ನವದೆಹಲಿ, ಸೆಪ್ಟೆಂಬರ್ 24: ಜುಲೈ ತಿಂಗಳಲ್ಲಿ ಇಪಿಎಫ್ ವ್ಯಾಪ್ತಿಗೆ 20 ಲಕ್ಷ ಸದಸ್ಯರು ಸೇರ್ಪಡೆಯಾಗಿದ್ದಾರೆ. ಒಂದು ತಿಂಗಳಲ್ಲಿ ಇಷ್ಟೊಂದು ಸಂಖ್ಯೆ ಹೆಚ್ಚಳ ಇದೇ ಮೊದಲು. ಅಂತೆಯೇ ಇದು ಸಾರ್ವಕಾಲಿಕ ದಾಖಲೆ ಆಗಿದೆ. ಇಪಿಎಫ್ಒ ಸಂಸ್ಥೆ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಜುಲೈ ತಿಂಗಳಲ್ಲಿ 19.94 ಲಕ್ಷ ಸದಸ್ಯರ ಸೇರ್ಪಡೆಯಾಗಿದೆ. ಈ ಪೈಕಿ 10.52 ಲಕ್ಷದಷ್ಟು ಹೊಸ ಸದಸ್ಯರೇ ಇದ್ದಾರೆ. ಅಂದರೆ ಮೊದಲ ಬಾರಿಗೆ ಇಪಿಎಫ್ ಖಾತೆ ಪಡೆದವರ ಸಂಖ್ಯೆ ಜುಲೈನಲ್ಲಿ 10 ಲಕ್ಷಕ್ಕೂ ಹೆಚ್ಚು. ಹಿಂದಿನ ತಿಂಗಳಿಗೆ ಹೋಲಿಸಿದರೆ ಶೇ. 2.66ರಷ್ಟು ಹೆಚ್ಚಳವಾಗಿದೆ. ಹಿಂದಿನ ವರ್ಷದ ಜುಲೈ ತಿಂಗಳಿಗೆ ಹೋಲಿಸಿದರೆ ಹೊಸ ಸದಸ್ಯರ ಸಂಖ್ಯೆಯಲ್ಲಿ ಶೇ. 2.43ರಷ್ಟು ಏರಿಕೆ ಆಗಿದೆ.
ಹೊಸ ಸದಸ್ಯತ್ವವು ಉದ್ಯೋಗ ಸೃಷ್ಟಿಯ ಪ್ರತಿಬಿಂಬವಾಗಿದೆ. ಹೀಗಾಗಿ, ಇಪಿಎಫ್ಒನಲ್ಲಿನ ಹೊಸ ಸದಸ್ಯರ ಸಂಖ್ಯೆಯಲ್ಲಿ ಹೆಚ್ಚಳ ಆಗಿರುವುದು ಉದ್ಯೋಗಸೃಷ್ಟಿ ಹೆಚ್ಚಾಗಿರುವುದನ್ನು ತೋರಿಸುತ್ತಿದೆ. ಈ ವಿಚಾರವನ್ನು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ನಿನ್ನೆ (ಸೆ. 23) ತಿಳಿಸಿದೆ.
Employees’ Provident Fund Organisation (#EPFO) records all time highest addition of around 20 Lakh net members in July this year registering a growth of 2.43% in comparison to the same month of the last year.
Labour & Employment Minister @mansukhmandviya says that it is the… pic.twitter.com/lZdv66aTIE
— All India Radio News (@airnewsalerts) September 23, 2024
ಇಪಿಎಫ್ಗೆ ಸೇರ್ಪಡೆಯಾದ 20 ಲಕ್ಷ ಸದಸ್ಯರಲ್ಲಿ ಹೆಚ್ಚಿನ ಮಂದಿ ಐದು ರಾಜ್ಯಗಳಿಗೆ ಸೇರಿದವರಾಗಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಹರ್ಯಾಣ ಮತ್ತು ಗುಜರಾತ್ ರಾಜ್ಯಗಳಿಂದಲೇ ಒಟ್ಟು ಶೇ. 59.27ರಷ್ಟು ನಿವ್ವಳ ಸದಸ್ಯತ್ವ ಸೇರ್ಪಡೆಯಾಗಿದೆ. ಅಂದರೆ ಈ ಐದು ರಾಜ್ಯಗಳಿಂದ 11.82 ಲಕ್ಷ ಜನರು ಇಪಿಎಫ್ ಅಕೌಂಟ್ ತೆರೆದಿದ್ದಾರೆ. ಮಹಾರಾಷ್ಟ್ರ ರಾಜ್ಯವೊಂದರಲ್ಲೇ ಶೇ. 20ರಷ್ಟು ಹೊಸ ಸದಸ್ಯರಿರುವುದು ಗಮನಾರ್ಹ.
ಇದನ್ನೂ ಓದಿ: ಎಫ್ ಅಂಡ್ ಒ ಟ್ರೇಡಿಂಗ್ ಮಾಡುವವರಲ್ಲಿ ಹಣ ಕಳೆದುಕೊಂಡವರೆಷ್ಟು, ಗೆದ್ದವರೆಷ್ಟು? ಕಣ್ತೆರೆಸುತ್ತೆ ಸೆಬಿ ದತ್ತಾಂಶ
ಮತ್ತೊಂದು ಕುತೂಹಲದ ಸಂಗತಿ ಎಂದರೆ ಇಪಿಎಫ್ ಅಕೌಂಟ್ ಮುಚ್ಚಲ್ಪಟ್ಟಿದ್ದ 14.65 ಲಕ್ಷ ಸದಸ್ಯರು ಜುಲೈನಲ್ಲಿ ಮತ್ತೆ ಇಪಿಎಫ್ಒಗೆ ಸೇರ್ಪಡೆಯಾಗಿದ್ದಾರೆ. ಅಂದರೆ, ಉದ್ಯೋಗ ಬಿಟ್ಟಿದ್ದವರು ಮತ್ತೆ ಹೊಸ ಕೆಲಸಕ್ಕೆ ಸೇರ್ಪಡೆಯಾಗಿರುವುದನ್ನು ಇದು ಸೂಚಿಸುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ