ಇಪಿಎಫ್​ಒನಲ್ಲಿ ಹೊಸ ಫೀಚರ್ಸ್; ಪಾಸ್​ಬುಕ್ ಲೈಟ್, ಟ್ರಾನ್ಸ್ಫರ್ ಸರ್ಟಿಫಿಕೇಟ್, ತ್ವರಿತ ಅನುಮೋದನೆ

EPFO brings more reforms and features: ಇಪಿಎಫ್​ಒ ಸಂಸ್ಥೆ ಮತ್ತೆ ಹೊಸ ಸುಧಾರಣೆಗಳನ್ನು ಮಾಡಿಕೊಂಡಿದೆ. ಹೊಸ ಫೀಚರ್​ಗಳನ್ನೂ ಪರಿಚಯಿಸಿದೆ. ಪೋರ್ಟಲ್ ಮೇಲಿನ ಒತ್ತಡ ಕಡಿಮೆ ಮಾಡಲು ಮತ್ತು ಸದಸ್ಯರಿಗೆ ಸುಲಭ ಮಾಡಲು ಪಾಸ್​ಬುಕ್ ಲೈಟ್ ಫೀಚರ್ ತಂದಿದೆ. ಪಿಎಫ್ ಕ್ಲೇಮ್​ಗಳಿಗೆ ತ್ವರಿತ ಅನುಮೋದನೆ ಸಿಗುವ ರೀತಿಯಲ್ಲಿ ವ್ಯವಸ್ಥೆಯಲ್ಲಿ ಸುಧಾರಣೆ ತಂದಿದೆ.

ಇಪಿಎಫ್​ಒನಲ್ಲಿ ಹೊಸ ಫೀಚರ್ಸ್; ಪಾಸ್​ಬುಕ್ ಲೈಟ್, ಟ್ರಾನ್ಸ್ಫರ್ ಸರ್ಟಿಫಿಕೇಟ್, ತ್ವರಿತ ಅನುಮೋದನೆ
ಇಪಿಎಫ್​ಒ

Updated on: Sep 19, 2025 | 11:34 AM

ಬೆಂಗಳೂರು, ಸೆಪ್ಟೆಂಬರ್ 19: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಸೇವೆಯಲ್ಲಿ ಮತ್ತೊಂದಿಷ್ಟು ಸುಧಾರಣೆಗಳನ್ನು ತಂದಿದೆ. ಮತ್ತು ಹೊಸ ಫೀಚರ್​ಗಳನ್ನು ಪರಿಚಯಿಸಿದೆ. ಪಾಸ್​ಬುಕ್ ಲೈಟ್ ಸೇರಿದಂತೆ ಒಂದಷ್ಟು ಹೊಸ ಫೀಚರ್​ಗಳಿವೆ. ನಿನ್ನೆ ಗುರುವಾರ ಕೇಂದ್ರ ಕಾರ್ಮಿಕ ಸಚಿವ ಮನಸುಖ್ ಮಾಂಡವೀಯ ಅವರು ಇಪಿಎಫ್​ಒ ಸೇವೆಗಳಲ್ಲಿನ ಕೆಲ ಬದಲಾವಣೆಗಳನ್ನು ಬಹಿರಂಗಪಡಿಸಿದ್ದಾರೆ. ಪಿಎಫ್ ಖಾತೆದಾರರು ವಿವಿಧ ಸೇವೆಗಳಿಗೆ ಪ್ರತ್ಯೇಕವಾಗಿ ಲಾಗಿನ್ ಆಗಬೇಕಾದ ಅವಶ್ಯಕತೆ ಇರುವುದಿಲ್ಲ.

ಈ ಮುಂಚೆ ಇಪಿಎಫ್​ಒ ಖಾತೆದಾರರು ಅಥವಾ ಸದಸ್ಯರು ತಮ್ಮ ಪಿಎಫ್ ಖಾತೆಯನ್ನು ಪರಿಶೀಲಿಸಲು, ಅಥವಾ ಹಣ ವಿತ್​ಡ್ರಾ ಮಾಡಲು ಮೆಂಬರ್ ಪೋರ್ಟಲ್​ಗೆ ಲಾಗಿನ್ ಆಗುವುದಷ್ಟೇ ಅಲ್ಲದೇ, ಪಾಸ್​ಬುಕ್ ಪೋರ್ಟಲ್​ಗೆ ಪ್ರತ್ಯೇಕವಾಗಿ ಲಾಗಿನ್ ಆಗಬೇಕು. ಈಗ ಮೆಂಬರ್ ಪೋರ್ಟಲ್​ನಲ್ಲೇ ‘ಪಾಸ್​ಬುಕ್ ಲೈಟ್’ ಎನ್ನುವ ಹೊಸ ಫೀಚರ್ ಅನ್ನು ಪರಿಚಯಿಸಲಾಗಿದೆ. ಇದರಲ್ಲಿಯೇ ಪಿಎಫ್ ಅಕೌಂಟ್ ಅನ್ನು ವೀಕ್ಷಿಸಬಹುದು.

ಇದನ್ನೂ ಓದಿ: ಇಪಿಎಫ್ ಅಕೌಂಟ್​ನಲ್ಲಿ ಎಷ್ಟೇ ಹಣ ಇದ್ದರೂ ಖಾತೆದಾರ ಸತ್ತರೆ ಕುಟುಂಬಕ್ಕೆ ಪರಿಹಾರ: ಹೊಸ ನಿಯಮ ಜಾರಿಗೆ

ಪಾಸ್​ಬುಕ್ ಪೋರ್ಟಲ್ ಮೇಲಿನ ಒತ್ತಡ ಕಡಿಮೆ ಮಾಡಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ಪಿಎಫ್ ಪಾಸ್​ಬುಕ್ ಅನ್ನು ಹೆಚ್ಚು ವಿವರವಾಗಿ ವೀಕ್ಷಿಸಬೇಕೆನ್ನುವವರು ಪಾಸ್​ಬುಕ್ ಪೋರ್ಟಲ್​ಗೆ ಈ ಮುಂಚಿನಂತೆ ಪ್ರತ್ಯೇಕವಾಗಿ ಲಾಗಿನ್ ಆಗಬಹುದು.

ಟ್ರಾನ್ಸ್​ಫರ್ ಸರ್ಟಿಫಿಕೇಟ್​ನ ಹೊಸ ಫೀಚರ್

ಇಪಿಎಫ್​ಒ ಮೆಂಬರ್ ಪೋರ್ಟಲ್​ನಲ್ಲಿ ಮತ್ತೊಂದು ಫೀಚರ್ ತರಲಾಗಿದೆ. ಈಗ ಸದಸ್ಯರು ಈ ಪೋರ್ಟಲ್​ನಿಂದ ಪಿಎಫ್ ಟ್ರಾನ್ಸ್​ಫರ್ ಸರ್ಟಿಫಿಕೇಟ್ ಅನ್ನು (ಅನೆಕ್ಷರ್ ಕೆ) ಅನ್ನು ನೇರವಾಗಿ ಡೌನ್​ಲೋಡ್ ಮಾಡಬಹುದು. ಕೆಲಸ ಬದಲಿಸಿದಾಗ ಪಿಎಫ್ ಅಕೌಂಟ್​ಗಳನ್ನು ಟ್ರಾನ್ಸ್​ಫರ್ ಮಾಡಲು ಈ ಫಾರ್ಮ್ ಅನ್ನು ಬಳಸಲಾಗುತ್ತದೆ.

ಈ ಮುಂಚೆಯಾದರೆ, ಎರಡು ಪಿಎಫ್ ಆಫೀಸ್​ಗಳ ಮಧ್ಯೆ ಮಾತ್ರ ಟ್ರಾನ್ಸ್​ಫರ್ ಸರ್ಟಿಕೇಟ್ ರವಾನೆಯಾಗುತ್ತಿತ್ತು. ಪಿಎಫ್ ಖಾತೆದಾರರು ಮನವಿ ಮಾಡಿಕೊಂಡಾಗ ಮಾತ್ರ ಅದು ಲಭ್ಯ ಇರುತ್ತಿತ್ತು. ಈಗ ಸದಸ್ಯರು ನೇರವಾಗಿ ಅದನ್ನು ಪೋರ್ಟಲ್​ನಲ್ಲೇ ಡೌನ್​ಲೋಡ್ ಮಾಡಿಕೊಳ್ಳಬಹುದು.

ಇದನ್ನೂ ಓದಿ: ಕೆಲಸ ಬಿಡೋವರೆಗೂ ಕಾಯಬೇಕಿಲ್ಲ… 10 ವರ್ಷಕ್ಕೊಮ್ಮೆ ಪೂರ್ಣ ಇಪಿಎಫ್ ಹಣ ಹಿಂಪಡೆಯಲು ಅವಕಾಶ

ಇಪಿಎಫ್ ಕ್ಲೇಮ್​ಗಳಿಗೆ ಈಗ ಬೇಗ ಅನುಮೋದನೆ

ಇಪಿಎಫ್ ಸದಸ್ಯರ ಅನುಕೂಲ ದೃಷ್ಟಿಯಿಂದ ಇಪಿಎಫ್​ಒ ಸಂಸ್ಥೆ ತನ್ನ ಕಾರ್ಯ ವ್ಯವಸ್ಥೆಯಲ್ಲಿ ಮತ್ತಷ್ಟು ಸುಧಾರಣೆ ಮಾಡಿಕೊಂಡಿದೆ. ಪಿಎಫ್ ಟ್ರಾನ್ಸ್​ಫರ್, ಸೆಟಲ್ಮೆಂಟ್, ಅಡ್ವಾನ್ಸ್, ರೀಫಂಡ್ ಇತ್ಯಾದಿ ಸರ್ವಿಸ್​ಗಗಳಿಗೆ ಸದಸ್ಯರು ಮನವಿ ಸಲ್ಲಿಸಿದಾಗ ಬೇಗ ಅನುಮೋದನೆ ಸಿಗುವ ರೀತಿಯಲ್ಲಿ ಬದಲಾವಣೆ ಮಾಡಲಾಗಿದೆ. ಉನ್ನತ ಮಟ್ಟದ ಅಧಿಕಾರಿಗಳ ಅನುಮೋದನೆ ಬದಲು ತುಸು ಕೆಳಗಿನ ಮಟ್ಟದ ಅಧಿಕಾರಿಗಳಿಗೆ ಅನುಮೋದನೆಯ ಅಧಿಕಾರ ಕೊಡಲಾಗಿದೆ. ಇದರಿಂದ ಅನುಮೋದನೆ ಪ್ರಕ್ರಿಯೆಗೆ ವೇಗ ಸಿಗುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ