕೆ. ಅದಾನಿ ಷೇರುಗಳ ಕುಸಿತವಾಗಿದ್ದು ಭಾರತಕ್ಕೆ ಮಾತ್ರ ಸೀಮಿತವಾದ ವಿಚಾರವಲ್ಲ. ಹಲವು ಇತರ ದೇಶಗಳಲ್ಲಿ ಇಂಥ ಸಮಸ್ಯೆಗಳನ್ನು ನಾವು ಕಾಣಬಹುದು ಎಂದು ಆಲ್ಡರ್ ಕ್ಯಾಪಿಟಲ್ ಸಂಸ್ಥೆಯ ಇನ್ವೆಸ್ಟ್ಮೆಂಟ್ ಮ್ಯಾನೇಜರ್ ರಾಖಿ ಪ್ರಸಾದ್ ಹೇಳುತ್ತಾರೆ.
ಅದಾನಿ ಗ್ರೂಪ್ ಸಂಸ್ಥೆ ಕೃತಕವಾಗಿ ಷೇರುಬೆಲೆ ಹೆಚ್ಚುವಂತೆ ಅಕ್ರಮ ಎಸಗಿದೆ ಎಂದು ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆ ಕಳೆದ ತಿಂಗಳು ವರದಿ ಮಾಡಿತ್ತು. ಅದರ ಬೆನ್ನಲ್ಲೇ ಅದಾನಿ ಗ್ರೂಪ್ಗೆ ಸೇರಿದ 10 ಕಂಪನಿಗಳ ಬಹಳಷ್ಟು ಷೇರುಗಳು ಕಡಿಮೆ ಬೆಲೆಗೆ ಬಿಕರಿಯಾದವು. ಅರ್ಧಕ್ಕಿಂತ ಹೆಚ್ಚು ಮೌಲ್ಯ ಕುಸಿತವಾಯಿತು. ಅಂದಾಜು ಪ್ರಕಾರ ಅದಾನಿ ಕಂಪನಿಗಳಲ್ಲಿ ಹೂಡಿದ್ದವರು 10 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚು ಹಣ ಕಳೆದುಕೊಂಡರು. ಅದಾನಿ ಷೇರು ಆಸ್ತಿ ಮೌಲ್ಯ ಇಳಿದು ಅವರು ಟಾಪ್ 10 ಜಾಗತಿಕ ಶ್ರೀಮಂತರ ಪಟ್ಟಿಯಿಂದ ಹೊರಬಿದ್ದರು.
ಇದನ್ನೂ ಓದಿ: Supreme Court: ಅದಾನಿ ವಿಚಾರ, ಸರ್ಕಾರಕ್ಕೆ ಮುಖಭಂಗ; ಮುಚ್ಚಿದ ಲಕೋಟೆ ಬೇಡ ಎಂದ ಸುಪ್ರೀಂಕೋರ್ಟ್
ಈ ಬೆಳವಣಿಗೆಯು ಭಾರತೀಯ ಷೇರುಪೇಟೆಯ ಮೇಲೆ ವಿದೇಶೀ ಹೂಡಿಕೆದಾರರಿಗೆ ಅನುಮಾನ ಬರುವಂತಾಗಿ, ಭಾರತದ ಆರ್ಥಿಕತೆಗೆ ಹಿನ್ನಡೆಯಾಗಬಹುದು ಎಂದು ಹಲವು ಭಾವಿಸಿರುವುದುಂಟು. ಆದರೆ ಅದಾನಿ ಪ್ರಕರಣವು ಭಾರತೀಯ ಮಾರುಕಟ್ಟೆ ಮೇಲೆ ಹೂಡಿಕೆದಾರರ ವಿಶ್ವಾಸವನ್ನು ಕುಂದಿಸಿಲ್ಲ ಎಂಬುದು ಈಗ ಸ್ಪಷ್ಟವಾಗತೊಡಗಿದೆ. ಷೇರುಪೇಟೆಯಲ್ಲಿ ಲಿಸ್ಟ್ ಆಗಿರುವ ಇತರ ಹಲವಾರು ಕಂಪನಿಗಳ ಷೇರುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಬಿಎಸ್ಇ, ಎನ್ಎಸ್ಇ ಷೇರುಪೇಟೆಗಳಲ್ಲಿ ಉತ್ಸಾಹದಿಂದ ವಹಿವಾಟು ನಡೆಯುತ್ತಿವೆ.
ಜನವರಿ 27ರಂದು 60 ಸಾವಿರ ಅಂಕಗಳಿಗಿಂತ ಕೆಳಗಿಳಿದಿದ್ದ ಬಿಎಸ್ಇ ಸೆನ್ಸೆಕ್ಸ್ ಇದೀಗ 61 ಸಾವಿರಕ್ಕೂ ಹೆಚ್ಚು ಅಂಕಗಳ ಮಟ್ಟಕ್ಕೆ ಏರಿದೆ. ಅದಾನಿ ಗ್ರೂಪ್ನ ಕಂಪನಿಗಳಿಗೂ ಇದು ತಾತ್ಕಾಲಿಕ ಹಿನ್ನಡೆ ಮಾತ್ರ ಎಂದು ಕೆಲವರು ಹೇಳುತ್ತಾರೆ. ಭವಿಷ್ಯದ ಆಶಾಕಿರಣ ಎನಿಸಿದ ಗ್ರೀನ್ ಎನರ್ಜಿ ಇತ್ಯಾದಿ ಕ್ಷೇತ್ರಗಳಲ್ಲಿ ಅದಾನಿ ಕಂಪನಿಗಳು ಇರುವುದರಿಂದ ಮುಂದಿನ ದಿನಗಳಲ್ಲಿ ಅದಾನಿ ಮತ್ತೆ ಏರುಗತಿಗೆ ಮರಳುವ ನಿರೀಕ್ಷೆ ಇದೆ. ಇದೆಲ್ಲವೂ ಅದಾನಿ ವಿಚಾರದಲ್ಲಿ ಸರ್ಕಾರ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಅಡಗಿದೆ.