AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಫ್​ ಅಂಡ್ ಒ ಟ್ರೇಡಿಂಗ್ ಮಾಡುವವರಲ್ಲಿ ಹಣ ಕಳೆದುಕೊಂಡವರೆಷ್ಟು, ಗೆದ್ದವರೆಷ್ಟು? ಕಣ್ತೆರೆಸುತ್ತೆ ಸೆಬಿ ದತ್ತಾಂಶ

Futures & Options trading: ಷೇರು ಮಾರುಕಟ್ಟೆಯಲ್ಲಿ ಫ್ಯೂಚರ್ಸ್ ಮತ್ತು ಆಪ್ಷನ್ಸ್ ಟ್ರೇಡಿಂಗ್ ಬಹಳ ದೊಡ್ಡ ಪ್ರಮಾಣದಲ್ಲಿ ನಡೆಯುತ್ತದೆ. ಸೆಬಿ ಜನವರಿಯಲ್ಲಿ ಬಿಡುಗಡೆ ಮಾಡಿದ ಅಧ್ಯಯನ ಪ್ರಕಾರ ಶೇ. 89ರಷ್ಟು ಜನರು 2021-22ರಲ್ಲಿ ನಷ್ಟ ಕಂಡಿದ್ದರು. ಅದಾದ ಬಳಿಕವೂ ವೈಯಕ್ತಿಕ ಟ್ರೇಡರ್​ಗಳು ಎಫ್ ಅಂಡ್ ಒ ಸೆಗ್ಮೆಂಟ್​ನಲ್ಲಿ ನಷ್ಟ ಕಾಣುವುದು ಮುಂದುವರಿದಿದೆ ಎಂದು ಸೆಬಿಯ ಇತ್ತೀಚಿನ ಅಧ್ಯಯನದಿಂದ ತಿಳಿದುಬಂದಿದೆ.

ಎಫ್​ ಅಂಡ್ ಒ ಟ್ರೇಡಿಂಗ್ ಮಾಡುವವರಲ್ಲಿ ಹಣ ಕಳೆದುಕೊಂಡವರೆಷ್ಟು, ಗೆದ್ದವರೆಷ್ಟು? ಕಣ್ತೆರೆಸುತ್ತೆ ಸೆಬಿ ದತ್ತಾಂಶ
ಷೇರು ಮಾರುಕಟ್ಟೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 23, 2024 | 6:13 PM

Share

ನವದೆಹಲಿ, ಸೆಪ್ಟೆಂಬರ್ 23: ಈಚಿನ ವರ್ಷಗಳಲ್ಲಿ ಎಫ್ ಅಂಡ್ ಒ ಬಗ್ಗೆ ಬಹಳಷ್ಟು ಚರ್ಚೆಗಳಾಗುತ್ತಿವೆ. ಬಹಳ ಬೇಗ ಹಣ ಮಾಡುವ ಆಸೆಗೆ ಬಿದ್ದು ಬಹಳಷ್ಟು ಜನರು ಎಫ್ ಅಂಡ್ ಒ ಟ್ರೇಡಿಂಗ್​​ಗೆ ಇಳಿಯುತ್ತಾರೆ. ಸಾಕಷ್ಟು ಜನರು ಇದ್ದಬದ್ದ ಉಳಿತಾಯ ಹಣ ಕಳೆದುಕೊಂಡ ಘಟನೆಗಳನ್ನು ಕೇಳಿರಬಹುದು. ಬ್ಯಾಂಕುಗಳಲ್ಲಿ ಸಾಲ ಮಾಡಿ ಎಫ್ ಅಂಡ್ ಒ ಟ್ರೇಡಿಂಗ್ ಮಾಡಿ ಎಲ್ಲಾ ಕಳೆದುಕೊಂಡವರ ಕಥೆಗಳೂ ಇವೆ. ಕುದುರೆ ಬಾಲ, ಜೂಜಿಗೆ ಹಣ ಹಾಕಿ ಮನೆ ಮಠ ಆಸ್ತಿಪಾಸ್ತಿ ಎಲ್ಲಾ ಕಳೆದುಕೊಂಡವರ ಕಥೆಯೇ ಎಫ್ ಅಂಡ್ ಒ ದಲ್ಲಿ ಪುನಾವರ್ತನೆ ಆಗುತ್ತಿರುವಂತಿದೆ. ಇದೇ ವೇಳೆ ಷೇರು ಮಾರುಕಟ್ಟೆಯ ನಿಯಂತ್ರಕ ಸಂಸ್ಥೆಯಾದ ಸೆಬಿ ಇತ್ತೀಚೆಗೆ ನಡೆಸಿದ ಅಧ್ಯಯನವೊಂದರಲ್ಲಿ ಎಫ್ ಅಂಡ್ ಒ ಬಗ್ಗೆ ಕಣ್ತೆರೆಸುವಂತಹ ಸಂಗತಿಗೆ ಬೆಳಕು ಚೆಲ್ಲಲಾಗಿದೆ.

ಸೆಬಿ ವರದಿ ಪ್ರಕಾರ ಫ್ಯೂಚರ್ಸ್ ಮತ್ತು ಆಪ್ಷನ್ಸ್ ಟ್ರೇಡಿಂಗ್​ನಲ್ಲಿ ತೊಡಗುವ ಪ್ರತೀ 10 ವ್ಯಕ್ತಿಗಳಲ್ಲಿ ಬರೋಬ್ಬರಿ 9 ಮಂದಿ ದೊಡ್ಡ ನಷ್ಟ ಕಾಣುತ್ತಿದ್ದಾರೆ. ಇದೇ ಸೆಬಿ ಸಂಸ್ಥೆ ಜನವರಿ ತಿಂಗಳಲ್ಲಿ ಬಿಡುಗಡೆ ಮಾಡಿದ್ದ ವರದಿಯೊಂದೂ ಕೂಡ ಇದೇ ಟ್ರೆಂಡ್ ಅನ್ನು ಎತ್ತಿ ತೋರಿಸಿತ್ತು. ಆ ವರದಿ ಪ್ರಕಾರ 2021-22ರ ಹಣಕಾಸು ವರ್ಷದಲ್ಲಿ ಈಕ್ವಿಟಿ ಎಫ್ ಅಂಡ್ ಒ ಟ್ರೇಡಿಂಗ್ ನಡೆಸಿದ ವ್ಯಕ್ತಿಗಳಲ್ಲಿ ಶೇ. 89ರಷ್ಟು ಜನರು ನಷ್ಟ ಕಂಡಿದ್ದಾರೆ.

ಇದನ್ನೂ ಓದಿ: ಅಮೇಜಾನ್ ಕಂಟೆಂಟ್ ಕ್ರಿಯೇಟರ್ಸ್​ಗೆ ಕಮಿಷನ್ ಎರಡು ಪಟ್ಟು ಹೆಚ್ಚಳ; ನೀವೂ ಆದಾಯ ಗಳಿಸುವ ಅವಕಾಶ; ಹೇಗೆ?

ಜನವರಿ ವರದಿ ಬಳಿಕ ಮುಂದಿನ ಹಂತದ ಅಧ್ಯಯನವನ್ನು ಸೆಬಿ ನಡೆಸಿದೆ. 2021-22ರ ಬಳಿಕವೂ ಎಫ್ ಅಂಡ್ ಒ ಟ್ರೇಡರ್​ಗಳು ನಷ್ಟ ಕಾಣುವುದು ಮುಂದುವರಿದಿರುವುದು ಸ್ಪಷ್ಟವಾಗಿದೆ. 2023-24ರವರೆಗೆ ಮೂರು ವರ್ಷಗಳಲ್ಲಿ ಎಫ್ ಅಂಡ್ ಒ ಟ್ರೇಡಿಂಗ್ ಮಾಡಿದ ಒಂದು ಕೋಟಿಗೂ ಅಧಿಕ ವ್ಯಕ್ತಿಗಳ ಪೈಕಿ ಶೇ. 93ರಷ್ಟು ಮಂದಿ ಭಾರೀ ಮೊತ್ತದ ನಷ್ಟ ಕಂಡಿದ್ದಾರೆ. ಪ್ರತೀ ವ್ಯಕ್ತಿ ಸರಾಸರಿಯಾಗಿ ಎರಡು ಲಕ್ಷ ರೂನಷ್ಟು ನಷ್ಟ ಕಂಡಿದ್ದಾರೆ ಎನ್ನಲಾಗಿದೆ. ಮೂರು ವರ್ಷದಲ್ಲಿ ವೈಯಕ್ತಿಕ ಟ್ರೇಡರ್​ಗಳು ಒಟ್ಟಾರೆ 1.8 ಲಕ್ಷ ಕೋಟಿ ರೂ ನಷ್ಟ ಅನುಭವಿಸಿದ್ದಾರೆ.

ಫ್ಯೂಚರ್ಸ್ ಮತ್ತು ಆಪ್ಷನ್ಸ್ ಎಂಬುದು ಡಿರೈವೇಟಿವ್ ಟ್ರೇಡಿಂಗ್​ಗಳಾಗಿವೆ. ಇಲ್ಲಿ ನೈಜ ಷೇರುಗಳ ವಹಿವಾಟು ನಡೆಯುವುದಿಲ್ಲ. ಒಂದು ಷೇರಿನ ಬೆಲೆ ನಿರ್ದಿಷ್ಟ ಕಾಲಮಾನದಲ್ಲಿ ಎಷ್ಟು ಬೆಲೆಗೆ ಏರುತ್ತೆ ಅಥವಾ ಇಳಿಯುತ್ತೆ ಎಂಬ ಅಂದಾಜಿನ ಮೇಲೆ ನಡೆಯುವ ವ್ಯವಹಾರ. ಸರ್ಕಾರ ಪರೋಕ್ಷವಾಗಿ ಇದನ್ನು ಜೂಜೆಂಬಂತೆ ಪರಿಗಣಿಸುತ್ತದೆ.

ಇದನ್ನೂ ಓದಿ: Lalbaugcha Raja Ganeshotsav Auction: ಲಾಲ್​ಬಾಗ್​ಚ ರಾಜ ಗಣಪ; ಭಕ್ತರ ಚಿನ್ನಾಭರಣ ಕಾಣಿಕೆಗಳ ಹರಾಜು; ಸಿಕ್ಕ ಆದಾಯ ಎಷ್ಟು?

ಎಫ್ ಅಂಡ್ ಒ ಟ್ರೇಡಿಂಗ್​ನಲ್ಲಿ ಲಾಭ ಮಾಡಿರುವ ಟ್ರೇಡರ್​ಗಳ ಪ್ರಕಾರ, ಈ ವ್ಯವಹಾರ ಬಹಳ ರಿಸ್ಕಿ. ಇಲ್ಲಿ ರಿಸ್ಕ್ ಮ್ಯಾನೇಜ್ಮೆಂಟ್ ಟೆಕ್ನಿಕ್ ಕಲಿತುಬಿಟ್ಟರೆ ಹಣ ಮಾಡಬಹುದು. ಈ ಟ್ರೇಡಿಂಗ್​ಗಳಲ್ಲಿ ಸರಿಯಾದ ರೀತಿಯಲ್ಲಿ ರಿಸ್ಕ್ ಮ್ಯಾನೇಜ್ಮೆಂಟ್ ಕ್ರಮ ಅನುಸರಿಸಿದರೆ ನಷ್ಟದ ಪ್ರಮಾಣ ಕಡಿಮೆ ಇರುತ್ತದೆ, ಲಾಭದ ಪ್ರಮಾಣ ಹೆಚ್ಚು ಇರುತ್ತದೆ. ಆದರೆ, ಹೆಚ್ಚಿನ ಜನರು ಟ್ರೇಡಿಂಗ್ ವೇಳೆ ಭಾವನಾತ್ಮಕತೆಗೆ ತಲೆ ಕೊಟ್ಟುಬಿಡುತ್ತಾರೆ ಎಂದು ತಜ್ಞರು ಹೇಳುವುದುಂಟು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ