
ನವದೆಹಲಿ, ಆಗಸ್ಟ್ 3: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಇಪಿಎಫ್‌ಒ (EPFO) ತನ್ನ ಕಡ್ಡಾಯ ಸಾಮಾಜಿಕ ಭದ್ರತಾ ವ್ಯಾಪ್ತಿಯ ವೇತನ ಮಿತಿಯನ್ನು (Wage Ceiling) ಪ್ರಸ್ತುತ ಇರುವ ₹15,000 ರಿಂದ ₹25,000 ಕ್ಕೆ ಹೆಚ್ಚಿಸಲು ಕೇಂದ್ರ ವಿತ್ತ ಸಚಿವಾಲಯ (Ministry of Finance) ಅನುಮೋದನೆ ನೀಡಿದೆ. ಇದು ಜಾರಿಯಾದಲ್ಲಿ 2014 ರ ನಂತರ, ಅಂದರೆ ಸುಮಾರು 12 ವರ್ಷಗಳ ಬಳಿಕ ಇಪಿಎಫ್‌ಒ ವೇತನ ಮಿತಿಯಲ್ಲಿ ಈ ಮಹತ್ವದ ಪರಿಷ್ಕರಣೆ ಮಾಡಿದಂತಾಗುತ್ತದೆ. ಇದರಿಂದ ಸಂಘಟಿತ ವಲಯದ ಲಕ್ಷಾಂತರ ಉದ್ಯೋಗಿಗಳಿಗೆ ಅನುಕೂಲವಾಗಲಿದೆ.
ಕಡ್ಡಾಯ ಇಪಿಎಫ್‌ಒ ಯೋಜನೆಯಡಿ ಬರುವ ಮೂಲ ವೇತನ ಮಿತಿಯನ್ನು ₹15,000 ದಿಂದ ₹25,000 ಕ್ಕೆ ಹೆಚ್ಚಿಸಲಾಗಿದೆ. ಈ ನಿರ್ಧಾರದಿಂದ ಸುಮಾರು 1 ಕೋಟಿಗೂ ಹೆಚ್ಚು ಖಾಸಗಿ ಹಾಗೂ ಸಂಘಟಿತ ವಲಯದ ಕಾರ್ಮಿಕರು ಕಡ್ಡಾಯ ಪಿಎಫ್ ಮತ್ತು ಇಪಿಎಸ್ (EPS) ಪಿಂಚಣಿ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾಗುವ ನಿರೀಕ್ಷೆ ಇದೆ.
2014 ರಲ್ಲಿ ಕೊನೆಯ ಬಾರಿಗೆ ಈ ಮಿತಿಯನ್ನು ₹6,500 ರಿಂದ ₹15,000 ಕ್ಕೆ ಏರಿಸಲಾಗಿತ್ತು. ಆ ನಂತರ ಜಾರಿಯಾದ ಹಣದುಬ್ಬರ ಮತ್ತು ವೇತನ ಹೆಚ್ಚಳಕ್ಕೆ ತಕ್ಕಂತೆ ಮಿತಿ ಏರಿಸಬೇಕೆಂಬ ಬೇಡಿಕೆ ಈಗ ಈಡೇರಿದೆ.
ಇದನ್ನೂ ಓದಿ: ಯುಪಿಐ ಪಾವತಿಗೆ ಹೆಚ್ಚುವರಿ ಭದ್ರತೆ; ಯೆಸ್ ಎಂದರಷ್ಟೇ ಪೇಮೆಂಟ್; ವಂಚನೆ, ತಪ್ಪಾದ ಹಣ ವರ್ಗಾವಣೆ ತಡೆಯಲು ಈ ಕ್ರಮಕ್ಕೆ ಯೋಚನೆ
ಇಪಿಎಫ್‌ಒ ನಿಯಮಗಳ ಪ್ರಕಾರ ನಿರ್ದಿಷ್ಟ ವೇತನ ಮಿತಿಯಲ್ಲಿರುವ ಕಾರ್ಮಿಕರಿಗೆ ಅವರು ಕೆಲಸ ಮಾಡುವ ಕಂಪನಿಗಳು ಕಡ್ಡಾಯವಾಗಿ ಇಪಿಎಫ್ ಅಕೌಂಟ್ಗಳನ್ನು ತೆರೆಯಬೇಕು. ಅಂದರೆ, ₹15,000 ಕ್ಕಿಂತ ಹೆಚ್ಚಿನ ಮೂಲ ವೇತನ ಹೊಂದಿರುವವರಿಗೆ ಕಂಪನಿಯು ಇಪಿಎಫ್ ಅಕೌಂಟ್ ತೆರೆಯಬೇಕೆಂಬ ಕಡ್ಡಾಯವೇನಿಲ್ಲ. ಅದೇನಿದ್ದರೂ ಐಚ್ಛಿಕ. ಈಗ ಹೆಚ್ಚಿನ ಕಂಪನಿಗಳು ಹೆಚ್ಚಿನ ವೇತನ ಇರುವ ಉದ್ಯೋಗಿಗಳಿಗೂ ಇಪಿಎಫ್ ಅಕೌಂಟ್ ತೆರೆಯುವುದುಂಟು. ಆದರೆ, 15,000 ರೂ ಲೆಕ್ಕಾಚಾರದಲ್ಲಿ ಮಾತ್ರ ಪಿಎಫ್ ಅಕೌಂಟ್ಗೆ ಕೊಡುಗೆ ನೀಡುತ್ತವೆ. ಹೆಚ್ಚಿನ ಕೊಡುಗೆ ನೀಡುವಂತಿರುವುದಿಲ್ಲ.
ಹೊಸ ವೇತನ ಮಿತಿ ಜಾರಿಗೆ ಬಂದಲ್ಲಿ ಪಿಎಫ್ ಅಕೌಂಟ್ಗೆ ಉದ್ಯೋಗಿಗಳು ಮತ್ತು ಮಾಲೀಕರ ಕೊಡುಗೆ ಹೆಚ್ಚುತ್ತದೆ. ₹25,000 ಹಾಗೂ ಅದಕ್ಕಿಂತ ಹೆಚ್ಚಿನ ಮೂಲವೇತನ ಹೊಂದಿರುವವರಿಗೆ ಕಡ್ಡಾಯ ಪಿಎಫ್ ವಂತಿಗೆ ₹1,800 ನಿಂದ ₹3,000 ಗೆ ಏರಿಕೆಯಾಗುತ್ತದೆ. ಅಂದರೆ, ಉದ್ಯೋಗಿಯ ಸಂಬಳದಿಂದ ಕಡ್ಡಾಯವಾಗಿ ₹3,000 ಮುರಿದುಕೊಳ್ಳಲಾಗುತ್ತದೆ. ಆದರೆ, ಮಾಲಕರ ಶೇ. 12ರ ಕೊಡುಗೆಯಲ್ಲೂ ಹೆಚ್ಚಳವಾಗುತ್ತದೆ. ತಿಂಗಳಿಗೆ ₹1,800 ಕ್ಕೆ ಮಾತ್ರ ಇರುವ ಮಾಲಕರ ಕಮಿಟ್ಮೆಂಟ್ ₹3,000ಕ್ಕೆ ಏರಿಕೆ ಆಗುತ್ತದೆ. ಅಂದರೆ, ಕಂಪನಿ ವತಿಯಿಂದಲೂ ಪಿಎಫ್ ಅಕೌಂಟ್ಗೆ ಹೆಚ್ಚಿನ ಕೊಡುಗೆ ಬಂದು ಸೇರುತ್ತದೆ.
₹15,000 ರಿಂದ ₹25,000 ನಡುವೆ ಮೂಲ ವೇತನ ಹೊಂದಿರುವ ಉದ್ಯೋಗಿಗಳ ಇಪಿಎಫ್‌ಒ ಖಾತೆಗೆ ತಿಂಗಳ ಕೊಡುಗೆ ಹೆಚ್ಚಾಗುವುದರಿಂದ, ಅವರ ನಿವೃತ್ತಿ ನಿಧಿ (Retirement Corpus) ಗಮನಾರ್ಹವಾಗಿ ಬೆಳೆಯಲಿದೆ. ಜೊತೆಗೆ ಉದ್ಯೋಗಿಗಳ ಪಿಂಚಣಿ ಯೋಜನೆ (EPS) ಗೆ ಜಮಾ ಆಗುವ ಮೊತ್ತವೂ ಹೆಚ್ಚುವುದರಿಂದ ಭವಿಷ್ಯದಲ್ಲಿ ಲಭಿಸುವ ತಿಂಗಳ ಪಿಂಚಣಿ ಪ್ರಮಾಣವೂ ಹೆಚ್ಚಲಿದೆ.
ಕಡ್ಡಾಯ ಪಿಎಫ್ ವಂತಿಗೆಯ ಕಡಿತ (12%) ಹೆಚ್ಚಾಗುವುದರಿಂದ ₹15,000 ಕ್ಕಿಂತ ಹೆಚ್ಚು ಮೂಲ ವೇತನ ಪಡೆಯುವ ಕೆಲವು ಉದ್ಯೋಗಿಗಳ ಕೈಗೆ ಸಿಗುವ ಮಾಸಿಕ ಸಂಬಳ (Take-Home Salary) ಸಲ್ಪ ಮಟ್ಟಿಗೆ ಕಡಿಮೆಯಾಗಬಹುದು. ಆದರೆ, ಅದಕ್ಕೆ ಸಮನಾದ ಮೊತ್ತವನ್ನು ಕಂಪನಿ (Employer) ಕೂಡ ಭರಿಸುವುದರಿಂದ ದೀರ್ಘಾವಧಿಯ ಉಳಿತಾಯಕ್ಕೆ ಇದು ಅನುಕೂಲಕರವಾಗಿದೆ.
ವೇತನ ಮಿತಿ ಏರಿಕೆಯಿಂದಾಗಿ ಕಂಪನಿಗಳು ಅಥವಾ ಉದ್ಯೋಗದಾತರು ತಮ್ಮ ಸಿಬ್ಬಂದಿಯ ಪಿಎಫ್ ಖಾತೆಗೆ ನೀಡಬೇಕಾದ ಕಡ್ಡಾಯ 12% ವಂತಿಗೆಯ ಪಾಲು ಹೆಚ್ಚಾಗಲಿದೆ. ಇದರಿಂದ ಖಾಸಗಿ ಕಂಪನಿಗಳ ಸಿಬ್ಬಂದಿ ವೆಚ್ಚಗಳು (Payroll Costs) ಸಲ್ಪ ಪ್ರಮಾಣದಲ್ಲಿ ಹೆಚ್ಚಾಗಲಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:32 pm, Mon, 3 August 26