EPF: ಕೆಲಸ ಬಿಡೋವರೆಗೂ ಕಾಯಬೇಕಿಲ್ಲ… 10 ವರ್ಷಕ್ಕೊಮ್ಮೆ ಪೂರ್ಣ ಇಪಿಎಫ್ ಹಣ ಹಿಂಪಡೆಯಲು ಅವಕಾಶ
EPFO 10 year rule: ಇಪಿಎಫ್ ಅಕೌಂಟ್ನಿಂದ ಪೂರ್ಣ ಹಣ ಹಿಂಪಡೆಯಲು ನಿವೃತ್ತರಾಗುವವರೆಗೂ ಕಾಯಬೇಕಾಗುವುದಿಲ್ಲ. ಸರ್ಕಾರವು 10 ವರ್ಷದ ನಿಯಮ ರೂಪಿಸಲು ಆಲೋಚಿಸಿದೆ. ಪ್ರತೀ 10 ವರ್ಷಕ್ಕೊಮ್ಮೆ ಪೂರ್ಣ ಪಿಎಫ್ ಹಣ ವಿತ್ಡ್ರಾ ಮಾಡಿಕೊಳ್ಳಲು ಅವಕಾಶ ನೀಡಲಿದೆ. ನೂರಕ್ಕೆ ನೂರು ಹಣ ಅಲ್ಲದಿದ್ದರೂ 10 ವರ್ಷಕ್ಕೊಮ್ಮೆ ಶೇ. 60ರಷ್ಟಾದರೂ ಹಣ ಹಿಂಪಡೆಯಲಾಗುವಂತೆ ನಿಯಮ ರೂಪಿಸಬಹುದು ಎನ್ನಲಾಗಿದೆ.

ನವದೆಹಲಿ, ಜುಲೈ 17: ಇಪಿಎಫ್ ಅಕೌಂಟ್ನಿಂದ (EPF) ಪೂರ್ಣ ಹಣ ಹಿಂಪಡೆಯಬೇಕೆಂದರೆ ನಿವೃತ್ತರಾಗುವವರೆಗೂ ಕಾಯಬೇಕು. ಇಲ್ಲವೇ ಕೆಲಸ ಕಳೆದುಕೊಂಡು ಮೂರು ತಿಂಗಳು ನಿರುದ್ಯೋಗಿಯಾಗಿರಬೇಕು. ಸರ್ಕಾರ ಈ ಸಂಬಂಧ ಕೆಲ ನಿರ್ಬಂಧಗಳನ್ನು ಸಡಿಲಿಸಿ ನಿಯಮ ರೂಪಿಸಿದೆ. ಪ್ರತೀ 10 ವರ್ಷಕ್ಕೊಮ್ಮೆ ಇಪಿಎಫ್ ಹಣವನ್ನು ಪೂರ್ಣವಾಗಿ ಹಿಂಪಡೆಯುವ ಅವಕಾಶವನ್ನು ನೀಡಿದೆ ಎಂದು ಮನಿಕಂಟ್ರೋಲ್ ವೆಬ್ಸೈಟ್ ತನ್ನ ಎಕ್ಸ್ಕ್ಲೂಸಿವ್ ವರದಿಯಲ್ಲಿ ತಿಳಿಸಿದೆ.
‘ಸಬ್ಸ್ಕ್ರೈಬರ್ಗಳು ತಮ್ಮ ಹಣದ ನಿರ್ವಹಣೆ ಮತ್ತು ರಿಟೈರ್ಮೆಂಟ್ ಪ್ಲಾನಿಂಗ್ ಅನ್ನು ಹೇಗೆ ಬೇಕಾದರೂ ಮಾಡಲು ಅವಕಾಶ ಇರಬೇಕು. ಹತ್ತು ವರ್ಷಕ್ಕೊಮ್ಮೆ ಇಪಿಎಫ್ ಹಣ ವಿತ್ಡ್ರಾ ಮಾಡಲಾದರೂ, ಮತ್ತೂ 10 ವರ್ಷದಲ್ಲಿ ಒಂದಷ್ಟು ಹಣ ಜಮೆ ಆಗಿರುತ್ತದೆ. ಈ ಹಣವನ್ನು ಏನು ಮಾಡಬೇಕು ಎಂಬುದನ್ನು ಅವರು ನಿರ್ಧರಿಸುವಂತಾಗಬೇಕು’ ಎಂದು ಇಪಿಎಫ್ಒನ ಇಬ್ಬರು ಅಧಿಕಾರಿಗಳು ತಮಗೆ ತಿಳಿಸಿದ್ದಾಗಿ ಈ ವರದಿಯಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ಇಪಿಎಫ್ ಅಕೌಂಟ್ಗಳಿಗೆ ವಾರ್ಷಿಕ ಬಡ್ಡಿ ಈ ವಾರವೇ ಜಮೆ? ಹಣ ಬಂದಿದೆಯಾ ಪರಿಶೀಲಿಸುವ ವಿಧಾನಗಳು
ಒಂದೊಮ್ಮೆ 10 ವರ್ಷಕ್ಕೆ ಪೂರ್ಣ ಬ್ಯಾಲನ್ಸ್ ಮೊತ್ತ ಹಿಂಪಡೆಯಲು ಅನುಮತಿಸುವ ನಿರ್ಧಾರ ತೆಗೆದುಕೊಳ್ಳದೇ ಹೋದರೂ, ಶೇ. 60ರಷ್ಟನ್ನಾದರೂ ವಿತ್ಡ್ರಾ ಮಾಡಲು ಅನುಮತಿಸಬಹುದು. ಈ ವಿಚಾರವನ್ನೂ ಸರಕಾರ ಅವಲೋಕಿಸುತ್ತಿದೆ ಎಂದು ಹೇಳಲಾಗಿದೆ.
ಸದ್ಯ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು 7.4 ಇಪಿಎಫ್ ಸದಸ್ಯರನ್ನು ಹೊಂದಿದ್ದು, ಅವರೆಲ್ಲರ ಇಪಿಎಫ್ ಅಕೌಂಟ್ಗಳಲ್ಲಿ ಇರುವ ಹಣ ಬರೋಬ್ಬರಿ 25 ಲಕ್ಷ ಕೋಟಿ ರೂ. ಇಪಿಎಫ್ ಹಣ ಹಿಂಪಡೆಯಲು ಈಗಲೂ ಕೂಡ 10 ವರ್ಷ ಕಾಯಬೇಕಿಲ್ಲ. ಮನೆ ನಿರ್ಮಾಣ, ವೈದ್ಯಕೀಯ ತುರ್ತು ಚಿಕಿತ್ಸೆ, ಶಿಕ್ಷಣ, ಮದುವೆ ಕಾರಣಗಳಿಗೆ ಇಪಿಎಫ್ ಅಕೌಂಟ್ನಿಂದ ಅಡ್ವಾನ್ಸ್ ಹಣ ಹಿಂಪಡೆಯಲು ಅವಕಾಶ ಇದೆ.
ನಿವೇಶನ ಖರೀದಿಸಲು ಅಥವಾ ಮನೆ ನಿರ್ಮಾಣ ಮಾಡಲು ಶೇ. 90ರವರೆಗೆ ಇಪಿಎಫ್ ಹಣ ಹಿಂಪಡೆಯಬಹುದು. ಈ ಮೊದಲು ಐದು ವರ್ಷ ಪಿಎಫ್ ಅಕೌಂಟ್ನಿಂದ ಯಾವುದೇ ಹಣ ಹಿಂಪಡೆಯದೇ ಇದ್ದಾಗ ಮನೆ ನಿರ್ಮಾಣಕ್ಕೆ ಹಣ ಹಿಂಪಡೆಯಬಹುದಿತ್ತು. ಅದನ್ನು ಈಗ ಮೂರು ವರ್ಷಕ್ಕೆ ಇಳಿಸಲಾಗಿದೆ. ತುರ್ತು ಸಂದರ್ಭಗಳಿಗೆ ಹಣದ ಅವಶ್ಯಕತೆ ಪೂರೈಸಲು ಈ ಅವಕಾಶ ಕೊಡಲಾಗುತ್ತಿದೆ.
ಇದನ್ನೂ ಓದಿ: ಇಪಿಎಫ್ ಠೇವಣಿ ಮತ್ತು ಬಡ್ಡಿಗೆ ಟ್ಯಾಕ್ಸ್ ಇರುತ್ತಾ? ಎಷ್ಟು ಟಿಡಿಎಸ್ ಕಡಿತವಾಗುತ್ತೆ? ಇಲ್ಲಿದೆ ಡೀಟೇಲ್ಸ್
ಈಗ 10 ವರ್ಷದ ವಿತ್ಡ್ರಾ ನಿಯಮದ ಪ್ರಕಾರ, ಹಣ ಹಿಂಪಡೆಯಲು ಯಾವುದೇ ಕಾರಣ ನೀಡುವ ಅಗತ್ಯ ಇರುವುದಿಲ್ಲ. ಇಪಿಎಫ್ ಸದಸ್ಯರು ತಮ್ಮ ಹಣವನ್ನು ಬೇರೆಲ್ಲಿಯಾದರೂ ಹೂಡಕೆ ಮಾಡಬಹುದು. ಸದ್ಯ ಇಪಿಎಫ್ನಲ್ಲಿ ಶೇ. 8.25ರಷ್ಟು ವಾರ್ಷಿಕ ಬಡ್ಡಿ ಸಿಗುತ್ತದೆ. ಅದರ ಬದಲು ಜನರು ಶೇ. 10-16 ವಾರ್ಷಿಕ ಲಾಭ ತರುವ ಮ್ಯುಚುವಲ್ ಫಂಡ್ಗಳಲ್ಲಿಯೋ, ಷೇರುಗಳಲ್ಲಿಯೋ ಹೂಡಿಕೆ ಮಾಡಬಹುದು. ಈ ಕಾರಣಕ್ಕೆ ಸರ್ಕಾರವು 10 ವರ್ಷದ ನಿಯಮ ರೂಪಿಸಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ