ಇಪಿಎಫ್ ಅಕೌಂಟ್ಗಳಿಗೆ ವಾರ್ಷಿಕ ಬಡ್ಡಿ ಈ ವಾರವೇ ಜಮೆ? ಹಣ ಬಂದಿದೆಯಾ ಪರಿಶೀಲಿಸುವ ವಿಧಾನಗಳು
Ways to check EPF account balance online: ಇಪಿಎಫ್ ಅಕೌಂಟ್ಗಳಿಗೆ 2024-25ರ ಸಾಲಿನ ವರ್ಷಕ್ಕೆ ಶೇ. 8.25 ಬಡ್ಡಿಯನ್ನು ಜಮೆ ಮಾಡಲಾಗುತ್ತಿದೆ. ನಿಮ್ಮ ಇಪಿಎಫ್ ಅಕೌಂಟ್ಗಳಿಗೆ ಬಡ್ಡಿ ಬಂದಿದೆಯಾ ಎಂದು ಆನ್ಲೈನ್ನಲ್ಲಿ ಪರಿಶೀಲಿಸಬಹುದು. ಇಪಿಎಫ್ಒ ಪೋರ್ಟಲ್, ಉಮಂಗ್ ಆ್ಯಪ್ ಮೂಲಕ ಪಿಎಫ್ ಬ್ಯಾಲನ್ಸ್ ಪರಿಶೀಲಿಸಬಹುದು. ಮಿಸ್ಡ್ ಕಾಲ್, ಎಸ್ಸೆಮ್ಮೆಸ್ ಸರ್ವಿಸ್ ಅನ್ನೂ ಬಳಸಬಹುದು.

ನವದೆಹಲಿ, ಜುಲೈ 11: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಾದ ಇಪಿಎಫ್ಒ (EPFO) ಕಳೆದ ವರ್ಷದ ಬಡ್ಡಿ ಹಣವನ್ನು ಎಲ್ಲಾ ಸಕ್ರಿಯ ಅಕೌಂಟ್ಗಳಿಗೂ ಜಮೆ ಮಾಡಿದೆ. 2024-25ರ ಹಣಕಾಸು ವರ್ಷಕ್ಕೆ ಇಪಿಎಫ್ ಹಣಕ್ಕೆ ಸರ್ಕಾರ ಶೇ. 8.25ರಷ್ಟು ವಾರ್ಷಿಕ ಬಡ್ಡಿಯನ್ನು ಪ್ರಕಟಿಸಿದೆ. ಇದೇ ಮಂಗಳವಾರದಂದು ಕಾರ್ಮಿಕ ಸಚಿವ ಮನಸುಖ್ ಮಾಂಡವೀಯ ಮಾತನಾಡಿ, ಈ ವಾರದೊಳಗೆ ಬಡ್ಡಿಹಣವನ್ನು ಎಲ್ಲಾ ಅಕೌಂಟ್ಗಳಿಗೆ ಹಾಕಲಾಗುವುದು ಎಂದು ಹೇಳಿದ್ದರು. ಅವರ ಪ್ರಕಾರ, ಬಹುತೇಕ ಎಲ್ಲಾ ಇಪಿಎಫ್ ಖಾತೆಗಳಿಗೆ ಬಡ್ಡಿ ಜಮೆ ಮಾಡಲಾಗಿದೆ. 33.56 ಕೋಟಿ ಇಪಿಎಫ್ ಅಕೌಂಟ್ಗಳ ಪೈಕಿ 32.39 ಕೋಟಿ ಅಕೌಂಟ್ಗಳಿಗೆ ಇಂಟರೆಸ್ಟ್ ಕ್ರೆಡಿಟ್ ಮಾಡಲಾಗಿದೆ. ಉಳಿದವನ್ನು ಈ ವಾರದೊಳಗೆ ಮಾಡಲಾಗುವುದು ಎಂದಿದ್ದಾರೆ.
ನಿಮಗೆ ಇಪಿಎಫ್ ಇಂಟರೆಸ್ಟ್ ಕ್ರೆಡಿಟ್ ಆಗಿದೆಯಾ?
ನೀವು ಇಪಿಎಫ್ ಅಕೌಂಟ್ ಹೊಂದಿದ್ದು, ಅದರಲ್ಲಿರುವ ಹಣಕ್ಕೆ ಸರ್ಕಾರದಿಂದ ಬಡ್ಡಿ ಹಣ ಸೇರ್ಪಡೆಯಾಗಿದೆಯಾ ಎಂದು ಈಗಲೇ ಪರಿಶೀಲಿಸಿ. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಸಕ್ರಿಯ ಅಕೌಂಟ್ಗಳಿಗೆ ಮಾತ್ರ ಬಡ್ಡಿ ಸಂದಾಯವಾಗುತ್ತದೆ. ಅಂದರೆ, ಸಂಸ್ಥೆ ಹಾಗು ನಿಮ್ಮ ಪಾಲಿನ ಹಣವು ಪ್ರತೀ ತಿಂಗಳು ಜಮೆಯಾಗುತ್ತಿರುವ ಖಾತೆಯನ್ನು ಸಕ್ರಿಯ ಅಕೌಂಟ್ ಎಂದು ಪರಿಗಣಿಸಲಾಗುತ್ತದೆ. ನೀವು ಹಿಂದೆ ಕೆಲಸ ಮಾಡಿದ ಕಂಪನಿಗಳಲ್ಲಿ ಇದ್ದ ಇಪಿಎಫ್ ಅಕೌಂಟ್ಗಳನ್ನು ಹೊಸ ಅಕೌಂಟ್ನೊಂದಿಗೆ ಜೋಡಿಸದೇ ಹೋದರೆ ಹಳೆಯ ಅಕೌಂಟ್ಗಳಿಗೆ ಅದಕ್ಕೆ ಬಡ್ಡಿ ಸಿಗುವುದಿಲ್ಲ.
ಇದನ್ನೂ ಓದಿ: ಇಪಿಎಫ್ ಠೇವಣಿ ಮತ್ತು ಬಡ್ಡಿಗೆ ಟ್ಯಾಕ್ಸ್ ಇರುತ್ತಾ? ಎಷ್ಟು ಟಿಡಿಎಸ್ ಕಡಿತವಾಗುತ್ತೆ? ಇಲ್ಲಿದೆ ಡೀಟೇಲ್ಸ್
ಇಪಿಎಫ್ ಬ್ಯಾಲನ್ಸ್ ಅನ್ನು ಆನ್ಲೈನ್ನಲ್ಲಿ ಪರಿಶೀಲಿಸಿ…
ಇಪಿಎಫ್ಒ ಪೋರ್ಟಲ್ಗೆ ಹೋಗಿ, ಮುಖ್ಯ ಪುಟದಲ್ಲಿ ‘ಫಾರ್ ಎಂಪ್ಲಾಯೀಸ್’ ಅಡಿಯಲ್ಲಿ ‘ಅವರ್ ಸರ್ವಿಸಸ್’ಗೆ ಹೋಗಿ ಅಲ್ಲಿ ‘ಮೆಂಬರ್ ಪಾಸ್ಬುಕ್’ ಆಯ್ಕೆ ಮಾಡಿ. ನಿಮ್ಮ ಯುಎಎನ್ ನಂಬರ್ ಹಾಗೂ ಪಾಸ್ವರ್ಡ್ ಹಾಕಿ ಲಾಗಿನ್ ಮಾಡಿರಿ. ಅಲ್ಲಿ ವಿವಿಧ ಪಿಎಫ್ ಅಕೌಂಟ್ಗಳ ಪಟ್ಟಿ ಕಾಣಬಹುದು. ಇತ್ತೀಚಿನದ್ದನ್ನು ಆಯ್ಕೆ ಮಾಡಿ, ಅಕೌಂಟ್ನ ಬ್ಯಾಲನ್ಸ್ ವೀಕ್ಷಿಸಬಹುದು.
ಉಮಂಗ್ ಆ್ಯಪ್ ಮೂಲಕ ಪಿಎಫ್ ಬ್ಯಾಲನ್ಸ್
ಉಮಂಗ್ ಆ್ಯಪ್ ಅನ್ನು ಡೌನ್ಲೋಡ್ ಮಾಡಿ ತೆರೆಯಿರಿ. ಅಲ್ಲಿ ಇಪಿಎಫ್ಒ ಸರ್ವಿಸ್ಗೆ ಹೋಗಿ ಲಾಗಿನ್ ಆಗಬೇಕು. ಅಲ್ಲಿ ಪಿಎಫ್ ಬ್ಯಾಲನ್ಸ್ ಪರಿಶೀಲಿಸಬಹುದು.
ಮಿಸ್ಡ್ ಕಾಲ್ ಮೂಲಕ ಬ್ಯಾಲನ್ಸ್ ಪರಿಶೀಲನೆ
ಯುಎಎನ್ ಜೊತೆ ಸಕ್ರಿಯವಾಗಿರುವ ಮೊಬೈಲ್ ನಂಬರ್ನಿಂದ 9966044425 ನಂಬರ್ಗೆ ಡಯಲ್ ಮಾಡಿ. ಅದು ಒಂದೆರಡು ರಿಂಗ್ ಆದ ಬಳಿಕ ಆಟೊಮ್ಯಾಟಿಕ್ ಆಗಿ ಕರೆ ಕಟ್ ಆಗುತ್ತದೆ. ಇತ್ತೀಚಿನ ಪಿಎಫ್ ಬ್ಯಾಲನ್ಸ್ ಎಷ್ಟಿದೆ ಎಂದು ತಿಳಿಸುವ ಎಸ್ಸೆಮ್ಮೆಸ್ ಮೆಸೇಜ್ ಬರುತ್ತದೆ. ಆದರೆ, ಈ ಸರ್ವಿಸ್ ಪಡೆಯಲು ಕೆವೈಸಿ ಪೂರ್ಣಗೊಳಿಸಿರಬೇಕು.
ಇದನ್ನೂ ಓದಿ: ಇಪಿಎಫ್ ಅಕೌಂಟ್ನಿಂದ ಒಮ್ಮೆಗೆ 5 ಲಕ್ಷ ರೂವರೆಗೆ ಅಡ್ವಾನ್ಸ್ ವಿತ್ಡ್ರಾ ಸಾಧ್ಯ; ಇಲ್ಲಿದೆ ಹಿಂಪಡೆಯುವ ಕ್ರಮ
ಎಸ್ಸೆಮ್ಮೆಸ್ ಮೂಲಕ ಪಿಎಫ್ ಬ್ಯಾಲನ್ಸ್ ಪರಿಶೀಲಿಸಿ
ಇಲ್ಲೂ ಕೂಡ ಕೆವೈಸಿ ಪೂರ್ಣಗೊಂಡಿರುವ ಯುಎಎನ್ಗೆ ನೋಂದಾಯಿತವಾಗಿರುವ ಮೊಬೈಲ್ ನಂಬರ್ ಬೇಕು. EPFOHO ಎಂದು ಟೈಪ್ ಮಾಡಿ ಬಳಿಕ ಯುಎಎನ್ ನಂಬರ್ ಹಾಕಿ, ನಂತರ ಭಾಷೆಯ ಕೋಡ್ ಹಾಕಿ ಎಸ್ಸೆಮ್ಮೆಸ್ ಅನ್ನು 7738299899 ನಂಬರ್ಗೆ ಕಳುಹಿಸಿ.
ಮೆಸೇಜ್ ಉದಾಹರಣೆ: EPFOHO 123456789012 KAN ಎಂದು ಟೈಪ್ ಮಾಡಿ ಕಳುಹಿಸಬಹುದು. ಇಲ್ಲಿ 123456789012 ಎಂಬುದು ನಿಮ್ಮ 12 ಅಂಕಿಗಳ ಯುಎಎನ್ ನಂಬರ್ ಆಗಿರಬೇಕು. KAN ಎಂಬುದು ಕನ್ನಡ ಭಾಷೆಗೆ ಕೋಡ್.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ