ಇಪಿಎಫ್ ಅಕೌಂಟ್ನಲ್ಲಿ ಎಷ್ಟೇ ಹಣ ಇದ್ದರೂ ಖಾತೆದಾರ ಸತ್ತರೆ ಕುಟುಂಬಕ್ಕೆ ಪರಿಹಾರ: ಹೊಸ ನಿಯಮ ಜಾರಿಗೆ
EPFO New Rules on PF holder's death and compensation: ಇಪಿಎಫ್ಒದ ನಿಯಮೊಂದರಲ್ಲಿ ಪರಿಷ್ಕರಣೆ ಆಗಿದೆ. ಇಪಿಎಫ್ ಖಾತೆದಾರ ಮೃತಪಟ್ಟರೆ ಆತನ ಕುಟುಂಬಕ್ಕೆ ಕನಿಷ್ಠ 50,000 ರೂ ಪರಿಹಾರ ಸಿಗುತ್ತದೆ. ಈ ಹಿಂದೆ ಇದ್ದ ನಿಯಮದ ಪ್ರಕಾರ ಖಾತೆದಾರನ ಇಪಿಎಫ್ ಅಕೌಂಟ್ನಲ್ಲಿ ಕನಿಷ್ಠ 50,000 ಇರಬೇಕಿತ್ತು. 12 ತಿಂಗಳು ಸತತವಾಗಿ ಸೇವೆ ಸಲ್ಲಿಸಿರಬೇಕಿತ್ತು. ಈಗ ಅದನ್ನು ಸಡಿಲಿಸಲಾಗಿದೆ.

ನವದೆಹಲಿ, ಜುಲೈ 22: ಇಪಿಎಫ್ ಖಾತೆ ಹೊಂದಿರುವ ಮತ್ತು ಉದ್ಯೋಗದಲ್ಲಿರುವ ವ್ಯಕ್ತಿ ಅಕಸ್ಮಾತ್ ಸತ್ತರೆ ಆತನ ಕುಟುಂಬಕ್ಕೆ ಕನಿಷ್ಠ 50,000 ರೂ ಪರಿಹಾರ ಸಿಗುವುದು ಖಾತ್ರಿಯಾಗಿದೆ. ಈ ಸಂಬಂಧ ಇಪಿಎಫ್ಒ (epfo) ನಿಯಮವೊಂದನ್ನು ಪರಿಷ್ಕರಿಸಲಾಗಿದೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಅದರ ಪ್ರಕಾರ, ಪಿಎಫ್ ಸದಸ್ಯ ಸಾವನ್ನಪ್ಪಿದಾಗ ಅವರ ಪಿಎಫ್ ಅಕೌಂಟ್ನಲ್ಲಿ 50,000 ರೂಗಿಂತಲೂ ಕಡಿಮೆ ಇದ್ದರೂ ಅವರ ಕುಟುಂಬಕ್ಕೆ ಕನಿಷ್ಠ 50,000 ರೂ ಖಾತ್ರಿ ಪರಿಹಾರ ಇರುತ್ತದೆ.
ಸರಳವಾಗಿ ಹೇಳುವುದಾದರೆ, ಒಬ್ಬ ವ್ಯಕ್ತಿ ಕಳೆದ ಆರು ತಿಂಗಳಿಂದ ಉದ್ಯೋಗದಲ್ಲಿದ್ದು, ಪ್ರತೀ ತಿಂಗಳು ಇಪಿಎಫ್ ಅಕೌಂಟ್ಗೆ ಕೊಡುಗೆ ಹೋಗುತ್ತಿದ್ದರೆ, ಆತ ಸತ್ತಾಗ ಕುಟುಂಬಕ್ಕೆ ಕನಿಷ್ಠ 50,000 ರೂ ಪರಿಹಾರ ಸಿಗುತ್ತದೆ. ಆತನ ಪಿಎಫ್ ಅಕೌಂಟ್ನಲ್ಲಿ 50,000 ರೂಗಿಂತ ಕಡಿಮೆ ಹಣ ಇದ್ದರೂ ಕನಿಷ್ಠ ಖಾತ್ರಿ ಇರುತ್ತದೆ.
ಇದನ್ನೂ ಓದಿ: ಭಾರತದಲ್ಲಿ ಐಟಿ ರಿಟರ್ನ್ಸ್ ಸಲ್ಲಿಸುವ ಅವಶ್ಯಕತೆ ಇಲ್ಲದವರು ಯಾರ‍್ಯಾರು? ಇಲ್ಲಿದೆ ಪಟ್ಟಿ
ಈ ಹಿಂದೆ ಇದ್ದ ನಿಯಮದ ಪ್ರಕಾರ ಒಬ್ಬ ವ್ಯಕ್ತಿ ಕನಿಷ್ಠ 12 ತಿಂಗಳು ನಿರಂತರ ಉದ್ಯೋಗದಲ್ಲಿರಬೇಕು. ಅಂದರೆ, 12 ತಿಂಗಳು ಸತತವಾಗಿ ಇಪಿಎಫ್ ಅಕೌಂಟ್ಗೆ ಕೊಡುಗೆ ಹೋಗುತ್ತಿರಬೇಕು. ಹಾಗೆಯೇ, ಇಪಿಎಫ್ ಅಕೌಂಟ್ನಲ್ಲಿ ಕನಿಷ್ಠ 50,000 ರೂ ಬ್ಯಾಲನ್ಸ್ ಇರಬೇಕು. ಆಗ ಮಾತ್ರ 50,000 ರೂ ಪರಿಹಾರವನ್ನು ನೀಡಲಾಗುತ್ತದೆ ಎನ್ನುವ ನಿಯಮ ಇತ್ತು.
ಇನ್ನು, ಉದ್ಯೋಗಿಯು ಕೆಲಸ ಬದಲಿಸಿ ಹೊಸ ಕೆಲಸಕ್ಕೆ ಸೇರಿದಾಗ ಮತ್ತೆ ಹೊಸದಾಗಿ ಈ 12 ತಿಂಗಳ ನಿಯಮ ಜಾರಿಗೆ ಬರುತ್ತದೆ.
ಈಗ ಬದಲಾದ ನಿಯಮದ ಪ್ರಕಾರ, ಉದ್ಯೋಗಿ ಕೆಲಸ ಬಿಟ್ಟು 2 ತಿಂಗಳೊಳಗೆ ಮತ್ತೊಂದು ಕೆಲಸ ಸೇರಿದಾಗ ಉದ್ಯೋಗ ನಿರಂತರತೆ ಎಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ: ಕೆಲಸ ಬಿಡೋವರೆಗೂ ಕಾಯಬೇಕಿಲ್ಲ… 10 ವರ್ಷಕ್ಕೊಮ್ಮೆ ಪೂರ್ಣ ಇಪಿಎಫ್ ಹಣ ಹಿಂಪಡೆಯಲು ಅವಕಾಶ
ಉದ್ಯೋಗಿ ಕೆಲಸಕ್ಕೆ ಸೇರಿದ ಬಳಿಕ ಯಾವಾಗೇ ಸತ್ತರೂ ಕನಿಷ್ಠ 50,000 ರೂ ಪರಿಹಾರವನ್ನು ಅವರ ಕುಟುಂಬಕ್ಕೆ ನೀಡಲಾಗುತ್ತದೆ.
ಮತ್ತೊಂದು ಅಂಶವೆಂದರೆ, ಉದ್ಯೋಗಿಯ ಇಪಿಎಫ್ ಅಕೌಂಟ್ಗೆ ಆರು ತಿಂಗಳು ಯಾವುದೇ ಕೊಡುಗೆ ಬಂದಿಲ್ಲ, ಆದರೆ ಉದ್ಯೋಗಿ ಸಾಯುವಾಗ ಇನ್ನೂ ಕೂಡ ಕೆಲಸ ಬಿಟ್ಟಿಲ್ಲ ಎಂದಾದಲ್ಲಿ ಆಗಲೂ ಕೂಡ ಕುಟುಂಬಕ್ಕೆ ಪರಿಹಾರ ಸಿಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




