ಇಪಿಎಫ್​ಒ ವಿಶ್ವಸ್ತ ಮಂಡಳಿ ಸಭೆ ನವೆಂಬರ್ 19ಕ್ಕೆ; ಕನಿಷ್ಠ ಇಪಿಎಸ್ ಪಿಂಚಣಿ ಏರಿಸುವ ಸಂಬಂಧ ಚರ್ಚೆ

2026ರ ನವೆಂಬರ್ 19 ರಂದು ನಡೆಯಲಿರುವ ಇಪಿಎಫ್‌ಒ ಕೇಂದ್ರ ವಿಶ್ವಸ್ತ ಮಂಡಳಿಯ ಸಭೆಯಲ್ಲಿ ಕನಿಷ್ಠ ಮಾಸಿಕ ಪಿಂಚಣಿಯನ್ನು ರೂ. 1,000 ದಿಂದ ರೂ. 3,000 ಕ್ಕೆ ಹೆಚ್ಚಿಸುವ ಪ್ರಸ್ತಾಪದ ಕುರಿತು ಚರ್ಚೆ ನಡೆಯುವ ನಿರೀಕ್ಷೆಯಿದೆ. ಕನಿಷ್ಠ ಇಪಿಎಸ್ ಪಿಂಚಣಿಯನ್ನು 7,500 ರೂಗೆ ಏರಿಸಬೇಕು ಎನ್ನುವ ಒತ್ತಾಯಗಳೂ ಇವೆ. ಆದರೆ, ಸರ್ಕಾರವು 3,000 ರೂಗೆ ಕನಿಷ್ಠ ಪಿಂಚಣಿ ಏರಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇಪಿಎಫ್​ಒ ವಿಶ್ವಸ್ತ ಮಂಡಳಿ ಸಭೆ ನವೆಂಬರ್ 19ಕ್ಕೆ; ಕನಿಷ್ಠ ಇಪಿಎಸ್ ಪಿಂಚಣಿ ಏರಿಸುವ ಸಂಬಂಧ ಚರ್ಚೆ
ಇಪಿಎಫ್​ಒ
Image Credit source: Getty Images

Updated on: Nov 10, 2026 | 4:40 PM

ನವದೆಹಲಿ, ನವೆಂಬರ್ 10: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ (EPFO) ಕೇಂದ್ರ ವಿಶ್ವಸ್ತ ಮಂಡಳಿಯ (CBT) 240 ನೇ ಸಭೆಯು ನವೆಂಬರ್ 19 ರಂದು ನಿಗದಿಯಾಗಿದೆ. ಇದರಲ್ಲಿ ಕನಿಷ್ಠ ಇಪಿಎಸ್ ಪಿಂಚಣಿ (EPS Pension) ಮೊತ್ತವನ್ನು ಹೆಚ್ಚಿಸುವ ಕುರಿತು ಚರ್ಚೆ ನಡೆಯುವ ಸಾಧ್ಯತೆಯಿದೆ.

ಪ್ರಸ್ತುತ ನೌಕರರ ಪಿಂಚಣಿ ಯೋಜನೆ (EPS-95) ಅಡಿಯಲ್ಲಿ ಕನಿಷ್ಠ ಮಾಸಿಕ ಪಿಂಚಣಿ ರೂ. 1,000 ಇದೆ. ಇದನ್ನು ರೂ. 3,000 ಕ್ಕೆ ಏರಿಕೆ ಮಾಡಬೇಕು ಎಂಬ ದೀರ್ಘಕಾಲದ ಬೇಡಿಕೆ ಹಾಗೂ ಪ್ರಸ್ತಾವನೆಯು ಈ ಸಭೆಯ ಅಜೆಂಡಾದಲ್ಲಿರಲಿದೆ.

Loading...

ದೇಶಾದ್ಯಂತ ಕೋಟ್ಯಂತರ ಇಪಿಎಸ್ ಪಿಂಚಣಿದಾರರಿದ್ದು, ಈ ಪ್ರಸ್ತಾವನೆಗೆ ಅಧಿಕೃತ ಅನುಮೋದನೆ ಸಿಕ್ಕರೆ ಕಡಿಮೆ ಪಿಂಚಣಿ ಪಡೆಯುತ್ತಿರುವ ಲಕ್ಷಾಂತರ ಹಿರಿಯ ನಾಗರಿಕರಿಗೆ ಮತ್ತು ನಿವೃತ್ತ ನೌಕರರಿಗೆ ದೊಡ್ಡ ಮಟ್ಟದ ಆರ್ಥಿಕ ನೆರವು ಸಿಗಲಿದೆ. ಆದಾಗ್ಯೂ, ಸರ್ಕಾರದ ಕಡೆಯಿಂದ ಈ ಬಗ್ಗೆ ಅಂತಿಮ ನಿರ್ಧಾರ ಮತ್ತು ಅಧಿಕೃತ ಪ್ರಕಟಣೆ ಹೊರಬೀಳಬೇಕಿದೆ.

ಇದನ್ನೂ ಓದಿ: ರಿಲಯನ್ಸ್ ಜಿಯೋ 10,000 ರೂ ಪ್ರೀಪೇಯ್ಡ್ ಪ್ಲಾನ್; ಇದರ ವ್ಯಾಲಿಡಿಟಿ, ದೈನಂದಿನ ಡಾಟಾ, ಒಟಿಟಿ ಮತ್ತಿತರ ಸೇವೆಗಳ ವಿವರ

ಈ ಇಪಿಎಫ್​ಒದ ಸಿಬಿಟಿ ಸಭೆ ಗುಜರಾತ್​ನ ಗಿರ್​ನಲ್ಲಿ ನಡೆಸಲು ನಿಶ್ಚಿತವಾಗಿತ್ತು. ಆದರೆ ಇತ್ತೀಚೆಗಷ್ಟೇ ಈ ಸಭೆಯನ್ನು ದೆಹಲಿಯಲ್ಲಿ ಮಾಡಲು ನಿರ್ಧರಿಸಲಾಯಿತು. ನವೆಂಬರ್ 19, ಗುರುವಾರದಂದು ಬೆಳಗ್ಗೆ 10:15ಕ್ಕೆ ಈ ಸಭೆ ಆರಂಭವಾಗಲಿದೆ.

ಮನಿಕಂಟ್ರೋಲ್​ನಲ್ಲಿ ಬಂದಿರುವ ಮಾಹಿತಿ ಪ್ರಕಾರ, ಕನಿಷ್ಠ ಇಪಿಎಸ್ ಪಿಂಚಣಿಯನ್ನು ಒಂದು ಸಾವಿರ ರೂನಿಂದ ಮೂರು ಸಾವಿರ ರೂಗೆ ಏರಿಸಲು ಕಾರ್ಮಿಕ ಸಚಿವಾಲಯ ಮತ್ತು ಹಣಕಾಸು ಸಚಿವಾಲಯದ ಮಧ್ಯೆ ಸಮಾಲೋಚನೆ ನಡೆದಿದ್ದು, ಪಿಂಚಣಿ ಮೊತ್ತ ಏರಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ. ಆದರೆ, ಎರಡೂ ಸಚಿವಾಲಯದಿಂದ ಈ ಬಗ್ಗೆ ದೃಢೀಕರಣ ಬಂದಿಲ್ಲ.

12 ವರ್ಷದಿಂದಲೂ ಬದಲಾಗಿಲ್ಲ ಇಪಿಎಸ್ ಪಿಂಚಣಿ ಮೊತ್ತ

2014ರಲ್ಲಿ ಕನಿಷ್ಠ ಇಪಿಎಸ್ ಪಿಂಚಣಿಯನ್ನು 1,000 ರೂಗೆ ನಿಗದಿ ಮಾಡಲಾಯಿತು. ಆನಂತರದಿಂದಲೂ ಅದು ಅಷ್ಟೇ ಇದೆ. ಇತ್ತೀಚಿನ ವರ್ಷಗಳಿಂದ ಕನಿಷ್ಠ ಪಿಂಚಣಿಯನ್ನು 7,500 ರೂಗೆ ಏರಿಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ. ಜೀವನವೆಚ್ಚ ಹೆಚ್ಚಾಗಿರುವುದರಿಂದ ಈ ಬೇಡಿಕೆ ಇದೆ. ಸರ್ಕಾರವು ಕನಿಷ್ಠ ಇಪಿಎಸ್ ಪಿಂಚಣಿಯನ್ನು 7,500 ರೂಗೆ ಏರಿಸಲು ಒಪ್ಪುವ ಸಾಧ್ಯತೆ ಇಲ್ಲ. ಆದರೆ, 3,000 ರೂಗೆ ಏರಿಸಿದರೆ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.

ಇದನ್ನೂ ಓದಿ: ಜೆನ್ಸೆನ್ ಸಂಪತ್ತಿಗೆ ಡಬಲ್ ಹೊಡೆತ; ಎಐ ಶಾಕ್ ಜೊತೆಗೆ ಈಗ ಲೈಂಗಿಕ ಹಗರಣದ ಆಘಾತ; ಟಾಪ್-10 ಪಟ್ಟಿಯಿಂದ ಹೊರಕ್ಕೆ

ಏನಿದು ಇಪಿಎಸ್ ಪಿಂಚಣಿ?

ಇಪಿಎಸ್ ಎಂಬುದು ಉದ್ಯೋಗಿಗಳ ಇಪಿಎಫ್ ಯೋಜನೆಯ ಒಂದು ಭಾಗ. ಇಪಿಎಫ್ ಉದ್ಯೋಗಿಯ ಭವಿಷ್ಯದಲ್ಲಿ ಹಣಕಾಸು ಭದ್ರತೆ ಒದಗಿಸುತ್ತದೆ. ಲಂಪ್ಸಮ್ ಆಗಿ ಹಣ ನೀಡುತ್ತದೆ. ಆದರೆ, ಇಪಿಎಸ್ ಪಿಂಚಣಿ ರೂಪದಲ್ಲಿ ಉದ್ಯೋಗಿಯ ನಿವೃತ್ತ ಜೀವನಕ್ಕೆ ನೆರವು ನೀಡುತ್ತದೆ.

ಸರ್ಕಾರ ಮತ್ತು ಉದ್ಯೋಗದಾತರಿಂದ ಇಪಿಎಸ್​ಗೆ ಕೊಡುಗೆ

ಉದ್ಯೋಗಿಯ ಇಪಿಎಫ್ ಅಕೌಂಟ್​ನಲ್ಲಿ ಉದ್ಯೋಗಿಯ ಸಂಬಳದಲ್ಲಿ ಕನಿಷ್ಠ ಶೇ. 12ರಷ್ಟು ಹಣ ಮುರಿದುಕೊಂಡು ಜಮೆ ಮಾಡಲಾಗುತ್ತದೆ. ಕಂಪನಿ ವತಿಯಿಂದ ಶೇ. 12ರಷ್ಟು ಕೊಡುಗೆ ಬರುತ್ತದೆ. ಈ ಕಂಪನಿ ಕೊಡುಗೆಯಲ್ಲಿ ಒಂದು ಸಣ್ಣ ಭಾಗವು ಇಪಿಎಫ್ ಅಕೌಂಟ್​ಗೆ ಹೋಗುತ್ತದೆ. ದೊಡ್ಡ ಭಾಗವು ಇಪಿಎಸ್ ಅಕೌಂಟ್​ಗೆ ಹೋಗುತ್ತದೆ. ಅದಕ್ಕೆ ಸರ್ಕಾರದಿಂದಲೂ ಕೊಡುಗೆ ಹೋಗುತ್ತದೆ. ಈ ರೀತಿ ಪ್ರತೀ ತಿಂಗಳು ಇಪಿಎಫ್ ಮತ್ತು ಇಪಿಎಸ್ ಅಕೌಂಟ್​ಗಳಿಗೆ ಹಣ ಜಮೆ ಆಗುತ್ತಾ ಹೋಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us